ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿತ್ತಜನಕಾಂಗದ ಕ್ಯಾನ್ಸರ್

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಪಿತ್ತ ಜನಕಾಂಗದಲ್ಲಿ ಕಂಡುಬರುವ ಎಲ್ಲಾ ಗಡ್ಡೆಗಳು ಅಥವ ಕ್ಯಾನ್ಸರ್‌ಗಳು ಪಿತ್ತಜನಕಾಂಗದ ಕ್ಯಾನ್ಸರ್‌ನಲ್ಲಿ ಸೇರಿರುತ್ತವೆ. ಇವು ಪ್ರಾಥಮಿಕ (ಪಿತ್ತಜನಕಾಂಗದೊಳಗೆ ಹುಟ್ಟುವ) ಅಥವಾ ಸೆಕೆಂಡರಿ (ಮತ್ತೊಂದು ಸ್ಥಳದಿಂದ ಹುಟ್ಟುವ) ಆಗಿರಬಹುದು. ಪಿತ್ತಜನಕಾಂಗದಲ್ಲಿ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಎಂದರೆ ಹೆಪ್ಯಾಟೊಸೆಲ್ಯೂಲಾರ್ ಕಾರ್ಸಿನೋಮಾ (ಎಚ್‌ಸಿಸಿ).

ವಿಶ್ವವ್ಯಾಪಿಯಾಗಿ ಪಿತ್ತಜನಕಾಂಗ ಕ್ಯಾನ್ಸರ್‌ನ ಪ್ರಕರಣಗಳು ಹೆಚ್ಚುತ್ತಿದ್ದು, ಇಂದು ಜಗತ್ತಿನಲ್ಲಿ ಅದು ಮೂರನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ. ಭಾರತದಲ್ಲಿ 12,750 ನೂತನ ರೋಗಿಗಳಿಗೆ ಎಚ್‌ಸಿಸಿ ಇರುವುದು ಪ್ರತಿ ವರ್ಷ ಪತ್ತೆಯಾಗುತ್ತಿದೆ.

ಪ್ರಾಥಮಿಕ ಪಿತ್ತಜನಕಾಂಗದ ಕ್ಯಾನ್ಸರ್ ಕಾಣಿಸಿಕೊಳ್ಳಲು ಯಾವುದೇ ನಿರ್ದಿಷ್ಟ ಕಾರಣಗಳು ಇರುವುದಿಲ್ಲ. ಪಿತ್ತಜನಕಾಂಗದ ಕ್ಯಾನ್ಸರ್ ಉಂಟು ಮಾಡುವ ಕೆಲವು ಅಪಾಯದ ಅಂಶಗಳು ಈ ಕೆಳಗಿನಂತಿವೆ :

ವೈರಲ್ ಹೆಪಟೈಟೀಸ್ -ಹೆಪಟೈಟೀಸ್ ಬಿ ವೈರಸ್(ಎಚ್‌ಬಿವಿ) ಮತ್ತು ಹೆಪಟೈಟೀಸ್ ಸಿ ವೈರಸ್(ಎಚ್‌ಸಿವಿ) ಸೋಂಕುಗಳು ಪಿತ್ತಜನಕಾಂಗದ ಕ್ಯಾನ್ಸರ್ ಹುಟ್ಟಿಕೊಳ್ಳಲು ಪ್ರಮುಖ ಕಾರಣಗಳಾಗಿವೆ. ಅಂದಾಜಿನ ಪ್ರಕಾರ ಶೇ. 4ರಷ್ಟು ಎಲ್ಲಾ ಭಾರತೀಯರಿಗೆ ಹೆಪಟೈಟೀಸ್ ಬಿ ಸೋಂಕು ಇರುತ್ತದೆ. ಶೇ. 1ರಷ್ಟು ಭಾರತೀಯರಿಗೆ ಹೆಪಟೈಟೀಸ್ ಸಿ ಸೋಂಕು ಇರುತ್ತದೆ ಎಂದು ನಂಬಲಾಗಿದೆ. ಎಚ್‌ಬಿವಿ ಅಥವ ಎಚ್‌ಸಿವಿ ಹೊಂದಿರುವವರ ಪೈಕಿ ಶೇ. 5-10 ಜನರಿಗೆ ಪಿತ್ತಜನಕಾಂಗದ ಕ್ಯಾನ್ಸರ್ ಉಂಟಾಗಬಹುದೆಂದು ಅಂದಾಜು ಮಾಡಲಾಗಿದೆ.

ಸಿರಾಸಿಸ್  ಹಂತ ಹಂತವಾಗಿ ಪ್ರಗತಿ ಕಾಣುವ ತೊಂದರೆಯಾಗಿದ್ದು ಇದರಲ್ಲಿ ಪಿತ್ತಜನಕಾಂಗದಲ್ಲಿ ಗೀರುಗಳು ಉಂಟಾಗಿ ಹಾನಿಯಾಗುತ್ತದೆ. ಸಿರಾಸಿಸ್ ದೀರ್ಘಕಾಲದ ಎಲ್ಲಾ ರೀತಿಯ ಪಿತ್ತಜನಕಾಂಗದ  ಹಾನಿಗಳ ಒಟ್ಟಾರೆ ಫಲಿತಾಂಶವಾಗಿದೆ.

ಸಿರಾಸಿಸ್ ಹೊಂದಿರುವವರ ಪೈಕಿ ಶೇ. 5ರಷ್ಟು ರೋಗಿಗಳಿಗೆ ಪಿತ್ತಜನಕಾಂಗದ  ಕ್ಯಾನ್ಸರ್ ಉಂಟಾಗಬಹುದಾಗಿದೆ. ಸಾಮಾನ್ಯ ಜನರಿಗಿಂತಲೂ ವೈರಲ್ ಹೆಪಟೈಟೀಸ್ ಹೊಂದಿರುವ ರೋಗಿಗಳು ಪಿತ್ತಜನಕಾಂಗದ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ 34ಪಟ್ಟು ಹೆಚ್ಚಾಗಿರುತ್ತದೆ. ತೀವ್ರ ರೀತಿಯ ವೈರಲ್ ಹೆಪಟೈಟೀಸ್ ಮತ್ತು ಸಿರಾಸಿಸ್ ಹೊಂದಿರುವ ರೋಗಿಗಳಲ್ಲಿ ಪಿತ್ತಜನಕಾಂಗದ  ಕ್ಯಾನ್ಸರ್ ಉಂಟಾಗುವ ಅಪಾಯ ನೂರು ಪಟ್ಟು ಹೆಚ್ಚಾಗುತ್ತದೆ.

ಬೊಜ್ಜು ಮೈ ನಮ್ಮ ಕಾಲದಲ್ಲಿ ಅತ್ಯಂತ ನಿಶ್ಯಬ್ದ ರೀತಿಯ ಮಹಾಮಾರಿಯಾಗಿದೆ. ಬೊಜ್ಜು ಸಂಬಂಧಿತ ಫ್ಯಾಟಿ ಲಿವರ್ ರೋಗ(ಎನ್‌ಎಎಫ್‌ಎಲ್‌ಡಿ) ಶೇ. 32ರಷ್ಟು ರೋಗಿಗಳಲ್ಲಿ ಇರಬಹುದು. ಬೊಜ್ಜು ಮೈ ಸಂಬಂಧಿತ ಸಿರಾಸಿಸ್ ಹೊಂದಿರುವ ರೋಗಿಗಳು ಪಿತ್ತಜನಕಾಂಗದ ಕ್ಯಾನ್ಸರ್‌ಗೆ ತುತ್ತಾಗುವ ಅತ್ಯಂತ ಉನ್ನತಮಟ್ಟದ ಅಪಾಯ ಇರುತ್ತದೆ.

ಮಧುಮೇಹ ಪಿತ್ತಜನಕಾಂಗದ  ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸಬಹುದು. ಮುಖ್ಯವಾಗಿ ಅತಿಯಾದ ಆಲ್ಕೋಹಾಲ್ ಸೇವಿಸುವವರಲ್ಲಿ ಅಥವಾ ದೀರ್ಘಕಾಲದ ವೈರಲ್ ಹೆಪಟೈಟೀಸ್ ಬಿ ಅಥವಾ ಸಿ ಸೋಂಕು ಹೊಂದಿರುವವರಲ್ಲಿ ಈ ಅಪಾಯ ಹೆಚ್ಚಾಗಿದೆ.

ಪಿತ್ತಜನಕಾಂಗದ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸಬಹುದಾದ ಇತರೆ ಅಂಶಗಳಲ್ಲಿ ಧೂಮಪಾನ ಮತ್ತು ಅಡಕೆ/ತಂಬಾಕು ಅಗೆಯುವುದು ಸೇರಿವೆ.

ಪಿತ್ತಜನಕಾಂಗದ  ಕ್ಯಾನ್ಸರ್‌ನಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಅಪಾಯವನ್ನು ಹೊಂದಿರುವ ಜನರಿಗೆ ನಿಗದಿತ ಅವಧಿಯಲ್ಲಿ ಪರೀಕ್ಷೆಗಳ ಮೂಲಕ ಕ್ಯಾನ್ಸರ್‌ನ್ನು ಆರಂಭದ ಹಂತದಲ್ಲಿ ಪತ್ತೆ ಹಚ್ಚಬಹುದು.
 
ಪಿತ್ತಜನಕಾಂಗದ  ಕ್ಯಾನ್ಸರ್‌ನಿಂದ ಉಂಟಾಗಬಹುದಾದ ಕೆಲವು ಲಕ್ಷಣಗಳಲ್ಲಿ ವಿವರಿಸಲಾಗದಂತಹ ತೂಕ ನಷ್ಟ, ಅನೋರೆಕ್ಸಿಯಾ (ಸತತವಾಗಿ ಹಸಿವು ಇಲ್ಲದಿರುವುದು), ಸಣ್ಣ ಮಟ್ಟದ ಭೋಜನದ ನಂತರ ಬಹಳ ಹೊಟ್ಟೆ ತುಂಬಿದಂತೆ ಭಾಸವಾಗುವುದು, ಸತತವಾಗಿ ಹೊಟ್ಟೆಯ ನೋವು, ಹೊಟ್ಟೆಯ ಭಾಗದಲ್ಲಿ ಊತ ಹೆಚ್ಚುವುದು, ಉಸಿರಾಟಕ್ಕೆ ತೊಂದರೆ ಇರಬಹುದು ಅಥವ ಇಲ್ಲದಿರಬಹುದು, ದಿಢೀರನೆ ಜಾಂಡೀಸ್ ಕಾಣಿಸಿಕೊಳ್ಳುವುದು (ತ್ವಚೆ ಮತ್ತು ಕಣ್ಣುಗಳಲ್ಲಿ ಹಳದಿಯಾಗಿರುವುದು) ಅಥವಾ  ಸಿರಾಸಿಸ್ ಹೊಂದಿರುವ ರೋಗಿಯ ಒಟ್ಟಾರೆ ಸ್ಥಿತಿ ಹದಗೆಡುವುದು.

ಪಿತ್ತಜನಕಾಂಗದ ಕ್ಯಾನ್ಸರ್‌ಗಾಗಿ ತಪಾಸಣೆ ಈ ರೋಗವನ್ನು ಆರಂಭದಲ್ಲಿ ಪತ್ತೆ ಹಚ್ಚಲು ಅತ್ಯುತ್ತಮ ಮಾರ್ಗವಾಗಿದೆ. ಯಾವುದೇ ಲಕ್ಷಣಗಳನ್ನು ಪ್ರಕಟಿಸದ ಸಣ್ಣ ಕ್ಯಾನ್ಸರ್‌ಗಳನ್ನು ಪತ್ತೆ ಹಚ್ಚಲು ಇದನ್ನು ನಡೆಸಲಾಗುತ್ತದೆ. ಸಣ್ಣ ಕ್ಯಾನ್ಸರ್‌ಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಪಿತ್ತಜನಕಾಂಗದ ರೋಗ ಹೊಂದಿರುವ ರೋಗಿಗಳಿಗೆ ಪಿತ್ತಜನಕಾಂಗದ ಕ್ಯಾನ್ಸರ್ ಉಂಟಾಗುವ ಅಪಾಯ ಹೆಚ್ಚಿರುತ್ತದೆ. (ಹೆಪಟೈಟೀಸ್ ಬಿ ಅಥವಾ ಯಾವುದೇ ರೀತಿಯ ಸಿರಾಸಿಸ್). ಇಂತಹವರು ನಿಗದಿತ ಅವಧಿಯ ನಡುವೆ ತಪಾಸಣೆಗಳಿಗೆ ಒಳಗಾಗಬೇಕು. ಪ್ರಸ್ತುತ ತಂತ್ರಜ್ಞಾನದಲ್ಲಿ ಪಿತ್ತಜನಕಾಂಗದ  ಕ್ಯಾನ್ಸರ್‌ನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವ ತಂತ್ರ ಇಲ್ಲದಿರಬಹುದು. ಆದರೆ ನೂತನ ತಂತ್ರಗಳನ್ನು ಪರೀಕ್ಷಿಸಲಾಗುತ್ತಿದ್ದು ಅವು ಉತ್ತಮವಾಗಿರಬಹುದಾಗಿದೆ. ತಪಾಸಣೆಗಳು ಶೇ. 100ರಷ್ಟು ನಿಖರವಾಗಿರುತ್ತವೆ ಎಂದು ಹೇಳಲಾಗುವುದಿಲ್ಲ.

ಪಿತ್ತಜನಕಾಂಗದ ಕ್ಯಾನ್ಸರ್ (ಎಚ್‌ಸಿಸಿ) ಒಂದು ಸವಾಲಿನ ರೋಗವಾಗಿದೆ. ಅದು ಲಿವರ್‌ನಿಂದಾಚೆಗೆ ಹರಡಿದಾಗಲೇ  ಪತ್ತೆಯಾಗುವುದು ಕಂಡುಬಂದಿದೆ. ಪಿತ್ತಜನಕಾಂಗದ  ಕ್ಯಾನ್ಸರ್ ಹೊಂದಿದ ರೋಗಿಗಳ ಪೈಕಿ ಕೇವಲ ಶೇ. 5ರಷ್ಟು ರೋಗಿಗಳು ಚಿಕಿತ್ಸೆಯಿಲ್ಲದೆ 5 ವರ್ಷಗಳವರೆಗೂ ಉಳಿದುಕೊಳ್ಳಲಾರರು. ಪಿತ್ತಜನಕಾಂಗದ ಕ್ಯಾನ್ಸರ್‌ನ ಅಪಾಯ ಹೊಂದಿರುವ ರೋಗಿಗಳಿಗೆ ಒಂದೇ ಭರವಸೆ ಎಂದರೆ ನಿಗದಿತವಾಗಿ ಪರೀಕ್ಷೆಗಳಿಗೆ ಒಳಪಡುವುದು. ಇದರಿಂದ ಕ್ಯಾನ್ಸರ್‌ಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

ಆರಂಭದ ಕ್ಯಾನ್ಸರ್‌ಗಳನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕುವ (ರಿಸೆಕ್ಷನ್), ಟಾರ್ಗೆಟೆಡ್ ಕೀಮೊಥರಪಿ (ಟಿಎಸಿಇ)ನಿಂದ ವೈಯಕ್ತಿಕ ಗಡ್ಡೆಗಳನ್ನು ನಾಶಪಡಿಸುವ, ಅಥವಾ ಲಿವರ್ ಕಸಿ ಮೂಲಕ ಚಿಕಿತ್ಸೆ ನೀಡಬಹುದು. ಪಿತ್ತಜನಕಾಂಗದ  ಕ್ಯಾನ್ಸರ್ ಚಿಕಿತ್ಸೆ ಯಕೃತ್ತಿನ ಸ್ಥಿತಿ, ಗಾತ್ರ, ಸ್ಥಳ ಮತ್ತು ಗಡ್ಡೆಗಳ ಸಂಖ್ಯೆ, ಕ್ಯಾನ್ಸರ್ ಪಿತ್ತಜನಕಾಂಗದ  ಹೊರಗಡೆ ಹರಡಿದೆಯೋ ಎಂಬುದು ಹಾಗೂ ವ್ಯಕ್ತಿಯ ವಯಸ್ಸು ಮತ್ತು ಒಟ್ಟಾರೆ ಆರೋಗ್ಯವನ್ನು ಆಧರಿಸಿರುತ್ತದೆ.

ರಕ್ಷಣೆ ಹೇಗೆ?
ಧೂಮಪಾನ ವರ್ಜಿಸುವುದು. ಧೂಮಪಾನದೊಂದಿಗೆ ಅಂಟಿಕೊಂಡಿರುವ ಅನೇಕ ದುಷ್ಪರಿಣಾಮಗಳಲ್ಲಿ ಪಿತ್ತಜನಕಾಂಗದ  ಕ್ಯಾನ್ಸರ್ ಕೂಡ ಒಂದಾಗಿದೆ. ಅದನ್ನು ನಿಲ್ಲಿಸಲು ಈ ಕ್ಷಣಕ್ಕಿಂತಲೂ ಅತ್ಯುತ್ತಮ ಸಮಯ ಮತ್ತೊಂದಿಲ್ಲ.

ಲಸಿಕೆ. ಹೆಪಟೈಟೀಸ್ ಬಿ ವಿರುದ್ಧ ನೀವು ಮತ್ತು ನಿಮ್ಮ ಕುಟುಂಬಕ್ಕೆ ಲಸಿಕೆ ಹಾಕಿಸಿಕೊಳ್ಳಿ.

ನಿಮ್ಮ ಮದ್ಯ ಸೇವನೆ ಮಟ್ಟದ ಕಡೆಗೆ ಗಮನವಿಡಿ: ಯಾವುದೇ ಪ್ರಮಾಣದ ಆಲ್ಕೋಹಾಲ್ ನಿಮ್ಮ ಪಿತ್ತಜನಕಾಂಗವನ್ನು ಹಾಳು ಮಾಡಬಹುದು. ಇದರಲ್ಲಿ ಜಾಂಡೀಸ್, ಪಿತ್ತಜನಕಾಂಗದಲ್ಲಿ ಗೀರುಗಳು ಉಂಟಾಗುವುದು ಮತ್ತು ಪಿತ್ತಜನಕಾಂಗದ ವೈಫಲ್ಯಗಳು ಸೇರಿವೆ. ಒಬ್ಬ ವ್ಯಕ್ತಿಗೆ ಹೆಪಟೈಟೀಸ್ ಬಿ ಅಥವಾ ಸಿ ನಂತಹ ಪಿತ್ತಜನಕಾಂಗದ ಸ್ಥಿತಿ ಇದ್ದಲ್ಲಿ ಅವರ ಪಿತ್ತಜನಕಾಂಗ ಅತ್ಯಂತ ಸೂಕ್ಷ್ಮವಾಗಿದ್ದು ಯಾವುದೇ ಪ್ರಮಾಣದ ಆಲ್ಕೋಹಾಲ್ ಸೇವನೆ ಹಾನಿಕಾರಕವಾಗಿದ್ದು ಸುರಕ್ಷಿತ ಎಂದರೆ ಶೂನ್ಯ ಪ್ರಮಾಣದ ಆಲ್ಕೋಹಾಲ್ ಸೇವನೆಯಾಗಿದೆ.

ಹೆಪಟೈಟೀಸ್ ಬಿ ಅಥವಾ ಸಿ ವಿರುದ್ಧ ಸಂರಕ್ಷಿಸಿಕೊಳ್ಳಿ.
ಎ. ನಿಮ್ಮ ಆರೋಗ್ಯ ಶುಶ್ರೂಷೆ ಪೂರೈಕೆದಾರರು ಪರಿಶುದ್ಧ ಮತ್ತು ಸೂಕ್ಮಾಣು ಮುಕ್ತವಾದ ಉಪಕರಣಗಳನ್ನು ನಿಮ್ಮ ಚಿಕಿತ್ಸೆಗಾಗಿ ಬಳಸುತ್ತಾರೆ ಹಾಗೂ ಚುಚ್ಚುಮದ್ದು ಸೂಜಿಗಳನ್ನು ಪುನರ್ ಬಳಕೆ ಮಾಡುತ್ತಿಲ್ಲ ಎಂಬ ಖಾತ್ರಿ ಮಾಡಿಕೊಳ್ಳಿ.
ಬಿ. ಸುರಕ್ಷಿತ ಲೈಂಗಿಕ ಅಭ್ಯಾಸ ಮಾಡಿಕೊಳ್ಳಿ.
ಸಿ. ರೇಜರ್‌ಗಳು, ಟೂತ್‌ಬ್ರಷ್‌ಗಳು
ಅಥವಾ ಇತರೆ ವೈಯಕ್ತಿಕ ವಸ್ತುಗಳನ್ನು
ಇತರರೊಂದಿಗೆ ಹಂಚಿಕೊಳ್ಳಬೇಡಿ.

ನಿಮಗೆ ಹೆಪಟೈಟೀಸ್ ಬಿ, ಸಿ ಅಥವ ಸಿರಾಸಿಸ್ ಇದ್ದಲ್ಲಿ ನೀವು ಯಕೃತ್ತಿನ ತಜ್ಞರನ್ನು ಸಂಪರ್ಕಿಸಿ ನಿಗದಿತವಾಗಿ ಪಿತ್ತಜನಕಾಂಗದ  ಕ್ಯಾನ್ಸರ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ನಿಮಗೆ ಪಿತ್ತಜನಕಾಂಗದ  ಕ್ಯಾನ್ಸರ್ ಇದೆ ಎಂದು ಗುರುತಿಸಲಾಗಿದ್ದರೆ  ನಿಮ್ಮ ವೈದ್ಯರಿಗೆ ಯಾವ ಪ್ರಶ್ನೆಗಳನ್ನು ನೀವು ಕೇಳಬೇಕು ಎಂಬ ಮಾಹಿತಿ ನಿಮಗಿರಬೇಕು. ನೀವು ಮತ್ತು ನಿಮ್ಮ ಕುಟುಂಬ, ರೋಗ ಮತ್ತು ಚಿಕಿತ್ಸೆ ಯೋಜನೆಯ ಸ್ಪಷ್ಟ ಅರಿವು  ಹೊಂದಿರಬೇಕು.  ಹೀಗಾಗಿ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ.

* ನನ್ನರೋಗ ನಿದಾನ ಯಾವುದು?
* ರೋಗದ ಹಂತ ಯಾವುದು?
* ನನ್ನ ಚಿಕಿತ್ಸೆಯ ಆಯ್ಕೆಗಳು ಯಾವುವು? ನೀವು ಯಾವುದನ್ನು ಶಿಫಾರಸ್ಸು ಮಾಡುತ್ತೀರಿ? ಏತಕ್ಕಾಗಿ?
* ಚಿಕಿತ್ಸೆ ಯಶಸ್ವಿಯಾಗುವ ಸಾಧ್ಯತೆ ಎಷ್ಟಿದೆ?
* ಪ್ರತಿ ಚಿಕಿತ್ಸೆಯ ಸಂಭಾವ್ಯ ದುಷ್ಪರಿಣಾಮ ಮತ್ತು ಅಪಾಯಗಳು ಯಾವುವು?
* ಚಿಕಿತ್ಸೆ ಎಷ್ಟು ಸಮಯ ಹಿಡಿಯಬಹುದು?
* ನನ್ನ ಸಾಮಾನ್ಯ ಚಟುವಟಿಕೆಗಳನ್ನು ನಾನು ಬದಲಾಯಿಸಬೇಕಾಗುತ್ತದೆಯೇ?
* ಚಿಕಿತ್ಸೆಯ ವೆಚ್ಚ ಎಷ್ಟಾಗಬಹುದು?
* ಪಿತ್ತಜನಕಾಂಗದ  ಕಸಿಯ ಸಂಭಾವ್ಯತೆ ಎಷ್ಟಿದೆ?

(ಲೇಖಕರು ಕನ್ಸಲ್ಟೆಂಟ್ ಲಿವರ್ ಟ್ರಾನ್ಸ್‌ಪ್ಲಾಂಟ್ ಸರ್ಜನ್. ಮೊಬೈಲ್  94834 00000)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT