ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ- ಹ್ಯಾಟ್ರಿಕ್ ಸಾಧನೆಯ ನಿರೀಕ್ಷೆಯಲ್ಲಿ ಉಡುಪಿ ಜಿಲ್ಲೆ

Last Updated 22 ಮೇ 2012, 9:55 IST
ಅಕ್ಷರ ಗಾತ್ರ

ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಫಲಿತಾಂಶ ಗಳಿಸುವ ಮೂಲಕ ಸತತ ಎರಡು ವರ್ಷಗಳಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಉಡುಪಿ ಜಿಲ್ಲೆ ಈ ಬಾರಿಯೂ ಅತ್ಯಧಿಕ ಪ್ರಮಾಣದ ಫಲಿತಾಂಶ ಪಡೆದು ಹ್ಯಾಟ್ರಿಕ್ ಸಾಧಿಸುವ ನಿರೀಕ್ಷೆಯಲ್ಲಿದೆ.

ದ್ವಿತೀಯ ಪಿಯುಸಿ ಫಲಿತಾಂಶ ಇದೇ 23ರಂದು ಪ್ರಕಟವಾಗಲಿದೆ. 2010ರಲ್ಲಿ ಶೇ 89.08 ಮತ್ತು 2011ರಲ್ಲಿ ಶೇ 87.15ರಷ್ಟು ಫಲಿತಾಂಶ ಪಡೆದಿದ್ದ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮವಾಗಿ ಹೊರಹೊಮ್ಮಿತ್ತು. 2009-10ರಲ್ಲಿ ಪರೀಕ್ಷೆಗೆ ಕುಳಿತಿದ್ದ 11,778 ವಿದ್ಯಾರ್ಥಿಗಳಲ್ಲಿ 10,492 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. 2010-11ರಲ್ಲಿ 12,581 ವಿದ್ಯಾರ್ಥಿಗಳಲ್ಲಿ 10,964 ಮಂದಿ ಉತ್ತೀರ್ಣ ರಾ ಗಿದ್ದರು. ಅತಿ ಹೆಚ್ಚು ಉತ್ತೀರ್ಣ ಪ್ರಮಾಣ ಗಳಿಸುವ ಮೂಲಕ 2011-12ನೇ ಸಾಲಿನಲ್ಲಿಯೂ ಪ್ರಥಮ ಸ್ಥಾನ ಗಳಿಸಿದರೆ ಹ್ಯಾಟ್ರಿಕ್ ಸಾಧಿಸಿದಂತಾಗುತ್ತದೆ. ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು ಆಗಲಿದೆ.

ಜಿಲ್ಲೆಯಲ್ಲಿ ಒಟ್ಟು 89 ಪದವಿ ಪೂರ್ವ ಕಾಲೇಜು ಗಳಿವೆ. 41 ಸರ್ಕಾರಿ, 18 ಖಾಸಗಿ ಅನುದಾನಿತ ಮತ್ತು 30 ಖಾಸಗಿ ಅನುದಾನ ರಹಿತ ಕಾಲೇಜುಗಳು ಇದರಲ್ಲಿ ಸೇರಿವೆ. ಈ ಕಾಲೇಜುಗಳಲ್ಲಿ ಕ್ರಮವಾಗಿ 5,522, 4,233 ಮತ್ತು 2,859 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿದ್ದಾರೆ.

`ಈ ಬಾರಿಯೂ ರಾಜ್ಯಕ್ಕೆ ಪ್ರಥಮವಾಗಿ ಹೊರಹೊಮ್ಮುವ ವಿಶ್ವಾಸ ಇದೆ. ಉತ್ತೀರ್ಣ ಪ್ರಮಾಣವನ್ನು ಹೆಚ್ಚು ಮಾಡಲು ಮತ್ತು ವಿದ್ಯಾರ್ಥಿಗಳ ಅಂಕ ಗಳಿಕೆಯನ್ನು ಹೆಚ್ಚಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗಿದೆ~ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್. ಶಿಂಧಾ `ಪ್ರಜಾವಾಣಿ~ಗೆ ತಿಳಿಸಿದರು.

`ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಬೇತಿ ನೀಡಲು ಪ್ರತ್ಯೇಕ ಟೈಮ್‌ಟೇಬಲ್ ಹಾಕಲಾಗಿತ್ತು. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ವಿಷಯದಲ್ಲಿ ಹೆಚ್ಚಿನ ತರಬೇತಿ ನೀಡಲಾಗಿದೆ. ಇಂತಹ ವಿದ್ಯಾರ್ಥಿಗಳ ಪೋಷಕರನ್ನು ಕಾಲೇಜಿಗೆ ಕರೆಯಿಸಿ ಮನೆಯಲ್ಲಿ ಸಹ ಕಲಿಕೆಗೆ ಹೆಚ್ಚಿನ ಗಮನ ಕೊಡುವಂತೆ ನೋಡಿಕೊಳ್ಳಿ ಎಂದು ಹೇಳಲಾಗಿತ್ತು~ ಎಂದು ಅವರು ಮಾಹಿತಿ ನೀಡಿದರು.

`ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳು ಅಭಿವೃದ್ಧಿ ಹೊಂದಲೂ ಕ್ರಮ ಕೈಗೊಳ್ಳಲಾಗಿತ್ತು. ಆರಂಭದಲ್ಲೇ ಶಿಕ್ಷಕರು, ಪ್ರಾಚಾರ್ಯರು ಮತ್ತು ವಿದ್ಯಾರ್ಥಿಗಳ ಸಭೆ ನಡೆಸಿ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುವ ಬಗ್ಗೆ ಚರ್ಚಿಸಲಾಗಿತ್ತು. ಈ ಬಾರಿ ರಾಜ್ಯಕ್ಕೆ ಪ್ರಥಮವಾದರೆ ಹ್ಯಾಟ್ರಿಕ್ ಸಾಧನೆಯಾಗುತ್ತದೆ~ ಎಂದು ಶಿಂಧಾ ಹೇಳಿದರು.

2010-11ನೇ ಸಾಲಿನಲ್ಲಿ ಕೊಕ್ಕರ್ಣೆಯ ಸರ್ಕಾರಿ ಪದವಿಪೂರ್ವ ಕಾಲೇಜ್, ಪಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಶೇ100ರಷ್ಟು ಫಲಿತಾಂಶ ಪಡೆದಿದ್ದವು. ಖಾಸಗಿ ಅನುದಾನ ರಹಿತ ಕಾಲೇಜುಗಳಾದ ಉಡುಪಿ ವಿದ್ಯೋದಯ ಪದವಿಪೂರ್ವ ಕಾಲೇಜ್, ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜ್ ಶೇ 100ರಷ್ಟು ಫಲಿತಾಂಶ ಪಡೆದಿದ್ದವು. ಹದಿನೈದು ಸರ್ಕಾರಿ, 11 ಅನುದಾನಿತ ಮತ್ತು 6 ಅನುದಾನ ರಹಿತ ಕಾಲೇಜುಗಳು ಶೇ90ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT