ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಕ್ಕಲು ಸರ್ಕಾರ

ನೋಟಿಸ್ ಕೊಡಲೂ ಭಯವೇ: ಹೈಕೋರ್ಟ್ ಛೀಮಾರಿ
Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: 1998, 1999 ಮತ್ತು 2004ರಲ್ಲಿ ನಡೆದ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ (ಎ ಮತ್ತು ಬಿ ವೃಂದ) ನೇಮಕಾತಿ ಪ್ರಕ್ರಿಯೆಯಲ್ಲಿ  ಅವ್ಯವಹಾರ ಆಗಿದೆ ಎಂಬ ಆರೋಪ ಇದ್ದರೂ, ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ ಬುಧವಾರ ಹೈಕೋರ್ಟ್‌ ನಿಂದ ಕಟು ಟೀಕೆಗೆ ಗುರಿಯಾಯಿತು.

‘ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ನಡೆದ ಈ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಾಗ, ಇಲಾಖಾ ತನಿಖೆಯ­ನ್ನಾದರೂ ನಡೆಸಬಹುದಿತ್ತು. ನಿಮಗೆ ಆ ಧೈರ್ಯವೇ ಇಲ್ಲ (you do not have the guts)’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಖಲೀಲ್‌ ಅಹಮದ್‌ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು  ಪೀಠ ನಡೆಸುತ್ತಿದೆ.
‘ಆರೋಪ ಕೇಳಿಬಂದಾಗ, ಷೋಕಾಸ್‌ (ಕಾರಣ ಕೇಳಿ) ನೋಟಿಸ್‌ ಜಾರಿಗೊಳಿಸುವ ಕನಿಷ್ಠ ಧೈರ್ಯವೂ ಸರ್ಕಾರಕ್ಕೆ ಇಲ್ಲವಾಗಿತ್ತೇ? ಅಷ್ಟೊಂದು ಪುಕ್ಕಲೇ?  ಉತ್ತಮ ಆಡಳಿತ ನೀಡುವ ಉದ್ದೇಶ ನಿಮಗೆ ಇದ್ದಿದ್ದರೆ, ಅವ್ಯವಹಾರ ನಡೆಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸ­ಬೇಕಿತ್ತು’ ಎಂದು ಮಾತಿನಿಂದ ಚುಚ್ಚಿತು.

‘ಅವ್ಯವಹಾರ ಕುರಿತು ಕೆಪಿಎಸ್‌ಸಿ­ಯಿಂದ ಕೆಲವು ಮಾಹಿತಿ ಬರಬೇಕಿದೆ’ ಎಂಬ ಉತ್ತರ ಸರ್ಕಾರದ ಕಡೆಯಿಂದ ಬಂದಾಗ, ನ್ಯಾಯಮೂರ್ತಿಗಳು ತೀವ್ರ ಅಸಮಾಧಾನಗೊಂಡರು.

ನೇಮಕಾತಿಯಲ್ಲಿ ನಡೆದ ಅವ್ಯವಹಾರ ಕುರಿತು ಸಿಐಡಿ ವರದಿ ಸಲ್ಲಿಸಿದೆ. ಅದರ ಆಧಾರದಲ್ಲಿ ಸರ್ಕಾರ ಯಾವ ಕ್ರಮ ಜರುಗಿಸಿದೆ? ಅಕ್ರಮ ನಡೆಸಿದವರ ವಿರುದ್ಧ ಕ್ರಮ ಜರುಗಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ಜನರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ  ಎಂದು  ಸರ್ಕಾರ ಮತ್ತು ಆಯೋಗಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.

‘ನಿಮ್ಮ ಮನಸ್ಸಿನಲ್ಲೇನಿದೆ?’: ಈ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕ್ರಮ ಜರುಗಿಸುವ ಮನಸ್ಸು ಸರ್ಕಾರಕ್ಕೆ ಇದೆಯೇ? ಅಥವಾ ಈ ಪ್ರಕರಣ ವನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗುವ ಇರಾದೆ ಹೊಂದಿದೆಯೇ? ಅಕ್ರಮ ಮಾರ್ಗದಲ್ಲಿ ಸರ್ಕಾರಿ ಸೇವೆಗೆ ಪ್ರವೇಶ ಪಡೆದಿರುವವರನ್ನು ಮುಂದು­ವರಿ­ಸಿಕೊಂಡು ಹೋಗುವುದು ಎಷ್ಟರ ಮಟ್ಟಿಗೆ ಸರಿ? ಒಂದಲ್ಲ ಒಂದು ಕಾರಣ ನೀಡಿ, ಈ ಪ್ರಕರಣವನ್ನು ಮುಂದುವರಿ­ಸಿ ಕೊಂಡು ಬರಲಾಗಿದೆ. ಸರ್ಕಾರದ ಮನಸ್ಸಿನಲ್ಲೇನಿದೆ ಎಂಬುದನ್ನು ಮೊದಲು ತಿಳಿಸಿ ಎಂದು ಪೀಠ ವಕೀಲರಿಗೆ ಹೇಳಿತು.

‘ಆಯೋಗದ ಕೆಲಸ’: ವಿಚಾರಣೆಗೆ ಹಾಜರಾಗಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಪ್ರಧಾನ ಕಾರ್ಯದರ್ಶಿ ಸಂಜೀವ್‌ ಕುಮಾರ್‌, ‘ಸಿಐಡಿ ವರದಿ ಆಧರಿಸಿ, ಆಯೋ ಗವು 1998, 1999 ಮತ್ತು 2004ರ ನೇಮ ಕಾತಿ ಪಟ್ಟಿಯನ್ನು ಪುನಃ ಸಿದ್ಧಪಡಿಸಬೇಕು. ಅಂದು ನಡೆದಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಪಡೆದಿದ್ದ ಅಂಕಗಳನ್ನು ಪುನಃ ಲೆಕ್ಕ ಹಾಕಬೇಕು’ ಎಂದು ವಿವರಿಸಿದರು.

‘ಅವ್ಯವಹಾರ ನಡೆದಿರುವುದು ಸಾಬೀತಾದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸ ಬೇಕು ಎಂಬುದು ಸರ್ಕಾರದ ನಿಲುವು. ಆಯೋಗವು ನೇಮಕಾತಿ ಪಟ್ಟಿಯನ್ನು ಪುನಃ ಸಿದ್ಧಪಡಿಸಿದ ನಂತರ, ಈಗಿರುವ ಕೆಲವು ಅಧಿಕಾರಿಗಳು ಕರ್ತ ವ್ಯದಿಂದ ಹೊರ ಹೋಗಬಹುದು, ಇನ್ನು ಕೆಲ ವರು ಕರ್ತವ್ಯಕ್ಕೆ ಹೊಸದಾಗಿ ಸೇರ್ಪಡೆಗೊಳ್ಳ­ಬಹುದು’ ಎಂದು ಕುಮಾರ್‌ ವಿವರಣೆ ನೀಡಿದರು.

‘ನೇಮಕಾತಿಯ ಹೊಸ ಪಟ್ಟಿ­ಯೊಂದನ್ನು ಸಿದ್ಧ ಪಡಿಸಲು ಪ್ರಯತ್ನ ನಡೆದಿದೆಯೇ?’ ಎಂದು ಪೀಠ ಪ್ರಶ್ನಿಸಿದಾಗ, ‘ಹೌದು‘ ಎಂಬ ಉತ್ತರ ಕುಮಾರ್‌ ಅವರಿಂದ ಬಂತು. ಒಂದು ಹಂತದಲ್ಲಿ, ‘ಮೇಲ್ನೋಟಕ್ಕೆ ಇದು ನೇಮಕಾತಿ ಪ್ರಕ್ರಿಯೆಯಂತೆ ಕಂಡು ಬರುತ್ತಿಲ್ಲ. ಇಲ್ಲಿ ನೇಮಕಾತಿಗಿಂತ ಹೆಚ್ಚಾಗಿ, ಕೆಲವರನ್ನು ಆರಿಸಿ ಕೆಲಸ ನೀಡಿದಂತೆ ಕಾಣುತ್ತಿದೆ‘ ಎಂದೂ ಪೀಠ ಹೇಳಿತು.

ಸರ್ಕಾರ, ಕೆಪಿಎಸ್‌ಸಿ ವಿರುದ್ಧ ಬೆರಳು ತೋರುತ್ತಿದೆ. ಆದರೆ ಅವ್ಯವಹಾರದ ಕುರಿತು ಸಿಐಡಿ ನೀಡಿರುವ ವರದಿಯನ್ನು ಅನುಷ್ಠಾನಕ್ಕೆ ತರಲು ಅದು ಮನಸ್ಸು ಮಾಡುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರು ಆರೋಪಿಸಿದರು. ಸರ್ಕಾರಕ್ಕೆ ನೀಡಲು ಉದ್ದೇಶಿಸಿರುವ ಎಲ್ಲ ದಾಖಲೆಗಳನ್ನು ತನಗೂ ಸಲ್ಲಿಸುವಂತೆ ‘ಕೆಪಿಎಸ್‌ಸಿ’ಗೆ ತಾಕೀತು ಮಾಡಿದ ಪೀಠ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ಅವರೇನು ಮೇಲಿನವರೇ...
‘ಕೆಪಿಎಸ್‌ಸಿ’ ಅಂದರೆ ಯಾರು? ಅವರು ಪ್ರಜೆಗಳಿಗೆ ಮತ್ತು ಸರ್ಕಾರಕ್ಕೆ ಉತ್ತರದಾಯಿ ಅಲ್ಲವೇ? ಅವರೇನು ಎಲ್ಲರಿ ಗಿಂತಲೂ ಮೇಲಿನ ಸ್ಥಾನದಲ್ಲಿ ಇರುವವರೇ? ಸರ್ಕಾರ ಯಾರನ್ನು ರಕ್ಷಿಸಲು ಹೊರಟಿದೆ? ಯಾರಿಗೆ ಹೆದರಿಕೊಂಡು ಕುಳಿತಿದೆ?
-ಮುಖ್ಯ ನ್ಯಾಯಮೂರ್ತಿ ವಘೇಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT