ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಕ್ಕಟೆ ಸಲಹೆಯ ಇಕ್ಕಟ್ಟು ಕಥೆ

Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸ್ವಂತಕ್ಕೊಂದು ಮನೆ ನಿರ್ಮಾಣದ ಕನಸು ಯಾರಿಗಿರುವುದಿಲ್ಲ? ಆದರೆ, ನಿವೇಶನ ಖರೀದಿ, ಮನೆ ನಿರ್ಮಾಣಕ್ಕಾಗಿ ಹಣ ಹೊಂದಿಸುವುದು  ಮಾತ್ರ ಬಲು ಕಷ್ಟದ ಕೆಲಸ.

ಇರುವ ಸ್ವಲ್ಪ ದುಡಿಮೆಯಲ್ಲೇ ಪ್ರತಿ ತಿಂಗಳೂ ಕಷ್ಟಪಟ್ಟು ಉಳಿತಾಯ ಮಾಡಿದವರು ಮನೆ ಕಟ್ಟಿಕೊಳ್ಳುವ ವಿಚಾರಕ್ಕೆ ಬಂದಾಗ ಆ ಹಣವನ್ನು ಅಷ್ಟೇ ಮುತುವರ್ಜಿಯಿಂದ ವೆಚ್ಚ ಮಾಡಬೇಕು. ಒಂದೊಮ್ಮೆ ‘ಮಿತಿ’ ಮೀರಿದರೆ ಕಷ್ಟ ಕಟ್ಟಿಟ್ಟಬುತ್ತಿ.

ಕೈಯಲ್ಲಿದ್ದ ಹಣವೆಲ್ಲ ನಿಯಂತ್ರಣ ಮೀರಿ ವಿನಿಯೋಗವಾಗಿ ಖಾಲಿಯಾದರೆ ಒಂದೋ ಮನೆ ಕಟ್ಟುವ ಕೆಲಸ ಮುಕ್ಕಾಲು ಹಂತದಲ್ಲೇ ನಿಂತು ಹೋಗುತ್ತದೆ, ಇಲ್ಲವೇ ಅನಗತ್ಯವಾಗಿ ಸಾಲದ ಹೊರೆ ಹೆಗಲೇರುತ್ತದೆ.
‘ಯೋಜನೆಯಂತೆಯೇ ಮನೆ ನಿರ್ಮಿಸಬೇಕು, ಯೋಚಿಸಿಯೇ ಹಣ ವೆಚ್ಚ ಮಾಡಬೇಕು’ ಎಂಬುದು ಮನೆ ಕಟ್ಟಿ ಅದರ ಸುಖ, ದುಃಖ  ಎರಡನ್ನೂ ‘ಅನುಭವಿಸಿದವರ’ ಅನುಭವದ ನುಡಿ.

ಸಲಹೆಗೆ ‘ಶುಲ್ಕ’ ವಿಪರೀತ
ಬೆಂಗಳೂರಿನಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿದ್ದ ಆ ಮಧ್ಯಮ ವರ್ಗದ ದಂಪತಿಗೆ ಎಂಜಿನಿಯರ್‌ ಹೇಳಿದ್ದರು, ‘ಸಾಮಾನ್ಯವಾಗಿ ಈಗಿನ ಧಾರಣೆ, ಕೂಲಿ ಲೆಕ್ಕದಲ್ಲಿ ಒಂದು ಚದರ ಮನೆ ನಿರ್ಮಾಣಕ್ಕೆ ಕನಿಷ್ಠ ರೂ.1.50 ಲಕ್ಷವಾದರೂ ವೆಚ್ಚವಾಗುತ್ತದೆ. ವಿಶೇಷ ಬಗೆಯ ಹೊರಾಂಗಣ, ಒಳಾಂಗಣ ವಿನ್ಯಾಸ ಆರಿಸಿಕೊಂಡರೆ ಖರ್ಚು ಜಾಸ್ತಿಯಾಗುತ್ತದೆ.

ಇನ್ನು ಅತ್ಯುತ್ತಮ ಗುಣಮಟ್ಟದ ಹಾಗೂ ಅತ್ಯಾಧುನಿಕ ನಲ್ಲಿಗಳ ಫಿಟ್ಟಿಂಗ್ಸ್‌, ಎಲೆಕ್ಟ್ರಿಕಲ್‌ ಸಾಮಗ್ರಿ ಜೋಡಣೆ, ಆಧುನಿಕ ಶೈಲಿಯಲ್ಲಿ ಅಡುಗೆ ಮನೆ ವಿನ್ಯಾಸ, ಸ್ನಾನದ ಕೋಣೆಯಲ್ಲಿ ಅದ್ದೂರಿತನ ಎಂದೆಲ್ಲಾ ಯೋಚಿಸಿದರೆ ಕೈ ಸಡಿಲ ಬಿಟ್ಟು ಹಣ ವೆಚ್ಚ ಮಾಡಬೇಕು. ಕಡಿಮೆ ವೆಚ್ಚದಲ್ಲಿ ಬಜೆಟರಿ ಮನೆಯೇ ಸಾಕು ಎಂದರೆ ನಿರ್ಮಾಣಕ್ಕೆ ಅತ್ಯಗತ್ಯವಾದ ಎಲ್ಲ ಸಾಮಗ್ರಿಗಳ ಖರೀದಿ ವಿಚಾರದಲ್ಲಿ ಕೈಬಿಗಿ ಹಿಡಿಯಬೇಕು ಮತ್ತು ಮೊದಲು ಏನು ಯೋಜಿಸಿರುತ್ತಿರೋ ಅದೇ ರೀತಿಯಲ್ಲಿಯೇ ಮನೆಯ ಕಟ್ಟುವ ಕೆಲಸ ಮುಂದುವರಿಸುತ್ತಾ ಹೋಗಬೇಕು’.

ಆದರೆ, ಆಗಿದ್ದೇ ಬೇರೆ. ಆ ದಂಪತಿ ಗುದ್ದಲಿ ಪೂಜೆಗೆ ಕರೆದಿದ್ದ ನೆಂಟರಿಷ್ಟರಲ್ಲಿ ಕೆಲವರು ಕುತೂಹಲದಿಂದ ಮನೆಯ ನೀಲನಕ್ಷೆ ವೀಕ್ಷಿಸಲು ಬಯಸಿದರು. ದಂಪತಿಯೂ ಖುಷಿಯಿಂದಲೇ ನಕ್ಷೆ ತೋರಿಸಿ ಖುಷಿ ಪಟ್ಟರು. ಆದರೆ, ಆ ಸಹಜ ಕುತೂಹಲಿಗಳು ಮಾತ್ರ ಹತ್ತಾರು ಸಲಹೆ ಸೂಚನೆಗಳನ್ನು ನೀಡಿ ದಂಪತಿಯ ತಲೆ ಮೇಲೆ ಗೊಂದಲದ ಮೂಟೆ ಹೊರಿಸಿ ನಿರ್ಗಮಿಸಿದರು.

ಆ ಗೊಂದಲದ ಕಾರಣ ನಕ್ಷೆಯಲ್ಲಿ ನಿದಾನವಾಗಿ ಸಣ್ಣ ಸಣ್ಣ ಬದಲಾವಣೆಗಳಾದವು. ಅದಕ್ಕೆ ತಕ್ಕಂತೆ ನಿರ್ಮಾಣ ವೆಚ್ಚವೂ ಸ್ವಲ್ಪವೇ ಸ್ವಲ್ಪ ಎಂದು ಏರುತ್ತಾ ಹೋಯಿತು.

ತಳಪಾಯವಾಯಿತು, ಗೋಡೆಗಳೂ ಚುರುಕಾಗಿ ಮೇಲೆದ್ದವು. ಲಿಂಟಲ್‌ ಕೆಲಸವೂ ಆಯಿತು. ತಾರಸಿ ಮಟ್ಟಕ್ಕೂ ಬಂದಿತು. ದಿನದಿನಕ್ಕೆ ತಮ್ಮ ಮನೆ ಮೇಲೇಳುತ್ತಿರುವುದನ್ನು ಕಂಡು ದಂಪತಿಗೆ ಹಿರಿಹಿರಿ ಹಿಗ್ಗು. ಬಹು ನಿರೀಕ್ಷೆಯ ‘ಕನಸಿನ ಮನೆ’ ನನಸಾಗಿಯೇ ಬಿಟ್ಟಿತು ಎಂಬ ಸಂತಸ.

ಆದರೆ, ಪ್ರೀತಿಯ ಕರೆ ಮೇರೆಗೆ ಅಥವಾ ಕರೆಯದೇ ಇದ್ದರೂ ಆಗ್ಗಾಗ್ಗೆ ಅವತರಿಸುತ್ತಿದ್ದ ಬಂಧುಗಳು, ಮಿತ್ರರು, ಆ ಮಿತ್ರರ ಅನುಭವಿ ಸ್ನೇಹಿತರು ಮಾತ್ರ ಈ ದಂಪತಿಗಳ ಕನಸಿನ ಮನೆಗೆ ಹೊಸದಾಗಿ ಒಂದೊಂದು ಸಲಹೆ ಸೂಚನೆಗಳನ್ನು ಕೊಡುತ್ತಲೇ ಇದ್ದರು (ಅವು ಅವರ ಮಟ್ಟಿಗೆ ಅತ್ಯುತ್ತಮ ಸಲಹೆಗಳು).

‘ಅರೆ ರಾಯರೇ, ಇಷ್ಟೇ ಮಾಡಿಸಿದ್ದೀರಂತೆ ಅದನ್ನೂ ಮಾಡಿಸಿ. ಬಹಳ ಖರ್ಚೇನೂ ಆಗೋಲ್ಲ....
‘ಮನೆ ಕಟ್ಟೋದು ಜೀವನದಲ್ಲಿ ಒಂದು ಬಾರಿ ಮಾತ್ರ. ಅವಕಾಶ ಕಳೆದುಕೊಂಡರೆ ಮತ್ತೆ ಬರೋದಿಲ್ಲ....
‘ನೋಡಿ ಇಂಥ ಬ್ರಾಂಡ್‌ನ ನಲ್ಲಿಯನ್ನೇ ಬಳಸಿ, ಬಾಗಿಲು ಕಿಟಕಿಗೆ ಹಿತ್ತಾಳೆ ಹಿಂಜಸ್‌, ಬೋಲ್ಟ್‌ಗಳನ್ನೇ ಹಾಕಿಸಿ. ಅರೆ ಬಾತ್‌ರೂಂ ಟಬ್‌ ಇಲ್ದೇ ಇದ್ರೆ ಹೇಗೆ? ಇದೆಂತಾ ಟೈಲ್ಸ್‌ ಸೆಲೆಕ್ಟ್ ಮಾಡಿದ್ದೀರಿ? ಗ್ರಾನೈಟ್‌ ಹಾಕಿಸ್ದೇ ಇದ್ರೆ ಹೇಗೆ? ನೀವೇನು ಹಳೆಕಾಲದವರೇ...

ಹೀಗೆ ಸಲಹೆಗಳ ಸುರಿಮಳೆಯೇ ಆಗುತ್ತಿತ್ತು. ಆದರೆ, ಆ ಸಲಹೆಗಳು ಮಾತ್ರ ಕನಸಿನ ಮನೆಯ ಗತಿಯನ್ನೇ ಬದಲಿಸಿಬಿಟ್ಟವು. ಪುಕ್ಕಟೆಯಾಗಿ ಸಿಕ್ಕ ಸಲಹೆಗಳನ್ನೆಲ್ಲಾ ಶಿರಸಾವಹಿಸಿ ಪಾಲಿಸಿದ ದಂಪತಿಗೆ, ಅವರ ಕನಸಿನ ಮನೆಯ ನಿರ್ಮಾಣ ಕೆಲಸ ದಿಕ್ಕು ತಪ್ಪುತ್ತಿರುವ ಅರಿವೇ ಆಗಲಿಲ್ಲ.

ಅದರ ಪರಿಣಾಮ ತಿಳಿಯುವ ವೇಳೆಗೆ ಮನೆ ನಿರ್ಮಾಣಕ್ಕೆಂದೇ ಹೊಟ್ಟೆಬಟ್ಟೆ ಕಟ್ಟಿ ಉಳಿಸಿದ್ದ ಹಣವೆಲ್ಲಾ ಖಾಲಿಯಾಗಿತ್ತು. ಮನೆಯ ಕೆಲಸ ಮುಕ್ಕಾಲುವಾಸಿಯಷ್ಟೆ ಆಗಿತ್ತು. ಉಳಿದ ಭಾಗದ ಕೆಲಸ ಮುಗಿಸಲು ಸಾಲ ಮಾಡಲೇಬೇ­ಕಾದ ಸ್ಥಿತಿ ಬಂದಿತು. ಅಂದುಕೊಂಡಿದ್ದೇ ಒಂದು, ಆಗಿದ್ದೇ ಒಂದು ಎಂಬಂತಾಯಿತು ದಂಪತಿ ಕಥೆ.

ಮತ್ತೆ ಎಂಜಿನಿಯರ್‌ ಬಳಿ ಹೋದರೆ ಅವರು ಹೇಳಿದ್ದಿಷ್ಟು.‘ನೋಡಿ ಮನೆ ನಿಮ್ಮದು, ಅಲ್ಲಿ ವಾಸ ಇರುವುದು ನಿಮ್ಮದೇ ಕುಟುಂಬ. ನಿಮ್ಮ ಕುಟುಂಬ ಸದಸ್ಯರ ಅಗತ್ಯಗಳು, ನಿಮ್ಮ ಆರ್ಥಿಕ ಸಾಮರ್ಥ್ಯದ ಮಿತಿ ಅರಿತುಕೊಂಡು ಅದಕ್ಕೆ ತಕ್ಕಂತೆಯೇ ಮನೆ ನಿರ್ಮಿಸಿಕೊಳ್ಳಬೇಕಿತ್ತು. ನಿಮಗೆ ಯಾವುದು ಅಗತ್ಯವೋ ಅದನ್ನೆಲ್ಲ ಕೇಳಿಯೇ ನಿಮ್ಮಿಷ್ಟದಂತೆಯೇ ಪ್ಲಾನ್ ಹಾಕಿಕೊಟ್ಟಿದ್ದೆ. ಅಗತ್ಯ ಸಾಮಗ್ರಿಗಳ  ಪಟ್ಟಿಯನ್ನೂ ಮಾಡಿಕೊಟ್ಟಿದ್ದೆ. ಈಗ ನೋಡಿದರೆ ನಿಮ್ಮ ಮನೆ ನಿರ್ಮಾಣ ಯೋಜಿಸಿದ್ದಕ್ಕಿಂತ ಬೇರೆಯದೇ ರೀತಿಯಲ್ಲಾಗಿದೆ. ಹಾಗಾಗಿ ಬಜೆಟ್‌ ಮಿತಿಯೂ ಮೀರಿದೆ.

‘ಹತ್ತಾರು ಮಂದಿ ನೂರಾರು ಬಗೆಯ ಸಲಹೆ ನೀಡುತ್ತಾರೆ. ಅದಕ್ಕೆ ಅವರಿಗೆ ಶ್ರಮವೇನೂ ಆಗುವುದಿಲ್ಲ. ಆದರೆ ಅಂತಹ ಸಲಹೆಗಳನ್ನು ಪಾಲಿಸುವ ಮುನ್ನ ನಿಮ್ಮ ಮಿತಿ, ಅಗತ್ಯಗಳನ್ನು ಅರಿಯಬೇಕು. ಇಲ್ಲವಾದರೆ ವೆಚ್ಚ ಹೆಚ್ಚುತ್ತದೆ. ಅಲ್ಲದೇ ಕೊನೆಗೆ ಅದು ನಿಮ್ಮಿಷ್ಟದ ಮನೆಯಂತಾಗದೆ ಇನ್ನಾರದೋ ಇಷ್ಟದ ಕಟ್ಟಡವಾಗಿರುತ್ತದೆ.. ಎಂದು ಎಂಜಿನಿಯರ್‌ ಮಾತು ಮುಗಿಸಿದರು.

ಇದು ಈಗಿನ ದುಬಾರಿ ದಿನಗಳಲ್ಲಿ ಮನೆ ಕಟ್ಟಲು ಹೊರಟವರಿಗೆಲ್ಲ ಹೊಂದುವಂತಹ ಕಿವಿಮಾತೇ ಸರಿ.              l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT