ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಸಿಒಡಿ: ಇರಲಿ ಎಚ್ಚರ

Last Updated 3 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ (ಪಿಸಿಒಡಿ)- ಇದು ಮಕ್ಕಳನ್ನು ಹೆರುವ ವಯಸ್ಸಿನ ಸ್ತ್ರೀಯರನ್ನು ಕಾಡುವ ಒಂದು ಸಾಮಾನ್ಯ ಹಾರ್ಮೋನ್ ಅವ್ಯವಸ್ಥೆ. ಸುಮಾರು ಶೇಕಡಾ 5-10 ರಷ್ಟು ಮಹಿಳೆಯರು ಇದರಿಂದ ಬಾಧಿತರಾಗುತ್ತಾರೆ.

ಹದಿಹರೆಯದ ಹೆಣ್ಣು ಮಕ್ಕಳು, ಬೊಜ್ಜು ಇರುವವರು ಹೆಚ್ಚು ಬಳಲುವುದು ಸಾಮಾನ್ಯ. ಸಹಜ ತೂಕ ಇರುವವರೂ ಬಾಧಿತರಾಗಬಹುದು. ತಪ್ಪು ಆಹಾರ ಕ್ರಮ ಮತ್ತು ವ್ಯಾಯಾಮದ ಕೊರತೆ ಇದಕ್ಕೆ ಹಾದಿ ಮಾಡಿಕೊಡುತ್ತದೆ.

ಇಂತಹ ಮಹಿಳೆಯರು ಅನೇಕ ಸಣ್ಣ ಅಂಡಾಶಯ ಗಡ್ಡೆಗಳನ್ನು ಹೊಂದಿರುತ್ತಾರೆ. ಇವುಗಳಲ್ಲಿ ಹೆಚ್ಚಿನ ಗಡ್ಡೆಗಳು ಹಾನಿಕಾರಕವಲ್ಲ. ಈ ಗಡ್ಡೆಗಳು ನೋಡಲು ಮುತ್ತಿನ ನೆಕ್ಲೇಸ್‌ನಂತೆ ಗೋಚರಿಸುತ್ತವೆ.

ಇದು ರೋಗಿಯು ಪಿಸಿಒಡಿಯಿಂದ ಬಳಲುತ್ತಿರುವುದರ ಸೂಚನೆ. ಋತುಚಕ್ರದಲ್ಲಿ ಏರುಪೇರಾದಾಗ ಇಂತಹ ಗಡ್ಡೆಗಳು ಕಾಣಿಸುತ್ತವೆ. ಇದರಿಂದ ಅಂಡಾಶಯ ದೊಡ್ಡದಾಗುತ್ತದೆ, ಆ್ಯಂಡ್ರೋಜೆನ್ ಹಾಗೂ ಈಸ್ಟ್ರೋಜೆನ್ ಹಾರ್ಮೋನ್‌ಗಳು ಅಧಿಕವಾಗಿ ಉತ್ಪತ್ತಿಯಾಗುತ್ತವೆ. ಜೊತೆಗೆ ಅಂಡೋತ್ಪತ್ತಿ ಕೊರತೆಯೂ ಸೇರಿ ಸಂತಾನಹೀನತೆಗೆ ಕಾರಣವಾಗಬಹುದು.

ಪಿಸಿಒಡಿ ಲಕ್ಷಣಗಳು
ಮುಖ ಅಥವಾ ದೇಹದ ಮೇಲೆ ಅತಿಯಾದ ರೋಮಗಳು, ಸ್ಕಿನ್ ಟ್ಯಾನ್, ಮೊಡವೆ, ಅನಿಯಮಿತ ಋತುಬಂಧ, ತಲೆ ಕೂದಲು ತೆಳುವಾಗುವುದು, ಖಿನ್ನತೆ, ಆತಂಕ, ಸಂತಾನ ತೊಂದರೆಗಳು, ತೂಕ ಹೆಚ್ಚುವುದು, ನಿದ್ರಿಸುವಾಗ ಉಸಿರಾಟದ ಸಮಸ್ಯೆ, ಲೈಂಗಿಕ ಆಸಕ್ತಿ ಕುಗ್ಗುವುದು, ಥೈರಾಯ್ಡ ತೊಂದರೆ, ಚರ್ಮ ಬಣ್ಣಗೆಡುವುದು, ಏಕಾಗ್ರತೆಯ ಕೊರತೆ, ಅಧಿಕ ಕೊಲೆಸ್ಟರಾಲ್ ಮುಂತಾದವು ಪಿಸಿಒಡಿಯ ಸಾಮಾನ್ಯ ಲಕ್ಷಣಗಳು. ಇವುಗಳ ಪೈಕಿ ಒಂದು ಅಥವಾ ಹೆಚ್ಚು ಲಕ್ಷಣಗಳು ಮಹಿಳೆಯರ ಅನುಭವಕ್ಕೆ ಬರಬಹುದು.

ಆರಂಭದಲ್ಲಿ ಈ ಲಕ್ಷಣಗಳು ಸೌಮ್ಯವಾಗಿದ್ದು, ಗಮನಕ್ಕೆ ಬರದೇ ಹೋಗುವ ಸಾಧ್ಯತೆಯೂ ಇರುತ್ತದೆ. ಪಿಸಿಒಡಿಗೆ ಕಾರಣ ಏನು ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ಹೀಗಿದ್ದರೂ, ಆನುವಂಶಿಕ, ಬೊಜ್ಜು ಅಥವಾ ಹಾರ್ಮೋನ್ ಏರುಪೇರು ಕಾರಣ ಇರಬಹುದು ಎಂದು ಹೇಳಲಾಗುತ್ತದೆ.

ಮುನ್ನೆಚ್ಚರಿಕೆ: ಆರಂಭದಲ್ಲೇ ರೋಗ ಪತ್ತೆ ಮತ್ತು ಸಮಯಾನುಸಾರ ಚಿಕಿತ್ಸೆಯ ಮೂಲಕ ಇದರ ದೀರ್ಘಕಾಲೀನ ಆರೋಗ್ಯ ತೊಂದರೆಗಳಾದ ಬೊಜ್ಜು, ಮಧುಮೇಹ, ಸಂತಾನಹೀನತೆ ಮತ್ತು ಹೃದ್ರೋಗಗಳನ್ನು ತಡೆಗಟ್ಟಬಹುದು. ಕೆಲವು ಮುನ್ನೆಚ್ಚರಿಕೆ ಕ್ರಮಗಳ ಮೂಲಕವೂ ಪಿಸಿಒಡಿ ಲಕ್ಷಣಗಳನ್ನು ಗುರುತಿಸಿ  ಅಡ್ಡ ಪರಿಣಾಮಗಳನ್ನು ದೂರ ಇಟ್ಟು ಸಹಜ ಜೀವನ ನಡೆಸಬಹುದು.

ಆಹಾರ ಕ್ರಮ ಹಾಗೂ ಜೀವನ ಶೈಲಿ ಬದಲಿಸಿಕೊಳ್ಳುವುದು ಮೊದಲನೆಯ ಪ್ರಮುಖ ಹೆಜ್ಜೆ. ಬಿಳಿ ಅಕ್ಕಿ, ಬಿಳಿ ಬ್ರೆಡ್, ಕ್ಯಾಂಡಿ, ಸೋಡಾ, ಅತಿಯಾಗಿ ಹಣ್ಣಿನ ಜ್ಯೂಸ್ ಕುಡಿಯುವುದು, ಕೇಕ್, ಐಸ್ ಕ್ರೀಮ್, ಕುಕ್ಕೀಸ್ ಮತ್ತಿತರ ಸಂಸ್ಕರಿತ ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ತಗ್ಗಿಸಬೇಕು.

ಏಕೆಂದರೆ ಇವು ಇನ್ಸುಲಿನ್ ಪ್ರತಿರೋಧಕ ಶಕ್ತಿಯನ್ನು ಉಂಟು ಮಾಡುತ್ತವೆ. ಇಡೀ ಗೋಧಿ, ಬಾರ್ಲಿ, ಕಂದು ಅಕ್ಕಿ, ಬೀನ್ಸ್ ಹಾಗೂ ಹಣ್ಣುಗಳ ಸೇವನೆ ಪ್ರಮಾಣ ಹೆಚ್ಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT