ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟ ಜಿಲ್ಲೆಯ ದಿಟ್ಟ ಮಹಿಳೆಯರು...

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಬದುಕು ಅಡುಗೆ ಮನೆಗೆ ಸೀಮಿತ. ಮಕ್ಕಳನ್ನು ಹೆತ್ತು, ಹೊತ್ತು, ಮನೆ ನೋಡಿಕೊಳ್ಳುವುದಷ್ಟೇ ಆಕೆಯ ಜೀವನ ಎಂಬ ಪರಿಕಲ್ಪನೆಯೇ ಈಗಲೂ ಬಹಳಷ್ಟು ಜನರಲ್ಲಿದೆ. ನಾಲ್ಕು ಗೋಡೆಗಳ ಹೊರಗಿನ ಪ್ರಪಂಚವನ್ನು ನಿಭಾಯಿಸುವ ಶಕ್ತಿಯೂ ತಮ್ಮಲ್ಲಿದೆ ಎಂಬುದನ್ನು ತೋರಿಸಿಕೊಟ್ಟಿರುವ ಮಹಿಳೆಯರ ಯಶೋಗಾಥೆಯೊಂದು ಇಲ್ಲಿದೆ.

ಅದು ಪುಟ್ಟ ಜಿಲ್ಲೆ. ಅತ್ತ ಕೃಷ್ಣೆ, ಇತ್ತ ಭೀಮೆ ಹರಿಯುತ್ತಾರೆ. ಪಕ್ಕದಲ್ಲೇ ಆಂಧ್ರಪ್ರದೇಶ, ಐದು ಸಾವಿರ ಚದುರ ಕಿ.ಮೀ. ವಿಸ್ತೀರ್ಣ, 11 ಲಕ್ಷ ಜನಸಂಖ್ಯೆ, ನಾಲ್ಕು ವಿಧಾನಸಭೆ ಕ್ಷೇತ್ರ. ಮೂರು ತಾಲ್ಲೂಕುಗಳನ್ನು ಹೊಂದಿದ ಕರ್ನಾಟಕದ 30 ನೇ ಜಿಲ್ಲೆಯೇ ಯಾದಗಿರಿ. ಇಲ್ಲಿ ಜಿಲ್ಲೆಯ ದಂಡಾಧಿಕಾರಿಯಿಂದ ಹಿಡಿದು, ಸ್ಥಳೀಯ ಆಡಳಿತದ ಚುಕ್ಕಾಣಿಯೂ ಮಹಿಳೆಯರ ಕೈಯಲ್ಲಿಯೇ ಇದೆ. ಜಿಲ್ಲೆಯ ಆಡಳಿತ ಹಾಗೂ ಚುನಾಯಿತ ವ್ಯವಸ್ಥೆ, ಎರಡರಲ್ಲೂ ಮಹಿಳೆಯರದ್ದೇ ಪ್ರಾಬಲ್ಯ.

`ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು~ ಎಂಬ ನಾಣ್ಣುಡಿಯಂತೆ ಹಿಡಿದ ಕೆಲಸವನ್ನು ಮುಗಿಸುವ ಛಲ ಹೊಂದಿರುವ ಮಹಿಳೆಯರ ಪಡೆಯೇ ಯಾದಗಿರಿ ಜಿಲ್ಲೆಯ ಆಡಳಿತ ವ್ಯವಸ್ಥೆಯ ಅಂಗವಾಗಿದೆ. ಜಿಲ್ಲೆಯ ನೀತಿ ನಿರೂಪಣೆಗಳನ್ನು ಮಾಡಬೇಕಾದ ಚುನಾಯಿತ ವ್ಯವಸ್ಥೆಯಲ್ಲೂ ಮಹಿಳೆಯರದ್ದೇ ಪ್ರಾಬಲ್ಯ.

ಆಡಳಿತ ವ್ಯವಸ್ಥೆ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರದ್ದೇ ಸಿಂಹಪಾಲು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಸೀಲ್ದಾರರು, ಜಿಲ್ಲಾ ಪಂಚಾಯಿತಿ, ನಗರಸಭೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಗಳೆಲ್ಲವೂ ಮಹಿಳೆಯರ ಪಾಲಾಗಿವೆ. ಯಾವುದೇ ಸಭೆ ಇರಲಿ, ಸಮಾರಂಭವಿರಲಿ ವೇದಿಕೆಯಲ್ಲಿ ಮಹಿಳೆಯರ ಪ್ರಭಾವವೇ ಹೆಚ್ಚು. ಜಿಲ್ಲೆಗೆ ಸಂಬಂಧಿಸಿದ ಎಲ್ಲ ಕಾರ್ಯ ಚಟುವಟಿಕೆಗಳಲ್ಲೂ ಮಹಿಳೆಯರದ್ದು ಸಕ್ರಿಯವಾದ ಪಾತ್ರ.
ಜಿಲ್ಲಾಧಿಕಾರಿ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಜಿಲ್ಲೆಗೆ ಬಂದ ಐ.ಎ.ಎಸ್. ಅಧಿಕಾರಿ ಗುರನೀತ್ ತೇಜ್ ಮೆನನ್, ಈಗ ಈ ಪುಟ್ಟ ಜಿಲ್ಲೆಯ ಜಿಲ್ಲಾಧಿಕಾರಿ. 2011 ರ ಮೇ 13 ರಂದು ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು. ಯಾದಗಿರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಗುರನೀತ ತೇಜ್ ಮೆನನ್ ಅವರಿಗೆ ಜಿಲ್ಲೆಯ ಗ್ರಾಮೀಣ ಸಮಸ್ಯೆಗಳ ಬಗ್ಗೆ ಸಾಕಷ್ಟು ಅರಿವಿದೆ. ಜಿಲ್ಲಾಧಿಕಾರಿಗಳಾದ ನಂತರವೂ ಅವರಿಗೆ ಗ್ರಾಮೀಣ ಸಮಸ್ಯೆಗಳ ಬಗ್ಗೆ ಹೆಚ್ಚಿನ ಕಾಳಜಿ. 

ಹೊಸ ಜಿಲ್ಲೆಯಾಗಿ ಎರಡು ವರ್ಷ ಕಳೆದಿದ್ದು, ಹೊಸ ಜಿಲ್ಲೆಯನ್ನು ಕಟ್ಟುವ ಕಾರ್ಯದಲ್ಲಿ ಜಿಲ್ಲಾಧಿಕಾರಿಗಳ ನಿರಂತರ ಶ್ರಮವಿದೆ. ಜಿಲ್ಲೆಯಲ್ಲಿ ಆಡಳಿತಸೌಧ, ಜಿಲ್ಲಾ ಕೇಂದ್ರದ ಅಭಿವೃದ್ಧಿ, ಪ್ರವಾಸೋದ್ಯಮ, ಕೃಷಿ, ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಮಾನ ಆಸಕ್ತಿ ಜಿಲ್ಲಾಧಿಕಾರಿಗಳದ್ದು.

ನಿತ್ಯ ಬರುವ ಹತ್ತಾರು ಮನವಿ, ಪ್ರತಿಭಟನೆ, ಅಹವಾಲುಗಳ ಮಧ್ಯೆ ಜಿಲ್ಲೆಯ ಅಭಿವೃದ್ಧಿಯ ತುಡಿತ ಹೆಚ್ಚುತ್ತಲೇ ಇದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಎರಡು ಹುದ್ದೆಗಳನ್ನು ಒಂದೇ ಬಾರಿಗೆ ನಿಭಾಯಿಸಿದ ಕೀರ್ತಿಯೂ ಇವರದ್ದು.

ಅಪರ ಜಿಲ್ಲಾಧಿಕಾರಿ
ಜಿಲ್ಲಾ ಕೇಂದ್ರ ಯಾದಗಿರಿಯಲ್ಲಿರುವ ಆಡಳಿತ ಸೌಧದಲ್ಲಿ ಖಾಲಿ ಆಗಿದ್ದ ಅಪರ ಜಿಲ್ಲಾಧಿಕಾರಿಗಳ (ಅಡಿಷನಲ್ ಡಿಸಿ) ಸ್ಥಾನ ಈಗ ಭರ್ತಿಯಾಗಿದೆ. ಅಲ್ಲಿಗೆ ಬಂದವರೂ ಮತ್ತೊಬ್ಬ ಮಹಿಳೆ. ಹೆಸರು ಜಹೀರಾ ನಸೀಮ್.

ಮೂರು ತಿಂಗಳ ಹಿಂದಷ್ಟೇ ಯಾದಗಿರಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಜಹೀರಾ ನಸೀಮ್, ಜಿಲ್ಲಾಧಿಕಾರಿಗಳ ಕಚೇರಿಗೆ ಬರುವ ಪ್ರತಿಭಟನೆ, ಮನವಿಗಳ ಮಹಾಪೂರದಿಂದ ಜಿಲ್ಲಾಧಿಕಾರಿಗಳಿಗೆ ಸ್ವಲ್ಪ ನೆಮ್ಮದಿ ನೀಡಿದ್ದಾರೆ. ಮನವಿ ಹೊತ್ತು ಬರುವ ಜನರ ಸಮಸ್ಯೆಗಳನ್ನು ಸಂಯಮದಿಂದಲೇ ಆಲಿಸುವ ಅವರು, ಭರವಸೆಯೊಂದಿಗೆ ಹಿಂದಿರುಗುವಂತೆ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಯಾದಗಿರಿ ಜಿಲ್ಲೆಯ ಪ್ರಥಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡವರು ಐ.ಪಿ.ಎಸ್. ಡಿ. ರೂಪಾ. ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಅವರನ್ನು ಬಂಧಿಸಿ ಈ ಹಿಂದೆ ಸುದ್ದಿ ಮಾಡಿದ್ದವರು ಇವರು. ಧಾರವಾಡ ಜಿಲ್ಲಾ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಆಗಿನ ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಅವರನ್ನು ಹುಬ್ಬಳ್ಳಿಯ ಈದಗಾ ಮೈದಾನದಲ್ಲಿ ಧ್ವಜಾರೋಹಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು. ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಯಾದಗಿರಿ ಜಿಲ್ಲೆಯಲ್ಲಿ ಆಗಾಗ ತಲೆ ಎತ್ತಿದ ನಕ್ಸಲ್ ಚಟುವಟಿಕೆಯನ್ನು ಸಮರ್ಥವಾಗಿ ಹತ್ತಿಕ್ಕಿದ ಶ್ರೇಯಸ್ಸು ಎಸ್ಪಿ ರೂಪಾ ಅವರದ್ದು. ಕೊಲೆ, ಗಲಭೆ, ಚುನಾವಣೆ ಸಂದರ್ಭದ ಸೂಕ್ಷ್ಮ ಸ್ಥಿತಿಗಳು - ಹೀಗೆ ಎಂಥದ್ದೇ ಪರಿಸ್ಥಿತಿ ಇದ್ದರೂ, ಅದನ್ನು ಸಮರ್ಪಕವಾಗಿ ನಿರ್ವಹಿಸಿದವರು ಇವರು.

ತಹಸೀಲ್ದಾರ್
ಯಾದಗಿರಿಯ ತಹಸೀಲ್ದಾರರಾಗಿ ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವವರು ಖಾಜಿ ನಫೀಜಾ ಮುತಾಲಿಬ್. ದಿಟ್ಟ ನಿರ್ಧಾರಗಳ ಮೂಲಕ ತಾಲ್ಲೂಕಿನಲ್ಲಿ ನಡೆಯುವ ಚುನಾವಣೆ, ಜಾತ್ರೆ, ಗಲಭೆಯಂತಹ ವಾತಾವರಣವನ್ನು ನಿಭಾಯಿಸುವಲ್ಲಿ ಹೆಸರು ಮಾಡಿದವರು.

ಇತ್ತೀಚಿನ ಕೆಲ ದಿನಗಳಲ್ಲಂತೂ ಯಾದಗಿರಿ ನಗರದ ಹೊರವಲಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ ಬ್ರೇಕ್ ಹಾಕುವಲ್ಲಿಯೂ ಯಶಸ್ವಿಯಾಗಿದ್ದಾರೆ. ಗಣಿಗಾರಿಕೆ ನಡೆಸುತ್ತಿರುವವರು ಎಷ್ಟೇ ಪ್ರಬಲರಾಗಿದ್ದರೂ, ಅದಕ್ಕೆ ಸೊಪ್ಪು ಹಾಕದ ದಿಟ್ಟ ಅಧಿಕಾರಿ. ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ನಡೆಸುತ್ತಿರುವ ಕಲ್ಲು ಗಣಿಗಾರಿಕೆ ವಿರುದ್ಧ ಕ್ರಮಗಳನ್ನು ಕೈಗೊಂಡು, ಸ್ಥಳೀಯ ಪೊಲೀಸರಿಂದ ಬಂಧಿಸುವ ಏರ್ಪಾಡು ಮಾಡಿದ್ದಲ್ಲದೆ ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ
ಜಿಲ್ಲೆಯಾದ ನಂತರ ಪ್ರಥಮ ಬಾರಿಗೆ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದವರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರೇ. ಅದಕ್ಕಾಗಿಯೇ ಪ್ರಥಮ ಅಧ್ಯಕ್ಷ ಸ್ಥಾನ ಮಹಿಳೆಗೆ ಮೀಸಲು. ಮೊದಲ ಅವಧಿಯಲ್ಲಿ ಈಗಾಗಲೇ ಅನಸೂಯಾ ಬೋರಬಂಡ್ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದು, ಉಳಿದ ಅವಧಿಯ ಜವಾಬ್ದಾರಿ ಬಸವರಾಜೇಶ್ವರಿ ಅವರಿಗೆ ಬಂದಿದೆ. ಜನವರಿ ಮೊದಲ ವಾರದಲ್ಲಷ್ಟೇ ಜಿಲ್ಲಾ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಬಸವರಾಜೇಶ್ವರಿ ಆಯ್ಕೆಯಾಗಿದ್ದಾರೆ.

ನಗರಸಭೆ ಅಧ್ಯಕ್ಷೆ
ಯಾದಗಿರಿ ನಗರಸಭೆಯ ಅಧ್ಯಕ್ಷ ಸ್ಥಾನದಲ್ಲೂ ಮಹಿಳೆಯೇ ವಿಜೃಂಭಿಸುತ್ತಿದ್ದಾರೆ. ನಗರಸಭೆ ಎರಡನೇ ಅವಧಿಯ ಅಧ್ಯಕ್ಷೆಯಾಗಿ ನಾಗರತ್ನಾ ಅನಪೂರ ಕಳೆದ ಹದಿನೈದು ತಿಂಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಎಲ್‌ಎಲ್‌ಬಿ ಪದವೀಧರೆಯಾಗಿರುವ ನಾಗರತ್ನಾ ಅನಪೂರ, ಜಿಲ್ಲಾ ಕೇಂದ್ರವಾಗಿರುವ ಯಾದಗಿರಿ ನಗರದಲ್ಲಿ ನಿರಂತರ ನೀರು ಪೂರೈಕೆ, ಒಳಚರಂಡಿ ಯೋಜನೆಯ ಆರಂಭಕ್ಕೆ ಚಾಲನೆ ನೀಡಿರುವ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ.  ಜಿಲ್ಲಾ ಕೇಂದ್ರದ ಅಭಿವೃದ್ಧಿಯ ಮಹತ್ವದ ಹೊಣೆಯನ್ನೂ ಹೊತ್ತಿದ್ದಾರೆ.

ಇನ್ನು ಜಿಲ್ಲೆಯ ಮೂರೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಗಳು ಮಹಿಳೆಯರ ಪಾಲಾಗಿವೆ. ಯಾದಗಿರಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶರಣಮ್ಮ ಕವಾಲ್ದಾರ, ಉಪಾಧ್ಯಕ್ಷೆ ಶ್ಯಾಮಲಾ ವಾರದ, ಶಹಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗೋವಿಂದಮ್ಮ ದೊರೆ, ಸುರಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹನುಮಂತಿ ಸಾಹುಕಾರ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಹಾಪುರ ಪುರಸಭೆಯ ಅಧ್ಯಕ್ಷರೂ ಮಹಿಳೆ. ರೇಣುಕಾ ಚಟ್ರಿಕಿ ಪುರಸಭೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರೆ, ಅದೇ ಪುರಸಭೆಯ ಮುಖ್ಯಾಧಿಕಾರಿಯಾಗಿ ಮಾಧವಿ ಕೆಲಸ ಮಾಡುತ್ತಿದ್ದಾರೆ.

ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಶಹಾಪುರ ಪಟ್ಟಣದ ಅತಿಕ್ರಮಣ ತೆರವು ಹಾಗೂ ರಸ್ತೆ ವಿಸ್ತಾರ ಕಾರ್ಯವನ್ನು ಪಟ್ಟು ಬಿಡದೇ ಪೂರ್ಣಗೊಳಿಸಿದ್ದಾರೆ.

ಜಿಲ್ಲೆಯ ಆಡಳಿತದಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿರುವ ಮಹಿಳೆಯರು, ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರೊ. ಮುಮ್ತಾಜ್ ಅಲಿಖಾನ್ ಅವರಿಂದಲೂ ಸೈ ಎನಿಸಿಕೊಂಡಿದ್ದಾರೆ. ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸಮರ್ಥವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ಪ್ರೊ. ಮುಮ್ತಾಜ್ ಅಲಿಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದು ಇಲ್ಲಿನ ಮಹಿಳೆಯರ ಕಾರ್ಯವನ್ನು ನೋಡಿಯೇ ಎಂದು ಬೇರೆ ಹೇಳಬೇಕಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಸಹಾಯಕ ಆಯಕ್ತರ ಹುದ್ದೆಗಳಲ್ಲೂ ಮಹಿಳೆಯರೇ ಬಂದಲ್ಲಿ ರಾಜ್ಯದ 30 ನೇ ಜಿಲ್ಲೆಯು ಸಂಪೂರ್ಣ ಮಹಿಳಾಮಯವೇ.

ಯಾದಗಿರಿ ಜಿಲ್ಲೆಯ ಮಹಿಳಾ ಅಧಿಕಾರಿಗಳು

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ- ವಿ.ಮಂಜುಳಾ

ಪ್ರಾದೇಶಿಕ ಆಯುಕ್ತೆ -ಕೆ. ರತ್ನಪ್ರಭ

ಜಿಲ್ಲಾಧಿಕಾರಿ- ಗುರನೀತ ತೇಜ್ ಮೆನನ್

ಅಪರ ಜಿಲ್ಲಾಧಿಕಾರಿ- ಜಹೀರಾ ನಸೀಮ್

ಪೊಲೀಸ್ ವರಿಷ್ಠಾಧಿಕಾರಿ -ಡಿ.ರೂಪಾ

ಯಾದಗಿರಿ ತಹಸೀಲ್ದಾರ -ಖಾಜಿ ನಫೀಜಾ ಮುತಾಲಿಬ್

ಜಿಲ್ಲಾ ಆಯುಷ್ ಅಧಿಕಾರಿ- ಡಾ. ವಂದನಾ ಗಾಳಿ

ಶಹಾಪುರ ಪುರಸಭೆ ಮುಖ್ಯಾಧಿಕಾರಿ - ಮಾಧವಿ

 ಯಾದಗಿರಿ ಜಿಲ್ಲೆಯ ಮಹಿಳಾ ಜನಪ್ರತಿನಿಧಿಗಳು

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ -ಬಸವರಾಜೇಶ್ವರಿ ತಂಗಡಗಿ

ನಗರಸಭೆ ಅಧ್ಯಕ್ಷೆ -ನಾಗರತ್ನಾ ಅನಪೂರ

ಯಾದಗಿರಿ ತಾ.ಪಂ. ಅಧ್ಯಕ್ಷೆ -ಶರಣಮ್ಮ ಕವಾಲ್ದಾರ

ಯಾದಗಿರಿ ತಾ.ಪಂ. ಉಪಾಧ್ಯಕ್ಷೆ -ಶ್ಯಾಮಲಾ ವಾರದ

ಶಹಾಪುರ ಪುರಸಭೆ ಅಧ್ಯಕ್ಷೆ  -ರೇಣುಕಾ ಚಟ್ರಿಕಿ

ಶಹಾಪುರ ತಾ.ಪಂ. ಅಧ್ಯಕ್ಷೆ -ಗೋವಿಂದಮ್ಮ ದೊರೆ

ಸುರಪುರ ತಾ.ಪಂ. ಅಧ್ಯಕ್ಷೆ  -ಹನುಮಂತಿ ಸಾಹುಕಾರ 
 
 


 

ಜಿಲ್ಲೆಯ ಆಡಳಿತದಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿರುವ ಮಹಿಳೆಯರು, ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರೊ. ಮುಮ್ತಾಜ್ ಅಲಿಖಾನ್ ಅವರಿಂದಲೂ ಸೈ ಎನಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT