ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಪಿಪಿ ಮಾದರಿಯಲ್ಲಿ ರಸ್ತೆ ಅಭಿವೃದ್ಧಿ

Last Updated 20 ಸೆಪ್ಟೆಂಬರ್ 2011, 8:30 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಮಹಾನಗರದಲ್ಲಿ 45 ಕಿ.ಮೀ. ರಸ್ತೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದಕ್ಕಾಗಿ ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಕಾಮಗಾರಿ ನಡೆಯಬೇಕು ಎಂಬ ಸಲಹೆಯನ್ನು ಮುಂದಿಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್, ಸಮಾಜದಿಂದಲೇ ಬೆಳೆದ ಗುತ್ತಿಗೆದಾರರು ಇಂತಹ ಕೆಲಸದಲ್ಲಿ ಪಾಲ್ಗೊಳ್ಳುವ ಮೂಲಕ ಸಮಾಜಕ್ಕೆ ಮರು ಕೊಡುಗೆ ನೀಡಬೇಕೆಂದು ಹೇಳಿದ್ದಾರೆ.

ನಗರದ ಸಮಗ್ರ ಅಭಿವೃದ್ಧಿಗೆ ಸಮಯ ಮಿತಿ ನಿಗದಿಯಡಿ ಕಾಮಗಾರಿಗಳನ್ನು ಮುಗಿಸಬೇಕಿದೆ. ಬಳಿಕ ರಾಜ್ಯ ಸರ್ಕಾರಕ್ಕೆ ನೂತನ ಪ್ರಸ್ತಾವನೆಗಳನ್ನು ಸಲ್ಲಿಸಬೇಕಿದೆ. ಈ ಕೆಲಸದಲ್ಲಿ ಕಟ್ಟಡ ನಿರ್ಮಾಣಗಾರರು, ಗುತ್ತಿಗೆದಾರರು, ಎಂಜಿನಿಯರ್‌ಗಳ ಸಂಘ, ವಾಸ್ತು ವಿನ್ಯಾಸಗಾರರು ನಗರದ ರಸ್ತೆಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ತಮ್ಮ ಸಹಕಾರ ನೀಡಬೇಕು ಎಂದು ಅವರು ಸೋಮವಾರ ಜಿ.ಪಂ. ಸಭಾಂಗಣದಲ್ಲಿ ಹಮ್ಮಿಕೊಂಡ ಪಾಲಿಕೆ ಅಧಿಕಾರಿಗಳು, ಕಟ್ಟಡ ನಿರ್ಮಾಣಗಾರರು, ಎಂಜಿನಿಯರ್‌ಗಳ ಸಂಘದೊಂದಿಗಿನ ನಗರಾಭಿವೃದ್ಧಿ ಸಭೆಯಲ್ಲಿ ತಿಳಿಸಿದರು.

ಸಚಿವರ ಈ ಪ್ರಸ್ತಾವಕ್ಕೆ ಎಲ್ಲರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಿತು. 115 ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದು ಈ ಬಗ್ಗೆ ನಿರ್ಧಾರಕ್ಕೆ ಬರಲು ಅವರು 1 ವಾರದ ಸಮಯಾವಕಾಶ ಕೋರಿದರು.

ಪ್ರತಿ ಒಂದು ಕಿ.ಮೀ ರಸ್ತೆಯ ಉಸ್ತುವಾರಿಯನ್ನು, ಗುಣಮಟ್ಟ ಪರಿಶೀಲನೆಗೆ ಒಬ್ಬ ಎಂಜಿನಿಯರ್ ಎಂಬಂತೆ, `ಓನ್ ಯುವರ್ ರೋಡ್~, `ಓನ್ ಯುವರ್ ಪಾರ್ಕ್~ ಮಾದರಿಯ ಮುಂದುವರಿದ ಹಂತದಲ್ಲಿ ಮೂರು ಮಾದರಿಯಲ್ಲಿ ಇವರೆಲ್ಲರಿಂದ ಸಚಿವರು ಸಹಕಾರ ಕೋರಿದರು.

ಎಸ್‌ಕೆಎಸ್ ಬಿಲ್ಡರ್ಸ್‌ನ ಸನತ್ ಅವರು ನಗರದ ಕೆಪಿಟಿಯಿಂದ ಪದವು ವರೆಗಿನ ರಸ್ತೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸಲು ಒಪ್ಪಿದರು. ಕೆ.ಸಿ.ನಾಯಕ್ ಅವರು ಸಚಿವರ ಮಾರ್ಗದರ್ಶನದಂತೆ ರಸ್ತೆ ಸಂಪರ್ಕ ಅಭಿವೃದ್ಧಿಗೆ ನೆರವು ನೀಡುವುದಾಗಿ ಹೇಳಿದರು. ಎಂಜಿನಿಯರ್‌ಗಳ ಸಂಘದವರು ತಾಂತ್ರಿಕ ನೆರವು ನೀಡುವ ಭರವಸೆ ನೀಡಿದರು. ರಸ್ತೆ ಸಂಪರ್ಕಕ್ಕೆ ಆದ್ಯತೆಯನ್ನು ನೀಡಿ ನಗರದಲ್ಲಿರುವ ರಸ್ತೆ ಅಭಿವೃದ್ಧಿ ಬಗ್ಗೆ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಾಗಬೇಕು ಎಂದರು.

ಪ್ರವಾಸೋದ್ಯಮ, ಘನತ್ಯಾಜ್ಯ ನಿರ್ವಹಣೆ ಬಗ್ಗೆ ಸಾರ್ವಜನಿಕರಲ್ಲಿ ಮನವರಿಕೆ ಮಾಡಲು ಹಲವೆಡೆ ಜಾಹೀರಾತು ಫಲಕಗಳನ್ನು ಅಳವಡಿಸುವ ಬಗ್ಗೆ ಚರ್ಚಿಸಲಾಯಿತು.

ರೂ. 10 ಸಾವಿರ ಬಹುಮಾನ:  ಲಾರಿಗಳಲ್ಲಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ  ಎಸೆಯುವ ಬಗ್ಗೆ ಮಾಹಿತಿ ನೀಡುವವರಿಗೆ, ಕೆರೆಗಳಿಗೆ ಮಣ್ಣು ತುಂಬಿಸುವ ಕುರಿತು ಮಾಹಿತಿ ನೀಡುವವರಿಗೆ ಒಂದು ಸಾವಿರ ರೂಪಾಯಿಯಿಂದ ಹತ್ತು ಸಾವಿರದವರೆಗೆ ಬಹುಮಾನ ನೀಡಲು ಪರಿಸರ ಇಲಾಖೆ ಯೋಜಿಸಿದ್ದು, ಶೀಘ್ರದಲ್ಲೇ ಆದೇಶ ಜಾರಿಯಾಗಲಿದೆ ಎಂದರು.

ನಗರದ ದೇವಾಲಯಗಳ ಎದುರಿನ ರಸ್ತೆಗಳನ್ನು ದೇವಾಲಯದವರು ಅಭಿವೃದ್ಧಿಪಡಿಸುವ ಬಗ್ಗೆಯೂ ಸಭೆಯಲ್ಲಿ ಸಲಹೆ ಬಂತು. ಸಾಮಾಜಿಕ ಜವಾಬ್ದಾ ಬಗ್ಗೆ, ಜನರ ನಿರೀಕ್ಷೆಯ ಬಗ್ಗೆ, ಅಭಿವೃದ್ಧಿಗೆ ವೇಗ ನೀಡುವ ಬಗ್ಗೆ ಸಭೆಯಲ್ಲಿ ಉತ್ತಮ ಸಲಹೆಗಳು ಮೂಡಿಬಂದವು. ವಿಧಾನಸಭೆ ಉಪಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಅವರು ನಮ್ಮ ಪರಿಸರ, ನಮ್ಮ ನಗರದ ಅಭಿವೃದ್ಧಿಯಲ್ಲಿ ನಮ್ಮ ಸಹಭಾಗಿತ್ವದ ಕುರಿತು ಮಾತನಾಡಿದರು.
ಮೇಯರ್ ಪ್ರವೀಣ್ ಅಂಚನ್, ಜಿಲ್ಲಾಧಿಕಾರಿ ಎನ್ ಎಸ್.ಚನ್ನಪ್ಪ ಗೌಡ, ಜಿ.ಪಂ. ಸಿಇಒ ಕೆ.ಎನ್.ವಿಜಯಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT