ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟಜ್ಜಿಗೆ ಜೈ

Last Updated 26 ಜನವರಿ 2013, 19:59 IST
ಅಕ್ಷರ ಗಾತ್ರ

ಪುಟ್ಟಜ್ಜಿ ಮನೆ ಎದುರಿನಿಂದ ನಿತ್ಯ ಐವರು ಹುಡುಗಿಯರು ಶಾಲೆಗೆ ಹೋಗುವುದು ರೂಢಿ. ಬಾವಿಕಟ್ಟೆ ಬಸಪ್ಪನ ಮಗಳು ನಂದಿನಿ, ನುಗ್ಗೆ ಮನೆ ಸಿದ್ದನ ಮಗಳು ಮಂಗಳ, ಕುಲುಮೆ ಇಮಾಮನ ಮಗಳು ನೂರಿ, ಬೇವಿನ ತೊಪ್ಪಲು ಅಂಕನ ಮಗಳು ಲೀಲಾ, ಮತ್ತೆ ಮಹಡಿ ಮನೆ ಬಸಪ್ಪನ ಮಗಳು ರಂಗಿ. ಈ ಐವರು ಶಾಲೆಗೆ ಹೋಗುವುದನ್ನ ಪ್ರತಿ ದಿನ ನೋಡುತ್ತಿದ್ದಳು ಪುಟ್ಟಜ್ಜಿ.

ಅವರು ಕೂಡ ಪುಟ್ಟಜ್ಜಿಯ ಮನೆ ಎದಿರು ಬಂದ ಕೂಡಲೇ-
`ಅಜ್ಜಿ ಬರತೀವಿ'
`ಅಜ್ಜಿ ಸಂಜೆ ಬಂದಾಗ ತಿನ್ನಾಕೆ ಏನಾರ ಕೊಡಬೇಕು'
`ಅಜ್ಜಿ ಒಳ್ಳೇದೊಂದು ಕತೆ ಹೇಳಬೇಕು'
`ಅಜ್ಜಿ ಕಾಡಿಂದ ನೇರಲೇ ಹಣ್ಣು ತಂದು ಇಟ್ಟಿರು ಮತ್ತೆ'
`ಅಜ್ಜಿ ಮೆಹಂದಿ ಸೊಪ್ಪು ತಂದು ಇಡು'

ಎಂದೆಲ್ಲ ಕೂಗಿ ಹೇಳುತ್ತಿದ್ದರು. ಅಜ್ಜಿ ಕೂಡ ಮನೆ ಎದಿರು ನಿಂತು- `ಎಲ್ಲ ತಂದು ಇಡತೀನಿ ಓಗಿ ಬನ್ನಿ... ಇವತ್ತು ಕಲರ್ ಡ್ರೆಸ್ಸಾ... ಯೂನಿಪಾರಂ ಇಲ್ವಾ? ಬೋ ಚೆಂದಾಗಿ ಕಾಣತೀರಾ ಈ ಕಲರ್ ಡ್ರೆಸ್ಸಾಗೆ... ಓಗಿ ಬನ್ನಿ' ಎಂದು ಅವರನ್ನ ಬೀಳ್ಕೊಡುತ್ತಿದ್ದಳು.

ಮನೆ ಮುಂದಿನ ನೇರಲೇ ಮರದ ಆಚೆಗೆ ಈ ಹುಡುಗಿಯರು ಕಾಣೆಯಾಗುವುದನ್ನ ನೋಡುತ್ತ ನಿಲ್ಲುತ್ತಿದ್ದಳು ಪುಟ್ಟಜ್ಜಿ. ಅವಳಿಗೆ ಶಾಲೆಗೆ ಹೋಗುವ ಹುಡುಗಿಯರನ್ನ ನೋಡುವುದೆಂದರೆ ಅದೇನೋ ಖುಷಿ. ನೀಟಾಗಿ ತಲೆ ಬಾಚಿಕೊಂಡು, ಪುಸ್ತಕದ ಚೀಲ ಹೊತ್ತು, ಕಿಲಕಿಲ ನಗುತ್ತ ಅವರೆಲ್ಲ ಹೋಗುತ್ತಿದ್ದರೆ ನಿಂತು ನೋಡುತ್ತಿದ್ದಳು ಅಜ್ಜಿ.

ತಾನು ಈ ಹುಡುಗಿಯರ ಹಾಗಿದ್ದಾಗ ತನ್ನ ಹಳ್ಳಿಯಲ್ಲಿ ಶಾಲೆಯೇ ಇರಲಿಲ್ಲ. ಅಲ್ಲಿ ಅಂದು ಶಾಲೆ ಇದ್ದಿದ್ದರೆ ತಾನೂ ಶಾಲೆಗೆ ಹೋಗುತ್ತಿದ್ದೆ ಅಲ್ಲವೆ? ಈ ವಿಚಾರ ಮನಸ್ಸಿನಲ್ಲಿ ಬಂದಾಗ ಅದೊಂದು ಹಾಡಾಗಿ ಹರಿಯುತ್ತಿತ್ತು. ಮನೆ ಕೆಲಸ ಮಾಡುತ್ತ ಅಜ್ಜಿ ಸಣ್ಣ ದನಿಯಲ್ಲಿ ಹಾಡತೊಡಗುತ್ತಿದ್ದಳು.

ಹಳ್ಳಿ ಬಾಗಿಲಲ್ಲಿ ಒಂದು ಶಾಲೆ ಇದ್ದರೆ
ಓದು ಬರಹ ಕಲಿಯಲಿಕ್ಕೆ ಇಲ್ಲ ತೊಂದರೆ
ಹಲಗೆ ಬಳಪ ಹಿಡಿದುಕೊಂಡು ಅಲ್ಲಿ ಹೋದರೆ
ಭಲೆ ಅನ್ನುವವರು ಜನ ಕಲಿತು ಬಂದರೆ
ಅಕ್ಷರಗಳ ಜೊತೆಯಲಿ ಅಂಕಗಣಿತವನ್ನು
ಹಾಡು ನೃತ್ಯ ಕುಂಟೆಬಿಲ್ಲೆ ಎಲ್ಲ ಆಟವನ್ನು
ಕಲಿತುಕೊಂಡು ಬರಬಹುದು ಶಾಲೆಯಿಂದಲೇ
ಮಕ್ಕಳ ಜೊತೆ ಸೇರಿ ತಾನು ಮಗುವಾಗುತ್ತಲೇ
ನನ್ನ ಪಾಲಿಗಂತು ಶಾಲೆ ದೊರಕಲೆ ಇಲ್ಲ
ಪಾಠ ಕಲಿವ ಆಸೆ ಕೊನೆಗೂ ಕೈಗೂಡಲಿಲ್ಲ
ಓದು ಬರಹ ಅರಿಯದೆ ದಡ್ಡಿಯಾಗಿ ಉಳಿದೆನು
ಅಕ್ಷರ ಲೋಕದಿಂದ ಹೀಗೆ ದೂರವಾದೆನು.

ಅಜ್ಜಿ ನಿಟ್ಟುಸಿರುಬಿಟ್ಟಳು. ಈಗಿನ ಮಕ್ಕಳು ಅದೃಷ್ಟ ಮಾಡಿವೆ. ಮನೆ ಬಾಗಿಲಲ್ಲಿಯೇ ಶಾಲೆ. ಮಧ್ಯಾಹ್ನದ ಊಟ. ಶಾಲೆಯ ಸಮವಸ್ತ್ರ, ಪುಸ್ತಕ ಎಲ್ಲವನ್ನ ಸರಕಾರ ಕೊಡುತ್ತಿದೆ. ಮಕ್ಕಳು ಚೆನ್ನಾಗಿ ಓದಬೇಕು ಅಷ್ಟೆ.

ಹೀಗೆಂದೇ ಅಜ್ಜಿ ಓದುವ ಎಲ್ಲ ಮಕ್ಕಳಿಗೆ ಪೋತ್ಸಾಹ ನೀಡುತ್ತಾಳೆ. `ಮಕ್ಕಳೇ ನೀವು ಚೆನ್ನಾಗಿ ಓದಬೇಕು' ಎಂದು ಮಕ್ಕಳಿಗೆ ಹೇಳುತ್ತಾಳೆ ಪುಟ್ಟಜ್ಜಿ. ಹಾಗೆಯೇ ಹಳ್ಳಿಯ ಮಂಗಳ, ನೀಲಾ, ರಂಗಿ, ನೂರಿ ಮತ್ತು ನಂದಿನಿಯರಿಗೂ ಅವಳು ಹೇಳುತ್ತಾಳೆ. ಅವರು ಯಾವಾಗಲೂ ಮನೆಗೆ ಬಂದಾಗ ಓದಿನಿಂದ ಆಗುವ ಪ್ರಯೋಜನದ ಬಗ್ಗೆ ಹೇಳುತ್ತಾಳೆ ಅಜ್ಜಿ.

`ಈಗ ಪ್ಯಾಟೆಗೆ ಹೋಗಿ ನೋಡಿ, ಎಂತೆಂತಹಾ ಹೆಂಗಸರೆಲ್ಲ ಆಫೀಸಿನೊಳಗೆ ಆಫೀಸರಗಳಾಗಿ ಕೆಲಸ ಮಾಡತಾ ಅವ್ರೆ... ನೀವೂ ಹಾಗೇ ಆಗಬೇಕು' ಅನ್ನುತ್ತಾಳೆ.

ಹಾಗೆಯೇ ಸಂಜೆಯಾಗುವುದನ್ನ ಕಾಯುತ್ತಾಳೆ ಅಜ್ಜಿ. ಶಾಲೆಗೆ ಹೋಗಿ ಬಂದ ಹುಡುಗಿಯರು ತನ್ನ ಮನೆಗೆ ಬರುತ್ತಾರೆ ಅನ್ನುವುದು ಅವಳಿಗೆ ಗೊತ್ತಿದೆ. ಅವರಿಗೆ ಗೆಣಸನ್ನ ಬೇಯಿಸಿ ಇಡುತ್ತಾಳೆ. ಅವರು ಹೇಳಿದ್ದನ್ನು ಕಾಡಿನಿಂದ ತಂದು ಇರಿಸುತ್ತಾಳೆ. ಅವರಿಗೆ ಯಾವ ಕತೆ ಹೇಳುವುದು ಎಂದು ಮೊದಲೇ ವಿಚಾರ ಮಾಡಿ ನಿರ್ಧರಿಸುತ್ತಾಳೆ. ಸಂಜೆಯಾಗಿ ಈ ಹುಡುಗಿಯರು ಮನೆಗೆ ಹೋಗಿ ಇಲ್ಲಿಗೆ ಬರಲು ಅಜ್ಜಿ- `ಬನ್ರೇ ಬನ್ರೇ' ಎಂದು ಅವರನ್ನ ಸ್ವಾಗತಿಸುತ್ತಾಳೆ.

ಮಂಗಳ, ನೀಲಾ, ರಂಗಿ, ನೂರಿ ಮತ್ತು ನಂದಿನಿಯರು ಬಂದು ಒಂದು ಅರ್ಧ ಗಂಟೆ ಅಲ್ಲಿ ಆಡಿ ಹೋಗುತ್ತಾರೆ. ಮತ್ತೆ ಅವರ ಭೇಟಿಯಾಗುವುದು ನಾಳೆ ಬೆಳಿಗ್ಗೆ ಅವರು ಶಾಲೆಗೆ ಹೋಗುವಾಗ.

***
ಮೊನ್ನೇ ದಿನ ಕೇವಲ ನಾಲ್ವರು ಹುಡುಗಿಯರು ಮಾತ್ರ ಅಲ್ಲಿ ಕಂಡರು. ಅವರ ನಡುವೆ ನಂದಿನಿ ಇರಲಿಲ್ಲ.

`ಯೇ ನೂರಿ ನಂದಿನಿ ಎಲ್ಲೇ?'ಎಂದು ಕೇಳಿದಳು ಪುಟ್ಟಜ್ಜಿ ಈ ನಾಲ್ವರ ಗುಂಪನ್ನ ನೋಡಿ.
`ಮತ್ತೇ, ಇನ್ನು ಮುಂದೆ ಅವಳು ಸ್ಕೂಲ್‌ಗೆ ಬರೋದಿಲ್ಲವಂತೆ' ಎಂದಳು ಮಂಗಳ.  `ಹೌದು. ಅವಳು ಓದಿದ್ದು ಸಾಕು ಅಂತ ಅವಳ ತಂದೆ ಮಹಡಿ ಮನೆ ಬಸಪ್ಪ ಹೇಳುತ್ತಿದ್ದಾರೆ'
`ಹೌದಾ?'
`ಹೌದು, ನಂದಿನಿ ಅಳತಾ ಕೂತಿದಾಳೆ''

`ನಾನು ವಿಚಾರ್ ಮಾಡಿಕೊಂಡು ಬರತೀನಿ, ನೀವು ನಡೀರಿ' ಎಂದಳು ಪುಟ್ಟಜ್ಜಿ. ನಂದಿನಿ ಶಾಲೆಗೆ ಹೋಗುವುದು ಬೇಡ ಎಂದು ಬಸಪ್ಪ ಹೇಳಿದ್ದು ಅವಳಿಗೆ ಅಷ್ಟು ಸರಿ ಅನಿಸಲಿಲ್ಲ. ಸರಕಾರ ಮಕ್ಕಳನ್ನ ಶಾಲೆಗೆ ಕಳುಹಿಸಿ ಎಂದ ಹೇಳುವಾಗ ಇವನಿಗೇನು ಬಂತು ಎಂದು ಅವಳು ಸಿಡಿಮಿಡಿಗೊಂಡಳು. ಮನೆಯ ಚೂರುಪಾರು ಕೆಲಸ ಮುಗಿಸಿಕೊಂಡು ಬಸಪ್ಪನ ಮನೆಗೆ ಹೋಗಬೇಕೆಂದಿದ್ದಾಗ ನಂದಿನಿ ಬಾಗಿಲಲ್ಲಿ ಕಾಣಿಸಿಕೊಂಡಳು. ಅತ್ತು ಅತ್ತು ಅವಳ ಕಣ್ಣು ಕೆಂಪೇರಿತ್ತು. ಮುಖ ಊದಿಕೊಂಡಿತ್ತು.

ಅಜ್ಜಿ ನನಗೆ ಶಾಲೆ ಬೇಡ ಎಂದು ಅಪ್ಪನು
ಶಾಲೆ ಚೀಲವನ್ನ ತೆಗೆದು ಮೂಲೆಗೆಸೆದನು
ಅಡಿಗೆ ಮಾಡಿಕೊಂಡು ನೀನು ಇರು ಎಂದನು
ಮುಸುರೆಯನ್ನ ತೊಳೆದುಕೊಂಡು ಇರಲು ಹೇಳಿದ.
ಅಜ್ಜಿ ನನಗೆ ಶಾಲೆ ಬೇಕು ಅಕ್ಷರ ಕಲಿಯಲು
ತರಗತಿಯಲ್ಲಿ ಕುಳಿತು ಪಾಠ ಓದಲು
ಇತರೆ ಮಕ್ಕಳೊಡನೆ ಕೂಡಿ ಆಟವಾಡಲು
ಗುಂಪಿನಲ್ಲಿ ಕೂಡಿ ಆಡಿ ಸಂತಸ ಪಡಲು
ಮನೆಯ ಕೆಲಸ ನಿತ್ಯ ನಾನು ಮಾಡುತ್ತಿದ್ದೆನು
ಮನೆಯ ಕೆಲಸ ಮಾಡಿ ನಾನು ಓದುತ್ತಿದ್ದೆನು
ಹೆಚ್ಚು ಅಂಕ ಪಡೆದು ಉತ್ತೀರ್ಣನಾಗುತ್ತಿದ್ದೆನು
ಅಪ್ಪ ಏಕೋ ಶಾಲೆಯಿಂದ ದೂರ ಮಾಡಿದ
 
ನಂದಿನಿ ಅಜ್ಜಿಯ ಮಡಿಲಲ್ಲಿ ಮುಖವಿರಿಸಿ ಅತ್ತಳು. ಅಜ್ಜಿ ನಂದಿನಿ ಮುಖ ವರೆಸಿದಳು. ಅಳಬೇಡ ನಾನು ನಿನ್ನ ಅಪ್ಪನಿಗೆ ಹೇಳತೇನೆ ಸುಮ್ನಿರು ಎಂದಳು. ಇಷ್ಟು ಹೇಳಿ ಅಜ್ಜಿ ಬೇರೆ ಸೀರೆ ಉಟ್ಟಳು. ತಲೆಗೂದಲು ಸರಿ ಪಡಿಸಿಕೊಂಡಳು. ಸೀರೆಯ ಸೆರಗನ್ನ ಸೊಂಟಕ್ಕೆ ಸಿಕ್ಕಿಸಿಕೊಂಡಳು. ಚಪ್ಪಲಿ ಧರಿಸಿ ಹಳ್ಳಿ ಮನೆಗಳತ್ತ ನಡೆದಳು.

`ನಂದಿನಿ ಇಲ್ಲೇ ಕೂತಿರು... ನಾನು ನಿನ್ನ ಅಪ್ಪನ್ನ ಮಾತಾಡಿಸಿಕೊಂಡು ಬರತೇನೆ' ಎಂದು ಒಂಟಿ ಬಿರುಗಾಳಿಯಂತೆ ಹೊರಟಳು ಪುಟ್ಟಜ್ಜಿ. ಅವಳಿಗೆ ಬಸಪ್ಪನ ಮೇಲೆ ಕೋಪ ಬಂದಿತ್ತು.

ಬಸಪ್ಪ ಬಾವಿಕಟ್ಟೆಯ ಮೇಲೆ ಕುಳಿತು ಹಗ್ಗ ಹೊಸೆಯುತ್ತಿದ್ದ. ಅಜ್ಜಿಯನ್ನು ನೋಡಿ ಅವನೇ- `ಬಾ ಅಜ್ಜಿ, ಏನು ಇಷ್ಟ ದೂರ?' ಎಂದು ಕೇಳಿದ.
`ನಿನ್ನ ಹತ್ತಿರಾನೆ ಬಂದೆ... ಏನು ನಂದಿನಿ ಸ್ಕೂಲ್‌ಗೆ ಓಗಾದು ಬೇಡ ಅಂದಿಯಂತೆ?'

`ಹೌದು, ನಾಲ್ಕು ಅಕ್ಷರ ಬತ್ತದಲ್ಲ, ಸಾಕು ಬಿಡು... ಮುಂದಿನ ವರ್ಷ ಅವಳಿಗೊಂದು ಮದುವೆ ಮಾಡುವ ಅಂತ ತೀರ್ಮಾನ ಮಾಡೀನಿ'
`ಈಗೆಷ್ಟು ವರ್ಷ ಅವಳಿಗೆ?'
`ಹನ್ನೆರಡು ತುಂಬುತ್ತೆ... ಈ ಯುಗಾದಿಗೆ'
`ಹನ್ನೆರಡು ವರ್ಷಕ್ಕೇ ಮದುವೆ...'
`ಮತ್ತೆ ಮಾಡಾದೆ...'
`ಸರಿ ಬಿಡು' ಕುಳಿತ ಅಜ್ಜಿ ಏಳುತ್ತಾಳೆ.
`ಯಾಕಜ್ಜಿ ಎದ್ದೆ?'
`ಪೊಲೀಸ್ ಸ್ಟೇಷನ್ನಿಗೆ ಹೋಗಿ ಒಂದು ಕಂಪ್ಲೀಂಟ್ ಕೊಡಬೇಕು ಅದಕ್ಕೆ...' ಅಜ್ಜಿ ಅಂಗಳಕ್ಕೆ ಇಳಿಯುತ್ತಾಳೆ.
ಬಸಪ್ಪ ಗಾಬರಿಯಾಗಿ ಕೇಳಿದ. `ಏನು ಕಂಪ್ಲೀಂಟ್?'

`ಹುಡುಗೀರಿಗೆ ಹದಿನೆಂಟು ಆಗದೆ ಮದುವೆ ಮಾಡೋಂಗಿಲ್ಲ ಅಂತ ರೂಲಿಸ್ ಐತಲ್ಲ... ಅದಕ್ಕೆ ನಿನ್ ಮೇಲೊಂದು ಕಂಪ್ಲೀಂಟ್ ಕೊಡುವ ಅಂತ'.
ಬಸಪ್ಪ ಓಡಿ ಬಂದು ಪುಟ್ಟಜ್ಜಿಯ ಕೈ ಹಿಡಿದ. `ಅದೊಂದು ಮಾಡಬ್ಯಾಡ ಅಜ್ಜಿ, ಮರ್ವಾದೆ ಹೋಗತೈತೆ...' ಆತ ಅಂಗಲಾಚಿದ. 

`ಕುಂಟಾಬಿಲ್ಲೆ ಆಡೊ ಆ ಹುಡುಗೀನ ಶಾಲೆ ಬಿಡಿಸಿ ಮದುವೆ ಮಾಡತೀನಿ ಅಂತೀಯಲ್ಲ ನಿನಗೆ ನಾಚಿಕೆ ಆಗಾಕಿಲ್ವಾ? ಮನೆಕೆಲಸಾನು ಮಾಡಿ ಶಾಲೆ ಓದೋ ಹುಡುಗೀರ‌್ನ ಶಾಲೆ ಬಿಡಿಸೋ ನಿಮ್ಮಂತಾ ಗಂಡಸರಿಗೆ ಸರಿಯಾಗಿ ಪಾಠ ಕಲಿಸಬೇಕು. ಹೆಣಮಗಾ ಓದಿದ್ರೆ ಒಂದು ಮನೆ ಏಳಿಗೆ ಆಗತೈತೆ... ಅವಳು ಓದಿ ತನ್ ಕಾಲ ಮೇಲೆ ನಿಲ್ತಾಳೆ... ಅವಳನ್ನ ಓದಿಸು... ಮದುವೆ ಅದು ಇದು ಇದ್ದದ್ದೇ...'

ಅಜ್ಜಿ ಅಲ್ಲಿ ಕುಳಿತು ಮತ್ತೂ ಕೆಲ ವಿಷಯ ಹೇಳಿ ಅಲ್ಲಿಂದ ಹೊರಟಳು. `ಮತ್ತೆ ಮದುವೆ ಗಿದುವೆ ಅಂದ್ರೆ... ಪಂಚಾಯ್ತಿಯವರಿಗೆ ಹೇಳಿ ನಿನ್ನನ್ನ ಊರಿಂದ ಹೊರಗೆ ಹಾಕಿಸಿಬಿಡತೇನೆ ಹುಷಾರ್' ಎಂದಳು ಅಜ್ಜಿ. ಬಸಪ್ಪ ಜಗಲಿಯ ಮೇಲೆ ಕುಳಿತು ಇಲ್ಲ ಇಲ್ಲ ಎಂದು ತಲೆಯಾಡಿಸಿದ. ನಂದಿನಿಗೆ ಮದುವೆ ಮಾಡ ಹೊರಟಿದ್ದು ತಪ್ಪು ಅನಿಸಿತು. ಜೊತೆಗೆ ಅವಳನ್ನ ಶಾಲೆ ಬಿಡಿಸಿದ್ದು ಕೂಡ.

ಮಾರನೇ ದಿನ ಅಜ್ಜಿ ಅಂಗಳ ಸಾರಿಸುವಾಗ ಒಂದು ಹಾಡು ಕೇಳಿಸಿತು. ನಂದಿನಿ, ರಂಗಿ, ಮಂಗಳ, ನೂರಿ, ಲೀಲಾ, ಎದೆಗೆ ಪುಸ್ತಕಗಳ ಚೀಲ ಅವುಚಿಕೊಂಡು ಹಾಡುತ್ತ ಹೊರಟಿದ್ದರು.

ನಂದಿನಿ ರಂಗಿ ಮಂಗಳೆ ನೂರಿ ಜೊತೆಯಲಿ ಲೀಲಾ
ನಾವು ಹೋಗುವೆವು ಶಾಲೆಯ ಕಲಿಯಲು ದಿನವೆಲ್ಲಾ
ಓದುತ ಪಾಠ ಲೆಕ್ಕವ ಮಾಡಿ ವಿದ್ಯಾವಂತರು ನಾವಾಗಿ
ಹಳ್ಳಿಗೆ ಹೆಸರನು ತರುವೆವು ನಾವು ಅಕ್ಷರಸ್ಥರಾಗಿ.
   
ಈ ಕಾರ್ಯದಿ ನಮಗೆ ನೆರವನು ನೀಡಿದ ಓ ಪುಟ್ಟಜ್ಜಿ
ನಮಿಪೆವು ನಿನಗೆ ಬಾಗಿಲಲ್ಲಿಯೇ ನಿಂತು ತಲೆಬಾಗಿ
ನಿನ್ನಯ ನೆರವು ಇಲ್ಲದಿರೆ ಅಕ್ಷರ ನಮಗೆ ಕನಸೇ ಸೈ
ಹೀಗೆಂದೇ ನಾವು ಹೇಳುವುದು `ಪುಟ್ಟಜ್ಜಿಗೆ ಜೈ ಜೈ'
  
ಅಜ್ಜಿಯ ಮನೆಯ ಮುಂದೆ ನಿಂತು ಅವರು ಮತ್ತೆ ಹಾಡುತ್ತಾರೆ. ಅಜ್ಜಿ ಅವರ ಹಾಡಿಗೆ ತಲೆದೂಗಿ ನಗುತ್ತಾಳೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT