ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಹೆಚ್ ಡಿ ಚೋರರೇ ಎಚ್ಚರ!

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಅಧ್ಯಾಪಕರ ನೇಮಕ ಮತ್ತು ಬಡ್ತಿಗೂ, ಪಿಎಚ್‌ಡಿ ಪದವಿಗೂ ತಳಕು ಹಾಕಿದ ಮೇಲೆ ದೇಶದಲ್ಲಿ ಪ್ರವಾಹೋಪಾದಿಯಲ್ಲಿ ಪಿಎಚ್‌ಡಿ ಪ್ರಬಂಧಗಳು ತಯಾರಾದವು ಎಂಬ ದೂರಿದೆ. ಸ್ನಾತಕೋತ್ತರ ಪದವಿ ಮುಗಿಸಿ ಕೆಲಸ ಸಿಗದವರು ಪಿಎಚ್‌ಡಿ ಮಾಡುವ ಉಪಾಯ ಕಂಡುಕೊಂಡ ಮೇಲೆ ಇವುಗಳ ಸಂಖ್ಯೆ ಇನ್ನೂ ಹೆಚ್ಚಿತು.
 
ಸಹಜವಾಗಿಯೇ, ಪಿಎಚ್‌ಡಿ ಪ್ರಬಂಧಗಳ ಗುಣಮಟ್ಟದ ಬಗ್ಗೆ ಸಮಾಜದಲ್ಲಿ ಸಂಶಯಗಳು ವ್ಯಕ್ತವಾದವು. ಅವರಿವರ ಪ್ರಬಂಧಗಳನ್ನು ಕದ್ದು ತಮ್ಮದಕ್ಕೆ ಸೇರಿಸಿಕೊಂಡ, ಹಣ ಕೊಟ್ಟು ಯಾರಿಂದಲೋ ಬರೆಸಿ ಪಿಎಚ್‌ಡಿ ಪಡೆದುಕೊಂಡ ಪ್ರಕರಣಗಳು ಬೇರೆ ಬೇರೆ ಕಡೆ ವರದಿಯಾದವು.
 
ಹೀಗಾಗಿ ಇಂದು ಪಿಎಚ್‌ಡಿಗಳನ್ನು ಅನುಮಾನಿಸುವ ಪ್ರವತ್ತಿ ಬೆಳೆದಿದೆ. ಕಷ್ಟಪಟ್ಟು ಪಿಎಚ್‌ಡಿ ಮಾಡಿದವರೂ ಹೇಳಿಕೊಳ್ಳಲು ನಾಚಬೇಕಾದ ಪರಿಸ್ಥಿತಿ ಇದೆ.
ವಾಸ್ತವದಲ್ಲಿ ಪದವಿ ಘೋಷಣೆಯಾದ ಬಳಿಕ ಈ ಪ್ರಬಂಧಗಳು ಎಲ್ಲಿಗೆ ಹೋಗುತ್ತವೆ? ಹೆಚ್ಚಿನ ಸಂಶೋಧಕರಿಗೆ ಪ್ರಬಂಧವನ್ನು ಪ್ರಕಟಿಸುವ ಧೈರ್ಯ ಅಥವಾ ಅವಕಾಶ ಇರುವುದಿಲ್ಲ.
 
ಅದರಲ್ಲಿನ ಹುಳುಕುಗಳು ಹೊರಬರುವ ಭಯದಿಂದ ಯಾರ ಕೈಗೂ ಸಿಗದಂತೆ ಉಪಾಯದಿಂದ ಕಾಪಿಡುವ ಪ್ರಸಂಗಗಳೇ ಹೆಚ್ಚು. ಪದವಿ ಘೋಷಣೆಯಾದ ಪ್ರಬಂಧಗಳ ಪ್ರತಿಯನ್ನು ಆಯಾಯ ವಿ.ವಿಗಳ ಗ್ರಂಥಾಲಯಗಳಲ್ಲಿ ಪರಾಮರ್ಶೆಗೆ ಇಡಬೇಕೆಂಬ ನಿಯಮವಿದೆ.

ಆದರೆ ಓದುವ ಆಸೆಯಿದ್ದರೂ ಹೆಚ್ಚಿನ ವಿ.ವಿಗಳಲ್ಲಿ ಈ ಪ್ರಬಂಧಗಳು ಕೈಗೆ ಸಿಕ್ಕುವುದಿಲ್ಲ.
ದೇಶದ ತೆರಿಗೆದಾರನ ದುಡ್ಡು ಬಳಕೆಯಾಗಿ ಯಾರ ಉಪಯೋಗಕ್ಕೂ ಸಿಕ್ಕದಿರುವ, ಇಂಥ ನಾಚಿಕೆಗೆಟ್ಟ ವ್ಯವಹಾರಕ್ಕೆ ಕಡಿವಾಣ ಬೀಳುವ ಒಂದು ಅವಕಾಶ ಬಂದಿರುವುದು `ಶೋಧಗಂಗಾ~ ಎಂಬ ಹೊಸ ಯೋಜನೆಯಿಂದ. ಇದು ಯುಜಿಸಿ ಅಂಗ ಸಂಸ್ಥೆಯಾದ ಇನ್‌ಫ್ಲಿಬ್‌ನೆಟ್‌ನ ಕೊಡುಗೆ. ನಮ್ಮ ದೇಶದಲ್ಲಿ ತಯಾರಾಗುತ್ತಿರುವ ಡಾಕ್ಟರೇಟ್ ಪ್ರಬಂಧಗಳನ್ನು ಅಂತಾರಾಷ್ಟ್ರೀಯ ಪರಾಮರ್ಶೆಗೆ ತೆರೆದಿಡುವ ದಿಟ್ಟತನದ ಯೋಜನೆ ಇದಾಗಿದೆ.

ಏನಿದು?
ಶೋಧಗಂಗಾ ಎಂಬುದು ಒಂದು ವೆಬ್ ಪೋರ್ಟಲ್. ಇದು ಭಾರತದ ಎಲ್ಲ ವಿ.ವಿಗಳಲ್ಲಿ  ರಚನೆಯಾಗುವ ಪಿಎಚ್‌ಡಿ ಪ್ರಬಂಧಗಳನ್ನು ಡಿಜಿಟಲ್ ರೂಪದಲ್ಲಿ ನೆಟ್ ಮೇಲೆ ಪ್ರಕಟಿಸುತ್ತದೆ. ಪ್ರಪಂಚದಲ್ಲಿ ಯಾರು ಬೇಕಾದರೂ ಈ ಪ್ರಬಂಧಗಳನ್ನು ಓದಿ ತಮ್ಮ ಪ್ರತಿಕ್ರಿಯೆ ನೀಡಬಹುದಾಗಿದೆ.
 
ಇ-ಶಿಕ್ಷಣದ ಹಾದಿಯಲ್ಲಿ ಈ ಮಹತ್ತರ ಸಾಧನೆಗಾಗಿ ಇನ್‌ಫ್ಲಿಬ್‌ನೆಟ್ ಸಂಸ್ಥೆಗೆ 2011ರ ಇ- ಇಂಡಿಯಾ ಜೂರಿ ಅವಾರ್ಡ್ ಘೋಷಣೆಯಾಗಿದೆ. ಶೋಧಗಂಗಾ `ಭಾರತೀಯ ಪಿಎಚ್‌ಡಿ ಪ್ರೌಢ ಪ್ರಬಂಧಗಳ ಭಂಡಾರ~. ಭಾರತದಲ್ಲಿ ಪ್ರತಿಯೊಂದು ಪಿಎಚ್‌ಡಿ ಪ್ರಬಂಧವೂ ಇ- ಮಾದರಿಯಲ್ಲಿ ಸಲ್ಲಿಕೆಯಾಗಬೇಕೆಂದು ಯುಜಿಸಿ 2009ರಲ್ಲಿಯೇ ನಿರ್ದೇಶಿಸಿತ್ತು.

ಅದರಂತೆ ಇಂದು ಹೆಚ್ಚಿನ ವಿ.ವಿಗಳಲ್ಲಿ ಪ್ರಬಂಧಗಳ ಬೈಂಡ್ ಮಾಡಿದ ಪ್ರತಿಗಳ ಜೊತೆ ಸಿ.ಡಿ ಸಲ್ಲಿಸುವುದು ಕಡ್ಡಾಯವಾಗಿದೆ. ಈವರೆಗೆ ವಿ.ವಿಗಳು ಈ ಸಿ.ಡಿಗಳನ್ನು ಗ್ರಂಥಾಲಯದಲ್ಲಿ ಸುಮ್ಮನೇ ಇರಿಸಿಕೊಳ್ಳುತ್ತಿದ್ದವು. ಈಗ ಅವುಗಳಿಗೆ ಒಂದು ವೇದಿಕೆ ಸಿದ್ಧವಾಗಿದೆ. ಅದೇ ಇನ್‌ಫ್ಲಿಬ್‌ನೆಟ್‌ನ `ಶೋಧಗಂಗಾ~ ವೆಬ್ ವೇದಿಕೆ.

ಈಗಾಗಲೇ 50ಕ್ಕೂ ಹೆಚ್ಚು ವಿ.ವಿಗಳು ತಮ್ಮ ಪ್ರೌಢ ಪ್ರಬಂಧಗಳನ್ನು ಶೋಧಗಂಗಾ ವೆಬ್‌ನಲ್ಲಿ ಪ್ರಕಟಿಸಲು ಒಪ್ಪಂದ ಮಾಡಿಕೊಂಡಿವೆ. ಹೀಗೆ ಒಪ್ಪಂದ ಮಾಡಿಕೊಳ್ಳಲು ಮುಂದೆ ಬರುವ ವಿ.ವಿಗಳಿಗೆ ಮೂರು ರೀತಿಯ ಲಾಭಗಳಿವೆ. ಒಂದು- ಎಲೆಕ್ಟ್ರಾನಿಕ್ ಮಾದರಿಯಲ್ಲಿ ಇಲ್ಲದ ಹಳೆ ಪ್ರಬಂಧಗಳನ್ನು ಡಿಜಿಟಲ್ ಮಾದರಿಗೆ ಅಳವಡಿಸಲು ಯುಜಿಸಿ ಹಣ ನೀಡುತ್ತದೆ. ಎರಡನೆಯದಾಗಿ ಬೇರೆ ಕಡೆಯಿಂದ ನಕಲು ಮಾಡಿದ್ದನ್ನು ಪತ್ತೆಹಚ್ಚುವ ತಂತ್ರಾಂಶವನ್ನು ಉಚಿತವಾಗಿ ಇನ್‌ಫ್ಲಿಬ್‌ನೆಟ್ ಒದಗಿಸುತ್ತದೆ. ಮೂರನೆಯದಾಗಿ ಇಟಿಡಿ ಲ್ಯಾಬ್ (ಎಲೆಕ್ಟ್ರಾನಿಕ್ ಥೀಸಿಸ್ ಅಂಡ್ ಡೆಸರ್ಟೇಶನ್ ಲ್ಯಾಬ್) ಆರಂಭಿಸಲು ವಿ.ವಿಗಳಿಗೆ ಧನಸಹಾಯ ಸಿಗುತ್ತದೆ.

ಈ ಮೂರು ಲಾಭದ ಆಸೆಯಿಂದಲೂ ವಿ.ವಿಗಳು ತ್ವರಿತವಾಗಿ ಇನ್‌ಫ್ಲಿಬ್‌ನೆಟ್ ಜೊತೆ ಸಹಿ ಹಾಕಲು ಮುಂದೆ ಬರುತ್ತಿವೆ. ಇತ್ತೀಚೆಗೆ ಮೈಸೂರು ವಿ.ವಿ ಈ ಒಪ್ಪಂದಕ್ಕೆ ಸಹಿ ಹಾಕಿ ರಾಜ್ಯದ ಇತರ ವಿ.ವಿಗಳಿಗೆ ಮಾದರಿಯಾಗಿದೆ.

 ಈಗಾಗಲೇ 50ಕ್ಕೂ ಹೆಚ್ಚು ವಿ.ವಿಗಳ 3 ಸಾವಿರಕ್ಕೂ ಹೆಚ್ಚು ಪ್ರಬಂಧಗಳು ಶೋಧಗಂಗೆಯಲ್ಲಿ ಬೆಳಕು ಕಂಡಿವೆ. ನಮ್ಮ ದೇಶದ ವಿ.ವಿಗಳಲ್ಲಿ ನಡೆದಿರುವ ಪಿಎಚ್‌ಡಿ ಪ್ರಬಂಧಗಳ ನೆಲೆ- ಬೆಲೆಯನ್ನು ಅರ್ಥ ಮಾಡಿಕೊಳ್ಳಲು ಕುತೂಹಲಕ್ಕಾಗಿಯೂ, ಗಂಭೀರ ಪರಾಮರ್ಶೆಗೂ ಆಗಾಗ ಶೋಧಗಂಗೆಯಲ್ಲಿ ಮುಳುಗಬಹುದು. ಶೋಧಗಂಗೆಗೆ ಹೋಗುವ ಇ- ವಿಳಾಸ: 
                                     shodhganga.inflibnet.ac.in  

ಶೋಧ ಗಂಗೋತ್ರಿ
ಶೋಧಗಂಗಾದ ಇನ್ನೊಂದು ಕೊಡುಗೆಯೆಂದರೆ `ಶೋಧ ಗಂಗೋತ್ರಿ~. ಇದು ದೇಶದಲ್ಲಿ ನಡೆದಿರುವ ಸಂಶೋಧನೆಗಳ ವಿವರವನ್ನು ನೆಟ್‌ನಲ್ಲಿ ಹಾಕುವ  ಮಹತ್ವದ ಯೋಜನೆ. ಇಲ್ಲಿ ಶೋಧಗಂಗಾದ ಸದಸ್ಯ ವಿ.ವಿಗಳಲ್ಲಿ  ರಿಜಿಸ್ಟರ್ ಆಗಿ ವಿವಿಧ ಹಂತಗಳಲ್ಲಿರುವ ಸಂಶೋಧನೆಗಳ ಸಾರಾಂಶವನ್ನು ಅಪ್‌ಲೋಡ್ ಮಾಡಲಾಗುತ್ತದೆ.

ಇದರಿಂದ ಬೇರೆ ಬೇರೆ ವಿ.ವಿಗಳ ಯಾವ್ಯಾವ ವಿಭಾಗಗಳಲ್ಲಿ ಯಾವ್ಯಾವ ಸಂಶೋಧನೆಗಳು ನಡೆದಿವೆ ಎಂಬ ಮಾಹಿತಿ ತಟ್ಟನೆ ಒಂದೆಡೆ ಸಿಗುತ್ತದೆ. ಇದರಿಂದ ಸಂಶೋಧಕರಿಗೂ, ಆಸಕ್ತರಿಗೂ ಅನುಕೂಲ.

ಹೊಸ ಸಂಶೋಧನೆಗಳಲ್ಲಿ ತೊಡಗುವಾಗ, ಈ ವಿಷಯವಾಗಿ ಬೇರೆ ಯಾರಾದರೂ ಸಂಶೋಧನೆ ಮಾಡಿದ್ದಾರೆಯೇ ಅಥವಾ ಮಾಡುತ್ತಿದ್ದಾರೆಯೇ ಎಂದು ತಿಳಿಯುವುದೇ ಈಗಿನ ದೊಡ್ಡ ಸಮಸ್ಯೆ.

ಶೋಧ ಗಂಗೋತ್ರಿಯಲ್ಲಿ ಇನ್ನು ಮುಂದೆ ದೇಶದ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳ ಸಾರಲೇಖವೂ ಪ್ರಕಟವಾಗುವುದರಿಂದ ಸಂಶೋಧಕರಿಗೆ ಬಹಳ ಸಹಾಯವಾಗಲಿದೆ.

ವಿಶೇಷವೆಂದರೆ ಖಾಸಗಿಯವರು ಕೂಡಾ ತಮ್ಮ ಸಂಶೋಧನಾ ಪ್ರಬಂಧವನ್ನು ಶೋಧಗಂಗೆಯಲ್ಲಿ ಪ್ರಕಟಿಸಬಹುದು. ಅದಕ್ಕೆ ಅನುಸರಿಸಬೇಕಾದ ಕ್ರಮವನ್ನು ಶೋಧಗಂಗಾ ವೆಬ್‌ಸೈಟಿನಲ್ಲಿ ತಿಳಿಸಲಾಗಿದೆ. ಶೋಧಗಂಗಾದಲ್ಲಿ ಅಪ್‌ಲೋಡ್ ಮಾಡಿರುವ ಪ್ರಬಂಧಗಳ ಲೇಖಕರಿಗೆ ಇ- ಸರ್ಟಿಫಿಕೇಟನ್ನು ಕೂಡಾ ಕೊಡುವ ವ್ಯವಸ್ಥೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT