ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಗಸಟ್ಟೆ ಸಿ.ಡಿ ಕಣ್ರಪ್ಪೋ

Last Updated 24 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಸಂಜನಾ 

ಪೈರಸಿ, ಪೈರಸಿ... ಅಂತ ಇಡೀ ಚಿತ್ರರಂಗವೇ ಕಣ್‌ಕಣ್ ಬಿಟ್ಕೊಂಡು ಕೂತಿರೋ ಹೊತ್ತಿನಲ್ಲಿ ‘ಐ ಆ್ಯಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ’ ಚಿತ್ರತಂಡ ಚಿತ್ರದ ಹಾಡುಗಳ ಸಿ.ಡಿಯನ್ನು  ಉಚಿತವಾಗಿ ಮನೆಮನೆಗೆ ತಲುಪಿಸಲು ತಯಾರಾಗಿದೆ. ಸಿ.ಡಿ ಮಾರ್ಕೆಟ್ ಮಾಡಿ ಅಂತ ಆಡಿಯೋ ಕಂಪೆನಿಗಳಿಗೆ ಬರೋಬ್ಬರಿ ಒಂದೂವರೆ ತಿಂಗಳು ಎಡತಾಕಿದರೂ, ಯಾರೊಬ್ರೂ ಕ್ಯಾರೆ ಅನ್ನಲಿಲ್ಲವಂತೆ.


‘ಎಲ್ಲಾ ಆಡಿಯೋ ಕಂಪೆನಿಗಳಿಗೂ ಅಲೆದಾಡಿದ್ವಿ. ಸಿ.ಡಿಯಲ್ಲಿರೋ ಹಾಡು ಕೇಳೋದು ಹೋಗ್ಲಿ ನಮ್ಮ ಮಾತುಗಳನ್ನೂ ಕಂಪೆನಿಯವರು ಸಹನೆಯಿಂದ ಕೇಳಿಸಿಕೊಳ್ಳಲಿಲ್ಲ. ಪ್ರಿಂಟ್ ಹಾಕ್ಸಿರೋ ಸಿ.ಡಿಗಳೆಲ್ಲಾ ಹಾಗೇ ಉಳೀತಿವೆ. ಮಾರ್ಕೆಟ್ ವ್ಯಾಲ್ಯೂ ಇಲ್ಲ... ಅಂತ ಪೈರಸಿ ನೆಪ ಹೇಳಿ ವಾಪಸ್ ಕಳಿಸಿಬಿಟ್ಟರು. ಆದ್ದರಿಂದ ‘ಕಿಲ್ ಪೈರಸಿ, ಸೇವ್ ಇಂಡಸ್ಟ್ರಿ’ ಘೋಷವಾಕ್ಯದೊಂದಿಗೆ 2 ವ್ಯಾನ್‌ಗಳಲ್ಲಿ ಎಲ್ಲಾ ಕಾಲೇಜು, ಆಟೋ ಸ್ಟ್ಯಾಂಡ್‌ಗಳನ್ನು ಸುತ್ತಿ ನೃತ್ಯ ಪ್ರದರ್ಶನದೊಂದಿಗೆ ಸಿ.ಡಿಗಳನ್ನು ಫ್ರೀಯಾಗಿ ಹಂಚತೀವಿ’ ಮೊದಲ ಬಾರಿಗೆ ನಿರ್ದೇಶನದ ಅಖಾಡಾಕ್ಕೆ ಇಳಿದ ರವೀಂದ್ರ ಅವರ ಬೇಸರದ ಮಾತಿದು.

ಪ್ರೇಮ್

ಬಹುಶಃ ಚಿತ್ರಕ್ಕಿಂತ ಜಾಸ್ತಿ ಬಂಡವಾಳ ಸಿ.ಡಿ. ವಿತರಣೆಗೇ ಬೇಕಾಗಬಹುದು ಅಂದ್ರು ರವೀಂದ್ರ. ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಕೂಡ ಭಾಳಾನೇ ಬೇಜಾರಿನಿಂದ ‘ಇಂಡಸ್ಟ್ರಿಯಲ್ಲಿ ಯಾಕೆ ಹೀಗಾಗ್ತಿದೆ ಅಂತಾನೇ ಗೊತ್ತಾಗ್ತಿಲ್ಲ. ಹಾಡುಗಳು ಚೆನ್ನಾಗೇ ಇವೆ. ಕೇಳಿದಾಗ ಅಷ್ಟು ಇಷ್ಟ ಆಗದಿರಬಹುದು. ನೋಡಿದಾಗ ಮಾತ್ರ ಖಂಡಿತ ಇಷ್ಟ ಆಗತ್ವೆ. ಮತ್ತೆ... ಭಾಗಶಃ ಕನ್ನಡದ ಹಿನ್ನೆಲೆ ಗಾಯಕರೇ ಹಾಡಿರೋದು ಈ ಚಿತ್ರದ ವಿಶೇಷ’ ಅಂತ ಬಲವಂತವಾಗಿ ನಗು ತಂದುಕೊಂಡರು.

ರವೀಂದ್ರ

ಕೂತಲ್ಲೇ ನಿರಂತರ... ನಗೆ ಅರಳಿಸುತ್ತಿದ್ದ ನಟಿ ಸಂಜನಾಳ ಕೈಗೆ ಮೈಕ್ ಬಂದದ್ದೇ ತಡ ದುಪ್ಪಟ್ಟಾಯಿತು ನಗು! ‘ನಾನು ಹೋಗೊ ಜಿಮ್‌ಗೆ ರವೀಂದ್ರ ಕೂಡ ಬರ್ತಿದ್ರು. ಒಂದಿನ ಸ್ಟೈಲ್ ಆಗಿ ಬಂದು ನೀವು ಆ್ಯಕ್ಟ್ರೆಸ್ ಸಂಜನಾ ತಾನೆ? ನನ್ನ ಸಿನಿಮಾಗೆ ಆ್ಯಕ್ಟ್ ಮಾಡ್ತೀರಾ? ಅಂತ ಕೇಳಿದ್ರು. ನಾನು ಓಕೆ ಅಂದ್ಬಿಟ್ಟೆ. ಇನ್ಮೇಲೆ ನಾನು ಬೇರೆ ಬೇರೆ ಜಿಮ್‌ಗೆ ಹೋಗ್ತಿದ್ರೆ ಮತ್ತಷ್ಟು ಆಫರ್ಸ್ ಬರಬಹುದೇನೋ.. ಐ ಆ್ಯಮ್ ಜಸ್ಟ್ ಜೋಕಿಂಗ್’ ಅಂತ ಮತ್ತಷ್ಟು ಚೈತನ್ಯವದನರಾಗಿ ರವೀಂದ್ರಗೆ ಮೈಕು ವರ್ಗಾಯಿಸಿದರು.

ಚಿತ್ರದ ನಾಯಕಿ, ಮುಂಬೈ ಬೆಡಗಿ ಕರಿಷ್ಮಾ ತನ್ನಾ ಕೆಲದಿನಗಳ ಹಿಂದೆ ಪತ್ರಿಕಾಗೋಷ್ಠಿ ಕರೆದು ತನಗೆ ಅನ್ಯಾಯವಾಗಿದೆ. ಮೊದಲು ನಾಯಕಿ ಅಂದವರು ಈಗ ಬೇರೆ ರಾಗ ಹಾಡುತ್ತಿದ್ದಾರೆ, ಈ ಬಗ್ಗೆ ಕೇಸ್ ಫೈಲ್ ಮಾಡ್ತೀನಿ ಎಂದೆಲ್ಲಾ ಕಣ್ಣಗಲಿಸಿ ಹೋಗಿದ್ದಳು. ಇದಕ್ಕೆ ಪ್ರತಿಕ್ರಿಯಿಸದ ರವೀಂದ್ರ ‘ಸಿನಿಮಾ ನಾಯಕಿ ಕರಿಷ್ಮಾನೇ. ಆದರೆ ಕಥಾ ನಾಯಕಿ ಬೇರೆ. ಸಿನಿಮಾ ರಿಲೀಸ್ ಆದಮೇಲೆ ಜನರೇ ನಿಜವಾದ ನಾಯಕಿ ಯಾರು ಅಂತ ನಿರ್ಧರಿಸ್ತಾರೆ. ಕರೀಷ್ಮಾ ದುಡುಕಿ ಪತ್ರಿಕೆಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಈಗಲೂ ಅವರೇ ಸಿನಿಮಾದ ನಾಯಕಿ. ಸಂಜನಾ ಆ್ಯಂಕರ್ ರೋಲ್ ಮಾಡ್ತಿದಾರೆ’.

ಅನೂಪ್

‘ಈ ಚಿತ್ರದಲ್ಲಿ ಖಂಡಿತ ಬೆತ್ತಲೆ ಸೀನ್ ಇಲ್ಲ. ಆ ಹುಡುಗಿಗೆ ಯಾವುದೇ ರೀತಿಯಲ್ಲೂ ಮೋಸ ಮಾಡಿಲ್ಲ. ಚಿತ್ರದ ಮೊದಲ ಪ್ರೆಸ್ ಮೀಟ್‌ಗೆ ಕರೀಷ್ಮಾಗೆ ಆಹ್ವಾನಿಸಲು ಫೋನಾಯಿಸಿದಾಗ ಅವರು ರಿಸೀವ್ ಮಾಡಲಿಲ್ಲ. ಸುಮಾರು ಹತ್ತು ಸಲ ಕಾಲ್ ಮಾಡಿದ್ದೆ. ಆದರೆ ಅವರು ಶಾರುಖ್ ಜೊತೆ ಅರ್ಜೈಂಟೀನಾದಲ್ಲಿ ಶೋ ಒಂದರಲ್ಲಿ ಪಾಲ್ಗೊಂಡಿದ್ದರಂತೆ. ಆದರೆ ಅನ್‌ನೋನ್ ಕಾಲ್ ಅಂತ ತೋರಿಸಿದ್ದರಿಂದ ಅವರು ರಿಸೀವ್ ಮಾಡಿರಲಿಲ್ಲವಂತೆ’ ಎಂದು ರವೀಂದ್ರ ಮಾತು ಮುಗಿಸುವ ಹೊತ್ತಿಗೆ ಮತ್ತೆ ಸಂಜನಾ ರಿಎಂಟ್ರಿ... 

‘ಆ್ಯಂಕರ್ ಅಂದ್ರೆ ಟಿವಿ ನಿರೂಪಕಿ ಅಲ್ಲ. ಕಥೆಯನ್ನು ಮುಂದುವರಿಸಿಕೊಂಡು ಹೋಗುವ ಪಾತ್ರ’ ಹೀಗೆ ಸಮಜಾಯಿಷಿ ಕೊಡಲು ಬಂದರು. ‘ಹಾಗಿದ್ರೆ ನಿಮ್ಮ ಪಾತ್ರ ಏನು, ನೀವು ಹೀರೋಯಿನ್ ಅಲ್ವಾ? ಅಂತ ಪತ್ರಕರ್ತರು ಪ್ರಶ್ನೆ ಬೀಸಿದರು. ಆಗ ಸಂಜನಾ, ‘ಯಾರ್ಯಾರು ಏನೇನು ಅಂತ ಚಿತ್ರ ಬಂದಮೇಲೆ ಪ್ರೂವ್ ಆಗತ್ತೆ. ನಾನು ಹೀರೋಯಿನ್ ಅಲ್ಲ ಅಂತ ಇನ್‌ಸೆಕ್ಯೂರ್ ಫೀಲ್ ಮಾಡ್ತಿಲ್ಲ. ಚಿತ್ರ ನೋಡಿ... ಎಲ್ಲಾ ಸಸ್ಪೆನ್ಸ್’ ಅಂತ ಮತ್ತೊಮ್ಮೆ ‘ಜೋಕ್’ ಕಟ್ ಮಾಡಿದ್ರು. 

ಆಗ ರವೀಂದ್ರ, ‘ಮೂರು ಹುಡುಗಿಯರು ಮೂರು ಹುಡುಗರು ಒಟ್ಟು ಆರು ಜನ ಆ್ಯಂಕರ್‌ಗಳಿದಾರೆ. ಆ್ಯಂಕರ್ ಅಂದ್ರೆ ಸೂತ್ರಧಾರಿಗಳು. ಕಥೆಯನ್ನು ಮುಂದುವರಿಸಿಕೊಂಡು ಹೋಗುವವರು ಅಂತ ಅರ್ಥ’ ಹೀಗೆ ಎಲ್ಲವನ್ನೂ ಅರ್ಥ ಮಾಡಿಸಲು ಪರದಾಡಿಬಿಟ್ಟರು.

ಆಮೇಲೆ ಮುಂಬೈನ ಅಮೃತಾ ಛಾಬ್ರಿಯಾ, ಹಾಡಿಗೆ ಹೆಜ್ಜೆ ಹಾಕಲು ಸಹಕಲಾವಿದರೊಂದಿಗೆ ವೇದಿಕೆಗೆ ಬಂದು ಪೊಸಿಷನ್‌ನಲ್ಲಿ ನಿಂತುಕೊಂಡರು. ಆ ಹೊತ್ತಿಗೆ ಸಂಜನಾ ವೇದಿಕೆಯಿಂದ ಕೆಳಗಿಳಿದು ವೇದಿಕೆಗೆ ಅಭಿಮುಖವಾಗಿ ಕುಳಿತರು. ತಾದಾತ್ಮ್ಯದಿಂದ ನೃತ್ಯ ಪ್ರದರ್ಶನ ನೀಡಲು ಸಜ್ಜಾಗಿದ್ದ ಆ ಕಲಾವಿದರ ಹೆಸರು ಹೇಳಿ ‘ಏಯ್... ಕಮಾನ್, ಹೌ ಆರ್ ಯೂ..’ ಅಂತ ಸಣ್ಣ ಧ್ವನಿಯಲ್ಲಿ ಛೇಡಿಸಲು ತೊಡಗಬೇಕೆ ಸಂಜನಾ ಮೇಡಮ್! ಯಾಕ್ ಹಿಂಗಾಡ್ತಾರೋ ಅಂತ ಕಣ್ಣಲ್ಲೇ ಅಂದುಕೊಂಡರು ಅಲ್ಲಿದ್ದವರೆಲ್ಲ.

ಇನ್ನೊಂದು ನೃತ್ಯವಿದೆ. ಯಾವ ನೃತ್ಯವನ್ನು ಸಿ.ಡಿ ಹಂಚುವ ಕಾರ್ಯಕ್ರಮಕ್ಕೆ ಬಳಸಿಕೊಳ್ಳಬೇಕು ಹೇಳಿ ಅಂತ ರವೀಂದ್ರ ಪತ್ರಕರ್ತರಿಗೆ ದುಂಬಾಲು ಬಿದ್ದರು. ಆದರೆ ಕಲಾವಿದರು ಎರಡು ಹೆಜ್ಜೆ ಹಾಕೋ ಹೊತ್ತಿಗೆ ಮ್ಯೂಸಿಕ್ ಆಫ್! ಒಂದಲ್ಲ ಎರಡಲ್ಲ ಹೀಗೆ ಏಳೆಂಟು ಸಲ ಆಫ್-ಆನ್... ಚಿತ್ರದ ನಾಯಕ ಪ್ರೇಮ್ ಮಾತ್ರ ಪತ್ರಿಕಾಗೋಷ್ಠಿ ಉದ್ದಕ್ಕೂ ಕೈಕಟ್ಟಿಕೊಂಡು ಎಷ್ಟು ಬೇಕೋ ಅಷ್ಟು ಮಾತನಾಡಿ ಹಸನ್ಮುಖರಾಗಿ ಕುಳಿತುಬಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT