ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪಿ.ಟಿ.ಉಷಾ ರೀತಿ ಗುರಿ ಮುಟ್ಟುವೆ'

Last Updated 4 ಸೆಪ್ಟೆಂಬರ್ 2013, 20:10 IST
ಅಕ್ಷರ ಗಾತ್ರ

ಬೆಂಗಳೂರು: `ನನ್ನ ಅಧಿಕಾರದ ಅವಧಿ ಕೇವಲ ಒಂದು ವರ್ಷ. ವೇಳೆಯನ್ನು ಹಾಳುಮಾಡದೆ ಪಿ.ಟಿ. ಉಷಾ ಅವರ ವೇಗದ ಓಟದಂತೆ ಸಿಕ್ಕ ಸಮಯದಲ್ಲೇ ಗುರಿ ಮುಟ್ಟಲು ಯತ್ನಿಸುತ್ತೇನೆ' ಎಂದು ನೂತನ ಮೇಯರ್ ಬಿ.ಎಸ್. ಸತ್ಯನಾರಾಯಣ ಹೇಳಿದರು.

ಬುಧವಾರ ಮೇಯರ್ ಆಗಿ ಆಯ್ಕೆಯಾದ ಬಳಿಕ ನಡೆಸಿದ ಮೊದಲ ಪತ್ರಿಕಾ ಗೋಷ್ಠಿ ಅವರು ಮಾತನಾಡಿದರು. `ಪ್ರತಿಯೊಬ್ಬ ಅಧಿಕಾರಿಗೂ ಜವಾಬ್ದಾರಿ ನಿಗದಿ ಮಾಡಲಾಗುತ್ತಿದ್ದು, ಎಲ್ಲರಿಂದಲೂ ವರದಿ ಪಡೆಯಲಾಗುತ್ತದೆ. ಹೊಣೆ ಮರೆತವರ ಮೇಲೆ ಚಾಟಿ ಬೀಸಲಾಗುತ್ತದೆ. 20 ವರ್ಷಗಳ ನನ್ನ ಬಿಬಿಎಂಪಿ ಒಡನಾಟದಲ್ಲಿ ಅಧಿಕಾರಿಗಳಿಂದ ಹೇಗೆ ಕೆಲಸ ಮಾಡಿಸಬೇಕು ಎಂಬುದು ನನಗೆ ಗೊತ್ತಿದೆ' ಎಂದು ಖಡಕ್ ಎಚ್ಚರಿಕೆ ನೀಡಿದರು.

`ನಗರದ ರಸ್ತೆಗಳಲ್ಲಿ ಹೊಂಡಗಳೇ ತುಂಬಿಹೋಗಿದ್ದು ಸಂಚಾರ ದುಸ್ತರವಾಗಿದೆ. ಗುಂಡಿಗಳನ್ನು ಮುಚ್ಚಲು ಕ್ಷಿಪ್ರ ಕಾರ್ಯಾಚರಣೆಗೆ ಆದೇಶ ನೀಡುತ್ತೇನೆ. ರಸ್ತೆಗಳು ದುರಸ್ತಿ ಹೊಂದಿರುವುದನ್ನು ತಪಾಸಣೆ ಮೂಲಕ ಖಾತರಿ ಮಾಡಿಕೊಳ್ಳುತ್ತೇನೆ' ಎಂದು ಹೇಳಿದರು.

`ನಿಕಟಪೂರ್ವ ಮೇಯರ್ ಡಿ.ವೆಂಕಟೇಶಮೂರ್ತಿ ಅವರು ಮಂಡಿಸಿದ್ದ ಬಜೆಟ್‌ಗೆ ಸರ್ಕಾರದ ಅನುಮೋದನೆ ಸಿಕ್ಕಿದೆ. ಆದರೆ, ನಾವು ಹಾಕಿಕೊಳ್ಳಲಿರುವ ಯೋಜನೆಗಳಿಗೆ ಹಣಕಾಸಿನ ಅಗತ್ಯ ಇರುವುದರಿಂದ ಪೂರಕ ಬಜೆಟ್ ಮಂಡಿಸುತ್ತೇನೆ' ಎಂದು ಪ್ರಕಟಿಸಿದರು.

`ವಾರ್ಡ್‌ಗಳ ಸಮಸ್ಯೆಯನ್ನು ಬಗೆಹರಿಸಲು ವಲಯಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆ. ಆಯಾ ವಲಯಕ್ಕೆ ಸಂಬಂಧಿಸಿದ ಎಲ್ಲ ವಾರ್ಡ್‌ಗಳ ಸದಸ್ಯರು, ಅಧಿಕಾರಿಗಳು, ಆಯುಕ್ತರು ಮತ್ತು ನಾನು ಎಲ್ಲರೂ ಉಪಸ್ಥಿತರಿದ್ದು, ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುತ್ತೇವೆ' ಎಂದರು.

`ವಾರ್ಡ್‌ಗಳ ಸಮಸ್ಯೆಯನ್ನು ಬಗೆಹರಿಸಲು ವಲಯಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆ. ಆಯಾ ವಲಯಕ್ಕೆ ಸಂಬಂಧಿಸಿದ ಎಲ್ಲ ವಾರ್ಡ್‌ಗಳ ಸದಸ್ಯರು, ಅಧಿಕಾರಿಗಳು, ಆಯುಕ್ತರು ಮತ್ತು ನಾನು ಎಲ್ಲರೂ ಉಪಸ್ಥಿತರಿದ್ದು, ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುತ್ತೇವೆ' ಎಂದು ತಿಳಿಸಿದರು.

`ಪ್ರತಿ ಸೋಮವಾರ ಮಾರುಕಟ್ಟೆಗೆ ತೆರಳಿ, ಅಲ್ಲಿನ ಸ್ವಚ್ಛತಾ ವ್ಯವಸ್ಥೆಯನ್ನು ಪರಿಶೀಲಿಸುತ್ತೇನೆ. ಸ್ವಚ್ಛತಾ ಕಾರ್ಯ ಪೂರ್ಣಗೊಳ್ಳುವವರೆಗೆ ಸ್ಥಳ ಬಿಟ್ಟು ಹೋಗುವುದಿಲ್ಲ. ಮಾರುಕಟ್ಟೆ ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ಸಿಬ್ಬಂದಿ ಜತೆಗೆ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳ ನೆರವನ್ನೂ ಪಡೆಯುತ್ತೇನೆ' ಎಂದು ವಿವರಿಸಿದರು.

`ವಾಹನಗಳು ಸುಗಮವಾಗಿ ಸಂಚರಿಸುವ ಮತ್ತು ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆಯನ್ನು ರೂಪಿಸಬೇಕು. ಕೆರೆಗಳ ಅಭಿವೃದ್ಧಿ ಮಾಡಬೇಕು. ರಸ್ತೆಗಳ ಗುಣಮಟ್ಟವನ್ನು ಕಾಪಾಡಬೇಕು. ಕಸದ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಬೇಕು ಎಂಬ ಅಭಿಲಾಷೆ ಹೊಂದಿದ್ದೇನೆ' ಎಂದು ಮೇಯರ್ ತಿಳಿಸಿದರು.

`ಬಿಬಿಎಂಪಿಯನ್ನು ಆರ್ಥಿಕವಾಗಿ ಸುಭದ್ರಗೊಳಿಸಲು ಕಂದಾಯ ವಸೂಲಾತಿಯನ್ನು ತೀವ್ರಗೊಳಿಸಲು ಸೂಚಿಸುತ್ತೇನೆ. ಜಾಹೀರಾತು ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳುತ್ತೇನೆ' ಎಂದು ಹೇಳಿದರು. `ಪ್ರತಿನಿತ್ಯ ಒಂದೊಂದು ವಾರ್ಡ್‌ನಲ್ಲಿ ಸಮೀಕ್ಷೆಗೆ ತೆರಳುತ್ತೇನೆ. ಜನರ ಸಮಸ್ಯೆ ಆಲಿಸಿ, ಬಗೆಹರಿಸಲು ಯತ್ನಿಸುತ್ತೇನೆ' ಎಂದು ತಿಳಿಸಿದರು.

ತ್ಯಾಜ್ಯಮುಕ್ತ ನಗರದ ಕನಸು: ಉಪ ಮೇಯರ್ ಎನ್. ಇಂದಿರಾ, `ನಗರವನ್ನು ತ್ಯಾಜ್ಯಮುಕ್ತ ಮಾಡಬೇಕು ಎಂಬ ಕನಸಿದೆ. ಜನರು ಕೊಟ್ಟ ಅಧಿಕಾರವನ್ನು ಅದೇ ಉದ್ದೇಶಕ್ಕೆ ಬಳಸುತ್ತೇನೆ' ಎಂದರು. `ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಬೇಕಿದ್ದು, ಆದ್ಯತೆ ಮೇಲೆ ಈ ಕೆಲಸ ನಡೆಸಲು ಮೇಯರ್ ಜತೆ ಚರ್ಚಿಸುತ್ತೇನೆ' ಎಂದರು.

`ದೇವರಾಜ ಅರಸು ಅವರು ದಶಕಗಳ ಹಿಂದೆಯೇ ಸಾಮಾಜಿಕ ನ್ಯಾಯಕ್ಕಾಗಿ ಹಾಕಿಕೊಂಡ ಯೋಜನೆಗಳಿಂದ ನಮ್ಮಂ ತಹ ತಳವರ್ಗದವರೂ ಅಧಿಕಾರ ಪಡೆಯಲು ಸಾಧ್ಯವಾಗಿದೆ' ಎಂದರು.

`ಪುಸ್ತಕ ಕೊಡಿ'
ಬೆಂಗಳೂರು: `ಅಭಿನಂದನೆಗೆ ಕಾರ್ಯ ಕ್ರಮ ನಡೆಸುವುದು ಬೇಡ. ಹಾರ- ತುರಾಯಿ ಬೇಡವೇ ಬೇಡ. ಬದಲಾಗಿ ಪುಸ್ತಕ ಕೊಟ್ಟರೆ ಬಿಬಿಎಂಪಿ ಗ್ರಂಥಾ ಲಯ ಸಮೃದ್ಧವಾಗುತ್ತದೆ'

-ಮೇಯರ್ ಬಿ.ಎಸ್. ಸತ್ಯ ನಾರಾಯಣ ಸಾರ್ವಜನಿಕರಲ್ಲಿ ಮಾಡಿ ಕೊಂಡ ಮನವಿ ಇದು. `ಹಿಂದೆ ಮೇಯರ್ ಆಗಿದ್ದ ಹುಚ್ಚಪ್ಪ ಅವರು ಪುಸ್ತಕಗಳನ್ನೇ ಪಡೆಯುತ್ತಿದ್ದರು' ಎಂದು ಸ್ಮರಿಸಿಕೊಂಡರು. `ಮೇಯರ್ ವಾಹನ ಬರುವುದು ತಡವಾದರೆ ಸ್ಕೂಟರ್‌ನಲ್ಲೇ ಕೆಲಸಕ್ಕೆ ತೆರಳುತ್ತೇನೆ' ಎಂದು ಅವರು ಹೇಳಿದರು. `ಬಸ್‌ದಿನದಂದು ಬಸ್ಸಿ ನಲ್ಲೇ ಓಡಾಡುವ ಯೋಚನೆ ಇದೆ' ಎಂದೂ ತಿಳಿಸಿದರು.

ನೂತನ ಮೇಯರ್ ಮತ್ತು ಉಪ ಮೇಯರ್ ಅವರನ್ನು ಅಭಿನಂದಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಂದ ತೀವ್ರ ಪೈಪೋಟಿ ಕಂಡುಬಂತು. ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿನಾರಾಯಣ ಹಾಜರಿದ್ದರು.

ಸತ್ಯನಾರಾಯಣ ಮೇಯರ್; ಇಂದಿರಾ ಉಪಮೇಯರ್
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ನಿರೀಕ್ಷೆಯಂತೆ ಬಿಜೆಪಿಯ ಬಸವನಗುಡಿ ಸದಸ್ಯ ಬಿ.ಎಸ್. ಸತ್ಯನಾರಾಯಣ ಮತ್ತು ಕಾಂಗ್ರೆಸ್‌ನ ಬ್ಯಾಟರಾಯನಪುರ ಸದಸ್ಯೆ ಎನ್. ಇಂದಿರಾ ಬುಧವಾರ ಕ್ರಮವಾಗಿ ನೂತನ ಮೇಯರ್, ಉಪಮೇಯರ್ ಆಗಿ ಅವಿರೋಧ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT