ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಐಡಿ ಸಂಖ್ಯೆ ವಿತರಣೆ: ಸದ್ಯವೇ ಚಾಲನೆ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿರುವ ಎಲ್ಲ ಆಸ್ತಿಗಳನ್ನು ಗುರುತಿಸಿ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಬಿಬಿಎಂಪಿ, ಹೊಸ ಆಸ್ತಿ ಗುರುತಿನ ಸಂಖ್ಯೆ (ಪಿಐಡಿ) ನೀಡಲು ಮುಂದಾಗಿದೆ. ಪಾಲಿಕೆಯ ಆಯ್ದ ಐದು ವಾರ್ಡ್‌ಗಳಲ್ಲಿ ಹೊಸ ಪಿಐಡಿ ಸಂಖ್ಯೆ ನೀಡುವ ಪ್ರಕ್ರಿಯೆಗೆ ವಾರದಲ್ಲಿ ಚಾಲನೆ ದೊರೆಯಲಿದೆ.

ಪಟ್ಟಾಭಿರಾಮನಗರ, ಭೈರಸಂದ್ರ, ಸುಬ್ರಹ್ಮಣ್ಯನಗರ, ಬಸವೇಶ್ವರನಗರ ಹಾಗೂ ಪ್ರಕಾಶನಗರ ವಾರ್ಡ್‌ಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿದ್ದು, ಸದ್ಯದಲ್ಲೇ ಈ ವಾರ್ಡ್‌ಗಳಲ್ಲಿನ ಆಸ್ತಿಗಳಿಗೆ ಹೊಸ ಪಿಐಡಿ ಸಂಖ್ಯೆ      ನೀಡಲಿದೆ.

ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಯುಕ್ತ ಎಂ.ಕೆ. ಶಂಕಲಿಂಗೇಗೌಡ, `ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ಆಸ್ತಿಗಳನ್ನು ಗುರುತಿಸಿ, ತೆರಿಗೆ ಸಂಗ್ರಹಿಸುವ ಉದ್ದೇಶದಿಂದ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಯಡಿ ಆಯ್ದ ಐದು ವಾರ್ಡ್‌ಗಳಲ್ಲಿನ ಆಸ್ತಿಗಳಿಗೆ ಹೊಸ ಪಿಐಡಿ ಸಂಖ್ಯೆ ನೀಡಲಾಗುವುದು~ ಎಂದರು.

ಈ ಐದು ವಾರ್ಡ್‌ಗಳಲ್ಲಿರುವ ಆಸ್ತಿಗಳ ವಿವರವನ್ನು `ಜಿಯಾಗ್ರಾಫಿಕಲ್ ಇನ್‌ಫರ್ಮೇಶನ್ ಸಿಸ್ಟಮ್~ (ಜಿಐಎಸ್) ವ್ಯವಸ್ಥೆಯಲ್ಲಿನ ಮಾಹಿತಿಯೊಂದಿಗೆ ತಾಳೆ ಹಾಕುವ ಪ್ರಕ್ರಿಯೆ ಇದೇ 15ರ ವೇಳೆಗೆ ಪೂರ್ಣಗೊಳ್ಳಲಿದೆ. ಜತೆಗೆ ಆಸ್ತಿಯ ಮೌಲ್ಯಮಾಪನ ಕೂಡ ಮಾಡಲಾಗುತ್ತಿದೆ ಎಂದರು.

ಐದು ವಾರ್ಡ್‌ಗಳ ಆಸ್ತಿ ಮಾಹಿತಿ ಸಂಗ್ರಹಣೆ ಕಾರ್ಯ ಪೂರ್ಣಗೊಂಡಿದೆ. ವಾರದೊಳಗೆ ಪಾಲಿಕೆ ಅಧಿಕಾರಿಗಳು ಆಸ್ತಿದಾರರಿಗೆ ಪಿಐಡಿ ಸಂಖ್ಯೆಯುಳ್ಳ ಅರ್ಜಿ ನೀಡಲಿದ್ದಾರೆ. ಆಸ್ತಿ ಮಾಹಿತಿಗೆ ಸಂಬಂಧಪಟ್ಟ ಬದಲಾವಣೆಗಳಿಗೆ ಪೂರಕವಾದ ಮಾಹಿತಿಯನ್ನು ಆಸ್ತಿದಾರರು ಅರ್ಜಿಯೊಂದಿಗೆ ಸಲ್ಲಿಸಬಹುದು ಎಂದು ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಆಸ್ತಿಗಳ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಲ್ಲ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗುವುದು. ಇದರಿಂದ ಆಸ್ತಿ ತೆರಿಗೆ ಪಾವತಿ ವಿವರವನ್ನು ಸುಲಭವಾಗಿ ಪಡೆಯಬಹುದು. ಹಾಗೆಯೇ ತೆರಿಗೆ ಪಾವತಿಸದವರನ್ನು ಸುಲಭವಾಗಿ ಗುರುತಿಸಿ ತೆರಿಗೆ ಸಂಗ್ರಹಿಸಲು ಅನುಕೂಲವಾಗುತ್ತದೆ ಎಂದರು.

ನಗರದಲ್ಲಿ ಇರುವ ಸುಮಾರು 92,000 ರಸ್ತೆಗಳಿಗೂ ಹೊಸ ಸಂಖ್ಯೆ ನೀಡಲಾಗುವುದು. ಎಲ್ಲ ಪ್ರಕ್ರಿಯೆ ಪೂರ್ಣಗೊಂಡರೆ ಏಪ್ರಿಲ್‌ನಿಂದ ರಸ್ತೆಗಳಿಗೆ ಹೊಸ ಸಂಖ್ಯೆಗಳನ್ನು ನಮೂದಿಸಲು ಚಿಂತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೇಯರ್ ಪಿ. ಶಾರದಮ್ಮ,      `ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 16 ಲಕ್ಷ ಆಸ್ತಿಗಳಿವೆ ಎಂಬ ಅಂದಾಜು ಇದೆ. ಆದರೆ ಐದಾರು ಲಕ್ಷ ಮಂದಿ ಆಸ್ತಿದಾರರು ತೆರಿಗೆ ಪಾವತಿಸುತ್ತಿಲ್ಲ. ಈ ಹೊಸ ವ್ಯವಸ್ಥೆಯಿಂದ ತೆರಿಗೆ ಪಾವತಿಸದವರನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ~ ಎಂದರು.

ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ, ಆಯುಕ್ತರ ಮಾಹಿತಿ ತಂತ್ರಜ್ಞಾನ ಸಲಹೆಗಾರ ಟಿ. ಶೇಷಾದ್ರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT