ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತಿಗೆಶ್ರೀಗೂ ಆಹ್ವಾನ ನೀಡಿ: ಮನವಿ

Last Updated 4 ಜನವರಿ 2012, 5:30 IST
ಅಕ್ಷರ ಗಾತ್ರ

ಉಡುಪಿ: ಜನವರಿ 18ರಂದು ನಡೆಯುವ ಸೋದೆ ವಾದಿರಾಜ ಮಠದ ಪರ್ಯಾಯ ಮಹೋತ್ಸವದಲ್ಲಿ ಪುತ್ತಿಗೆ ಸುಗುಣೇಂದ್ರ ತೀರ್ಥರನ್ನೂ ಸೇರಿಸಿಕೊಳ್ಳಲೇಬೇಕು ಎಂದು ಆಗ್ರಹಿಸಿ ಶ್ರೀಕೃಷ್ಣಮುಖ್ಯಪ್ರಾಣ ಭಕ್ತವೃಂದ ಮತ್ತು ಹಿಂದೂ ಸಮಾಜ ನಾಗರಿಕ ಸಮಿತಿ ಮಂಗಳವಾರ ಸಭೆ ಸೇರಿ ಬಳಿಕ ಸೋದೆ ಮಠಕ್ಕೆ ತೆರಳಿ ಮನವಿ ಸಲ್ಲಿಸಿತು.

ಆಮಂತ್ರಣ ಪತ್ರಿಕೆಯಲ್ಲಿ ಸಂಪ್ರದಾಯದಂತೆ ನಮೂದಿಸಬೇಕಿದ್ದ ಅಷ್ಟಮಠಾಧೀಶರಲ್ಲಿ ಒಬ್ಬರಾದ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೆಸರನ್ನು ಕೈಬಿಟ್ಟಿದ್ದು ಹಿಂದೂ ಸಮಾಜ ಬಾಂಧವರಿಗೆ ಆಶ್ಚರ್ಯವುಂಟು ಮಾಡಿದೆ. ಸಮಾಜದ ಏಕತೆ , ಸಂಘಟನೆ, ಶ್ರೀಕೃಷ್ಣಮಠ ಹಾಗೂ ಅಷ್ಟಮಠಗಳ ಸಹಬಾಳ್ವೆ, ಸಹಿಷ್ಣುತೆಯ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಲೇ ಬೇಕಾದ ವಿಚಾರಗಳನ್ನು ವಿಶೇಷವಾಗಿ ಪರ್ಯಾಲೋಚಿಸಿ ಪುತ್ತಿಗೆಶ್ರೀಗಳನ್ನು ಸಾಂಪ್ರದಾಯಿಕ ಮೆರವಣಿಗೆ ಹಾಗೂ ದರ್ಬಾರಿಗೆ ಆಹ್ವಾನಿಸಬೇಕು ಎಂದು ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.

ಅಲ್ಲದೇ ಈ ಮೂಲಕ ಮಧ್ವ ವಾದಿರಾಜರಿಂದ ಪ್ರವರ್ತಿತವಾದ ಶುಭ ಸಂಪ್ರದಾಯವು ಮುಂದುವರಿದುಕೊಂಡು ಬರುವಂತೆ ಪುತ್ತಿಗೆ ಶ್ರೀಪಾದರನ್ನು ಒಳಗೊಂಡಂತೆ ಅಷ್ಟಮಠಾಧೀಶರ ಉಪಸ್ಥಿತಿಯಲ್ಲಿ ತಮ್ಮ ಪ್ರಥಮ ಪರ್ಯಾಯವು ನಡೆಯಬೇಕು, ಸಾಂಪ್ರದಾಯಿಕ ಮೆರವಣಿಗೆ ಹಾಗೂ ದರ್ಬಾರಿನ ಸಭೆಗೆ ಆಹ್ವಾನಿಸಲೇಬೇಕು ಎಂದು ಸಮಿತಿ ಮನವಿ ಸಲ್ಲಿಸಿತು.

ಇದಕ್ಕೂ ಮುನ್ನ ರಥಬೀದಿಯ ರಾಘವೇಂದ್ರ ಮಠದಲ್ಲಿ ಸಭೆ ಸೇರಿದ ಭಕ್ತವೃಂದವು ಪುತ್ತಿಗೆಶ್ರೀಗಳನ್ನೂ ಸಂಪ್ರದಾಯದಂತೆ ಪರ್ಯಾಯೋತ್ಸವಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಬಳಿಕ ಅಲ್ಲಿಂದ ರಥಬೀದಿಯ ಮೂಲಕ ಸೋದೆವಾದಿರಾಜ ಮಠಕ್ಕೆ ಬಂದು ಸ್ವಾಗತ ಸಮಿತಿಯವರಲ್ಲಿ ಸಲ್ಲಿಸಲಾಯಿತು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಲಯನ್ ಜಯಕರ ಶೆಟ್ಟಿ ಇಂದ್ರಾಳಿ, `ಜ.18ರಂದು ನಡೆಯುವ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಕಣ್ತಪ್ಪಿನಿಂದಾಗಿ ಪುತ್ತಿಗೆ ಸ್ವಾಮೀಜಿಗಳ ಹೆಸರು ಬಿಟ್ಟಿದೆ.

ಆದರೆ ಅವರನ್ನು ಪರ್ಯಾಯ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಣ ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ~ ಎಂದರು.

ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಬಿಜೆಪಿಯ ಮಟ್ಟಾರು ರತ್ನಾಕರ ಹೆಗ್ಡೆ,  ಜಿ.ಪಂ. ಸದಸ್ಯ ಅರುಣ್ ಶೆಟ್ಟಿ ಪಾದೂರು, ಯಶಪಾಲ ಸುವರ್ಣ, ಸಂತೋಷ ಶೆಟ್ಟಿ, ವಾಸುದೇವ ಭಟ್ಟ, ಸಂತೋಷ ಶೆಟ್ಟಿ ಮತ್ತಿತರರು ಈ ನಿಯೋಗದಲ್ಲಿದ್ದರು.

ಭೂತರಾಜರ ಎದುರಿಗೆ ಬಂದು ಮನವಿ ಕೊಡಿ...: ರಥಬೀದಿಯ ರಾಘವೇಂದ್ರ ಮಠದಿಂದ ಸೋದೆ ವಾದಿರಾಜ ಮಠಕ್ಕೆ ಮೆರವಣಿಗೆಯಲ್ಲಿ ಸಾಗಿ ಮನವಿ ಸಲ್ಲಿಸಲು ಹೋದ ಸಮಿತಿಯ ಮುಖಂಡರಿಗೆ ಸಾಕಷ್ಟು ಇರಿಸು ಮುರಿಸು ಉಂಟಾಗುವ ಘಟನೆಯೂ ಇಲ್ಲಿ ನಡೆಯಿತು.

ಮಠದ ದ್ವಾರದಲ್ಲಿ ನಿಂತು ಮನವಿ ಸಲ್ಲಿಸಲು ಬಯಸಿದ ಸಮಿತಿ ಸದಸ್ಯರನ್ನು ಬಳಿಕ ಮಠದೊಳಕ್ಕೆ ಆಹ್ವಾನಿಸಿ ಅಲ್ಲಿರುವ ಭೂತರಾಜರ ಸನ್ನಿಧಾನದಲ್ಲಿ ಮನವಿ ಸಲ್ಲಿಸುವಂತೆ ಸೊದೆ ಮಠದ ದಿವಾಣ ಶ್ರೀನಿವಾಸ ತಂತ್ರಿ ಸೂಚಿಸಿದರು.

ಆದರೆ ಮನವಿ ಸಲ್ಲಿಸಲು ಹೋದ ಸಮಿತಿಯ ಸದಸ್ಯರು ಅಲ್ಲಿಗೆ  ಬಂದು ಮನವಿ ಸಲ್ಲಿಸುವುದಿಲ್ಲ ಮಠದೊಳಗಿನ ಪಟ್ಟದ ದೇವರ ಸನ್ನಿಧಾನವಾದರೂ ಆದೀತು ಎಂದರು. ಆದರೆ ಅದಕ್ಕೊಪ್ಪದ ತಂತ್ರಿಗಳು, `ಇದು ಅಷ್ಟಮಠದ ವಿಚಾರ, ಹೀಗಾಗಿ ಸೋದೆ ಮಠದ ಸಂಪ್ರದಾಯದಂತೆ ಇಂಥ ಮನವಿಗಳನ್ನು ಕೂಡ ಭೂತರಾಜರ ಸಮ್ಮುಖದಲ್ಲಿಯೇ ಸ್ವೀಕಾರ ಮಾಡುತ್ತೇವೆ. ಹೀಗಾಗಿ ಮನವಿ ಕೊಡುವುದಾದರೆ ಇಲ್ಲಿಯೇ ಬಂದು ನೀಡಲಿ~ ಎಂದು ಪಟ್ಟು ಹಿಡಿದರು.

ಆದರೆ ಸದಸ್ಯರು ಒಪ್ಪಲಿಲ್ಲ, `ಅಲ್ಲಿಗೆ ಬರುವುದಿಲ್ಲ, ಸ್ವಾಗತ ಸಮಿತಿ ಕೊಠಡಿಯಲ್ಲಿ ಮನವಿ ನೀಡುತ್ತೇವೆ~ ಎಂದರು. ಆದರೆ ಸ್ವಾಗತ ಸಮಿತಿ ಕಾರ್ಯದರ್ಶಿಗಾಗಿ ಕಾದರೂ ಅವರು ಬರಲೇ ಇಲ್ಲ. ಬಳಿಕ ಮತ್ತೆ ಮಠದ ಮುಂಭಾಗಕ್ಕೆ ಬಂದು ಸ್ವಾಗತ ಸಮಿತಿಯ ಕಚೇರಿ ಮೇಲ್ವಿಚಾರಕ ಕೃಷ್ಣ ಆಚಾರ್ ಅವರ ಕೈಗೆ ಮನವಿ ಸಲ್ಲಿಸಿ ಎಲ್ಲರೂ ಅಲ್ಲಿಂದ ಬಂದರು.

ಅಷ್ಟಮಠಗಳಲ್ಲಿ ಭೂತರಾಜರಿಗೂ ಮಹತ್ವದ ಸ್ಥಾನವಿದೆ. ಅದರಲ್ಲಿಯೂ ಸೊದೆ ವಾದಿರಾಜ ಮಠದಲ್ಲಿ `ಭೂತರಾಜ~ರ ಸನ್ನಿಧಾನದಕ್ಕೆ ಎಲ್ಲರೂ ಬಹಳ ಭಯ-ಭಕ್ತಿಯಿಂದ ನಿಷ್ಠೆಯಿಂದ ನಡೆದುಕೊಳ್ಳುತ್ತಾರೆ. ಹೀಗಾಗಿ ಅದರ ಎದುರಿಗೆ `ನ್ಯಾಯ~ ಸಲ್ಲಿಕೆಗೆ ಎಲ್ಲರೂ ಹೆದರುತ್ತಾರೆ ಎನ್ನಲಾಗಿದೆ. ಹೀಗಾಗಿ ಪುತ್ತಿಗೆ ಸ್ವಾಮೀಜಿಗಳನ್ನು ಪರ್ಯಾಯೋತ್ಸವಕ್ಕೆ ಸೇರಿಸಿಕೊಳ್ಳಲೇಬೇಕು ಎಂದು ಆಗ್ರಹಿಸಲು ಬಂದ ಮುಖಂಡರು ಕೂಡ `ನಾವು ಭೂತರಾಜ ಸನ್ನಿಧಾನಕ್ಕೆ ಇಂತಹ ವಿಷಯಕ್ಕೆಲ್ಲ ಬರುವುದಿಲ್ಲ, ನೀವೆ ಹೊರಗೆ ಬನ್ನಿ~ ಎಂದು ಹೇಳಿ ಹಿಂಜರಿದ ಘಟನೆಯೂ ಇಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT