ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟಣ್ಣ ಚೆಟ್ಟಿ ಸಾಧನೆ: ಪಠ್ಯದಲ್ಲಿ ಸೇರ್ಪಡೆಗೆ ಸಲಹೆ

Last Updated 1 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ರಾಜ್ಯದ ಜನತೆಗೆ ಕೆ.ಪಿ. ಪುಟ್ಟಣ್ಣ ಚೆಟ್ಟಿ ಅವರ ಸಾಧನೆಗಳನ್ನು ತಿಳಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಪಠ್ಯಪುಸ್ತಕದಲ್ಲಿ ಅವರ ಸಾಧನೆಗಳ ಒಂದು ಅಧ್ಯಾಯ ಸೇರ್ಪಡೆಗೊಳಿಸಬೇಕು~ ಎಂದು ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ ಸಲಹೆ ನೀಡಿದರು.

ಕೆ.ಪಿ. ಪುಟ್ಟಣ್ಣ ಚೆಟ್ಟಿ ಹಾಸ್ಟೆಲ್ ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಇತ್ತೀಚೆಗೆ ನಡೆದ ಕೆ.ಪಿ. ಪುಟ್ಟಣ್ಣ ಚೆಟ್ಟಿಯವರ 156ನೇ ಸಂಸ್ಮರಣಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ನಗರದಲ್ಲಿ ಪುಟ್ಟಣ್ಣ ಚೆಟ್ಟಿ ಅವರ ಕಂಚಿನ ಪುತ್ಥಳಿಯ ಅನಾವರಣ ಆಗಬೇಕು. ಈ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು. ಬಿಬಿಎಂಪಿಗೆ ಒತ್ತಡ ಹೇರಲಾಗುವುದು~ ಎಂದು ಅವರು ಭರವಸೆ ನೀಡಿದರು.

`ಬೆಂಗಳೂರು ನಗರ ಈಗ ಪರಕೀಯರದ್ದು ಆಗಿದೆ. ನಗರದ ಲಾಭ ಎಲ್ಲರೂ ಪಡೆಯುತ್ತಿದ್ದಾರೆ. ನಗರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿಲ್ಲ~ ಎಂದು ಅವರು ವಿಷಾದಿಸಿದರು. 

ಹಿರಿಯ ಸಾಹಿತಿ ಡಾ.ಜಿ.ಎಸ್. ಸಿದ್ದಲಿಂಗಯ್ಯ ಮಾತನಾಡಿ, `ಪುಟ್ಟಣ್ಣ ಚೆಟ್ಟಿ ವಿದ್ಯಾರ್ಥಿ ನಿಲಯದಲ್ಲಿದ್ದ ಮಂದಿಯೇ ಪುಟ್ಟಣ್ಣ ಚೆಟ್ಟಿ ಅವರನ್ನು ಮರೆತಿದ್ದಾರೆ. ಈಗಿರುವ ಹಾಸ್ಟೆಲ್ ಕೆಡವಿ ದೊಡ್ಡದಾದ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಬೇಕು~ ಎಂದು ಸಲಹೆ ನೀಡಿದರು. `ಚಿಕ್ಕಮಗಳೂರಿನಲ್ಲಿ 1921ರಲ್ಲಿ ನಡೆದ ಅಖಿಲ ಭಾರತ ಏಳನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಪುಟ್ಟಣ್ಣ ಚೆಟ್ಟಿ ವಹಿಸಿದ್ದರು. ಪ್ರತಿ ಮನೆಯಲ್ಲೂ ಪುಸ್ತಕ ಭಂಡಾರ ಇರಬೇಕು.

ಕನ್ನಡದ ಸಂಸ್ಕೃತಿ ಉಳಿಸಿ ಬೆಳೆಸಬೇಕು. ಸಂಸ್ಕೃತ, ಇಂಗ್ಲಿಷ್ ಕನ್ನಡ ನಾಡಿನ ಪ್ರಭು ಆಗಬಾರದು ಎಂಬುದಾಗಿ ಸಮ್ಮೇಳನದಲ್ಲಿ ಸಲಹೆ ನೀಡಿದ್ದರು~ ಎಂದು ಅವರು ನೆನಪಿಸಿದರು. 

ಬೇಲಿಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, `ಪುಟ್ಟಣ್ಣ ಚೆಟ್ಟಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಬುನಾದಿ ಹಾಕಿದವರು. ಅವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮೊದಲ ಅಧ್ಯಕ್ಷರಾಗಿದ್ದರು. ಅವರ ಸಾಧನೆಗಳನ್ನು ಸ್ಮರಿಸುವ ಕೆಲಸ ಆಗಬೇಕು~ ಎಂದರು. 

ತುಮಕೂರು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ. ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಅಧೀಕ್ಷಕ ಎಂಜಿನಿಯರ್ ಬಿ.ಚಂದ್ರಕಾಂತ್, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆಂಚಪ್ಪ, ನಿವೃತ್ತ ಉಪಪ್ರಾಂಶುಪಾಲ ಡಾ.ಎಸ್.ಶ್ರೀಕಂಠಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಎಂ.ಬಿ. ಷಣ್ಮುಖ, ಕೋಶಾಧಿಕಾರಿ ಕೆ. ಜಯದೇವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT