ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಾಣಿಗಳ ರೋಬೊ ಪವಾಡ

Last Updated 26 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನಿಮ್ಮ ಮಕ್ಕಳಿನ್ನು ಪೇಪರ್‌ನಲ್ಲಿ ದೋಣಿಯನ್ನೋ, ಕುಪ್ಪಳಿಸುವ ಕಪ್ಪೆಯನ್ನೋ ಮಾಡುತ್ತಿದ್ದರೆ ಇನ್ನೂ 20ನೇ ಶತಮಾನದ ಟ್ರೆಂಡ್‌ನಲ್ಲೇ ಇದ್ದಾರೆ ಎಂದು ಭಾವಿಸಬಹುದು.

ಕಾರಣ ಈಗಿನ ಕಾಲದ ಮಕ್ಕಳ ಚಿಂತನೆಗಳು ಉನ್ನತ ಮಟ್ಟದಲ್ಲಿದೆ. ಯಲಹಂಕದ ಕೆನಡಿಯನ್ ಶಾಲೆಯಲ್ಲಿ ಭಾನುವಾರ ನಡೆದ 6ನೇ ರೋಬೊಟ್ ಒಲಿಂಪಿಯಾಡ್ ಇದಕ್ಕೊಂದು ಉತ್ತಮ ನಿದರ್ಶನ.

ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸದೊಂದು ಭಾಷ್ಯ ಬರೆದಿರುವ ಈ ಮಕ್ಕಳು ಮಾಡಿರುವ ಪುಟಾಣಿ ರೋಬೊಗಳ ಪವಾಡ ನೋಡಿದರೆ ನಿಜಕ್ಕೂ ಅಚ್ಚರಿ ಮೂಡುತ್ತದೆ.

ಎಳೆಯ ವಯಸ್ಸಿನಲ್ಲೇ ನೀರುಕುಡಿದಂತೆ ತಂತ್ರಾಂಶಗಳನ್ನು ಬಳಸುವ ಈ ಮಕ್ಕಳ ಪುಟ್ಟ ಮೆದುಳಲ್ಲಿ ಅಡಗಿರುವ ದೊಡ್ಡ ಆಲೋಚನೆಗಳನ್ನು ಅನಾವರಣಗೊಳಿಸುವ ಈ ರೋಬೊ ಒಲಿಂಪಿಯಾಡ್‌ಗೆ ಸಿಸ್ಕೊ ಸಿಸ್ಟಂ ಸಂಸ್ಥೆಯ ಅಧ್ಯಕ್ಷ ಅನಿಲ್ ಮೆನನ್ ಚಾಲನೆ ನೀಡಿದರು.

12 ಶಾಲೆಗಳ 158 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಂದರಿಂದ ಹತ್ತನೇ ತರಗತಿಯ ವರೆಗೆ ಮೂರು ವಿಭಾಗಗಳನ್ನಾಗಿ ವಿಂಗಡಿಸಿ ಸವಾಲು ಗಳನ್ನು ನೀಡಲಾಗಿತ್ತು.

ಒಂದು ಚೌಕದಿಂದ ಇನ್ನೊಂದು ಚೌಕಕ್ಕೆ ಚೆಂಡನ್ನು ಕೊಂಡೊಯ್ಯುವುದು, ಬಣ್ಣಗಳನ್ನು ಗುರುತಿಸುವ ಮೂಲಕ ತಿರುವು ಪಡೆಯುವುದು, ಮೊಟ್ಟೆಯೊಂದನ್ನು ಹೊತ್ತು ಮೆಟ್ಟಿಲು ಏರುವುದು, ಎದುರಿನಲ್ಲಿರುವ ವಸ್ತುವನ್ನು ಗಮನಿಸಿ ಹಿಂದಕ್ಕೆ ಸರಿಯುವುದು ಇವು ಸ್ಪರ್ಧೆಯ ವಿವಿಧ ಸವಾಲುಗಳು.

ಮೈನ್ ತಂತ್ರಾಂಶದ ಸಹಾಯದಿಂದ ಕಾರ್ಯ ನಿರ್ವಹಿಸುವ ಈ ರೋಬೊಗಳಲ್ಲಿ ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ. ಹಾಗಾಗಿ ಬಣ್ಣಗಳನ್ನು ಗುರುತಿಸುವುದು ಹಾಗೂ ಎದುರು ಬರುವ ವಸ್ತುಗಳನ್ನು ಗುರುತು ಹಿಡಿದು ಹಿಂದಕ್ಕೆ ಸರಿಯುವುದು ಇವಕ್ಕೆ ಸುಲಭ.

`ರೋಬೊಟಿಕ್ ವಿಜ್ಞಾನ ಶಿಕ್ಷಣ ಕೇವಲ ಉನ್ನತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಮಾತ್ರ ಲಭ್ಯ. ಆದರೆ ಅಚ್ಚರಿ ಹುಟ್ಟಿಸುವ ರೋಬೊಗಳ ಚಲನ ವಲನದ ಬಗ್ಗೆ ಅರಿವು ಮೂಡಿಸಲು ರೋಬೊಟಿಕ್ ವಿಜ್ಞಾನ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ತಮ್ಮ ಕ್ಷೇತ್ರವನ್ನು ಆಯ್ದುಕೊಳ್ಳಲು ಅವರಿಗೆ ಉಪಯೋಗವಾಗುತ್ತದೆ.

ದಿನದಲ್ಲಿ ಒಂದು ಗಂಟೆಗಳ ಕಾಲ ಈ ವಿಷಯದ ಬಗ್ಗೆ ತರಗತಿ ನಡೆಯುತ್ತದೆ. ಭಾನುವಾರ ಹಾಗೂ ರಜಾ ದಿನಗಳಲ್ಲಿ ಮೂರು ಗಂಟೆಗಳ ಕಾಲ ವಿಶೇಷ ಉಪನ್ಯಾಸ ಮಾಡಲಾಗುತ್ತದೆ~ ಎಂದು ಶಿಕ್ಷಕಿ ಆಶಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT