ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಬಾಲ್ ಕ್ರೀಡಾಂಗಣಕ್ಕೆ ಹೊಸ ರೂಪ

Last Updated 23 ಸೆಪ್ಟೆಂಬರ್ 2013, 6:49 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಫುಟ್‌ಬಾಲ್‌ ಪ್ರಿಯರು ಅನೇಕ ವರ್ಷಗಳಿಂದ ಕಾಣುತ್ತಿರುವ  ಕನಸು ಇದೀಗ ನನಸಾಗುತ್ತಿದೆ. ನಗರದ ಹೃದಯ ಭಾಗದಲ್ಲಿ, ಡಾ.ರಾಜಕುಮಾರ್‌ ರಸ್ತೆಯಲ್ಲಿನ ಬಿಡಿಎಎ ಕ್ರೀಡಾಂಗಣದ ನವೀಕರಣ ಕಾರ್ಯ ಮುಗಿಯುತ್ತ ಬಂದಿದ್ದು, ರಾಷ್ಟ್ರ ಮಟ್ಟದ ಎಲ್ಲ ಸೌಲಭ್ಯಗಳನ್ನೂ ಒಳಗೊಂಡ ಫುಟ್‌ಬಾಲ್ ಕ್ರೀಡಾಂಗಣವಾಗಿ ರೂಪುಗೊಳ್ಳುತ್ತಿದೆ.

ರೂ. 5.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಹೊಂದಿ­ರುವ ಈ ಕ್ರೀಡಾಂಗಣ ಫುಟ್‌ಬಾಲ್‌ಗೆ ಸೀಮಿತವಾಗಿದ್ದು, ಹಗಲು ರಾತ್ರಿ ಪಂದ್ಯಗಳು ನಡೆಯಲು ಅಗತ್ಯವಿರುವ ಫ್ಲಡ್‌ಲೈಟ್ ವ್ಯವಸ್ಥೆಯೊಂದಿಗೆ ಕೃತಕ ಹುಲ್ಲುಹಾಸನ್ನು ಹೊಂದಿರುವ ರಾಜ್ಯದ ದ್ವಿತೀಯ ಫುಟ್‌ಬಾಲ್‌ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ.

ಸೆಪ್ಟೆಂಬರ್‌ ಅಂತ್ಯಕ್ಕೆ ಅಥವಾ ಅಕ್ಟೋಬರ್‌ ಮೊದಲ ವಾರದಲ್ಲಿ ಉದ್ಘಾಟನೆ ಆಗಲಿರುವ ಈ ಕ್ರೀಡಾಂಗಣ ನಗರದ ಫುಟ್‌ಬಾಲ್‌ ಆಟಗಾರರಿಗೆ ದೊರೆಯಲಿದೆ.

ಈ ಹಿಂದೆ ಜಿ.ಜನಾರ್ದನ ರೆಡ್ಡಿ ಅವರು ಕ್ರೀಡಾ ಸಚಿವರಾಗಿದ್ದಾಗ ಈ ಕ್ರೀಡಾಂಗಣದ ಅಭಿವೃದ್ಧಿಗೆ ರೂ.5 ಕೋಟಿ ಅನುದಾನ ಮಂಜೂರಾಗಿತ್ತು,  ಬಾಲಚಂದ್ರ ಜಾರಕಿಹೊಳಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ಕಾಮಗಾರಿಗೆ ಚಾಲನೆ ದೊರೆತಿತ್ತು.

ರಾಷ್ಟ್ರಮಟ್ಟದ ಪಂದ್ಯಾವಳಿಗೆ ಸಿದ್ಧ: ರಾಷ್ಟ್ರ ಮಟ್ಟದ ಕ್ರೀಡಾಕೂಟ ಆಯೋಜಿ­ಸಲು ಅಗತ್ಯ­ವಾದ ಎಲ್ಲ ಸೌಲಭ್ಯಗಳನ್ನೂ ಒಳಗೊಳ್ಳಲಿರುವ 65x110 ಮೀಟರ್ ವಿಸ್ತೀರ್ಣದ ಅಂಕಣದ ಸುತ್ತ ಸರಿಸುಮಾರು ಮೂರು ಸಾವಿರ ಪ್ರೇಕ್ಷಕರು ಕುಳಿತು ಪಂದ್ಯ ವೀಕ್ಷಿಸಲು ಅಗತ್ಯ ಆಸನ ವ್ಯವಸ್ಥೆಯನ್ನು ಒಳಗೊಳ್ಳಲಿರುವ ಈ  ಕ್ರೀಡಾಂಗಣದಲ್ಲಿ ರೂ. 75 ಲಕ್ಷ  ವೆಚ್ಚದಲ್ಲಿ ಚೀನಾದಿಂದ ಆಮದು ಮಾಡಿಕೊಂಡಿರುವ ಸಿಂಥೆಟಿಕ್ ಹುಲ್ಲು­ಹಾಸನ್ನು ಅಳವಡಿಸಲಾಗಿದೆ. ರಾಜ್ಯದ ಬೆಂಗಳೂರನ್ನು ಹೊರತುಪಡಿಸಿ ಬಳ್ಳಾರಿಯಲ್ಲಿ ಈ ವ್ಯವಸ್ಥೆ ಇರುವುದು ವಿಶೇಷ.
ಕ್ರೀಡಾಂಗಣದ ನಾಲ್ಕೂ ಮೂಲೆಗಳಲ್ಲಿ 200 ಲೆಡ್ಸ್ ಬೆಳಕಿನ ಪ್ರಖರತೆಯನ್ನು ಹೊರಹೊಮ್ಮಿಸುವ 56 ಕಿಲೋ ವ್ಯಾಟ್‌ನ ಫ್ಲಡ್ ಲೈಟ್‌ಗಳನ್ನು ಅಳವಡಿಸಸಲಾಗುತ್ತಿದೆ.

ಒಂದೊಂದು ಮೂಲೆಯಲ್ಲಿ 2 ಕಿಲೋ ವ್ಯಾಟ್‌ನ 7 ಲೈಟ್‌ಗಳಿವೆ. ಇದರಿಂದ ಇಲ್ಲಿ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯ ಆಯೋಜಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಗುಣಮಟ್ಟದ ಈ ಕ್ರೀಡಾಂಗಣದಲ್ಲಿ 19 ವರ್ಷದೊಳಗಿನ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರತಿ ವರ್ಷವೂ ರಾಷ್ಟ್ರಮಟ್ಟದ ಪಂದ್ಯಾವಳಿ ಆಯೋಜಿಸುವಂತೆ ರೂ. 75 ಲಕ್ಷ ದೇಣಿಗೆ ನೀಡಿರುವ ಜೆಎಸ್‌ಡಬ್ಲ್ಯೂ ಸಂಸ್ಥೆಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯ, ರಾಷ್ಟ್ರ ಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳನ್ನೂ ಆಯೋಜಿಸುವ ಮೂಲಕ ಯುವಕರಿಗೆ ಉತ್ತೇಜನ ನೀಡುವ ಉದ್ದೇಶವನ್ನು ಹೊಂದಲಾಗಿದೆ. ಮನರಂಜನೆ ಬಯಸಿ ಬರುವವರಿಗೆ ಖುಷಿಯಾಗುವ ರೀತಿಯಲ್ಲಿ ಕ್ರೀಡಾಕೂಟ ಆಯೋಜಿಸುವ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸಕಲ ವ್ಯವಸ್ಥೆ: ಜನರೇಟರ್ ವ್ಯವಸ್ಥೆ, ಸುಸಜ್ಜಿತ ಡ್ರೆಸ್ಸಿಂಗ್‌ ರೂಂ, ಕ್ಲಾಕ್ ರೂಂ, ವೈದ್ಯಕೀಯ ಚಿಕಿತ್ಸಾಲಯ ಸೌಲಭ್ಯವೂ ದೊರೆಯಲಿದೆ. ಕ್ರೀಡಾಂಗಣದ ಪೂರ್ವ ದಿಕ್ಕಿನಲ್ಲಿ ಮಾಧ್ಯಮ­ದವರು ಕುಳಿತು ಪಂದ್ಯ ವೀಕ್ಷಿಸಲು ಮತ್ತು ಚಿತ್ರೀಕರಿಸಲು ವ್ಯವಸ್ಥೆ ಮಾಡಲಾಗುತ್ತ್ದ

ಕ್ರೀಡಾಂಗಣದ ದಕ್ಷಿಣ ದಿಕ್ಕಿನಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಕ್ರೀಡಾ ಸಮುಚ್ಛಯದಲ್ಲಿ ಒಳಾಂಗಣ ಕ್ರೀಡೆಗಳಾದ ಟೇಬಲ್ ಟೆನ್ನಿಸ್, ಬಿಲಿಯರ್ಡ್ಸ್‌, ಚದುರಂಗ, ಕೇರಂ, ಮಹಿಳೆಯರ ಮತ್ತು ಪುರುಷರ ಪ್ರತ್ಯೇಕ ಜಿಮ್, ಕಂಪ್ಯೂಟರ್‌ ಗೇಮ್, 300 ಜನ ಕುಳಿತು ವೀಕ್ಷಣೆ ಮಾಡಬಹುದಾದ ಹವಾ ನಿಯಂತ್ರಿತ ಸಭಾಂಗಣ  ನಿರ್ಮಾಣವಾಗುತ್ತಿದೆ.

ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ಈ ಸಭಾಂಗಣದಲ್ಲಿ ಬೃಹತ್‌ ಪರದೆಯಲ್ಲಿ ವೀಕ್ಷಿ­ಸುವ ಸೌಲಭ್ಯ ನೀಡಲಾಗುತ್ತಿದೆ. ಕ್ಯಾಂಟೀನ್ ವ್ಯವಸ್ಥೆ, ಕಾಫಿ ಹೌಸ್‌ ವ್ಯವಸ್ಥೆಯೂ ಕ್ರೀಡಾಂಗಣದ ಆವರಣದೊಳಗೆ ಇದೆ ಎಂದು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶ್ರೀನಿವಾಸ ಕುಲಕರ್ಣಿ ತಿಳಿಸಿದರು.

ಕೋಲಾಚಲಂ ರಾಮಚಂದ್ರ ಅವರು ಅನೇಕ ವರ್ಷಗಳ ಹಿಂದೆ ಈ ಮೈದಾನಕ್ಕೆ ಜಮೀನು ದಾನ ನೀಡಿದ್ದು, ಮೈದಾನಕ್ಕೆ ಜಮೀನು ದಾನ ನೀಡಿದ ಫುಟ್‌ಬಾಲ್ ಆಟಗಾರರೂ ಆಗಿದ್ದ ಕೋಲಾಚಲಂ ರಾಮಚಂದ್ರ ಅವರ ಹೆಸರನ್ನೇ ಇರಿಸಬೇಕು ಎಂಬುದು ಅವರ ಕುಟುಂಬ ಸದಸ್ಯರ ಮನವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT