ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನರ್ವಸತಿಗಾಗಿ ಆಮರಣಾಂತ ಉಪವಾಸ

Last Updated 3 ಅಕ್ಟೋಬರ್ 2012, 5:50 IST
ಅಕ್ಷರ ಗಾತ್ರ

ಮುಳಬಾಗಲು:  ಗುಡಿಸಲು ಮನೆಗಳನ್ನು ಕಳೆದುಕೊಂಡಿರುವ ಮುಳಬಾಗಲು ಪಟ್ಟಣದ ವಿವೇಕಾನಂದ ನಗರದ ದಲಿತ ವಾಸಿಗಳು ಕಾಯಂ ಪುನರ್ವಸತಿ ಕಲ್ಪಿಸಲು ಒತ್ತಾಯಿಸಿ ಮಂಗಳವಾರದಿಂದ ಪಟ್ಟಣದ ಸೌಂದರ್ಯ ಹೋಟೆಲ್ ವೃತ್ತದ ಬಳಿ ವಿವಿಧ ಸಂಘಟನೆ ನೇತೃತ್ವದಲ್ಲಿ ಆಮರಣಾಂತ ಉಪವಾಸ ಆರಂಭಿಸಿದರು.

ಬೀದಿ ಪಾಲಾಗಿರುವ ದಲಿತರಿಗೆ ಕಾಯಂ ಪುನರ್ವಸತಿ ಕಲ್ಪಿಸಲು ಶಾಸಕ ಅಮರೇಶ್ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ ವಾಸಿಗಳು, ದಲಿತ ಪರ ಸಂಘಟನೆಗಳು ಮತ್ತು ಸಿಪಿಎಂ ಜೊತೆಗೂಡಿ ಶಾಸಕರ ನಿವಾಸದ ಮುಂದೆಯೂ ಒಂದು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರು.

ಶಾಸಕರು ಸ್ಪಂದಿಸದ ಕಾರಣ ಅಲ್ಲಿಂದ ಪಟ್ಟಣದ ಸೌಂದರ್ಯ ವೃತ್ತದವರೆಗೆ ಮೆರವಣಿಗೆಯಲ್ಲಿ ಬಂದು ಉಪವಾಸ ಸತ್ಯಾಗ್ರಹಕ್ಕೆ ಮುಂದಾದರು. ಬೇಡಿಕೆಗಳು ಈಡೇರುವವರೆಗೂ ಉಪವಾಸ ಸತ್ಯಾಗ್ರಹವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ನಿವಾಸಿಗಳು ಮತ್ತು ಮುಖಂಡರು ತಿಳಿಸಿದರು.

ಈ ಹೋರಾಟಕ್ಕೆ 49 ದಿನಗಳು ಸಂದಿವೆ. ಆದರೆ ಯಾವೊಬ್ಬ ಜನಪ್ರತಿನಿಧಿಯೂ ಸಮಸ್ಯೆ ಪರಿಹರಿಸಲು ಮುಂದಾಗದಿರುವುದು ನಾಚಿಕೇಗೀಡಿನ ವಿಷಯ. ಪರಿಶಿಷ್ಟ ಜಾತಿ ಮೀಸಲಾತಿ ಅಡಿ ಅಯ್ಕೆಯಾದ ಸ್ಥಳೀಯ ಶಾಸಕ ಅಮರೇಶ್ ಸಹ ದಲಿತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಶ್ರಯ ಸಮಿತಿ ಅಧ್ಯಕ್ಷರಾಗಿರುವ ಶಾಸಕರು ಕೂಡಲೇ ಆಶ್ರಯ ಸಮಿತಿ ಸಭೆಯನ್ನು ನಡೆಸಿ ದಲಿತರಿಗೆ ನಿವೇಶನಗಳನ್ನು ಹಂಚಿ ಹಕ್ಕುಪತ್ರಗಳನ್ನು ನೀಡಬೇಕು. ಮನೆಗಳನ್ನು ಕಳೆದುಕೊಂಡಿರುವವರಿಗೆ ಪುನರ್ವಸತಿ ಮತ್ತು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸಿಪಿಎಂನ ರಾಜ್ಯ ಕಾರ್ಯದರ್ಶಿ ಜಿ.ಸಿ.ಬೈಯ್ಯಾರೆಡ್ಡಿ, ಜಿಲ್ಲಾ ಘಟಕದ ಮುಖಂಡರಾದ ಗಾಂಧೀನಗರ ನಾರಾಯಣಸ್ವಾಮಿ, ಕೀಲುಹೊಳಲಿ ಸತೀಶ್, ಜನವಾದಿ ಸಂಘಟನೆಯ ವಿ.ಗೀತ, ಮೆಕಾನಿಕ್ ಶ್ರೀನಿವಾಸ್, ಮಾರಾಂಡಹಳ್ಳಿ ಮಂಜುನಾಥ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹಾರೋಹಳ್ಳಿ ರವಿ. ಕರ್ನಾಟಕ ರೈತ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಮೌಳಿ, ಕೆ.ಎಸ್.ಲಕ್ಷ್ಮಿ, ಸಂಗಸಂದ್ರ ವಿಜಯಕುಮಾರ್, ಗುಜ್ಜಮಾರಾಂಡಹಳ್ಳಿ ಜಗದೀಶ್ ನೇತೃತ್ವ ವಹಿಸಿದ್ದರು. ಸತ್ಯಾಗ್ರಹ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT