ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಿಒ: ಸಾವು- ಬದುಕಿನ ನಡುವೆ ಹೋರಾಟ

Last Updated 1 ಜೂನ್ 2013, 12:34 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿಗೆ ಸಮೀಪದ ಕೆ. ನಿಡುಗಣೆ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಶಶಿಕಿರಣ ಅವರು ಪಂಚಾಯಿತಿ ಅಧ್ಯಕ್ಷರ ಒತ್ತಡ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿ, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಶಿಕರಣ ಅವರ ದೇಹಸ್ಥಿತಿ ಗಂಭೀರವಾಗಿದೆ. 24 ಗಂಟೆಗಳ ಕಾಲ ಏನೂ ಹೇಳಲಾಗದು ಎಂದು ವೈದ್ಯರು ತಿಳಿಸಿದ್ದಾರೆ.

ಮಡಿಕೇರಿಯವರೇ ಆದ ಶಶಿಕಿರಣ ಅವರು ತಮ್ಮ ತಂದೆ-ತಾಯಿಯವರ ಮನೆಯಲ್ಲಿ ಶುಕ್ರವಾರ ಬೆಳಿಗ್ಗೆ 10ರಿಂದ 15 ಮಾತ್ರೆಗಳನ್ನು ಸೇವಿಸುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದರು.

`ಬುದ್ಧಿವಂತೆ, ಸೂಕ್ಷ್ಮಮತೀಯಾಗಿದ್ದ ಪಿಡಿಒ ಶಶಿಕಿರಣ ಅವರು ಕಳೆದ ಮೂರು ವರ್ಷಗಳಿಂದ ಪಿಡಿಒ ಆಗಿ ಸೇವೆ ಸಲ್ಲಿಸುತ್ತಿದ್ದರು. ಹಿಂದಿನ ಅಧ್ಯಕ್ಷರ ಅಧಿಕಾರ ಅವಧಿಯಲ್ಲಿ ಯಾವುದೇ ತೊಂದರೆ ಇರಲಿಲ್ಲ. ಆದರೆ, ಕಳೆದ ಡಿಸೆಂಬರ್‌ನಲ್ಲಿ ಅಧ್ಯಕ್ಷರಾಗಿ ಪ್ರದೀಪ್ ಆಯ್ಕೆಯಾಗಿ ಬಂದ ನಂತರ ಆಗದಿರುವ ಕಾಮಗಾರಿಗಳಿಗೆ ಬಿಲ್ ಮಾಡುವಂತೆ ಒತ್ತಡ ಹೇರುತ್ತಿದ್ದರು. ಇದರಿಂದ ಅವರು ತೀವ್ರವಾಗಿ ಖಿನ್ನತೆಗೆ ಒಳಗಾಗಿ ಇಂತಹ ನಿರ್ಧಾರ ಕೈಗೊಂಡರು' ಎಂದು ಅವರ ತಂದೆ ಅರಸ್ ಹೇಳಿದರು.

ವರ್ಗಾವಣೆ: ಕಳೆದ ವಾರವಷ್ಟೇ ಶಶಿಕಿರಣ ಅವರನ್ನು ಮಡಿಕೇರಿ ತಾಲ್ಲೂಕು ಪಂಚಾಯಿತಿಗೆ ವರ್ಗಾವಣೆ ಮಾಡಿ, ಆದೇಶಿಸಲಾಗಿತ್ತು. ಜೂನ್ ಮೊದಲ ವಾರದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ನಡೆಯಲಿರುವ ಆಡಿಟ್ ಕೆಲಸ ಪೂರ್ಣಗೊಳಿಸಿ ಹೊಸ ಕಚೇರಿಗೆ ಹೋಗುತ್ತೇನೆಂದು ಶಶಿಕಿರಣ ತಮ್ಮೆದುರು ಹೇಳಿಕೊಂಡಿದ್ದರು ಎಂದು ಅವರ ತಂದೆ ತಿಳಿಸಿದರು.

`ನಿನ್ನೆ (ಗುರುವಾರ) ಪುನಃ ಅಧ್ಯಕ್ಷರು ಚೇಂಬರ್‌ಗೆ ಬಂದು ಚೆಕ್‌ಗೆ ಸಹಿ ಹಾಕುವಂತೆ ಒತ್ತಡ ಹೇರಿದ್ದಾರೆ. ಚೆಕ್‌ಗಳಿಗೆ ಸಹಿ ಮಾಡುವ ಅಧಿಕಾರವನ್ನು ಪಿಡಿಒಗಳಿಗೆ ನೀಡಿರುವುದರಿಂದಲೇ ಪಂಚಾಯಿತಿ ಸದಸ್ಯರು, ಅಧ್ಯಕ್ಷರು ಈ ರೀತಿ ಒತ್ತಡ ಹೇರುತ್ತಿದ್ದಾರೆ. ಇದನ್ನು ತಪ್ಪಿಸಬೇಕಾದರೆ, ದಯವಿಟ್ಟು ಚೆಕ್‌ಗಳಿಗೆ ಸಹಿ ಮಾಡುವ ಅಧಿಕಾರವನ್ನು ಸರ್ಕಾರ ಹಿಂಪಡೆಯಲಿ. ಈ ಮೂಲಕವಾದರೂ ನಮ್ಮ ಮಕ್ಕಳು ಸುರಕ್ಷಿತವಾಗಿರಲಿ' ಎಂದು ನೊಂದು ನುಡಿದರು.

ಉತ್ತಮ ಕೆಲಸಗಾರ್ತಿ: `ಶಶಿಕಿರಣ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ, ಈಚೆಗೆ ಕಚೇರಿಯಲ್ಲಿ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆಂದು ನಮ್ಮೆದುರು ಹಲವು ಬಾರಿ ಹೇಳಿಕೊಂಡಿದ್ದರು' ಎಂದು ಸಹೋದ್ಯೋಗಿ ಶೋಭಾರಾಣಿ ತಿಳಿಸಿದರು.

ಕೇಂದ್ರ ಸರ್ಕಾರದ ಹುದ್ದೆ ತ್ಯಜಿಸಿದ್ದರು..
ಸ್ವಗ್ರಾಮವಾದ ಮಡಿಕೇರಿಯ ಮೇಲಿರುವ ಪ್ರೀತಿಯಿಂದ ಶಶಿಕಿರಣ ಅವರು ಕೇಂದ್ರ ಸರ್ಕಾರದ ಹುದ್ದೆಯನ್ನು ತೊರೆದಿದ್ದರು. ಪಿಡಿಒ ಕೆಲಸಕ್ಕೆ ಸೇರುವ ಮೊದಲು ಶಶಿಕಿರಣ ಅವರು ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ಹುದ್ದೆಯಲ್ಲಿದ್ದರು. ಸ್ವಗ್ರಾಮವಾದ ಮಡಿಕೇರಿ ಹಾಗೂ ಪೋಷಕರ ಜೊತೆಗೆ ಇರಬೇಕೆನ್ನುವ ಉಮೇದಿನಿಂದ ಶಶಿಕಿರಣ, ಆ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕೆಪಿಎಸ್‌ಸಿ ನಡೆಸಿದ ಮೊದಲ ಪಿಡಿಒ ಬ್ಯಾಚ್‌ನಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರ ಮೂಲಕ ಆಯ್ಕೆಯಾಗಿದ್ದರು. ತಮ್ಮ ಜಿಲ್ಲೆಯಲ್ಲಿಯೇ ಕೆಲಸ ಸಿಕ್ಕಿದ್ದರಿಂದ ಶಶಿಕಿರಣ ಖುಷಿಯಾಗಿದ್ದರು.

`ಆದರೆ, ಈ ಖುಷಿ ಬಹಳ ದಿನ ಉಳಿಯಲಿಲ್ಲ. ಇತ್ತೀಚಿನ ದಿನಗಳಲ್ಲಿ ಕಚೇರಿ ಕೆಲಸದಲ್ಲಿ ಸಾಕಷ್ಟು ಒತ್ತಡ ಅನುಭವಿಸುತ್ತಿದ್ದರು. ಇದರ ಬಗ್ಗೆ ಹಲವು ಬಾರಿ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಆದರೆ, ಯಾವ ಅಧಿಕಾರಿಯೂ ಕ್ರಮಕೈಗೊಳ್ಳಲಿಲ್ಲ' ಎಂದು ಪೋಷಕರು ಹತಾಶರಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT