ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ಜಿಸಿಟಿ ಅಕ್ರಮ:ಪ್ರಾಧ್ಯಾಪಕ ಸಿಐಡಿ ವಶಕ್ಕೆ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ನ ಪ್ರವೇಶ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ, ವಿಮ್ಸನ ವಿಧಿ ವಿಜ್ಞಾನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿನಾಯಕ ಪ್ರಸನ್ನ ಮಂಗಳವಾರ ಬೆಳಿಗ್ಗೆ ನ್ಯಾಯಾಧೀಶರ ಎದುರು ಹಾಜರಾಗಿದ್ದು, ಬುಧವಾರ ಸಂಜೆ ನ್ಯಾಯಾಲಯವು ಅವರನ್ನು ಸಿಐಡಿ ವಶಕ್ಕೆ ಒಪ್ಪಿಸಿತು.

ತಲೆ ಮರೆಸಿಕೊಂಡಿದ್ದ ಡಾ. ವಿನಾಯಕ ಅವರನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದ ಸಿಐಡಿ, ಅವರ ಬಂಧನಕ್ಕಾಗಿ ತೀವ್ರ ಶೋಧ ನಡೆಸಿತ್ತು. ಮಂಗಳವಾರ ಬೆಳಿಗ್ಗೆ ಸ್ಥಳೀಯ ತಾಳೂರು ರಸ್ತೆಯಲ್ಲಿರುವ ಜೆಎಂಎಫ್‌ಸಿ ನ್ಯಾಯಾಧೀಶ ಎಂ.ಬಿ. ಕುಲಕರ್ಣಿ ಅವರ ನಿವಾಸಕ್ಕೆ ತೆರಳಿ ಶರಣಾದ ಡಾ.ವಿನಾಯಕ ಅವರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.

ವಿಚಾರಣೆಯ ಹಿನ್ನೆಲೆಯಲ್ಲಿ ತಮ್ಮ ವಶಕ್ಕೆ ಸಲ್ಲಿಸಬೇಕು ಎಂದು ಬುಧವಾರ ಸಿಐಡಿಯ ಡಿವೈಎಸ್‌ಪಿ ಛಲಪತಿ, ಇನ್ಸ್‌ಪೆಕ್ಟರ್‌ಗಳಾದ ಜಗನ್ನಾಥ ರೈ ಹಾಗೂ ಮಂಜಪ್ಪ ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ನ. 5ರವರೆಗೆ ಸಿಐಡಿ ವಶಕ್ಕೆ ಒಪ್ಪಿಸಿ ನ್ಯಾಯಾಧೀಶ ಎಂ.ಬಿ. ಕುಲಕರ್ಣಿ ಅವರು ಬುಧವಾರ ಸಂಜೆ 4ಕ್ಕೆ ಆದೇಶ ಹೊರಡಿಸಿದರು.

ಅರ್ಜಿ ತಿರಸ್ಕಾರ: ಸಿಐಡಿಯಿಂದ ಬಂಧನಕ್ಕೆ ಒಳಗಾಗಿರುವ 17 ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ಪೈಕಿ, ಐವರ ಅರ್ಜಿಯನ್ನು ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯ ತಿರಸ್ಕರಿಸಿದೆ. 12 ಜನ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಇದೇ 28ಕ್ಕೆ ಮುಂದೂಡಲಾಗಿದೆ.

ಪ್ರಮುಖ ಆರೋಪಿಗಳಾಗಿರುವ ಹೇಮಂತರಾವ್, ಡಿ.ಎಚ್. ಕೃಷ್ಣಮೂರ್ತಿ, ಡಾ. ಸಂತೋಷ್, ಡಾ.ಪಿ. ಮುರಾರಿ. ಸೋಮಶೇಖರ್ ಅವರ ಜಾಮೀನು ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ಬಿ ಕುಲಕರ್ಣಿ,  ಸಾಕ್ಷ್ಯ ನಾಶಪಡಿಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಜಾಮೀನು ನೀಡಲು ನಿರಾಕರಿಸಿ ಅರ್ಜಿ ವಜಾ ಮಾಡಿದರು.

ಇನ್ನಿತರ ಆರೋಪಿಗಳಾಗಿರುವ ಡೇವಿಡ್ ಪ್ರಭಾಕರ್, ಡಾ.ವಿ. ಸುರೇಶ್,  ಡಾ.ಅಭಿಜಿತ್ ಪಾಟೀಲ್, ಡಾ.ಕೆ. ಬಸವರಾಜ್, ಡಾ.ವಿನೋದ್ ಕರ್ಜಗಿ, ಡಾ.ಭರತ್‌ಕುಮಾರ್, ಡಾ.ಸಂಕೀರ್ತ್, ಡಾ. ಡಿ.ಕೆ. ಭಾರತಿ, ಡಾ. ಫಿರ್ದೋಸ್ ಸುಲ್ತಾನಾ, ಮಲ್ಲಿಕಾರ್ಜುನ, ಡಾ.ರೇಣುಕಾ ಛತ್ರಕಿ, ಡಾ.ಧನಂಜಯ ಅವರ ಜಾಮೀನು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರು ಈ ಕುರಿತು ಇದೇ 28ರಂದು ಆದೇಶ ನೀಡುವುದಾಗಿ ಪ್ರಕಟಿಸಿದರು. ಡಾ.ಪ್ರಸನ್ನ ಅವರ ಪತ್ನಿ ಡಾ.ವನಜಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಏತನ್ಮಧ್ಯೆ ಸಿಐಡಿಯಿಂದ ಬಂಧನಕ್ಕೆ ಒಳಗಾಗಿ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿದ್ದ ಡಾ.ರೇಣುಕಾ ಹಾಗೂ ಡಾ.ಧನಂಜಯ ಆರೋಗ್ಯ ಹದಗೆಟ್ಟಿರುವ ಕಾರಣ ನೀಡಿ ವಿಮ್ಸಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT