ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಚ್.ಡಿ ಪದವಿ ಈಗ ಸುಲಭವಲ್ಲ

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ಸಂಶೋಧನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಪಿಎಚ್.ಡಿ ನೋಂದಣಿ ಪ್ರಕ್ರಿಯೆಯನ್ನು ಕಠಿಣಗೊಳಿಸಿದೆ. ಇದರಿಂದ ವಿದ್ಯಾರ್ಥಿಗಳು ಹಿಂದಿನ ಹಾಗೆ ಸುಲಭವಾಗಿ ಪಿಎಚ್.ಡಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಶೈಕ್ಷಣಿಕವಾಗಿ ಅತ್ಯುನ್ನತ ಪದವಿಯಾಗಿರುವ ಪಿಎಚ್.ಡಿ ಪಡೆಯಲು ಹೆಚ್ಚಿನ ಶ್ರಮ ಹಾಕುವುದು ಅನಿವಾರ್ಯವಾಗಿದೆ.

ಈ ಹಿಂದೆ ಪಿಎಚ್.ಡಿ ನೋಂದಣಿ ಮಾಡಿಸಬೇಕೆಂದರೆ ಸಂಬಂಧಿಸಿದ ವಿಭಾಗದ ಪ್ರಾಧ್ಯಾಪಕರ ಒಪ್ಪಿಗೆ ಇದ್ದರೆ ಸಾಕಾಗಿತ್ತು. ಮಾರ್ಗದರ್ಶನ ಮಾಡುವಂತೆ ಆಯಾ ವಿಭಾಗದ ಪ್ರಾಧ್ಯಾಪಕರ ಮನವೊಲಿಸಿದರೆ ನೋಂದಣಿ ಆಗುತ್ತಿತ್ತು. ಆದರೆ ಈಗ ಪಿಎಚ್.ಡಿ ಮಾಡಬಯಸುವ ವಿದ್ಯಾರ್ಥಿ ಪ್ರವೇಶ ಪರೀಕ್ಷೆ ಬರೆಯಬೇಕಾಗಿದೆ.

ವಿ.ವಿ. ನಿಗದಿಪಡಿಸಿದಷ್ಟು ಅಂಕವನ್ನು ಪಡೆಯಬೇಕು. ಆ ನಂತರ ಕಲೋಕ್ವಿಯಮ್ (ಅರ್ಹ ಪ್ರೊಫೆಸರ್‌ಗಳನ್ನು ಒಳಗೊಂಡ ತಂಡ) ಎದುರು ಸಂಶೋಧನಾ ವಿಷಯದ ಸಾರಾಂಶವನ್ನು (ಸಿನಾಪ್ಸಿಸ್) ಮಂಡಿಸಬೇಕಾಗುತ್ತದೆ. ಸಂಶೋಧನಾ ವಿಷಯದಲ್ಲಿ ನ್ಯೂನತೆ ಇದ್ದರೆ ಅದನ್ನು ಸರಿಪಡಿಸಿಕೊಳ್ಳಲು, ವಿದ್ಯಾರ್ಥಿ ಆಯ್ಕೆ ಮಾಡಿಕೊಂಡಿರುವ ಸಂಶೋಧನಾ ಮಾದರಿ ಬದಲಾವಣೆ ಮಾಡಿಕೊಳ್ಳಲು ಅಲ್ಲಿ ಸಲಹೆ ನೀಡಲಾಗುತ್ತದೆ. ಸಲಹೆಗೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡ ನಂತರ ಮುಂದಿನ ಪ್ರಕ್ರಿಯೆಗಳು ನಡೆಯುತ್ತವೆ.

ಪ್ರವೇಶ ಪರೀಕ್ಷೆ ಕಡ್ಡಾಯವಾಗಿದೆ. ಆದರೆ ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳು ಒಂದೇ ಮಾದರಿಯನ್ನು ಅನುಸರಿಸುತ್ತಿಲ್ಲ. ವಿಶ್ವವಿದ್ಯಾಲಯಗಳು ಒಂದೊಂದು ರೀತಿಯಲ್ಲಿ ಪ್ರವೇಶ ಪರೀಕ್ಷೆಯನ್ನು ನಡೆಸುತ್ತಿವೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಒಂದು ಸಾಮಾನ್ಯ ವಿಷಯ ಮತ್ತು ವಿದ್ಯಾರ್ಥಿ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡಿದ ನಿರ್ದಿಷ್ಟ ವಿಷಯ ಆಧರಿಸಿದ ಇನ್ನೊಂದು ಪ್ರಶ್ನೆ ಪತ್ರಿಕೆ ತಯಾರಿಸಲಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಕನಿಷ್ಠ ಶೇ 50 ರಷ್ಟು ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೇ 55ರಷ್ಟು ಅಂಕ ಗಳಿಸಬೇಕೆಂಬ ನಿಯಮವನ್ನು ವಿ.ವಿ ಹಾಕಿತ್ತು.

ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಇತ್ತೀಚೆಗೆ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಎಂಬತ್ತು ಅಂಕದ ಪ್ರಶ್ನೆಪತ್ರಿಕೆ ನೀಡಲಾಗಿತ್ತು. ನಲವತ್ತು ಪ್ರಶ್ನೆಗಳು ವಸ್ತುನಿಷ್ಠ (ಆಬ್ಚೆಕ್ಟಿವ್) ಮತ್ತು ಉಳಿದದ್ದು ವಿವರಣಾತ್ಮಕ ಉತ್ತರ ಬಯಸಿದ್ದ ಪ್ರಶ್ನೆಗಳಿದ್ದವು. ಪತ್ರಿಕೋದ್ಯಮ, ಸಂಶೋಧನೆ ಮತ್ತು ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಪತ್ರಿಕೆ ಒಳಗೊಂಡಿತ್ತು. ಎಂಬತ್ತಕ್ಕೆ ಕನಿಷ್ಠ 32 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು.

ಹೀಗೆ ಪ್ರತಿಯೊಂದು ವಿ.ವಿಯು ಒಂದೊಂದು ಮಾದರಿಯ ಪರೀಕ್ಷಾ ವಿಧಾನವನ್ನು ಅನುಸರಿಸುತ್ತಿವೆ. ಬೆಂಗಳೂರು ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಗೆ ಒಟ್ಟು 1600 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ ಸುಮಾರು 300 ಮಂದಿ ಮಾತ್ರ ಉತ್ತೀರ್ಣರಾಗಿದ್ದಾರೆ. ಪ್ರಶ್ನೆ ಪತ್ರಿಕೆ ಕಠಿಣ ಮತ್ತು ಅವೈಜ್ಞಾನಿಕವಾಗಿತ್ತು ಎಂಬ ಆರೋಪವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. 
 

ಆದರೆ ಇದನ್ನು ಒಪ್ಪದ ವಿ.ವಿ.ಯ ಅಧಿಕಾರಿಗಳು ಗುಣಮಟ್ಟಕ್ಕೆ ಆದ್ಯತೆ ನೀಡಬೇಕಾದರೆ ಈ ಕ್ರಮ ಅನಿವಾರ್ಯ ಎಂದಿದ್ದಾರೆ. ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳು ಸಂಶೋಧನಾ ಜ್ಞಾನ, ಸಾಮಾನ್ಯ ಮತ್ತು ವಿಷಯ ಜ್ಞಾನ ಹೊಂದಿರಬೇಕು ಎಂಬುದು ಅವರ ವಾದ. ಆದ್ದರಿಂದ ಯುಜಿಸಿ ನಿಯಮಗಳ ಅನ್ವಯ ಪಿಎಚ್.ಡಿ ನೋಂದಣಿ ಮಾಡಿಸಿಕೊಳ್ಳಲು ವಿದ್ಯಾರ್ಥಿಗಳು ಸಿದ್ಧರಾಗುವುದು ಅನಿವಾರ್ಯವಾಗಿದೆ.

ರಾಷ್ಟ್ರೀಯ ಮಾನ್ಯತಾ ಪರೀಕ್ಷೆ (ಎನ್‌ಇಟಿ), ರಾಜ್ಯ ಮಾನ್ಯತಾ ಪರೀಕ್ಷೆ (ಎಸ್‌ಎಲ್‌ಇಟಿ) ಮತ್ತು ಎಂ.ಫಿಲ್ ಪೂರೈಸಿದವರಿಗೆ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ಇದ್ದು ಅವರು ನೇರವಾಗಿ ನೋಂದಣಿ ಮಾಡಿಸಬಹುದು.

ಕೋರ್ಸ್‌ವರ್ಕ್ ಕಡ್ಡಾಯ: ನೋಂದಣಿಯಾದ ನಂತರ ಕೋ  ರ್ಸ್‌ವರ್ಕ್ ಕಡ್ಡಾಯವಾಗಿದೆ. ಆರು ತಿಂಗಳ ಕಾಲ ಈ ತರಗತಿಗಳು ನಡೆಯಲಿದ್ದು ಕಡ್ಡಾಯವಾಗಿ ಹಾಜರಾಗಬೇಕು. ಕೋರ್ಸ್‌ವರ್ಕ್ ನಂತರವೂ ಪರೀಕ್ಷೆ ನಡೆಯಲಿದ್ದು ಅದರಲ್ಲೂ ಉತ್ತೀರ್ಣರಾಗಬೇಕು. ಕೋರ್ಸ್‌ವರ್ಕ್ ಪೂರೈಸಿದರೆ ಮಾತ್ರ ಬೋಧಕ ಹುದ್ದೆಗೆ ಅರ್ಹತೆ ಸಿಗುತ್ತದೆ. ಕೋರ್ಸ್‌ವರ್ಕ್ ಮಾದರಿ ಸಹ ವಿಶ್ವವಿದ್ಯಾಲಯ ಮತ್ತು ವಿಭಾಗಕ್ಕೆ ಅನುಗುಣವಾಗಿ ಭಿನ್ನವಾಗಿದೆ.

ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿ ಸಂಶೋಧನೆಯ ವಿಧಾನ, ಮಾದರಿ ಬಗ್ಗೆ ತಿಳಿವಳಿಕೆ ಪಡೆದಿರಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಪಿಎಚ್.ಡಿ ವಿಷಯ ಆಯ್ಕೆ, ಸಾರಾಂಶ ತಯಾರಿಕೆ, ಪ್ರವೇಶ ಪರೀಕ್ಷೆ, ಅಧ್ಯಯನದ ಬಗ್ಗೆ ವಿದ್ಯಾರ್ಥಿಗಳು ಪ್ರಾಧ್ಯಾಪಕರಿಂದ ಮಾಹಿತಿ ಪಡೆಯಬೇಕು. ಆಯಾ ವಿಶ್ವವಿದ್ಯಾಲಯದ ಅದರಲ್ಲೂ ವಿಭಾಗದ ಮುಖ್ಯಸ್ಥರನ್ನು ಸಂಪರ್ಕಿಸಿ ಸಿದ್ಧತೆ ಮಾಡಿಕೊಳ್ಳುವುದು ಸೂಕ್ತ ಎಂದು ಪ್ರಾಧ್ಯಾಪಕರು ಸಲಹೆ ನೀಡುತ್ತಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT