ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ ಪ್ರತ್ಯೇಕವಾಗೇ ಇರಲಿ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬದಲಾವಣೆ ಸಮಾಜದ ಸಹಜ ಪ್ರಕ್ರಿಯೆ. ಶಿಕ್ಷಣ ಕ್ಷೇತ್ರ ಕೂಡ ಕಾಲಕಾಲಕ್ಕೆ ಬದಲಾವಣೆ ಬಯಸುವಂಥದ್ದೇ. ಹಾಗೆ ನೋಡಿದರೆ ಗುಣಮಟ್ಟದ ಶಿಕ್ಷಣದ ದೃಷ್ಟಿಯಿಂದ ಆಗಿಂದಾಗ್ಗೆ ಬದಲಾವಣೆ ಅನಿವಾರ್ಯ ಹಾಗೂ ಅಗತ್ಯ ಕೂಡ. ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟಿಸುವ, ಅವರನ್ನು ಆಕರ್ಷಿಸುವ, ಬದುಕನ್ನು ಕಟ್ಟಿಕೊಳ್ಳುವಲ್ಲಿ ಆತ್ಮಸ್ಥೈರ್ಯ ತುಂಬುವ ಶಿಕ್ಷಣ ಬೇಕೆನ್ನುವುದು ಸರಿಯಾಗಿಯೇ ಇದೆ.
 
ಈ ಹಿನ್ನೆಲೆಯಲ್ಲಿ ನಮ್ಮಲ್ಲಿ ವಿಶಿಷ್ಟ ಪ್ರಯೋಗ, ಆವಿಷ್ಕಾರಗಳೇ ನಡೆದಿವೆ ಎಂದರೆ ತಪ್ಪಾಗದು.

ಇಂತಹ ಪ್ರಯತ್ನಗಳ ಫಲವಾಗಿ ರೂಪುಗೊಂಡದ್ದೇ ನಮ್ಮ ಪದವಿ ಪೂರ್ವ (ಪಿಯು) ಶಿಕ್ಷಣ ವ್ಯವಸ್ಥೆ. ಒಂದು ಕಾಲಕ್ಕೆ 11 ಮತ್ತು 12 ನೇ ತರಗತಿಗಳು ಪ್ರೌಢ ಶಿಕ್ಷಣದೊಡನೆ ಬೆಸೆದುಕೊಂಡಿದ್ದವು. ಅದನ್ನು ಪ್ರತ್ಯೇಕಿಸಿದ ನಮ್ಮ ಪದ್ಧತಿ ದೇಶಕ್ಕೇ ಮಾದರಿಯೆನಿಸಿದೆ. ಉನ್ನತ ಶಿಕ್ಷಣಕ್ಕೆ ಪೂರಕ ಸಿದ್ಧತೆಯಂತಿದೆ.

ರಾಜ್ಯದ ವಿವಿಧೆಡೆ 3000 ಕ್ಕೂ ಹೆಚ್ಚು ಪಿಯು ಕಾಲೇಜುಗಳಿವೆ. ಇವುಗಳ ಜತೆಯಲ್ಲಿಯೇ ಇಡೀ ದೇಶವೇ ಅನುಕರಿಸುವಂಥ ಸಿಇಟಿ ನಡೆಯುತ್ತಿದೆ. ರಾಜ್ಯದ ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳಷ್ಟೇ ಅಲ್ಲದೆ ಬೋಧಕರು, ಪೋಷಕರೂ ಸಕ್ರಿಯವಾಗಿ ಪಾಲ್ಗೊಳ್ಳುವಂತಹ ವಾತಾವರಣವಿದೆ.

ಹೀಗಾಗಿ ರಾಜ್ಯದ ಪದವಿ ಪೂರ್ವ ಶಿಕ್ಷಣ ಹಾಗೂ ಸಿಇಟಿ ಇನ್ನಿಲ್ಲದ ಯಶಸ್ಸನ್ನು ಕಾಣಲು ಸಾಧ್ಯವಾಗಿದೆ. ಈ ತೆರನಾದ ವ್ಯವಸ್ಥೆ ಬೇರೆ ರಾಜ್ಯಗಳಲ್ಲಿ ಕಾಣಸಿಗುತ್ತಿಲ್ಲ.
ಜಪಾನ್ ಒಂದು ಕಾಲಕ್ಕೆ ಆಟೊಮೊಬೈಲ್ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿ ಇದ್ದ ಹಾಗೆ ಇಂದು ನಮ್ಮ ರಾಷ್ಟ್ರ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇಂತಹ ಕ್ರಾಂತಿಗೆ ರಾಜ್ಯವೇ ಭೂಮಿಕೆಯಾಗಿದೆ.

ಪ್ರೌಢ ಶಿಕ್ಷಣದಿಂದ ನೇರವಾಗಿ ವೈದ್ಯಕೀಯ, ಎಂಜಿನಿಯರಿಂಗ್, ಕಾನೂನು, ಬಿಎಸ್‌ಸಿ, ಬಿಎಸ್‌ಸಿ (ನರ್ಸಿಂಗ್), ಬಿಎಸ್‌ಡಬ್ಲ್ಯು, ಬಿಬಿಎಂ, ಬಿಕಾಂ, ಬಿಎ ಮೊದಲಾದ ಪದವಿ, ಉನ್ನತ ಶಿಕ್ಷಣದ ಅಧ್ಯಯನಕ್ಕೆ ಮುಂದಾಗುವ ವಿದ್ಯಾರ್ಥಿಗಳಲ್ಲಿ ಉಂಟಾಗುವ ಆತಂಕ, ಗೊಂದಲಗಳನ್ನು ಪರಿಹರಿಸುವ ಸಂಜೀವಿನಿಯೇ `ಪದವಿ ಪೂರ್ವ~ ಹಂತ. 

ಅಂದರೆ ವೈದ್ಯಕೀಯ, ಕಾನೂನು, ವಾಣಿಜ್ಯ, ಮಾನವಿಕ ಹಾಗೂ ವಿಜ್ಞಾನ ವಿಷಯಗಳ ಉನ್ನತ ಅಧ್ಯಯನಕ್ಕೆ ಕೂಡ ಪೂರ್ವಭಾವಿ ಸಿದ್ಧತೆ ಪಿಯು ಹಂತದಲ್ಲಿಯೇ ನಡೆಯುತ್ತಿದೆ.

 `ನಾನು ಕಾಲೇಜು ವಿದ್ಯಾರ್ಥಿ~ ಎನ್ನುವ ಭಾವನೆಯನ್ನು, ಜವಾಬ್ದಾರಿಯನ್ನು 16ರ ಹೊಸ್ತಿಲಲ್ಲೆೀ ವಿದ್ಯಾರ್ಥಿ ಪಡೆದುಕೊಳ್ಳುವಂತಹ ಅತ್ಯುತ್ತಮ ಹಂತವೇ ನಮ್ಮ ಪಿಯು ಶಿಕ್ಷಣ ವ್ಯವಸ್ಥೆ.

ಪಿಯುಸಿ ಪ್ರತ್ಯೇಕವಾಗೇ ಇರಲಿ
ಅಸಂಭವ:
ಕರ್ನಾಟಕದಲ್ಲಿ 11 ಸಾವಿರಕ್ಕೂ ಹೆಚ್ಚು ಪ್ರೌಢಶಾಲೆಗಳಿವೆ. ಪದವಿ ಪೂರ್ವ ಕಾಲೇಜುಗಳಿರುವುದು 3,000 ದಷ್ಟು ಮಾತ್ರ. ಪ್ರಸ್ತುತದಲ್ಲಿ ಪದವಿ ಪೂರ್ವ ಕಾಲೇಜೊಂದಕ್ಕೆ ಸಮೀಪದ ನಾಲ್ಕಾರು ಪ್ರೌಢಶಾಲೆಗಳು ತಮ್ಮಿಂದ ವಿದ್ಯಾರ್ಥಿಗಳನ್ನು ಅಣಿಗೊಳಿಸಿ ಕಳಿಸಬೇಕಾದ ಸಂದರ್ಭವಿದೆ.
 
ಅಂಥಾದ್ದರಲ್ಲಿ ಉದ್ದೇಶಿತ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಈ ಎಲ್ಲ 11 ಸಾವಿರ ಪ್ರೌಢಶಾಲೆಗಳಲ್ಲೂ 11 ಮತ್ತು 12 ನೇ ತರಗತಿಗಳನ್ನು ತೆರೆಯಲು ಹೇಗೆ ಸಾಧ್ಯವಾದೀತು?

ಅಲ್ಲದೆ ಹೆಚ್ಚಿನ ಕಾಲೇಜುಗಳಲ್ಲಿ ಕಲಾ ವಿಭಾಗಗಳು ಮಾತ್ರವೇ ನಡೆಯುತ್ತಿವೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿಗಾಗಿ ಪಟ್ಟಣದ ಆಯ್ದ ಕಾಲೇಜುಗಳಿಗೆ ಮಾತ್ರ ವಿದ್ಯಾರ್ಥಿಗಳು ಬರುತ್ತಿದ್ದಾರೆ.

ವಿಜ್ಞಾನ, ವಾಣಿಜ್ಯ ಬೋಧಿಸುವ ಕಾಲೇಜುಗಳ ಸಂಖ್ಯೆ 1004 ನ್ನೂ ಮೀರುವುದಿಲ್ಲ. ಅಂಥಾದ್ದರಲ್ಲಿ ಪ್ರತೀ ಪ್ರೌಢಶಾಲೆಯಲ್ಲೂ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಗಳನ್ನು ತೆರೆಯಲು ಸಾಧ್ಯವಾದೀತೇ? ಇಷ್ಟೇ ಅಲ್ಲದೆ ಎಸ್‌ಎಸ್‌ಎಲ್‌ಸಿ ನಂತರ ಕೆಲವರು ಪಾಲಿಟೆಕ್ನಿಕ್, ಡಿಪ್ಲೊಮಾ, ಐಟಿಐ, ಅರೆವೈದ್ಯಕೀಯ ಮತ್ತಿತರ ವೃತ್ತಿಪರ ಕೋರ್ಸುಗಳಿಗೆ ಸೇರುತ್ತಾರೆ. ಮತ್ತೆ ಕೆಲವರು ನಾನಾ ಕಾರಣಗಳಿಂದಾಗಿ ಅಲ್ಲಿಗೇ ತಮ್ಮ ಶಿಕ್ಷಣ ಕೊನೆಗೊಳಿಸುತ್ತಾರೆ.

ಕಳೆದ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ 6.95 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗ್ದ್ದಿದರೂ, ಪಿಯುಸಿಗೆ ದಾಖಲಾದ ಸಂಖ್ಯೆ 5 ಲಕ್ಷ ಮೀರಲಿಲ್ಲ. ಇವರಲ್ಲಿ ವಿಜ್ಞಾನ ವಿಷಯಗಳನ್ನು ಆಯ್ಕೆ ಮಾಡಿಕೊಂಡವರು ಕೇವಲ 1,30,741. ಪರಿಸ್ಥಿತಿ ಹೀಗಿರುವಾಗ 3 ಸಾವಿರ ಪದವಿಪೂರ್ವ ಕಾಲೇಜುಗಳಲ್ಲಿ 9 ಮತ್ತು 10ನೇ ತರಗತಿಗಳನ್ನು, 11 ಸಾವಿರ ಪ್ರೌಢಶಾಲೆಗಳಲ್ಲಿ 11 ಮತ್ತು 12ನೇ ತರಗತಿಗಳನ್ನು ತೆರೆದರೆ ಪರಿಸ್ಥಿತಿ ಏನಾದೀತು?
 

ಈ ಶಾಲೆಗಳಿಗೆ ವ್ಯವಸ್ಥಿತವಾದ ಪ್ರಯೋಗಾಲಯ, ವಾಚನಾಲಯ, ಕಟ್ಟಡ, ಪೀಠೋಪಕರಣ, ಪಾಠೋಪಕರಣ, ಬಿಎಡ್ ಮತ್ತು ಸ್ನಾತಕೋತ್ತರ ಪದವೀಧರ ಶಿಕ್ಷಕರು- ಹೀಗೆ ಮೂಲಭೂತ ಅಗತ್ಯಗಳನ್ನು ಒಂದೇ ಸಲಕ್ಕೆ ಪೂರೈಸಲಾದೀತೆ? ಒಂದು ವೇಳೆ ಇವನ್ನೆಲ್ಲ ಒದಗಿಸುವಷ್ಟು ಸಮರ್ಥರು ನಾವಾಗಿದ್ದರೂ ಕೆಲವೇ ವರ್ಷಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಮುಚ್ಚುವ ಬಗ್ಗೆ ಯೋಚಿಸಬೇಕಾದೀತಷ್ಟೆ!

ಸಾಕಷ್ಟು ಪ್ರಯೋಗ
ಪ್ರಸ್ತುತ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿ ಒಮ್ಮೆಲೇ ಬಂದುದ್ದಲ್ಲ. 1970 ಕ್ಕೆ ಮುಂಚೆ ಇವತ್ತಿನ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ನೀತಿಯ ಮಾದರಿಯಲ್ಲಿಯೇ ಪ್ರೌಢಶಾಲೆಗಳ ಜೊತೆಗೆ ಒಂದು ವರ್ಷದ ಪಿಯುಸಿ ಬೋಧನೆ ಜಾರಿಯಲ್ಲಿತ್ತು.
 
ಅದರ ಸ್ಥಿತಿಯಂತೂ 7ನೇ ತರಗತಿಯೊಂದಿಗೆ 8ನೇ ತರಗತಿಗೆ ಬೋಧಿಸುವ ವ್ಯವಸ್ಥೆ ವೈಫಲ್ಯವನ್ನು ನೆನಪಿಗೆ ತರುತ್ತಿತ್ತು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರಗಳು ಆಯಾ ಕಾಲಕ್ಕೆ ನೇಮಿಸಿದ ಸಮಿತಿಗಳು ನೀಡಿದ ಶೋಧನಾ ವರದಿಗಳ ಫಲವಾಗಿ ಪ್ರತ್ಯೇಕ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆ ಜಾರಿಯಾಯಿತು.

ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಮಲ್ಲಿಕಾರ್ಜುನಪ್ಪ ಸಮಿತಿ ಪಿಯುಸಿ ಬೋಧನೆಯ ಪ್ರತ್ಯೇಕತೆಯ ಬಗ್ಗೆ ಸಲ್ಲಿಸಿದ ವಿವರವಾದ ವರದಿಯಲ್ಲಿಯ ಉತ್ತಮ ಅಂಶಗಳನ್ನು ಮನಗಂಡು 1972 ರಲ್ಲಿ ಪ್ರತ್ಯೇಕ ಪದವಿ ಪೂರ್ವ ಶಿಕ್ಷಣ ಮಂಡಳಿಯನ್ನು (ಪಿಯು ಬೋರ್ಡ್) ಅಸ್ತಿತ್ವಕ್ಕೆ ತರಲಾಯಿತು. ಮೈಸೂರು ವಿವಿ ಕುಲಪತಿಗಳಾಗಿದ್ದ ಡಿ.ವಿ. ಅರಸು ಸಮಿತಿಯ (1978) ವರದಿಯಲ್ಲಿ ಪದವಿ ಪೂರ್ವ ಶಿಕ್ಷಣ ಮಂಡಳಿಯನ್ನು ಸ್ವಾಯತ್ತ ಸಂಸ್ಥೆ ಎಂದು ಪರಿಗಣಿಸಲು ಸಲಹೆ ಮಾಡಲಾಗಿತ್ತು.

ಈ ಶಿಫಾರಸ್ಸನ್ನು ಒಪ್ಪಿಕೊಂಡ ಸರ್ಕಾರ ಅರಸು ಅವರನ್ನೇ ಸ್ವಾಯತ್ತ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿತು.

ಮುಂದೆ ಶಿಕ್ಷಣ ಕಾರ್ಯದರ್ಶಿಗಳಾಗಿದ್ದ ಭರತ್ ಅವರ ಅಧ್ಯಕ್ಷತೆಯಲ್ಲಿ ಶಿಕ್ಷಣ ತಜ್ಞರಾದ ಚನ್ನಬಸವಯ್ಯ ಹಾಗೂ ಪ್ರೊ. ಬಿ.ಕೆ.ಚಂದ್ರಶೇಖರ್ ಅವರಿದ್ದ ಸಮಿತಿ (1984) ಪದವಿ ಪೂರ್ವ ಶಿಕ್ಷಣದ ಪ್ರತ್ಯೇಕತೆ ಬಗ್ಗೆ ಬಲವಾದ ವರದಿ ನೀಡಿತ್ತು.
 

ಇದಕ್ಕೆ ಪೂರಕವಾಗಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಶಿಕ್ಷಣ ತಜ್ಞರಾಗಿದ್ದ ಸುರೇಂದ್ರನಾಥ್ ಸಮಿತಿ (1990) ನೀಡಿದ ವರದಿಯಂತೂ ಪದವಿ ಪೂರ್ವ ಹಂತದ ಶಿಕ್ಷಣದ ಪ್ರತ್ಯೇಕತೆಗೆ ಸಂಬಂಧಿಸಿದಂತೆ ಒಂದು ಮೈಲಿಗಲ್ಲು. ಈ ವರದಿಯಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಆಡಳಿತಾತ್ಮಕವಾಗಿಯೂ ಸಂಪೂರ್ಣ ಸ್ವತಂತ್ರಗೊಳಿಸಬೇಕು ಎಂಬ ಬಗ್ಗೆ ಒತ್ತಿಹೇಳಲಾಗಿತ್ತು.

ಇದರ ಪರಿಣಾಮವಾಗಿ 1992 ರಲ್ಲಿ ಪ್ರತ್ಯೇಕ ಪದವಿ ಪೂರ್ವ ಶಿಕ್ಷಣ ಇಲಾಖೆ ಅಸ್ತಿತ್ವಕ್ಕೆ ಬಂತು. ಇದರಡಿ ಜಿಲ್ಲಾ ಮಟ್ಟದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗಳನ್ನು ಸ್ಥಾಪಿಸಲಾಯಿತು.
 

2002 ರ  ಸಬ್‌ಸೆಕ್ಟರ್ ಅಧ್ಯಯನ ಸಮಿತಿಯು `ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ~ ಈ ನಾಲ್ಕು ಹಂತದ ಶೈಕ್ಷಣಿಕ ವ್ಯವಸ್ಥೆಗಳು ಪ್ರತ್ಯೇಕ ಹಾಗೂ ಸ್ವತಂತ್ರವಾಗಿರಬೇಕು ಎಂಬ ವರದಿ ನೀಡಿತ್ತು. ಇದನ್ನು ಆಧರಿಸಿ ಪ್ರೌಢಶಾಲೆ ಹಾಗೂ ಪದವಿ ಕಾಲೇಜುಗಳೊಂದಿಗಿದ್ದ ಪಿಯು ಕಾಲೇಜುಗಳನ್ನು ಪ್ರತ್ಯೇಕಗೊಳಿಸಲಾಯಿತು.
 
ಹೀಗೆ ವಿಭಜನೆಗೊಂಡ ಪದವಿ ಪೂರ್ವ ಶಿಕ್ಷಣ ಇಲಾಖೆ ಶೈಕ್ಷಣಿಕವಾಗಿ ಮಾತ್ರವಲ್ಲ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ, ಸಿಇಟಿ ಸೇರಿದಂತೆ ಸರ್ವತೋಮುಖ ಬೆಳವಣಿಗೆಯತ್ತ ಹೆಜ್ಜೆ ಇಡುವಲ್ಲಿ ಶ್ರಮಿಸಿದ ಇಲಾಖೆಯ ನಿರ್ದೇಶಕರಾಗಿದ್ದ ಹರೀಶ್‌ಗೌಡ ಅವರ ಪರಿಶ್ರಮವನ್ನೂ ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.

ರಾಷ್ಟ್ರೀಯ ಏಕರೂಪದ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಸರ್ವಶಿಕ್ಷಣ ಅಭಿಯಾನ ಯೋಜನೆಯನ್ನು ಮುಂದಿಟ್ಟುಕೊಂಡು ಪ್ರೌಢಶಾಲೆಯಲ್ಲಿದ್ದ 8ನೇ ತರಗತಿಯನ್ನು ಮಾಧ್ಯಮಿಕ ಶಾಲೆಯ ವ್ಯಾಪ್ತಿಗೆ ತಂದು ಅದು ಸಂಪೂರ್ಣವಾಗಿ ನೆಲಕಚ್ಚಿರುವುದನ್ನು ನಾವಿಂದು ಕಾಣುತ್ತಿದ್ದೇವೆ.
 

ಕೇವಲ ವಿಜ್ಞಾನ ಶಿಕ್ಷಕರೊಬ್ಬರನ್ನು ಕೊಟ್ಟು ಕನ್ನಡ, ಆಂಗ್ಲ, ಹಿಂದಿ, ಸಮಾಜ ವಿಜ್ಞಾನ, ಜೀವ ವಿಜ್ಞಾನ, ದೈಹಿಕ ಶಿಕ್ಷಣ ಶಿಕ್ಷಕರಿಲ್ಲದೆ ವಿದ್ಯಾರ್ಥಿಯ ಬದುಕಿನಲ್ಲಿ ಒಂದು ವರ್ಷ ಅನಗತ್ಯ ವ್ಯಯವಾಗಿರುವುದನ್ನು ಕಾಣಬಹುದಾಗಿದೆ.

ಆತುರದ ವಿಲೀನ
ಸರ್ವ ಶಿಕ್ಷಣ ಅಭಿಯಾನದ (ಎಸ್‌ಎಸ್‌ಎ) ಮುಂದುವರಿದ ಭಾಗವಾಗಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂಎಸ್‌ಎ) ಯೋಜನೆ ರೂಪುಗೊಂಡಿದೆ. ಇದರಲ್ಲಿ 1 ರಿಂದ 4ನೇ ತರಗತಿಯನ್ನು ಪ್ರಾಥಮಿಕ ಶಿಕ್ಷಣ, 5 ರಿಂದ 8 ಮಾಧ್ಯಮಿಕ ಶಿಕ್ಷಣ  ಮತ್ತು 9 ರಿಂದ 12ನೇ ತರಗತಿಗಳನ್ನು ಪ್ರೌಢ ಶಿಕ್ಷಣ ಎಂದೂ ಕರೆಯಲಾಗುತ್ತದೆ.
 
ಪಿಯು ಕಾಲೇಜು ವಿದ್ಯಾರ್ಥಿಯನ್ನು ಪ್ರೌಢಶಾಲೆಯ 11-12 ನೇ ತರಗತಿಯ ವಿದ್ಯಾರ್ಥಿ ಎನ್ನಲಾಗುತ್ತದೆ. ಮೇಲೆ ಹೇಳಲಾದ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಈ ವಿಲೀನ ಪ್ರಕ್ರಿಯೆ ಆತುರದ ಕ್ರಮವೆನಿಸುವುದಲ್ಲವೆ? ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಂತೆ ಪಠ್ಯಕ್ರಮವನ್ನು ರೂಪಿಸುವುದರ ಬಗ್ಗೆ ನನ್ನ ವಿರೋಧವಿಲ್ಲ. ವಿರೋಧ ಏನಿದ್ದರೂ ಶಾಲಾ ಹಂತಕ್ಕೆ ಪದವಿ ಪೂರ್ವ ಕಾಲೇಜು ಶಿಕ್ಷಣವನ್ನು ಹಿಂದಕ್ಕೆ ತಳ್ಳುವ ಆಲೋಚನೆ ಬಗೆಗಷ್ಟೆ.

ಎಸ್‌ಎಸ್‌ಎ ಅಥವಾ ಆರ್‌ಎಂಎಸ್‌ಎ ಪಠ್ಯಕ್ರಮವನ್ನು ಸ್ವಾಗತಿಸಬಹುದಾದರೂ ಅದಕ್ಕೂ ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವತ್ತ ಮೊದಲು ನಮ್ಮ ಗಮನ ಹರಿಯಬೇಕಾಗುತ್ತದೆ. ಪ್ರಸ್ತುತ ಉದ್ದೇಶಿತ ಯೋಜನೆಯಂತೆ ದಿಢೀರ್ ಎಂದು 8 ಮತ್ತು ಪ್ರಥಮ ಪಿಯುಸಿ ತರಗತಿಗಳಿಗೆ ಕಠಿಣ ಪಠ್ಯವನ್ನು ಅಳವಡಿಸುವುದರಿಂದ ವಿದ್ಯಾರ್ಥಿಗಳ ಮೇಲಾಗಬಹುದಾದ ಪರಿಣಾಮದ ಬಗ್ಗೆ ಆಲೋಚಿಸುವುದು ಒಳಿತು.
 
ಪ್ರಾಥಮಿಕ ಹಂತದಿಂದಲೂ ರಾಜ್ಯ ಪಠ್ಯಕ್ರಮದಲ್ಲಿ ಅಭ್ಯಾಸ ಮಾಡಿದ ಮಗುವಿಗೆ 8ನೇ ತರಗತಿಯಲ್ಲಿ ಬೇರೊಂದು ಕ್ರಮದ ಬೋಧನೆ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಲ್ಲದು? ಆದುದರಿಂದ ಬಾಲ್ಯದಿಂದಲೇ ಅಂದರೆ ಪ್ರಾಥಮಿಕ ಹಂತದಿಂದಷ್ಟೆ ಅಲ್ಲ: ಪೂರ್ವ ಪ್ರಾಥಮಿಕ ಹಂತದಿಂದಲೂ ನಮ್ಮ ಮಕ್ಕಳನ್ನು ಹೊಸ ಉದ್ದೇಶಿತ ಪಠ್ಯಕ್ರಮಕ್ಕೆ ಹೊಂದಿಕೊಳ್ಳುವಂತೆ ತಯಾರು ಮಾಡಬೇಕಾಗುತ್ತದೆ.

ಮಕ್ಕಳ ಬೌದ್ಧಿಕ ಮಟ್ಟ ಈಗ ಹೆಚ್ಚಾಗಿದೆ. ಮಕ್ಕಳಿಗೆ ಮೂರು ವರ್ಷವಾಗುತ್ತಿದ್ದಂತೆಯೇ ಮನೆಯಲ್ಲಿ ಇರಿಸಿಕೊಳ್ಳಲು ಪೋಷಕರು ಸಿದ್ಧರಿಲ್ಲ. ಹಾಗಾಗಿ ಎಲ್‌ಕೆಜಿ, ಯುಕೆಜಿ, ನರ್ಸರಿ, ಕಿಂಡರ್‌ಗಾರ್ಟನ್, ಪ್ರಿ ಪ್ರೈಮರಿ ಎಂದು ಗ್ರಾಮಾಂತರ ಪ್ರದೇಶದಲ್ಲೂ ಪೂರ್ವ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ.
 
ಹಾಲು ಕುಡಿಯುವ ಮಕ್ಕಳೂ ಇಂದು ಇಂತಹ ಶಾಲೆಗಳಿಗಾಗಿ ಹತ್ತಾರು ಕಿಮೀ ದೂರ ಹೋಗಿ ಬರುವುದು ಸಾಮಾನ್ಯವಾಗಿದೆ.

ಪ್ರಸ್ತುತ ಸಮಾಜವನ್ನು ಇಂಗ್ಲಿಷ್ ವ್ಯಾಮೋಹದಿಂದ ದೂರ ಮಾಡುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಸಮಾಜದ ಇಂತಹ ಮನೋಭಾವವನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿಷ್ಠಿತ ಎಂಬ ನಾಮಫಲಕ ತಗುಲಿಸಿಕೊಂಡು ಪೂರ್ವ ಪ್ರಾಥಮಿಕ ಶಾಲೆಗೇ ಮಕ್ಕಳನ್ನು ಆಕರ್ಷಿಸುತ್ತಿವೆ ಅಥವಾ ಅಪಹರಣ ಮಾಡುತ್ತಿವೆ ಎಂದೇ ಹೇಳಬೇಕಾಗಿದೆ.

ಅದೇ ವಾತಾವರಣಕ್ಕೆ ಹೊಂದಿಕೊಂಡ ಮಕ್ಕಳು ಕಾಲೇಜು ಹಂತದವರೆಗೂ ಅಲ್ಲೆೀ ಮುಂದುವರಿಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳಿಗೆ ಉಳಿಗಾಲವೆಲ್ಲಿದ್ದೀತು?

ಈ ಹಿನ್ನೆಲೆಯಲ್ಲಿ 4 ರಿಂದ 6 ವರ್ಷದ ಮಕ್ಕಳಿಗೆ ಸರ್ಕಾರದ ನೀತಿಯಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಬೇಕು. ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲೂ ಕನ್ನಡ ಮಾಧ್ಯಮದೊಂದಿಗೆ ಇಂಗ್ಲಿಷನ್ನೂ ಒಂದು ಭಾಷೆಯಾಗಿ ಚೆನ್ನಾಗಿ ಕಲಿಸಿಕೊಡುವ ವ್ಯವಸ್ಥೆಯಾಗಬೇಕು. ಆಗಷ್ಟೆ ಕನ್ನಡ ಶಾಲೆಗಳು, ಸರ್ಕಾರಿ ಶಾಲೆಗಳು ಹಳ್ಳಿಗಳಲ್ಲೂ ಉಳಿದಾವು.

ಮೇಲೆ ಹೇಳಲಾದ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪದವಿ ಪೂರ್ವ ಶಿಕ್ಷಣದ ವರೆಗೆ ಕೆಳಕಂಡಂತೆ 5 ಹಂತಗಳಲ್ಲಿ ತರಗತಿಗಳ ವಿಂಗಡಣೆ ಸರಿಯಾದೀತೆಂದು ನನ್ನ ಅಭಿಪ್ರಾಯ.
 

ಒಂದನೇ ಹಂತ: ಎಲ್‌ಕೆಜಿ, ಯುಕೆಜಿ, 1ನೇ ತರಗತಿ (ಪ್ರಾಥಮಿಕ ಶಿಕ್ಷಣ)
42ನೇ ಹಂತ: 2,3 ಮತ್ತು 4ನೇ ತರಗತಿಗಳು (ಉನ್ನತ ಪ್ರಾಥಮಿಕ ಶಿಕ್ಷಣ)
43ನೇ ಹಂತ: 5,6 ಮತ್ತು 7ನೇ ತರಗತಿಗಳು (ಮಾಧ್ಯಮಿಕ ಶಿಕ್ಷಣ)
44ನೇ ಹಂತ: 8,9 ಮತ್ತು 10ನೇ ತರಗತಿಗಳು (ಪ್ರೌಢಶಿಕ್ಷಣ)
45ನೇ ಹಂತ: ಪ್ರಥಮ ಮತ್ತು ದ್ವಿತೀಯ ಪಿಯು (ಪದವಿ ಪೂರ್ವ ಶಿಕ್ಷಣ)
ಒಟ್ಟಾರೆ ನಮ್ಮಲ್ಲಿರುವ ಪ್ರಸ್ತುತ ಶಿಕ್ಷಣ ವ್ಯವಸ್ಥೆಗೆ ಕಡ್ಡಾಯ ಪೂರ್ವ ಪ್ರಾಥಮಿಕ ಶಿಕ್ಷಣ ಸೇರ್ಪಡೆ ಮಾಡಬೇಕು.

ಇದರ ಜೊತೆಗೆ ಪದವಿ ಪೂರ್ವ ಶಿಕ್ಷಣವನ್ನು ಪ್ರತ್ಯೇಕವಾಗಿಯೇ ಉಳಿಸಿಕೊಳ್ಳಬೇಕು. ಮೂಲಕ ದೇಶದಲ್ಲೆೀ ಮಾದರಿ ಎನಿಸಿರುವ ಈ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಸಶಕ್ತಗೊಳಿಸುವತ್ತ ಎಲ್ಲರ ಚಿತ್ತ ವಾಲಲಿ ಎಂಬುದು ನನ್ನ ಆಶಯ. ಈ ಕುರಿತ ಆರೋಗ್ಯಕರ ವಿಚಾರ ವಿಮರ್ಶೆಗಳಿಗೆ ಸ್ವಾಗತ.


(ಲೇಖಕರು ಮಾಜಿ ಎಂಎಲ್‌ಸಿ ಮತ್ತು ರಾಜ್ಯ ಪಿಯು ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ.
ಅವರ ಸಂಪರ್ಕ ಸಂಖ್ಯೆ 94480 49900)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT