ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಾಣಿಗಳ ಆಕರ್ಷಕ ವಿಜ್ಞಾನ ವಸ್ತುಪ್ರದರ್ಶನ

Last Updated 9 ಜುಲೈ 2012, 5:20 IST
ಅಕ್ಷರ ಗಾತ್ರ

ರಾಮನಗರ: ಪರ್ಯಾಯ ಇಂಧನ ಮೂಲಗಳಾದ ಸೌರಶಕ್ತಿ, ಪವನ ಶಕ್ತಿ ಬಳಸಿಕೊಂಡು ಈಗಿನ ವಿದ್ಯುತ್ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು; ನೀರಿನ ಮಿತ ಬಳಕೆ ಮತ್ತು ಮಳೆ ನೀರು ಸಂಗ್ರಹದ ವಿಧಾನ ಎಷ್ಟು ಅಗತ್ಯ; ಹನಿ ನೀರಾವರಿಯ ಮಹತ್ವ; ಜಾಗತಿಕ ತಾಪಮಾನ ಹೆಚ್ಚಳದಿಂದ ಆಗುತ್ತಿರುವ ಅನಾಹುತಗಳಿಂದ ಹಿಡಿದು ಯಂತ್ರ ಮಾನವ (ರೋಬೋಟ್) ಮಾದರಿಯನ್ನು ಸೃಷ್ಟಿಸುವ ಮೂಲಕ ಜಿಲ್ಲೆಯ ಪುಟಾಣಿಗಳು ವಿಜ್ಞಾನ ವಿಷಯದ ಬಗೆಗಿನ ತಮ್ಮ ಆಸಕ್ತಿ ಹಾಗೂ ಪ್ರತಿಭೆಯನ್ನು ಹೊರಹಾಕಿದ್ದಾರೆ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಆಶ್ರಯದಲ್ಲಿ ನಗರದ ಬಿಎಸ್‌ವಿಪಿ ಮತ್ತು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಮತ್ತು ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪುಟಾಣಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ಆರನೇ ತರಗತಿಯಿಂದ 10ನೇ ತರಗತಿವರೆಗೂ ವ್ಯಾಸಂಗ ಮಾಡುತ್ತಿರುವ 1256 ವಿದ್ಯಾರ್ಥಿಗಳು ಈ `ಇನ್‌ಸ್ಪೈರ್ ಅವಾರ್ಡ್~ಗೆ ಆಯ್ಕೆಯಾಗಿದ್ದು, ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಮೂಲ ವಿಜ್ಞಾನ ಮತ್ತು ವಿಜ್ಞಾನ ಸಂಶೋಧನೆಯಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸುವ ಮಹತ್ವದ ಉದ್ದೇಶದಿಂದ ಈ ರೀತಿಯ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ರೋಬೋಟ್ ಸಿದ್ಧ: ಕನಕಪುರದ `ಎಕ್ಸ್ ಮುನಿಸಿಪಲ್~ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಜಯಂತ್ ಗೌಡ ಮತ್ತು ಮೊಹಮದ್ ಎಂಬುವರು ಸಿದ್ಧಪಡಿಸಿರುವ ಯಂತ್ರ ಮಾನವ (ರೋಬೋಟ್) ಬಹುತೇಕರನ್ನು ಆಕರ್ಷಿಸಿತು. ಸ್ಥಳೀಯವಾಗಿಯೇ ದೊರೆಯುವ ವಸ್ತುಗಳನ್ನು ಬಳಸಿ, ಈ ವಿದ್ಯಾರ್ಥಿಗಳು ರೋಬೋಟ್ ಸಿದ್ಧಪಡಿಸಿದ್ದಾರೆ. ಇದಕ್ಕಾಗಿ ವಾಷಿಂಗ್ ಮಿಷನ್‌ನ ಮೋಟಾರ್, ಸೈಕಲ್ ಚಕ್ರ ಬಳಸಿದ್ದಾರೆ.

ಅಲ್ಲದೆ ರಿಮೋಟ್ ಕಂಟ್ರೋಲ್ ನೆರವಿನಿಂದ ರೋಬೋಟ್ ಅನ್ನು ನಿಯಂತ್ರಿಸುತ್ತಾರೆ. ಇದರ ಕೈಗಳು ಮೇಲಿಂದ ಕೆಳಗೆ ಮತ್ತು ಕೆಳಗಿಂದ ಮೇಲೆ ಚಲಿಸುತ್ತವೆ. ಅಲ್ಲದೆ ತಲೆ 360 ಡಿಗ್ರಿಯೂ ಸುತ್ತುತ್ತದೆ. ರಿಮೋಟ್ ನೆರವಿನಿಂದ ಹಿಂದಕ್ಕೆ ಮುಂದಕ್ಕೆ ಇದು ಚಲಿಸುತ್ತದೆ.

ಹಲವಾರು ವಿದ್ಯಾರ್ಥಿಗಳು ಪರ್ಯಾಯ ಇಂಧನ ಮೂಲದ ಬಗ್ಗೆ ತಮ್ಮ ಸಂಶೋಧನಾ ಮಾದರಿಗಳನ್ನು ಸಿದ್ಧಪಡಿಸಿದ್ದಾರೆ. ಸೌರಶಕ್ತಿ, ಪವನ ಶಕ್ತಿಯಿಂದ ಹೇಗೆ ವಿದ್ಯುತ್ ತಯಾರಿಸಬಹುದು. ಇದರಿಂದ ಈಗಿನ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎಂಬುದನ್ನು ಪ್ರಸ್ತುತಪಡಿಸಿದ್ದಾರೆ.

ಕೆಲ ವಿದ್ಯಾರ್ಥಿಗಳು ಖಗೋಳದ ಬಗ್ಗೆ ಒತ್ತು ನೀಡಿ ಮಾದರಿ ಸಿದ್ಧಪಡಿಸಿದ್ದರು. ಸೌರ ಮಂಡಲದಲ್ಲಿನ ವಿವಿಧ ಗ್ರಹಗಳ ಚಲನೆ, ಸೂರ್ಯ ಗ್ರಹಣ, ಚಂದ್ರ ಗ್ರಹಣದ ಬಗ್ಗೆ, ರಾಕೆಟ್‌ಗಳು, ಉಪಗ್ರಹ, ದೇಶದ ವಿವಿಧ ಸಂಶೋಧನಾ ಕೇಂದ್ರಗಳ ಬಗ್ಗೆ ಮಾಹಿತಿಯುಳ್ಳ ಮಾದರಿಗಳನ್ನು ತಯಾರಿಸಿದ್ದಾರೆ.

ಬೆಳಕಿನ ವಕ್ರೀಭವನ, ಗಾಜು ಮತ್ತು ನೀರಿನ ವಕ್ರೀಭವನದ ಸೂಚ್ಯಂಕ, ದೂರ ಸಂಪರ್ಕ ವ್ಯವಸ್ಥೆ, ಜಲ ವಿದ್ಯುತ್ ಉತ್ಪಾದನೆ, ಉಷ್ಣ ವಿದ್ಯುತ್ ಉತ್ಪಾದನೆ, ಆಧುನಿಕ ಕೃಷಿ, ಪರಿಸರ ಮಾಲಿನ್ಯ ಮುಕ್ತ ಗ್ರಾಮದ ಬಗ್ಗೆಯೂ ಮಾದರಿಗಳನ್ನು ಸಿದ್ಧಪಡಿಸಿರುವ ಮಾದರಿಗಳನ್ನು  ಪ್ರದರ್ಶನದಲ್ಲಿ ಇಡಲಾಗಿತ್ತು.

ನೀರಿನ ಕೊರತೆ,  ಆಮ್ಲ ಮಳೆ ಮೊದಲಾದವುಗಳ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟ ಮತ್ತು ವಿಭಿನ್ನ ಮಾದರಿಗಳನ್ನು ಸಿದ್ಧಪಡಿಸಿ ಪುಟಾಣಿ ವಿಜ್ಞಾನಿಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT