ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿಗೆ ಸಿಬಿಎಸ್‌ಇ ಪಠ್ಯಕ್ರಮಕ್ಕೆ ವಿರೋಧ

Last Updated 16 ಜುಲೈ 2012, 19:30 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಿಂದ ಕೇಂದ್ರೀಯ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಾದರಿಯ ಪಠ್ಯಕ್ರಮ ಅಳವಡಿಸುವ ನಿರ್ಧಾರ ವಿರೋಧಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ಜಿಲ್ಲಾ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸಿಬಿಎಸ್‌ಇ ಪಠ್ಯಕ್ರಮ ಅಳವಡಿಸುವ ನಿಟ್ಟಿನಲ್ಲಿ ಪದವಿ ಪೂರ್ವ ಶಿಕ್ಷಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಏಕಪಕ್ಷೀಯ ತೀರ್ಮಾನ ಕೈಗೊಂಡಿವೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಆಘಾತವಾಗಿದೆ. ಈ ಬಗ್ಗೆ ಗಂಭೀರ ಚಿಂತನೆ ಮಾಡಿ ಸರ್ಕಾರವು ವಿದ್ಯಾರ್ಥಿಗಳ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.

ಈ ಆತುರದ ಏಕಪಕ್ಷೀಯ ನಿರ್ಧಾರವನ್ನು ವಾಪಸ್ ಪಡೆಯಬೇಕು, ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಏಕರೂಪದ ಶಿಕ್ಷಣವನ್ನು ಜಾರಿಗೆ ತರಲು ಬೇಕಾದ ವೈಜ್ಞಾನಿಕ ಪ್ರಕ್ರಿಯೆ ನಡೆಯಬೇಕು. ಇದಕ್ಕಾಗಿ ಶಿಕ್ಷಕರು, ಪಾಲಕರು ಮತ್ತು ಪೋಷಕರು, ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳ ನಡುವೆ ಜನತಾಂತ್ರಿಕ ಚರ್ಚೆಯನ್ನು ಆರಂಭಿಸಬೇಕು. ಏಕರೂಪ ಪಠ್ಯಕ್ರಮ ಜಾರಿಗೆ ಬರುವುದಕ್ಕೆ ಎಲ್ಲ ಶಾಲೆ ಮತ್ತು ಕಾಲೇಜುಗಳಲ್ಲಿ ಅವಶ್ಯಕವಾದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯ ಮಾಡಿದರು.

ಇಡೀ ದೇಶದಲ್ಲಿ ಏಕ ರೀತಿಯ ಪಠ್ಯಕ್ರಮ ಮತ್ತು ಪುಸ್ತಕಗಳನ್ನು ರೂಪಿಸುವುದು ಸ್ವಾಗತಾರ್ಹ. ಆದರೆ, ಸಾಮಾಜಿಕ, ಆರ್ಥಿಕ ಅಸಮಾನತೆ ತೊಡೆದು ಹಾಕದೆ ಈ ರೀತಿ ಏಕರೂಪದ ಪಠ್ಯಕ್ರಮವನ್ನು ಜಾರಿಗೆ ತರುವುದರಿಂದ ದೇಶದಾದ್ಯಂತ ಲಕ್ಷಾಂತರ ಬಡ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತದೆ.

ವೃತ್ತಿ ಶಿಕ್ಷಣ ಕೋರ್ಸ್ ಪ್ರವೇಶಕ್ಕೆ ರಾಷ್ಟ್ರಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ ಜಾರಿಯಿಂದಲೂ ಇಂಥದ್ದೇ ಸಮಸ್ಯೆ ಆಗಲಿದೆ ಎಂದು ಶಿಕ್ಷಣ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.ಅಧ್ಯಕ್ಷ ಮಹೇಶ ಚೀಕಲಪರ್ವಿ, ಜಿಲ್ಲಾ ಕಾರ್ಯದರ್ಶಿ ಜಿ ಪ್ರಮೋದಕುಮಾರ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT