ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಂಡಾನೆಗಳ ನಿಯಂತ್ರಣ: ಕೇಂದ್ರಕ್ಕೆ ಮನವಿ

Last Updated 20 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಪುಂಡಾನೆಗಳ ಹಾವಳಿಯಿಂದ ಜೀವಹಾನಿ ಮತ್ತು ಬೆಳೆ ಹಾನಿಯಾಗುತ್ತಿದ್ದು, ಅವುಗಳನ್ನು ಗುರುತಿಸಿ ನಿಯಂತ್ರಿಸಲು ಅನುಮತಿ ನೀಡುವಂತೆ ನಿಯೋಗದ ಮೂಲಕ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಗುರುವಾರ ಇಲ್ಲಿ ತಿಳಿಸಿದರು.

ಹಾಸನ ಜಿಲ್ಲೆಯಲ್ಲಿ ಈಚೆಗೆ ಆನೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆ ಜಿಲ್ಲೆಯ ಉಸ್ತುವಾರಿ ಸಚಿವ ವಿ.ಸೋಮಣ್ಣ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಿಯೋಗವು ಕೇಂದ್ರದ ಅರಣ್ಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ. ‘ರಾಷ್ಟ್ರೀಯ ಉದ್ಯಾನ, ರಕ್ಷಿತ ಅರಣ್ಯ, ವನ್ಯಜೀವಿಗಳ ಸಂರಕ್ಷಣೆ ನಿಯಮಗಳು ಎಲ್ಲ ರಾಜ್ಯಗಳಿಗೂ ಒಂದೇ ಆಗಿದ್ದು, ಕೇಂದ್ರದ ಅನುಮತಿ ಇಲ್ಲದೆ ರಾಜ್ಯ ಸರ್ಕಾರ ಈ ವಿಷಯದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳುವಂತಿಲ್ಲ. ಆದ್ದರಿಂದ ಕೇಂದ್ರದ ಮನವೊಲಿಸುವ ಕೆಲಸ ಮಾಡುತ್ತೇವೆ’ ಎಂದರು.

ಜೀವಹಾನಿ ಮತ್ತು ಬೆಳೆಹಾನಿ ಹೆಚ್ಚಾಗಿದ್ದು, ಸಮಸ್ಯೆಗಳ ಬಗ್ಗೆ ಸ್ಪಷ್ಟ ಅರಿವಿದೆ. ಹಾಸನ, ಕೊಡಗು ಸೇರಿದಂತೆ 7-8 ಜಿಲ್ಲೆಗಳಲ್ಲಿ ಆನೆ ಹಾವಳಿ ಇದೆ. ಸದ್ಯದ ಸಮಸ್ಯೆ ಮತ್ತು ಶಾಶ್ವತ ಸಮಸ್ಯೆ ಎಂದು ಗುರುತಿಸಿ, ಮೊದಲು ಸದ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ. ಮುಂದಿನ ಬಜೆಟ್‌ನಲ್ಲಿ ಪರಿಹಾರದ ವಿವರಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.

‘ಹಾಸನ ಜಿಲ್ಲೆಯಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ತಡೆಗೋಡೆ, ಕಂದಕ ನಿರ್ಮಾಣ, ತಂತಿಬೇಲಿ ನಿರ್ಮಿಸಲಾಗುವುದು. ಈ ರೀತಿಯ ಪ್ರದೇಶಗಳನ್ನು ಗುರುತಿಸಿ ಪಟ್ಟಿಕೊಡಿ, ಎರಡು ವರ್ಷಗಳಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸುತ್ತೇವೆ ಎಂದು ಸೂಚಿಸಲಾಗಿದೆ. ಜೀವಹಾನಿಗೆ ಸಮಾಧಾನಕರವಾದ ಪರಿಹಾರವನ್ನು ಸಕಾಲದಲ್ಲಿ ನೀಡಬೇಕು ಎಂಬುದು ನನ್ನ ಆಶಯವಾಗಿದ್ದು, ಶೀಘ್ರದಲ್ಲಿಯೇ ಪರಿಹಾರ ಹೆಚ್ಚಿಸುವ ಬಗ್ಗೆ ನಿರ್ಧರಿಸಲಾಗುವುದೆಂದರು.

ಸೋಮಣ್ಣ ಅವರೊಂದಿಗೆ ಹಾಸನ ಜಿಲ್ಲೆಗೆ ಭೇಟಿ ನೀಡಿ ಆನೆ ಹಾವಳಿ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲಿಸುತ್ತೇನೆ ಎಂದು ಭರವಸೆ ನೀಡಿದರು. ರೈತರ ಮನವೊಲಿಸುವ ಮೂಲಕ ಅರಣ್ಯ ಭೂಮಿ ಒತ್ತುವರಿಯನ್ನು ತೆರವುಗೊಳಿಸಲಾಗುವುದು. ಅಗತ್ಯವುಳ್ಳವರಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು.

ರೈತರ ಮೇಲೆ ಅನವಶ್ಯಕವಾಗಿ ದೂರು ದಾಖಲಾಗಿದ್ದರೆ ವಾಪಸ್ ಪಡೆಯಲಾಗುವುದು. ಆದರೆ ಪ್ರಾಣಿಗಳನ್ನು ಕೊಂದಿದ್ದರೆ ಅಂತಹವರಿಗೆ ಕ್ಷಮೆ ಇಲ್ಲ ಎಂದು ಸಚಿವ ಸೋಮಣ್ಣ ತಿಳಿಸಿದರು. 15-20 ದಿನಗಳಲ್ಲಿ ಈ ಬಗ್ಗೆ ಸಭೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. 2007ರಿಂದ ಇಲ್ಲಿಯವರೆಗೆ 15 ಆನೆ ಮತ್ತು 14 ಜನರು ಸತ್ತಿದ್ದಾರೆ. ಈ ರೀತಿಯ ಅನಾಹುತಗಳನ್ನು ತಡೆಯಲು ಎಚ್ಚರ ವಹಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT