ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಿಒ-ಜನಪ್ರತಿನಿಧಿ ಜಟಾಪಟಿ

Last Updated 21 ಅಕ್ಟೋಬರ್ 2011, 10:05 IST
ಅಕ್ಷರ ಗಾತ್ರ

ಉಡುಪಿ: `ನಾವು ಕಾನೂನು ಬಿಟ್ಟು ಕೆಲಸ ಮಾಡಬೇಕಾ? ಅಥವಾ ಕಿಂಚಿತ್ತೂ ಕಾನೂನು ತಿಳಿವಳಿಕೆ ಇಲ್ಲದ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮಾತು ಕೇಳಿಕೆಲಸವೇ ಆಗಿರದ ಕಾಮಗಾರಿಗಳಿಗೆ ಬಿಲ್ ಮಾಡಿಕೊಡಬೇಕಾ?~ ಎನ್ನುವ ಪಿಡಿಒಗಳ (ಪಂಚಾಯಿತಿ ಅಭಿವೃದ್ಧಿ ಅಧಿಕಾರಿ) ಗೋಳು ಒಂದೆಡೆ, `ಪಿಡಿಒಗಳೇ ಅಭಿವೃದ್ಧಿಗೆ ತೊಡಕು, ಅವರಿಂದ ಸಮಸ್ಯೆ ಪರಿಹಾರವೇ ಆಗುವುದಿಲ್ಲ~ ಎನ್ನುವುದು ಜನಪ್ರತಿನಿಧಿಗಳ ದೂರು.

ಇತ್ತೀಚೆಗೆ ಗುಲ್ಬರ್ಗ ಜಿಲ್ಲೆಯ ಪಿಡಿಒ ಮಂದಾಕಿನಿ ಜನಪ್ರತಿನಿಧಿಗಳ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ರಾಜ್ಯದಾದ್ಯಂತ ಚರ್ಚೆ ನಡೆಯುತ್ತಿದೆ. ರಾಜ್ಯದ ಪಿಡಿಒಗಳೆಲ್ಲ ಕಚೇರಿ ಕೆಲಸಕ್ಕೆ ಸಾಮೂಹಿಕವಾಗಿ ರಜೆ ಹಾಕಿ ಜಿಲ್ಲಾ ಪಂಚಾಯಿತಿ ಎದುರು ಬುಧವಾರ ಸಾಂಕೇತಿಕ ಪ್ರತಿಭಟನೆ ನಡೆಸಿ `ನಮಗೆ ಮಾನಸಿಕ ಸ್ಥರ್ಯ ನೀಡಿ~ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊರೆಹೋಗಿದ್ದು ಆಗಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕೆಲವು ಗ್ರಾ.ಪಂ. ಅಧ್ಯಕ್ಷರನ್ನು ಗುರುವಾರ `ಪ್ರಜಾವಾಣಿ~ ಮಾತನಾಡಿಸಿತು. ಈ ಸಂದರ್ಭದಲ್ಲಿ ಕೇಳಿಬಂದ ಮಾತುಗಳು ಇಲ್ಲಿವೆ.

ಖಳರನ್ನಾಗಿ ಮಾಡುತ್ತಿದ್ದಾರೆ: `ಕಾನೂನು ಬಿಟ್ಟು ಕೆಲಸ ಮಾಡಬೇಕು ಎಂದು ಜನಪ್ರತಿನಿಧಿಗಳು ಒತ್ತಡ ಹಾಕುತ್ತಾರೆ. ತಮಗೆ ಆಗಬೇಕಾದ ಸಣ್ಣಪುಟ್ಟ ಕೆಲಸಕ್ಕೂ ಶಾಸಕರು, ಸಂಸದರು ಸೇರಿದಂತೆ ಮೇಲಿನ ಹಂತದಿಂದ ಒತ್ತಡ ಹಾಕಿಸುತ್ತಾರೆ. ಕಾನೂನು ಬದ್ಧವಾಗಿ ಕೆಲಸ ಮಾಡುವ ನಾವು ವಿಲನ್ ಆಗುತ್ತಿದ್ದೇವೆ~ ಎಂದು ಹೆಸರು ಹೇಳಲು ಇಚ್ಛಿಸದ ಉಡುಪಿ ಜಿಲ್ಲೆಯ  ಪಿಡಿಒ ಒಬ್ಬರು  ಅಳಲು ತೋಡಿಕೊಂಡರು.

`ಜನಪ್ರತಿನಿಧಿಗಳು ನಮ್ಮನ್ನು ಬಳಸಿಕೊಂಡು ಕೆಲಸ ಮಾಡಿಸಿಕೊಳ್ಳುತ್ತಾರೆ. ಕಾನೂನು ಬಿಟ್ಟು ಕೆಲಸ ಮಾಡಲಾಗದು ಎಂದು ಹೇಳಿದ ಕೂಡಲೇ ನಮ್ಮನ್ನು ಹೀಗಳೆಯುತ್ತಾರೆ. ನಮ್ಮ ವಿರುದ್ಧ ಜಗಳವಾಡುತ್ತಾರೆ? ಇದು ಸರಿಯೇ?~ ಎಂದು ಪ್ರಶ್ನಿಸ್ನುತ್ತಾರೆ ಅವರು.

`ಜನಪ್ರತಿನಿಧಿಗಳು ಲಕ್ಷಗಟ್ಟಲೆ ಗೋಲ್‌ಮಾಲ್ ಮಾಡುತ್ತಾರೆ. ಆ ಬಗ್ಗೆ ದಾಖಲೆಗಳನ್ನು ಸಿದ್ಧಪಡಿಸಿದರೆ ಅವರದ್ದೆಲ್ಲ ಪರಿಸ್ಥಿತಿ ಏನಾಗಬಹುದು? ನಮಗೆ ಅನಕ್ಷರಸ್ಥ ಜನಪ್ರತಿನಿಧಿಗಳು `ಬುದ್ಧಿವಾದ~ ಹೇಳುತ್ತಾರೆ. ಅರ್ಹ ಫಲಾನುಭವಿಗಳ ಪಟ್ಟಿ ಬದಲು ಅವರೇ ಎಲ್ಲವನ್ನೂ ಸಿದ್ಧಮಾಡಿಕೊಂಡು ಬರುತ್ತಾರೆ.

ನಾವೇನೂ ಮಾತನಾಡದಂತೆ ಒತ್ತಡ ಹಾಕುತ್ತಾರೆ. ಹಾಗಲ್ಲ ಹೀಗೆ ಅಂದರೆ ಜಗಳವಾಡಬೇಕಾಗುತ್ತದೆ. ನಮ್ಮ ಮೇಲಾಧಿಕಾರಿಗಳು ಇಂತಹ ಸಭೆಗೆ ಬಂದರೂ ಬಾಯಿಮುಚ್ಚಿ ಕುಳಿತುಕೊಳ್ಳುತ್ತಾರೆ. ಅವರು ಹೋದ ನಂತರ

ನಿಮ್ಮ ಮೇಲಾಧಿಕಾರಿಗಳೇ ಸುಮ್ಮನೇ ಇರುವಾಗ ನಿಮ್ಮದೇನು? ಎಂಬ ಮಾತು ಜನಪ್ರತಿನಿಧಿ ಗಳಿಂದ ಬರುತ್ತದೆ. ಒಟ್ಟಾರೆ ಈ ಉದ್ಯೋಗದಲ್ಲಿ ಮರ್ಯಾದೆಯೇ ಇಲ್ಲದಂತಾಗಿದೆ~ ಎಂಬುದು ಇನ್ನೊಬ್ಬ ಪಿಡಿಒ ಅಳಲು.
ಅಷ್ಟಕ್ಕೂ ಇದು ಸಮಸ್ಯೆಯ ಒಂದು ಮುಖ ಮಾತ್ರ. ಪಿಡಿಒಗಳ ಅಳಲು ಒಂದೆಡೆಯಾದರೆ ಇತ್ತ ಇವರೊಂದಿಗೆ ಸೆಣಸಾಡುವ ಜನಪ್ರತಿನಿಧಿಗಳು ಪಿಡಿಒಗಳ ಕಿರಿಕಿರಿಯ ಬಗ್ಗೆ ಇಷ್ಟೇ ಅಸಹನೆಯಿಂದ ಮಾತನಾಡುತ್ತಾರೆ.

ಜನಪ್ರತಿನಿಧಿಗಳು ಹೇಳುವುದೇನು: ಜನರಿಂದ ಆಯ್ಕೆಯಾದ ನಮಗೆ ಕಾನೂನಿನ ಬಗ್ಗೆ ಹೇಳಲಿಕ್ಕೆ ಇವರ‌್ಯಾರು? ಎಲ್ಲವನ್ನೂ ಕಾನೂನು ಕಟ್ಟಳೆ ಎಂದರೆ ಹೇಗೆ? ಮತದಾರರ ಕೆಲವೊಂದಿಷ್ಟು ಸಮಸ್ಯೆಗಳನ್ನಾದರೂ ಮಾನವೀಯ ನೆಲೆಯಲ್ಲಿ ಪರಿಹರಿಸುವುದು ಬೇಡವೇ?~ ಎಂಬುದು ಜನಪ್ರತಿನಿಧಿಗಳ ಪ್ರಶ್ನೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರ ಒಕ್ಕೂಟದ ಉಡುಪಿ ತಾಲ್ಲೂಕು ಘಟಕದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಪ್ರಕಾರ ಪಿಡಿಒಗಳಿಗೆ ಕಾನೂನಿನ ಅರಿವೇ ಇಲ್ಲ.

`ಯಾವ ಅಧ್ಯಕ್ಷ ಕೂಡ ಕಾನೂನು ಉ್ಲ್ಲಲಂಘಿಸಿ ಅಧಿಕಾರ ನಡೆಸಬೇಕು ಎಂದುಕೊಳ್ಳುವುದಿಲ್ಲ. ಹಾಗೆಂದು ಕಾನೂನು ಚೌಕಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಯೂ ಸಾಧ್ಯವಿಲ್ಲ~ ಎನ್ನುತ್ತಾರೆ ಅವರು.

`ನೀರಿನ ಸಮಸ್ಯೆ ಉಂಟಾದಾಗಲೂ ಅದಕ್ಕೆ ಟೆಂಡರ್ ಕರೆದು ಬಳಿಕ ಕೆಲಸ ಕೈಗೆತ್ತಿಕೊಳ್ಳುವ ಹೊತ್ತಿಗೆ ಜನ ರೋಸಿ ಹೋಗುತ್ತಾರೆ. ಹೀಗಾಗಿ ಕೂಡಲೇ ಅನುದಾನ ಬಿಡುಗಡೆ ಮಾಡಿ ಕೆಲಸ ಕೈಗೊಳ್ಳಲೇ ಬೇಕಾಗುತ್ತದೆ. ಇದಕ್ಕೂ ಕೆಲವು ಪಿಡಿಒಗಳು ತಕರಾರು ಮಾಡುತ್ತಾರೆ. ಜನರೊಂದಿಗೆ ಸ್ಪಂದಿಸಬೇಕಾದ್ದು ಗ್ರಾ.ಪಂ. ಇಂಥದ್ದನ್ನೆಲ್ಲ ಕಾನೂನು ಉಲ್ಲಂಘನೆ ಎಂದರೆ ಆಗುತ್ತದೆಯೇ?~ ಎಂದು ಪ್ರಶ್ನಿಸುತ್ತಾರೆ ಅವರು.

`ಅಷ್ಟಕ್ಕೂ ಗ್ರಾ.ಪಂ.ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿದೆ. ಹೀಗಾಗಿ ಬಹಳಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸರ್ಕಾರ  ಯಾಕಾದರೂ ಪಂಚಾಯಿತಿ ಕಾರ್ಯದರ್ಶಿಗಳನ್ನು ತೆಗೆದು ಪಿಡಿಒಗಳನ್ನು ನೇಮಕ ಮಾಡಿದೆಯೋ ಗೊತ್ತಿಲ್ಲ.

ಪರಸ್ಪರ ಸೇವಾ ಮನೋಭಾವದಿಂದ ಕೆಲಸ ಮಾಡುವವರ ಕೊರತೆ ಕಂಡು ಬರುತ್ತಿದೆ~ ಎಂದು ಅವರು ಪ್ರತಿಕ್ರಿಯಿಸಿದರು. ಇದೆಲ್ಲ ಸಣ್ಣ ಸಮಸ್ಯೆ, `ಅಹಂ~ ಸಮಸ್ಯೆ:

ಅಲೆವೂರು ಗ್ರಾ.ಪಂ. ಅಧ್ಯಕ್ಷ ಹರೀಶ್ ಕಿಣಿ ಅವರ ಪ್ರಕಾರ ಪಿಡಿಒಗಳದ್ದೆಲ್ಲ ಸಮಸ್ಯೆಯೇ ಅಲ್ಲ.
`ಈ ಹಿಂದೆ ಗ್ರಾಮ ಪಂಚಾಯಿತಿಗಳಲ್ಲಿ ಯಾರು ಕಾರ್ಯದರ್ಶಿಗಳಾಗಿದ್ದರೋ ಅವರು ಎಲ್ಲಿಯೂ ತಕರಾರು ಮಾಡುತ್ತಿಲ್ಲ. ಯಾರು ಹೊಸದಾಗಿ ಪಿಡಿಒಗಳಾಗಿ ಬಂದಿದ್ದಾರೋ ಅಲ್ಲಿ ಅಧ್ಯಕ್ಷರು ಮತ್ತು ಪಿಡಿಒ ನಡುವೆ `ಅಹಂ ಸಮಸ್ಯೆ~ ಕಾಡಿದೆ.
 
2-3 ಬಾರಿ ಅಧ್ಯಕ್ಷನಾಗಿ ಆಯ್ಕೆಯಾದ ತನಗೆ ಹೆಚ್ಚು ಗೊತ್ತಿರುತ್ತಾ ಅಥವಾ ಈಗಷ್ಟೇ ಪರೀಕ್ಷೆ ಪಾಸು ಮಾಡಿ ಬಂದ ಪಿಡಿಒಗೆ ಹೆಚ್ಚು ತಿಳಿವಳಿಕೆ ಇರುತ್ತದೆಯೇ? ಎನ್ನುವಲ್ಲಿಂದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ರಸ್ತೆಗೆ ಮಣ್ಣು ಹಾಕುವುದು, ನಲ್ಲಿ ದುರಸ್ತಿ, ಲೈಟ್ ಕಂಬ ಹಾಕುವುದು ಇಂಥ ಸಣ್ಣಪುಟ್ಟ ವಿಷಯಗಳಿಗೆಲ್ಲ ಪಿಡಿಒ ಮತ್ತು ಅಧ್ಯಕ್ಷರ ನಡುವೆ ಮನಸ್ತಾಪ ಕಾಣಿಸಿಕೊಳ್ಳುತ್ತದೆ. ಇವೆಲ್ಲ ಜನಸಾಮಾನ್ಯರಿಗೆ ಕೂಡಲೇ ಆಗಬೇಕಾದ ಕೆಲಸ, ಮೀಟಿಂಗ್‌ನಲ್ಲಿಟ್ಟು ಪಾಸ್ ಮಾಡುವ ವಿಚಾರವಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT