ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟ ಹಕ್ಕಿಗಳ ಗೂಡು

Last Updated 22 ಜುಲೈ 2013, 19:59 IST
ಅಕ್ಷರ ಗಾತ್ರ

ಲ್ಲಿರುವವರು ಪೋಷಕರಿಂದ ದೂರವಾದ ಪುಟಾಣಿಗಳು. ಅಂಬೆಗಾಲಿಡುವ ಮುನ್ನವೇ ಅನಾಥ ಎಂಬ ಹಣೆಪಟ್ಟಿ ಹೊಂದಿರುವವರು. ಬುದ್ಧಿ ಚಿಗುರೊಡೆದಾಗ ಬದುಕಿನ ದಿಕ್ಕು ತೋಚದೆ ಪರದಾಡುತ್ತಿರುವ ಮಕ್ಕಳು. 

ಆದರೂ ಇಲ್ಲಿ ಪ್ರತಿಭೆಗೇನೂ ಕೊರತೆ ಇಲ್ಲ. ಪ್ರತಿಭಾವಂತ ಮಕ್ಕಳ ಸಂಗಮವೇ ಇಲ್ಲಿದೆ. ಈ ಮಕ್ಕಳಲ್ಲಿರುವ ಚುರುಕುತನ, ಮುಗ್ಧತೆ, ಸೌಜನ್ಯ, ಚಾಣಾಕ್ಷತೆ ಇವೆಲ್ಲವುಗಳಲ್ಲಿಯೂ ಅವರಿಗೆ ಅವರೇ ಸಾಟಿ! ನೋವು ಮರೆತು ನಲಿದಾಡುವ ಈ  ಮಕ್ಕಳ ಏಳಿಗೆಗೆ ಕಾರಣೀಕರ್ತರು ಬಾಲಕಿಯರ ಸರ್ಕಾರಿ ಬಾಲಮಂದಿರದ ಅಧೀಕ್ಷಕ ಮುನಿಯಪ್ಪ.

ಮಕ್ಕಳಿಗೆ ಆರೋಗ್ಯ, ಶಿಕ್ಷಣ, ವಸತಿ, ಆರೈಕೆ, ಪಾಲನೆ, ಮಾನಸಿಕ ಬೆಂಬಲ, ಪರಿಸರ ಸಂರಕ್ಷಣೆಯ ಕಾಳಜಿ ಎಲ್ಲವೂ ಇಲ್ಲಿ ಮಕ್ಕಳಿಗೆ ನೀಡಲಾಗುತ್ತಿದೆ. ಮಕ್ಕಳಿಗೆ ವಿವಿಧ ರೀತಿಯ ತರಬೇತಿಯನ್ನೂ ಇಲ್ಲಿ ನೀಡಲಾಗುತ್ತದೆ. ತಮ್ಮ ಅಪ್ಪ-ಅಮ್ಮಂದಿರ ಜೊತೆ ಮನೆಯಲ್ಲಿ ನಲಿಯಬೇಕಿದ್ದ ಈ ಮಕ್ಕಳು ತಮ್ಮ ಕನಸಿನ ಮನೆಯನ್ನು ರಟ್ಟಿನಲ್ಲಿ ಕಟ್ಟುತ್ತಿದ್ದಾರೆ.

ಇವರ ಕೈಯಲ್ಲಿ ಗುಬ್ಬಚ್ಚಿ ಗೂಡು ರೂಪುಪಡೆದಿವೆ. ಹಕ್ಕಿಗಳು ಗೂಡಿನೊಳಗೆ ಹೋಗಿ ಬರುವಷ್ಟು ಮಾತ್ರ ರಂಧ್ರವನ್ನು ಕತ್ತರಿಸಿ ನಾಲ್ಕು ಕಡೆಗಳಲ್ಲಿ ಅಂಟಿಸಿ ಹಕ್ಕಿಗಳ ಗೂಡುಗಳನ್ನು ತಯಾರಿಸಿ ರಂಧ್ರದಲ್ಲಿ ತಮ್ಮ ಪುಟ್ಟ ಕಣ್ಣುಗಳಿಂದ ಇಣುಕಿ ನೋಡುತ್ತಾ ಕಣ್ಣೀರು ಸುರಿಸುತ್ತಿದ್ದ ಬಾಲಕಿಯೊಬ್ಬಳು `ನಾವು ತಾಯಿಯ ವಾತ್ಸಲ್ಯ ಕಂಡರಿಯದವರು.

ಲಾಲನೆ ಪಾಲನೆಯಂತೂ ನಮಗೆ ತಿಳಿದೇ ಇಲ್ಲ. ಇವೆಲ್ಲವನ್ನು ನೆನೆಪಿಸಿಕೊಂಡರೆ ನಾವು ಏನು ತಪ್ಪು ಮಾಡಿದ್ದೇವೆ? ನಮಗೇಕೆ ಈ ಶಿಕ್ಷೆ? ಪುಟ್ಟ ಕಣ್ಣುಗಳು ಪ್ರಪಂಚ ನೋಡುವ ಮುನ್ನ ನಮ್ಮನ್ನು ಹತ್ಯೆ ಮಾಡಿ ಬಿಟ್ಟಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವೇ' ಎಂದು ನೋವಿನಿಂದ ನುಡಿದಳು.

ಕಿಡಿಯ ನುಡಿ
ಇನ್ನೊಬ್ಬ ಬಾಲಕಿ, `ಈ ಪಕ್ಷಿಗಳನ್ನು ನೋಡಿ ತಾಯಿ-ತಂದೆಗಳು ಒಟ್ಟಿಗೆ ತಮ್ಮ ಸಂತಾನಾಭಿವೃದ್ಧಿಗೋಸ್ಕರ ಬೆಚ್ಚನೆಯ ಗೂಡು ನಿರ್ಮಿಸಿಕೊಂಡು ಮೊಟ್ಟೆಗಳು ಶತ್ರುಗಳ ಕೈಗೆ ದೊರಕದ ಹಾಗೆ ಎಷ್ಟು ಜೋಪಾನ ಮಾಡುತ್ತವೆ. ನಮ್ಮ ಹೆತ್ತವರು ಚಳಿ, ಗಾಳಿ, ಮಳೆ ಲೆಕ್ಕಿಸದೆ ಬೀದಿಯ ನಾಯಿ, ಹಂದಿಗಳ ಕೈಗೆ ನಮ್ಮನ್ನು ಕಸದ ರಾಶಿಯಲ್ಲಿ, ಬೇಲಿಯ ಸಂದಿಯಲ್ಲೋ, ಬಸ್ ನಿಲ್ದಾಣದಲ್ಲೋ ಬಿಸಾಕಿ ಹೋಗುತ್ತಾರೆ.

ಮನುಷ್ಯನಿಗೂ ಈ ಪಕ್ಷಿಗಳಿಗೂ ಇರುವ ವ್ಯತ್ಯಾಸ ಇದೇ ನೋಡಿ' ಎಂದು ಪೋಷಕರ ವಿರುದ್ಧ ಕಿಡಿ ಕಾರಿದಳು. ಹಕ್ಕಿಗಳ ಗೂಡಿನಲ್ಲಿ ಬೆಳೆಯುತ್ತಿರುವ ಪುಟ್ಟ ಹಕ್ಕಿಗಳು ನಲಿದಾಡುತ ಬಾನಂಗಳದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತ ಆನಂದ ನೀಡುವುದನ್ನು ನೋಡಿದರೆ ಇವುಗಳಲ್ಲಿ ಇರುವ ಪ್ರೀತಿ ಪ್ರೇಮ, ವಾತ್ಸಲ್ಯದಲ್ಲಿ ಒಂದು ಭಾಗದ ಭಾಗ್ಯ ನಮಗೆ ದೊರಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು, ನಾವೆಲ್ಲರೂ ಅನಾಥರಾಗುತ್ತಿರಲಿಲ್ಲ ಅಲ್ಲವೇ? ಎಂದು ಕಣ್ಣಂಚಿನ ಕಂಬನಿಯ ಹನಿಗಳನ್ನು ಒರೆಸಿಕೊಳ್ಳುವ ಪುಟ್ಟ ಹುಡುಗಿಯ ಆಶಾಳ ಮಾತಿನಲ್ಲಿ ಸತ್ಯ ಅಡಗಿತ್ತು.

ಮಕ್ಕಳಲ್ಲಿ ಆಶಾ ಭಾವನೆ
ಕಣ್ಣೀರಿನ ಜೊತೆಗೆ ಹೊರಬಿಚ್ಚಿ ತಮ್ಮ ನೋವು ತೋಡಿಕೊಳ್ಳುವ ಮಾತುಗಳು ಕರುಳು ಹಿಂಡುವಂತಿತ್ತು. ಮಕ್ಕಳ ಕೈಯಲ್ಲಿ ಅರಳುತ್ತಿದ್ದ ಹಕ್ಕಿಯ ಗೂಡನ್ನು ನೋಡುತ್ತ ಹೋದಂತೆ ಅವರ ಮನದಲ್ಲಿರುವ ನಾನಾ ಭಾವನೆಗಳು ಹೊರ ಹೊಮ್ಮುತ್ತಿದ್ದವು. ಈ ಮಕ್ಕಳಲ್ಲಿ ಹೊಸ ಭರವಸೆಯ ಬೆಳಕನ್ನು ಚೆಲ್ಲಿದವರಲ್ಲಿ `ಗ್ರೀನ್ ಆರ್ಮಿ' ಅಧ್ಯಕ್ಷ ಪ್ರಕಾಶ ಗೌಡರ ಹಾಗೂ ಪಕ್ಷಿ ತಜ್ಞ ತಿಮ್ಮೋಪುರ, ನಂದೀಶ ಹಾಗೂ ವಿದ್ಯಾರಣ್ಯ ಬುರ್ಲಗಟ್ಟಿ ಪ್ರಮುಖರು.

ಇವರ ಪರಿಶ್ರಮದಿಂದ ಮಕ್ಕಳಲ್ಲಿ ಅನಾಥಪ್ರಜ್ಞೆ ಕಾಡುತ್ತಿಲ್ಲ. `ನೀವು ಕೂಡ ಪುಟ್ಟ ಹಕ್ಕಿಗಳೇ, ನೀವುಗಳು ಕೂಡ ಹಕ್ಕಿಯ ಗೂಡಿನಲ್ಲಿ ಇದ್ದೀರಿ. ಈ ಬಾಲ ಮಂದಿರವೇ ನಿಮ್ಮ ಗೂಡು. ಇಲ್ಲಿ ಜಾತಿ ಬೇಧವಿಲ್ಲದ ಬುದ್ಧಿವಂತ ಪುಟ್ಟ ಹಕ್ಕಿಗಳು ನೀವು' ಎಂದು ಮಕ್ಕಳಲ್ಲಿ ಆಶಾಭಾವನೆ ಮೂಡಿಸುವ ಕೈಂಕರ್ಯದಲ್ಲಿ ತೊಡಗಿದ್ದಾರೆ.

`ಮರಗಳು ನಾಶವಾಗುತ್ತಿರುವ ಇಂದಿನ ದಿನಗಳಲ್ಲಿ ಪಕ್ಷಿಗಳು ಅನಾಥವಾಗುತ್ತಿವೆ. ಪಕ್ಷಿಗಳಿಗೂ ಪುಟ್ಟ ಮನೆಗಳು ಬೇಕಲ್ಲವೆ? ನಿಮ್ಮ ಕೈಗಳಿಂದ ಹಕ್ಕಿಗಳಿಗೆ ಗೂಡು ನಿರ್ಮಿಸಿ ಕೊಟ್ಟರೆ ಅವುಗಳು ಬದುಕಲು ಮನೆಯಾಗುತ್ತದೆ' ಎಂದು ಮಕ್ಕಳಿಗೆ ತಿಳಿವಳಿಕೆ ನೀಡುತ್ತಿದ್ದರು `ಗ್ರೀನ್ ಆರ್ಮಿ' ಸಂಘಟಕರು.
-ಎಂ.ಆರ್.ಮಂಜುನಾಥ್ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT