ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನರ್ವಸತಿಗೆ ಒತ್ತಾಯಿಸಿ ಪ್ರತಿಭಟನೆ

ಹಳೇಬೀಡು ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ: ದಸಂಸ ಆರೋಪ
Last Updated 13 ಡಿಸೆಂಬರ್ 2013, 7:27 IST
ಅಕ್ಷರ ಗಾತ್ರ

ಹಳೇಬೀಡು: ಸರ್ಕಾರಿ ಯೋಜನೆಗಳು ದಲಿತರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಗ್ರಾಮ ಪಂಚಾಯಿತಿ­ಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಳೇಬೀಡು ಶಾಖೆ ಸದಸ್ಯರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಗ್ರಾಮಸಭೆ ನಡೆಸಲು ಸಿದ್ಧತೆ ನಡೆಯುತ್ತಿತ್ತು. ಕಚೇರಿಗೆ ಬೀಗ ಹಾಕಿದ ಪ್ರತಿಭಟನಾಕಾರರು ನ್ಯಾಯ ದೊರಕುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ. ಸಭೆ ನಡೆಯುವುದಕ್ಕೂ ಅವಕಾಶ ಕೊಡುವುದಿಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ­ಕಾರ್ಯ­ನಿರ್ವಹಣಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ದಲಿತ ಕಾಲೊನಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ­ಯಾಗುತ್ತಿಲ್ಲ. ಯಗಚಿ ಜಲಾಶಯ ಹಿನ್ನೀರಿನಿಂದ ಹಳೇಬೀಡಿಗೆ ಪೈಪ್‌ಲೈನ್‌ ಆಗಿದ್ದರೂ ಪಂಚಾಯಿತಿಯವರು ನೀರು ಸರಬರಾಜು ವ್ಯವಸ್ಥೆ ಮಾಡುತ್ತಿಲ್ಲ. ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಿಸಿದ್ದರೂ ಬಿಲ್‌ ಬಂದಿಲ್ಲ.

ಕಟ್ಟೆಸೋಮನಹಳ್ಳಿ ಸರ್ಕಾರಿ ಜಾಗಗಳಲ್ಲಿ ಗುಡಿಸಲು ಕಟ್ಟಿಕೊಂಡು ಸೂರಿಗಾಗಿ ಅಲೆಯುತ್ತಿರುವ ದಲಿತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿಲ್ಲ. ಹೆದ್ದಾರಿ 234ರಲ್ಲಿ ಮನೆ ಕಳೆದು­ಕೊಂಡು 13 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ­ನಿರ್ವಹಣಾಧಿಕಾರಿ ಬಸವರಾಜು ಅಯ್ಯಣ್ಣನವರ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಜಶೇಖರ್‌ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಶೀಘ್ರದಲ್ಲಿಯೇ ಪರಿಹಾರ ನೀಡಲಾಗುವುದು.

15 ದಿನದೊಳಗೆ ಕಟ್ಟೆಸೋಮನಹಳ್ಳಿ ದಲಿತರಿಗೆ ಪುನರ್ವಸತಿಗೆ ಕ್ರಮ­ಕೈಗೊಳ್ಳ­ಲಾಗು­ವುದು. ಕುಡಿಯುವ ನೀರಿನ ಸಮಸ್ಯೆ ಇರುವ ಸ್ಥಳದಲ್ಲಿ ಹೆಚ್ಚುವರಿ ಕೊಳವೆ ಬಾವಿಗೆ ಹಣ ಮಂಜೂರು ಮಾಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ದಲಿತ ಮುಖಂಡರಾದ ನಿಂಗರಾಜು, ಹುಲಿಕೆರೆ ಕುಮಾರ್‌, ತಿರುಮಲನಹಳ್ಳಿ ಶಿವಕುಮಾರ್, ಭೈರೇಶ್‌, ಪ್ರೇಮ್‌ಕುಮಾರ್‌ ಪ್ರತಿಭಟನೆಯ ನೇತೃತ್ವವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT