ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಜಿಇಟಿ: ಅಕ್ರಮ ತಡೆಗೆ ಬಿಗಿ ಕ್ರಮ

Last Updated 25 ಜನವರಿ 2012, 19:45 IST
ಅಕ್ಷರ ಗಾತ್ರ

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ/ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ (ಪಿಜಿಇಟಿ) ಈ ಬಾರಿ ಬೆಂಗಳೂರಿನಲ್ಲಿ ಮಾತ್ರ ಪ್ರವೇಶ ಪರೀಕ್ಷೆ ನಡೆಯಲಿದ್ದು, ವೈದ್ಯಕೀಯ ವಿಭಾಗದಲ್ಲಿ 9,110 ಮತ್ತು ದಂತವೈದ್ಯಕೀಯ ವಿಭಾಗದಲ್ಲಿ 2,171 ವಿದ್ಯಾರ್ಥಿಗಳು ಇದೇ ಭಾನುವಾರ (ಜ.29) ಪರೀಕ್ಷೆ ಬರೆಯಲಿದ್ದಾರೆ.

ಕಳೆದ ಬಾರಿ ಬಳ್ಳಾರಿಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮಗಳು ನಡೆದ ಹಿನ್ನೆಲೆಯಲ್ಲಿ ಈ ವರ್ಷ ಬೆಂಗಳೂರಿನಲ್ಲೇ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಸ್. ಶ್ರೀಪ್ರಕಾಶ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬೆಂಗಳೂರಿಗೆ ಬರುವ ಹಿನ್ನೆಲೆಯಲ್ಲಿ ಅವರ ಅನುಕೂಲಕ್ಕಾಗಿ ಪ್ರತಿಯೊಂದು ಪರೀಕ್ಷಾ ಕೇಂದ್ರದ ನಕಾಶೆಯನ್ನು http://www.rguhspget2012.com/ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಚಲನವಲನದ ಮೇಲೆಯೂ ನಿಗಾ ಇರಿಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಪ್ರತಿ ಬ್ಲಾಕ್‌ನಲ್ಲಿ (ಕೊಠಡಿ) ಸಿಸಿ ಟಿವಿ ಅಳವಡಿಸಲಾಗುವುದು. ಬೆಂಗಳೂರಿನಲ್ಲಿ ಒಟ್ಟು ಎಂಟು ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಅಲ್ಲಿನ ಪ್ರತಿ ಕೊಠಡಿಯಲ್ಲಿ ತಲಾ 16 ವಿದ್ಯಾರ್ಥಿಗಳು ಇರುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

`ಕೊಠಡಿಗಳಲ್ಲಿ ಅಳವಡಿಸಲಾದ ಸಿಸಿ ಟಿವಿ ಸಹಾಯದಿಂದ ಪರೀಕ್ಷೆ ಸಂದರ್ಭದಲ್ಲಿ ಯಾವ ವಿದ್ಯಾರ್ಥಿ ಏನು ಮಾಡುತ್ತಿದ್ದಾನೆ ಎಂಬುದನ್ನು ವೆಬ್‌ಸ್ಟ್ರೀಮಿಂಗ್ ಮೂಲಕ ವಿ.ವಿ. ಕಚೇರಿಯಿಂದಲೇ ವೀಕ್ಷಿಸಬಹುದು. ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಈಗಾಗಲೇ ಪೊಲೀಸರಲ್ಲಿ ಮನವಿ ಮಾಡಲಾಗಿದೆ~ ಎಂದು ತಿಳಿಸಿದರು.

ಸರಿ ಉತ್ತರಗಳನ್ನು ಫೆ. 1ರಂದು ವಿ.ವಿ.ಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಆಕ್ಷೇಪಗಳನ್ನು ಫೆ. 6ರೊಳಗೆ ಸಲ್ಲಿಸಬೇಕು. ಆಕ್ಷೇಪಗಳ ಕುರಿತು ತಜ್ಞರಿಂದ ಪರಿಶೀಲನೆ ನಡೆಸಿ ಫೆ. 9ರಂದು ಮತ್ತೆ ಸರಿ ಉತ್ತರಗಳನ್ನು ಪ್ರಕಟಿಸಲಾಗುವುದು. ಫೆ. 13ರಂದು ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶ ಕುರಿತು ತಕರಾರು ಇದ್ದಲ್ಲಿ, ಫೆ. 16ರೊಳಗೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಮೆರಿಟ್ ಪಟ್ಟಿ ಮತ್ತು ಮರು ಮೌಲ್ಯಮಾಪನಕ್ಕೆ ಕೋರುವ ವಿದ್ಯಾರ್ಥಿಗಳ ಫಲಿತಾಂಶ 20ರಂದು ಪ್ರಕಟವಾಗಲಿದೆ ಎಂದರು.

ಪರೀಕ್ಷೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಆದರೆ ವಿದ್ಯಾರ್ಥಿಗಳು ಬೆಳಿಗ್ಗೆ 9 ಗಂಟೆಗೇ ಕೇಂದ್ರಗಳಲ್ಲಿ ಹಾಜರಿರಬೇಕು.

ವಿದ್ಯಾರ್ಥಿಗಳ ಹಾಜರಾತಿಯನ್ನು ಬಯೋಮೆಟ್ರಿಕ್ ಯಂತ್ರದಲ್ಲಿ ದಾಖಲಿಸಿಕೊಳ್ಳಲಾಗುವುದು. ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೊಠಡಿಗೆ ಒಯ್ಯಲು ಅವಕಾಶ ಇಲ್ಲ ಎಂದು ಹೇಳಿದರು.

ಪ್ರವೇಶ ಪತ್ರ ಬಿಟ್ಟು ಬಂದಲ್ಲಿ, ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಂದ ಅದರ ನಕಲು ಪ್ರತಿ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗುರುವಾರ, ಶುಕ್ರವಾರ ಮತ್ತು ಶನಿವಾರ ಸಹಾಯವಾಣಿಯ (ದೂರವಾಣಿ ಸಂಖ್ಯೆ- 9141935874, 8453816903 ಮತ್ತು 8453755276) ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು. ವಿ.ವಿಯ ರಿಜಿಸ್ಟ್ರಾರ್ (ಮೌಲ್ಯಮಾಪನ) ಎನ್.ಎಸ್. ಅಶೋಕಕುಮಾರ್, ರಿಜಿಸ್ಟ್ರಾರ್ ಡಾ.ಡಿ. ಪ್ರೇಮಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಕಾಮೆಡ್‌ಕೆ ಪಿಜಿಇಟಿ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಕಾಮೆಡ್-ಕೆ ನಡೆಸುವ ಪಿಜಿಇಟಿ ಫೆಬ್ರುವರಿ 12ರಂದು ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ನಡೆಯಲಿದೆ.

ಪ್ರವೇಶ ಪತ್ರ ದೊರೆಯದ ವಿದ್ಯಾರ್ಥಿಗಳು ಒಂದು ದಿನ ಮುಂಚಿತವಾಗಿ ಪರೀಕ್ಷಾ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ಕಾಮೆಡ್-ಕೆ ಪ್ರಕಟಣೆ ತಿಳಿಸಿದೆ.

ಪ್ರವೇಶ ಪತ್ರದ ಜೊತೆ ವಿದ್ಯಾರ್ಥಿಗಳು ಈ ಗುರುತಿನ ಪತ್ರಗಳ ಪೈಕಿ ಯಾವುದಾದರೂ ಒಂದನ್ನು ಹೊಂದಿರಬೇಕು:

ಪಾನ್ ಕಾರ್ಡ್, ವಾಹನ ಚಾಲನಾ ಪರವಾನಗಿ, ಬ್ಯಾಂಕ್ ಅಥವಾ ಅಂಚೆ ಕಚೇರಿಯ ಭಾವಚಿತ್ರ ಇರುವ ಚಾಲ್ತಿ ಉಳಿತಾಯ ಖಾತೆಯ ಪಾಸ್‌ಬುಕ್ (ಭಾವಚಿತ್ರವನ್ನು ಬ್ಯಾಂಕ್ ಮ್ಯಾನೇಜರ್/ ಪೋಸ್ಟ್ ಮಾಸ್ಟರ್ ದೃಢೀಕರಿಸಿರಬೇಕು), ವಿದ್ಯಾರ್ಥಿಯು ವೃತ್ತಿಯಲ್ಲಿದ್ದರೆ ಕಂಪೆನಿಯಿಂದ ಕೊಡಲಾಗುವ ಗುರುತಿನ ಚೀಟಿ, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ ಅಥವಾ ವಿದ್ಯಾರ್ಥಿಯು ಹಿಂದೆ ಓದಿದ್ದ ಸಂಸ್ಥೆ ನೀಡಿರುವ ಗುರುತಿನ ಚೀಟಿ (ಭಾವಚಿತ್ರದ ಮೇಲೆ ಸಂಸ್ಥೆಯ ಸಂಬಂಧಪಟ್ಟವರ ಸಹಿ ಇರಬೇಕು).

ಎಲ್ಲ ಗುರುತಿನ ಪತ್ರಗಳು ಜನವರಿ 13ಕ್ಕಿಂತ ಮುನ್ನ ನೀಡಿದ್ದಾಗಿರಬೇಕು. ಇದೇ ಗುರುತಿನ ಚೀಟಿಯನ್ನು ವಿದ್ಯಾರ್ಥಿಗಳು ಕೌನ್ಸೆಲಿಂಗ್ ಸಮಯದಲ್ಲೂ ತರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT