ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಚ್‌ಡಿ.ಗೆ ಖಾಸಗಿ ಗೈಡ್

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಸಂಶೋಧನೆಗೆ ಹೆಚ್ಚು ಒತ್ತು ನೀಡಲು ಮುಂದಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪಿಎಚ್.ಡಿ ಪೂರೈಸಿ ಖಾಸಗಿ ಕಂಪೆನಿ ಮತ್ತು ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿಷಯ ಪರಿಣಿತರನ್ನು `ಪಿಎಚ್.ಡಿ~ ಗೈಡ್‌ಗಳಾಗಿ ಬಳಸಿಕೊಳ್ಳಲು ನಿರ್ಧರಿಸಿದೆ.
 
ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸಂಶೋಧನೆಯಲ್ಲಿ ತೊಡಗಿಸುವುದು, ಭವಿಷ್ಯದಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅನವು ಮಾಡಿಕೊಡುವುದು ವಿಟಿಯು ಗುರಿ.

ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರೇ ಹೇಳಿರುವಂತೆ 2020ರ ವೇಳೆಗೆ ಇನ್ನೂ ಒಂದು ಸಾವಿರ ವಿಶ್ವವಿದ್ಯಾಲಯಗಳು ದೇಶದಲ್ಲಿ ತಲೆ ಎತ್ತಲಿವೆ. 25 ಸಾವಿರ ಪಿಎಚ್.ಡಿ ಪದವೀಧರರಿಗೆ ಈ ವಿವಿಗಳಲ್ಲಿ ಅವಕಾಶ ಸಿಗಲಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ಪಿಎಚ್.ಡಿ ಪದವೀಧರರ ಕೊರತೆ ಇದೆ. ವಿವಿಗಳಲ್ಲಿ ಬೋಧನೆ ಮಾಡುತ್ತಿರುವ ನೂರಾರು ಮಂದಿ ಇನ್ನೂ ಪಿಎಚ್.ಡಿ ಮುಗಿಸಿಲ್ಲ.

ಇದಕ್ಕೆ ಪ್ರಮುಖ  ಕಾರಣ ಮಾರ್ಗದರ್ಶಕರ (ಗೈಡ್) ಕೊರತೆ. ಈಗಿರುವ ನಿಯಮದ ಪ್ರಕಾರ ಪಿಎಚ್‌ಡಿ ಪೂರೈಸಿರುವ ಯಾವುದೇ ವಿವಿಯ ಪ್ರಾಧ್ಯಾಪಕ ಅಥವಾ ಸಹಾಯಕ ಪ್ರಾಧ್ಯಾಪಕ ಗರಿಷ್ಠ ಐದು ವಿದ್ಯಾರ್ಥಿಗಳಿಗೆ ಮಾತ್ರ ಪಿಎಚ್.ಡಿ ಮಾರ್ಗದರ್ಶನ ಮಾಡಬಹುದು.

ಒಬ್ಬ ಪ್ರಾಧ್ಯಾಪಕ ಐದು ಮಂದಿಗೆ ಮಾರ್ಗದರ್ಶನ ಮಾಡಲು ಒಪ್ಪಿದರೆ ಆ ಐದೂ ಮಂದಿ ಪಿಎಚ್.ಡಿ ಪೂರೈಸುವ ವರೆಗೂ ಬೇರೊಬ್ಬ ವಿದ್ಯಾರ್ಥಿಯನ್ನು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲು ಬರುವುದಿಲ್ಲ. ಅಥವಾ ವಿದ್ಯಾರ್ಥಿಯೊಬ್ಬ ಪಿಎಚ್.ಡಿ ಮುಗಿಸಿದ ನಂತರವಷ್ಟೇ ಇನ್ನೊಬ್ಬ ವಿದ್ಯಾರ್ಥಿಗೆ ಅವಕಾಶ ಕೊಡಬಹುದು. ಅಂದರೆ ಈ ಪ್ರಕ್ರಿಯೆಗೆ ಕನಿಷ್ಠ ನಾಲ್ಕು ವರ್ಷ ಬೇಕಾಗುತ್ತದೆ.

ವಿವಿಗಳನ್ನು ಹೊರತುಪಡಿಸಿ ಬೇರೆ ಕ್ಷೇತ್ರದಲ್ಲಿರುವ ಅರ್ಹ ವ್ಯಕ್ತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಅವಕಾಶ ಇಲ್ಲದಿರುವುದು ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿ ಪರಿಣಮಿಸಿದೆ.

ಉದಾಹರಣೆಗೆ ಪಿಎಚ್.ಡಿ ಪೂರೈಸಿರುವ ವ್ಯಕ್ತಿಯೊಬ್ಬರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದುಕೊಳ್ಳೋಣ. ಅವರಿಗೆ ವಿದ್ಯಾರ್ಥಿಯೊಬ್ಬನಿಗೆ ಸಂಶೋಧನೆಗೆ ಮಾರ್ಗದರ್ಶನ ಮಾಡುವ ಇಚ್ಛೆ ಇದ್ದರೂ ವಿವಿಯ ನಿಯಮ ಅದಕ್ಕೆ ಆಸ್ಪದ ನೀಡುವುದಿಲ್ಲ.
 
ಸಂಶೋಧನಾ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುವ ಇಂತಹ ನಿಯಮಕ್ಕೆ ತಿದ್ದುಪಡಿ ತಂದಿರುವ ವಿಟಿಯು ಕುಲಪತಿ ಡಾ. ಎಚ್. ಮಹೇಶಪ್ಪ ಅವರು ಖಾಸಗಿ ಕಂಪೆನಿ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪಿಎಚ್‌ಡಿ ಪದವೀಧರರು ವಿದ್ಯಾರ್ಥಿಗಳಿಗೆ ಪಿಎಚ್.ಡಿ ಮಾರ್ಗದರ್ಶನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.

ಖಾಸಗಿ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅರ್ಹರು ವಿಟಿಯುನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಸ್ವ ವಿವರವುಳ್ಳ ಮಾಹಿತಿಯನ್ನು ನೀಡಿದ ನಂತರ ವಿವಿಯ ಸಮಿತಿಯೊಂದು ಆ ಅರ್ಜಿಯ ಪರಿಶೀಲನೆ ನಡೆಸಿ ಎಲ್ಲ ರೀತಿಯಿಂದಲೂ ಒಪ್ಪಿಗೆಯಾದ ನಂತರ ಅವರ ಹೆಸರನ್ನು ನೋಂದಣಿ ಮಾಡಿಕೊಳ್ಳುತ್ತದೆ.

ಹಾಗೆಯೇ ಅರ್ಹ ವಿದ್ಯಾರ್ಥಿಗಳಿಂದಲೂ ಅರ್ಜಿ ಆಹ್ವಾನಿಸಲಾಗುತ್ತದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿ ಮಾರ್ಗದರ್ಶಕರ ವಿವರಗಳನ್ನು ವೆಬ್‌ಸೈಟ್‌ನಲ್ಲಿ ನೋಡಿಕೊಳ್ಳಬಹುದು. ಉದಾಹರಣೆಗೆ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಪಿಎಚ್‌ಡಿ ಮಾಡಿರುವ ಖಾಸಗಿ ಕಂಪೆನಿ ಉದ್ಯೋಗಿ ವಿಟಿಯುನಲ್ಲಿ ನೋಂದಣಿ ಮಾಡಿರುತ್ತಾರೆ.
 
ಅದೇ ವಿಷಯದಲ್ಲಿ ಅಂದರೆ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಪಿಎಚ್.ಡಿ ಮಾಡಲು ಇಚ್ಛಿಸುವ ವಿದ್ಯಾರ್ಥಿ ಮಾರ್ಗದರ್ಶಕರ ವಿವರಗಳನ್ನು ನೋಡಿ ಆ ನಂತರ ಅವರ ಜತೆ ಖುದ್ದಾಗಿ ಮಾತನಾಡಬಹುದು. ಮಾರ್ಗದರ್ಶನ ಮಾಡಲು ಒಪ್ಪಿದ ನಂತರ ಮುಂದಿನ ಪ್ರಕ್ರಿಯೆ ಆರಂಭವಾಗಲಿದೆ.

`ಕೇವಲ 120 ವಿದ್ಯಾರ್ಥಿಗಳು ಮಾತ್ರ ಹತ್ತು ವರ್ಷಗಳ ಅವಧಿಯಲ್ಲಿ ವಿಟಿಯುನಲ್ಲಿ ಪಿಎಚ್.ಡಿ ಮಾಡಿದ್ದಾರೆ. ಹೆಚ್ಚಿನ ಸಂಶೋಧನೆಗಳಾಗಬೇಕು ಮತ್ತು ಪಿಎಚ್.ಡಿ ಮಾಡ ಬಯಸುವ ವಿದ್ಯಾರ್ಥಿ ಮಾರ್ಗದರ್ಶಕರಿಲ್ಲದ ತೊಂದರೆ ಅನುಭವಿಸಬಾರದು ಎಂಬ ಉದ್ದೇಶಕ್ಕೆ ದೇಶದಲ್ಲಿಯೇ ವಿನೂತನ ಎನಿಸುವ ಯೋಜನೆ ಜಾರಿಗೆ ತರಲಾಗಿದೆ.
 
ವಿವಿಧ ಕ್ಷೇತ್ರದ ಐನೂರು ಮಂದಿ ಈಗಾಗಲೇ ಮಾರ್ಗದರ್ಶನ ಮಾಡಲು ಆಸಕ್ತಿ ತೋರಿದ್ದಾರೆ. ವಿದ್ಯಾರ್ಥಿಗಳಿಂದಲೂ ಅರ್ಜಿಗಳು ಬಂದಿವೆ. ಐನೂರು ಮಂದಿ ಐದೈದು ಮಂದಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರೆ ಎರಡೂವರೆ ಸಾವಿರ ಮಂದಿ ಪಿಎಚ್.ಡಿ ಪೂರೈಸಬಹುದು.
 
ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ ಉದ್ಯೋಗಿ ಐದು ಮಂದಿಗೆ ಮಾರ್ಗದರ್ಶನ ಮಾಡಿ ಪಿಎಚ್.ಡಿ ಪದವಿ ಕೊಡಿಸಿದರೆ ಅವರ ವೃತ್ತಿ ಮತ್ತು ವೈಯಕ್ತಿಕ ವರ್ಚಸ್ಸು (ಪ್ರೊಫೈಲ್) ಹೆಚ್ಚುತ್ತದೆ. ಅದೇ ವೇಳೆ ಸಂಶೋಧನಾ ಮಾರ್ಗದರ್ಶನದಿಂದ ಅವರ ಜ್ಞಾನವೂ ವೃದ್ಧಿಯಾಗುತ್ತದೆ~ ಎಂದು ಮಹೇಶಪ್ಪ ಹೇಳುತ್ತಾರೆ.

`ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಬಿಎಚ್‌ಇಎಲ್, ಡಿಆರ್‌ಡಿಓ ಮುಂತಾದೆಡೆ ಪಿಎಚ್.ಡಿ ಪೂರೈಸಿರುವ ಪ್ರತಿಭಾವಂತರಿದ್ದಾರೆ. ಅಂತಹ ವ್ಯಕ್ತಿಗಳನ್ನು ಬಳಸಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶ. ವಿವಿಗಳಲ್ಲಿ ಸಂಶೋಧನೆ ಹೆಚ್ಚಿದರೆ ಶೈಕ್ಷಣಿಕ ಕ್ಷೇತ್ರಕ್ಕೆ ಲಾಭವಾಗುತ್ತದೆ. ಇದರಿಂದ ಮಾರ್ಗದರ್ಶಕರ ಬ್ಯಾಂಕ್ ನಿರ್ಮಾಣವಾಗಲಿದೆ~ ಎಂದು ಅವರು ಹೇಳುತ್ತಾರೆ.
 
`ವಿಟಿಯು~ ವಿನೂತನ ಯತ್ನ

ಪಿಎಚ್‌ಡಿ ಮಾಡಲು ಬಯಸುವ ವಿದ್ಯಾರ್ಥಿಗಳು ಗೈಡ್ (ಶೈಕ್ಷಣಿಕ ಮಾರ್ಗದರ್ಶಕ) ಇಲ್ಲ ಎಂಬ ಕಾರಣಕ್ಕೆ ಉದ್ದೇಶದಿಂದ ಹಿಂದೆ ಸರಿಯುವ ವಾತಾವರಣ ಇದೆ. ವಿವಿ ಪ್ರಾಧ್ಯಾಪಕರು ಮಾತ್ರ ಸಂಶೋಧನಾ ವಿದ್ಯಾರ್ಥಿಗಳಿಗೆ `ಗೈಡ್~ ಆಗಬಹುದು ಎಂಬ ನಿಯಮ ಇದಕ್ಕೆ ಕಾರಣ.
 
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್‌ಡಿ ಪೂರೈಸಿ ಖಾಸಗಿ ಮತ್ತು ಸರ್ಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಪಿಎಚ್‌ಡಿ ಮಾರ್ಗದರ್ಶಕರನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದೆ.

ಪರಿಣಿತರ ಉಪಯೋಗ ವಿದ್ಯಾರ್ಥಿಗಳಿಗೆ ಸಿಗಬೇಕು ಮತ್ತು ಮಾರ್ಗದರ್ಶಕ ಇಲ್ಲ ಎಂಬ ಒಂದೇ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಸಂಶೋಧನೆಯಿಂದ ಹಿಂದಕ್ಕೆ ಸರಿಯಬಾರದು ಎಂಬುದು ನೂತನ ಯೋಜನೆಯ ಉದ್ದೇಶ.

ಮಾಹಿತಿಗೆ 0831 2498136 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT