ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಾಣಿಗಳಿಗೆ ಬಯಲು ಪಾಠಶಾಲೆ

Last Updated 21 ಏಪ್ರಿಲ್ 2013, 8:08 IST
ಅಕ್ಷರ ಗಾತ್ರ

ಶಿಕ್ಷಣದ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವರ ಉನ್ನತಿಗೆ ಶ್ರಮಿಸಬೇಕು ಎನ್ನುವುದು ಸರ್ಕಾರದ ಉದ್ದೇಶ. ಈ ಯೋಜನೆ ಅನುಷ್ಠಾನ ಹಂತದಲ್ಲಿಯೇ ಸ್ವಲ್ಪ ಏರುಪೇರಾದರೂ ತೊಂದರೆ ಅನುಭವಿಸುವುದು ಮಕ್ಕಳು. ಇನ್ನು ಕೆಲವು ಯೋಜನೆಗಳು ಜಾರಿ ಗೊಳ್ಳುವಾಗ ಎದುರಾಗುವ ಅಡೆತಡೆಗಳಿಂದ ಯಶಸ್ವಿಗೊಳ್ಳದೇ ಅತಂತ್ರ ಸ್ಧಿತಿ ತಲುಪುತ್ತವೆ. ಇದಕ್ಕೊಂದು ಉದಾಹರಣೆ ಕೊಟ್ಟೂರಿನಲ್ಲಿದೆ. ಪಟ್ಟಣದ 6ನೇ ವಾರ್ಡ್‌ನಲ್ಲಿರುವ ಅಂಗನವಾಡಿ ಕೇಂದ್ರವು ಆರಂಭವಾಗಿ ನಾಲ್ಕು ವರ್ಷಗಳಾಗಿವೆ. ಆದರೆ ಇದುವರೆಗೆ ಅದಕ್ಕೆ ಸ್ವಂತ ಕಟ್ಟಡವಿಲ್ಲ. ಪುಟ್ಟ ಮಕ್ಕಳಿಗೆ ಬಯಲೇ ಪಾಠಶಾಲೆ, ಆದೇ ಅವರ ಶೈಕ್ಷಣಿಕ ಪರಿಸರವಾಗಿದೆ.

ಸುಮಾರು 7 ವರ್ಷಗಳ ಹಿಂದೆ ಅಂಗನವಾಡಿ ಕೇಂದ್ರ ಆರಂಭವಾಯಿತು. ಆರಂಭದಲ್ಲಿ ಮೈಲಾರ ಲಿಂಗೇಶ್ವರ ದೇವಸ್ಥಾನ ಮಕ್ಕಳ ಪಾಠದ ಶಾಲೆಯಾಯಿತು. ನಂತರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಮುಂದಾದರು. ಕಟ್ಟಡ ಪುನರ್ ನಿರ್ಮಾಣ ಕಾರ್ಯ ಆರಂಭವಾದ ನಂತರ ಪರ್ಯಾಯ ವ್ಯವಸ್ಥೆ ಆಗಲಿಲ್ಲ. ಸ್ಧಳಾವಕಾಶ ಕೊರತೆಯಾಯಿತು. ಕಟ್ಟಡದ ಕಾರಣಕ್ಕಾಗಿ ಕೇಂದ್ರವನ್ನು ಮುಚ್ಚುವಂತಿಲ್ಲ. ಅದಕ್ಕಾಗಿ ಬನಶಂಕರಿ ದೇವಸ್ಧಾನದ ಪಕ್ಕದ ಪಟ್ಟಣ ಪಂಚಾಯ್ತಿಯ ಕಟ್ಟಡಕ್ಕೆ ಕೇಂದ್ರವನ್ನು ಸ್ಥಳಾಂತರಿಸಲಾಯಿತು.

ಕಟ್ಟಡದ ಬಹುಪಾಲು ಕೊಠಡಿಗಳನ್ನು ಖಾಸಗಿ ಕಾಲೇಜಿನವರು ಪಡೆದಿದ್ದಾರೆ. ಅದರಲ್ಲಿ ಒಂದು ಚಿಕ್ಕ ಕೊಠಡಿಯನ್ನು ಅಂಗನವಾಡಿ ಕೇಂದ್ರಕ್ಕೆ ನೀಡಲಾಯಿತು. ಮಕ್ಕಳಿಗೆ ಶಿಕ್ಷಣ ನೀಡಲು ನೆರವಾಗಬೇಕು ಎನ್ನುವುದು ಪಟ್ಟಣ ಪಂಚಾಯ್ತಿ ಉದ್ದೇಶ ಆಗಿರಬಹುದು. ಆದರೆ ಅದು ಮಕ್ಕಳಿಗೆ ಕುಳಿತುಕೊಳ್ಳಲು ಸಾಧ್ಯವಾಗದಷ್ಟು ಚಿಕ್ಕದಾಗಿತ್ತು. ಪಾಠಕ್ಕಾಗಲಿ, ಮಕ್ಕಳ ಆಟಕ್ಕಾಗಲಿ ಅನುಕೂಲ ಇರಲಿಲ್ಲ. ಶ
ಿಕ್ಷಕಿಯರಿಗೆ ಅಲ್ಲಿ ಪಾಠ ಮಾಡುವುದೇ ಕಷ್ಟವಾಯಿತು. ಅದಕ್ಕಾಗಿ ಮಕ್ಕಳ ಪಾಠ ಶಾಲೆ ಮರದ ಕೆಳಗಿನ ನೆರಳಿನಲ್ಲಿ ಆರಂಭವಾಯಿತು.

ಮರದ ನೆರಳಿನಲ್ಲಿ ಕುಳಿತುಕೊಂಡು ಮಕ್ಕಳಿಗೆ ಪಾಠ ಕೇಳಲು ವಾತಾವರಣ ಅನುಕೂಲಕರವಾಗಿಲ್ಲ. ಮಣ್ಣಿನ ದೂಳು ಗಾಳಿ ಹಾರುತ್ತಿರುತ್ತದೆ. ಪಕ್ಕದಲ್ಲಿಯೇ ಗಬ್ಬುನಾರುವ ಚರಂಡಿ, ತಿಪ್ಪೆಗುಂಡಿಗಳ ರಾಶಿಯ ನಡುವೆ ಹಂದಿ- ನಾಯಿಗಳ ನಿರಂತರ ಓಡಾಟ.

ಅದರ ಸನಿಹದಲ್ಲಿಯೇ ಅಂಗನವಾಡಿಯೆ ಪುಟ್ಟ ಕಂದಮ್ಮಗಳ ಆಟ, ಊಟ, ಪಾಠ ಎಲ್ಲವೂ ನಡೆದಿದೆ. ಮಕ್ಕಳಿಗೆ ಊಟ, ಉಪಾಹಾರ ಸಿದ್ಧಪಡಿಸಲು, ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿಡಲು ಕೊಠಡಿ ವ್ಯವಸ್ಥೆ ಇಲ್ಲ. ಅದಕ್ಕಾಗಿ ಅಂಗನವಾಡಿ ಸಹಾಯಕಿ ತನ್ನ ಮನೆಯಲ್ಲಿ ಇಟ್ಟುಕೊಂಡು ಆಹಾರ ಸಿದ್ಧಪಡಿಸಿಕೊಂಡು ಮಕ್ಕಳಿಗೆ ಊಟಕ್ಕೆ ನೀಡಬೇಕಾಗಿದೆ. ಇನ್ನು ಮಳೆಗಾಲದಲ್ಲಿ ಪರಿಸ್ಥಿತಿ ಇನ್ನೂ ಗಂಭೀರ. ಮಕ್ಕಳಿಗೆ ಕುಳಿತುಕೊಳ್ಳಲು ಅವಕಾಶ ಇಲ್ಲದಂತಾಗಿದೆ. ಆಗ ಪಟ್ಟಣ ಪಂಚಾಯ್ತಿ ಕಟ್ಟಡದಲ್ಲಿ ನಡೆಯುತ್ತಿರುವ ಕಾಲೇಜಿನ ಪ್ರಾಂಗಣದಲ್ಲಿ ಕೆಸರು, ಕೊಳಚೆ ಮೆತ್ತಿಕೊಂಡು ಪಾಠ ಕಲಿಯಬೇಕು.

ಕಲುಷಿತ ವಾತಾವರಣದಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ? ಎಂದು ಅಂಗನವಾಡಿ ಶಿಕ್ಷಕಿ ಅಕ್ಕಮಹಾದೇವಿ, ಸಹಾಯಕಿ ಹನುಮಕ್ಕ ಅವರನ್ನು ಕೇಳಿದರೆ, `ಬದಲಿ ವ್ಯವಸ್ಥೆ ಇಲ್ಲ. ಮಕ್ಕಳಿಗೆ ತೊಂದರೆ ಆಗುತ್ತಿದೆ ಎನ್ನುವುದು ಗೊತ್ತಿದ್ದರೂ ಪರಿಹಾರ ಸಾಧ್ಯವಾಗುತ್ತಿಲ್ಲ. ಮೇಲಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನ ಆಗಿಲ್ಲ. ನಾವು ಅಸಹಾಯಕರು' ಎನ್ನುತ್ತಾರೆ.

ಮಕ್ಕಳಿಗೆ ಶಿಕ್ಷಣದ, ಆ ಮೂಲಕ ಭವಿಷ್ಯದ ಬುನಾದಿ ಎನಿಸಿರುವ ಅಂಗನವಾಡಿ ಕೇಂದ್ರಗಳ ಇಂಥ ಸ್ಥಿತಿಯಲ್ಲಿ ಉದಾತ್ತ, ಉನ್ನತ ನಿರೀಕ್ಷೆ ಅಪೇಕ್ಷಿಸುವುದು ಕಷ್ಟ. ಅಡಿಪಾಯದ ಶಿಕ್ಷಣವೇ ಹೀಗಿದ್ದರೆ ಅವರ ಭವಿಷ್ಯ    ಹೇಗೇ?    ಎನ್ನುವುದು ಗ್ರಾಮದ ಮುಖಂಡರ ಅನಿಸಿಕೆ. ಸರ್ಕಾರ ಶಿಕ್ಷಣಕ್ಕಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತದೆ. ಮಠ,    ಮಂದಿರಗಳಿಗೆ    ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದೆ. ಆದರೆ ಸಣ್ಣ ಮಕ್ಕಳ ಶಿಕ್ಷಣಕ್ಕೆ ಕೊಠಡಿ ಕಟ್ಟಿಸಿಕೊಡಲು ಸಾಧ್ಯವಾಗಿಲ್ಲ     ಎನ್ನುವುದು ಗ್ರಾಮಸ್ಥರ ಆರೋಪ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT