ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನರ್‌ವ್ಯಾಖ್ಯೆಯೇ ಸರಿ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಇವತ್ತಿನ ರಾಜಕಾರಣ ಎತ್ತ ಸಾಗುತ್ತಿದೆ ಎಂಬ ಬಗ್ಗೆ ನಾನು ವ್ಯಕ್ತಪಡಿಸಿದ (ಪ್ರವಾ. ಡಿ.26) ಅಭಿಪ್ರಾಯಗಳಿಗೆ ಡಿ.ಆರ್.ಪಾಟೀಲ್ ನೀಡಿರುವ ಪ್ರತಿಕ್ರಿಯೆಗೆ ಕೃತಜ್ಞ. ಅವರು ರಾಜಕಾರಣದ ಪುನರ್‌ವ್ಯಾಖ್ಯೆ ಎಂಬ ಪದದ ಬಗ್ಗೆ ತಕರಾರು ಎತ್ತಿದ್ದಾರೆ.
 
ಅದಕ್ಕೆ ಕೊಟ್ಟ ಕಾರಣ ನನ್ನ ವಾದದ ವಸ್ತುಸ್ಥಿತಿಯ ವಿಶ್ಲೇಷಣೆ. `ವಸ್ತುಸ್ಥಿತಿಯನ್ನು ಒಪ್ಪಿಕೊಂಡರೆ ಸಿದ್ಧಾಂತ ಸೋಲುತ್ತದೆ. ಅದಕ್ಕಾಗಿ ಪುನರ್‌ವ್ಯಾಖ್ಯೆಯು ಬದಲು ಪುನರಾವಲೋಕನ ಇಂದಿನ ಅನಿವಾರ್ಯತೆ~ ಎಂದಿದ್ದಾರೆ.
 
ನಾನು ವ್ಯಕ್ತಪಡಿಸ್ದ್ದಿದು ವಸ್ತುಸ್ಥಿತಿ. ಆದರೆ ಅವರಿಗೆ ಪರಿಣಾಮದ ಬಗ್ಗೆ ಭಯವಿದೆ. ಸಿದ್ಧಾಂತದ ಬಗ್ಗೆ ಅವರಿಗಿರುವ ಮೋಹ ಮತ್ತು ಸಿದ್ಧಾಂತ ಸೋಲುವ ಅಪಾಯ ಅವರನ್ನು ಕಂಗೆಡಿಸಿದೆ.

ನಾನು ಸಿದ್ಧಾಂತದ ಸೋಲಿನ ಬಗ್ಗೆ ಮಾತನಾಡಿಲ್ಲ. ಬದಲಾಗಿ ಸಿದ್ಧಾಂತದ ವಾಸನೆಯೂ ಇಲ್ಲದ ರಾಜಕೀಯದ ಬಗ್ಗೆ ಕೋಪವಿದೆ. ರಾಜಕೀಯ ಪಕ್ಷಗಳು ಮೂಲ ಸಿದ್ಧಾಂತದಿಂದ ದೂರವಾದ, ತಕ್ಷಣ ಫಲ ನೀಡುವ ಇಂದಿನ ವಾಸ್ತವ ರಾಜಕಾರಣದ ಬಗ್ಗೆ ನಾನು ಮಾತನಾಡಿದ್ದೆೀನೆ. 
 

ರಾಜಕೀಯ ಎಂಬ ಶಬ್ದವನ್ನು ಇಂದಿನ ಅವಕಾಶವಾದಿ, ಶಕ್ತಿ ಮತ್ತು ಹಣ ಕೇಂದ್ರಿತ ಹಾಗೂ ಪೆಟಿ ಪೊಲಿಟಿಕ್ಸ್ ಎಂಬ ಆಂಗ್ಲಶಬ್ದಕ್ಕೆ ಸಂವಾದಿಯಾಗಿ ಬಳಸಿದ್ದೆೀನೆ. ರಾಜಕಾರಣ ಎನ್ನುವುದು ಹಾಗಲ್ಲ.

ಅದು ಮುತ್ಸದ್ಧಿತನದಿಂದ ಕೂಡಿದ ರಾಜನೀತಿ ಜೊತೆಗೆ ಜನಹಿತದಿಂದ ಪ್ರೇರಿತವಾದ ಮೇಲ್ಮಟ್ಟದ ಕ್ರಿಯೆ. ರಾಜಕಾರಣದಲ್ಲಿ ತೊಡಗಿರುವವರು ರಾಜನೀತಿಜ್ಞರು ಅಥವಾ ಸ್ಟೇಟ್ಸ್‌ಮನ್ ಆಗಿರುತ್ತಾರೆ. ಇವತ್ತಿನ ರಾಜಕೀಯ ಈ ಹಂತಕ್ಕೆ ಏರಬೇಕಾಗಿದೆ ಎಂಬುದು ನನ್ನ ವಾದ.

ಇನ್ನು ಪುನರ್‌ವ್ಯಾಖ್ಯೆಯ ಪ್ರಶ್ನೆ. ಅದು ಇಡೀ ರಾಜಕಾರಣವನ್ನು ಇವತ್ತು ನಾವು ನೋಡುತ್ತಿರುವಂತೆ, ನೋಡಬಾರದು ಎಂಬ ಕಾರಣಕ್ಕೆ ಹೇಳಿದ ಮಾತುಗಳು. ರಾಜಕಾರಣ ಆ ಕ್ಷಣದ ಲಾಭಕ್ಕಾಗಿ ನಡೆಸುವ ದಂಧೆಯಾಗದೇ ಅದಕ್ಕೆ ಸೈದ್ಧಾಂತಿಕ ತಳಹದಿ ಇರಬೇಕು ಎಂಬುದನ್ನು ನಾನು ಸೂಕ್ಷ್ಮವಾಗಿ ಹೇಳಿದ್ದೆೀನೆ.

ಪುನರ್‌ವ್ಯಾಖ್ಯೆ ಎಂದು ನಾನು ಹೇಳಿರುವುದರ ಹಿಂದೆ ಈಗಿನ ರಾಜಕಾರಣದ ರೀತಿ ರಿವಾಜುಗಳು ಬದಲಾಗಬೇಕು ಎಂಬ ಕಳಕಳಿಯಿದೆ. ಹಾಗೆ ರಾಜಕಾರಣ ಎಂಬುದು ರಾಜಕೀಯ ಎಂಬ ಅರ್ಥದಲ್ಲಿ ಜನರ ಮನಸ್ಸುಗಳಲ್ಲಿ ಮೂಡಿರುವುದು ಮಾತ್ರವಲ್ಲ, ರಾಜಕಾರಣದ ಬಗ್ಗೆ ಜನ ಸಾಮಾನ್ಯರಿಗೆ ಗೌರವ ಕಡಿಮೆಯಾಗಿದೆ. ಆದ್ದರಿಂದ ಕಾಯಾ ವಾಚಾ ಮನಸಾ ರಾಜಕೀಯದ ಪುನರ್‌ವ್ಯಾಖ್ಯೆ ಅಂದರೆ ವಿಮರ್ಶೆ, ಟೀಕೆ ಆಗಬೇಕು.

ಪುನರಾವಲೋಕನ ಸೀಮಿತವಾದದ್ದು. ಅದು ನಡೆದುದ್ದನ್ನು ಮತ್ತೊಮ್ಮೆ ನೋಡುವ ಕ್ರಿಯೆ ಮಾತ್ರ. ಅಲ್ಲಿ ಮುಂದೇನು ಎಂಬ ಪ್ರಶ್ನೆ ಹಾಗೇ ಉಳಿದುಬಿಡುತ್ತದೆ. ಪುನರ್‌ವ್ಯಾಖ್ಯೆ ಹಾಗಲ್ಲ, ಅದು ಹಿಂದಿನದು ಮತ್ತು ಇಂದಿನದನ್ನು ನೋಡುವುದರ ಜೊತೆಗೆ ಮುಂದೆ ಆಗಬೇಕಾದ ಬದಲಾವಣೆಯ ಬಗ್ಗೆಯೂ ಮಾತನಾಡುತ್ತದೆ. ಹೀಗಾಗಿ ಪುನರ್‌ವ್ಯಾಖ್ಯೆ ಎನ್ನುವುದು ಸರಿಯಾದದ್ದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT