ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನಶ್ಚೇತನದ ಕನಸಿನಲ್ಲಿ ಮೃಗಾಲಯ

Last Updated 14 ಫೆಬ್ರುವರಿ 2012, 9:00 IST
ಅಕ್ಷರ ಗಾತ್ರ

ಗದಗ: ಮೃಗಾಲಯಕ್ಕೆ ವೀಕ್ಷಕರು ಬರದೇ ಆದಾಯವಿಲ್ಲ. ಆದಾಯವಿಲ್ಲದ ಕಾರಣ ಇಲ್ಲಿನ ಅಭಿವೃದ್ಧಿಯಾಗುತ್ತಿಲ್ಲ. ಅಭಿವೃದ್ಧಿ ಕಾಣದ ಕಾರಣ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಮೃಗಾಲಯಕ್ಕೆ ಸಾಧ್ಯವಾಗುತ್ತಿಲ್ಲ... ಇದು ಉತ್ತರ ಕರ್ನಾಟಕ ಭಾಗದ ದೊಡ್ಡ ಮೃಗಾಲಯ ಎಂಬ ಖ್ಯಾತಿ ಹೊಂದಿರುವ ಬಿಂಕದಕಟ್ಟಿ ಮೃಗಾಲಯದ ಸ್ಥಿತಿ.

ಸುಮಾರು 40 ಎಕರೆ ವಿಸ್ತೀರ್ಣದಲ್ಲಿ ಹಬ್ಬಿರುವ ಮೃಗಾಲಯದ ಆವರಣವು ಬೇಸಿಗೆ ಆರಂಭಕ್ಕೆ ಮುನ್ನವೇ ಒಣಗಿ ನಿಂತಿದ್ದು, ಮರಗಿಡಗಳು ಮುರಿದು ಬೀಳುವಂತಿವೆ. ಇನ್ನೊಂದೆಡೆ  ಪ್ರಾಣಿ-ಪಕ್ಷಿಗಳನ್ನು ಸೆರೆಯಾಗಿಡಲು ಇರುವ ಪಂಜರಗಳೂ ಬಣಗುಡುತ್ತಿದ್ದು, ಜೀವ ಸಂಕುಲಗಳ ಬರ ಎದುರಿಸುತ್ತಿವೆ. ಈ ಕಾರಣಕ್ಕೆ ವೀಕ್ಷಕರೂ ಇಲ್ಲಿಗೆ `ಬರ~ ದಂತಾಗಿದ್ದಾರೆ.

ಈ ಭಾಗದ ಪ್ರಮುಖ ಪ್ರಾಣಿ ಸಂಗ್ರಹಾಲಯವಾದ ಬಿಂಕದಕಟ್ಟಿ ಮೃಗಾಲಯವನ್ನು ಅಭಿವೃದ್ಧಿ ಪಡಿಸಬೇಕೆಂಬ ಕೂಗು ಆಗಿನಿಂದಲೂ ಕೇಳಿಬಂದಿದೆ. ಆದರೆ ಮೃಗಾಲಯ ಪ್ರಾಧಿಕಾರ ವರ್ಷಕ್ಕೆ 30 ಲಕ್ಷ ರೂಪಾಯಿ ಅನುದಾನ ಬಿಟ್ಟರೆ ಉಳಿದ ಯಾವ ಸಹಾಯವನ್ನೂ ನೀಡುತ್ತಿಲ್ಲ. ಹೀಗಾಗಿ ಇದರ ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ.

ಪ್ರವಾಸಿಗರ ಪ್ರವೇಶ ಶುಲ್ಕ ಹಾಗೂ ವಿವಿಧ ಮೂಲಗಳಿಂದ ಮೃಗಾಲಯಕ್ಕೆ ವರ್ಷಕ್ಕೆ 5-6 ಲಕ್ಷ ರೂಪಾಯಿ ಆದಾಯ ಬರುತ್ತಿದೆ. ಆದರೆ ಖರ್ಚು 24-26 ಲಕ್ಷ ರೂಪಾಯಿ ದಾಟುತ್ತಿದೆ. ಹೀಗಾಗಿ ಯಾವ ಅಭಿವೃದ್ಧಿಯೂ ಸಾಧ್ಯವಾಗುತ್ತಿಲ್ಲ ಎನ್ನುವ ಸಮಜಾಯಿಷಿ ಅಧಿಕಾರಿಗಳದ್ದು.

ಖಾಲಿ ಬೋನುಗಳ ಸ್ವಾಗತ

ಮೃಗಾಲಯದಲ್ಲೆಗ ಸದ್ಯ ಒಟ್ಟಾರೆ  220 ಪ್ರಾಣಿ-ಹಾಗೂ ಪಕ್ಷಿ ಸಂಕುಲಗಳಿವೆ. ಈ ಪೈಕಿ ಚುಕ್ಕೆ ಜಿಂಕೆಗಳದ್ದು ಸಿಂಹಪಾಲು. 49 ಜಿಂಕೆಗಳ ಜೊತೆಗೆ 24 ಕೃಷ್ಣಮೃಗಗಳು, 17 ಸಾರಂಗಗಳು, 13 ನೀಲಗಾಯ್‌ಗಳು ಹಾಗೂ 2 ನರಿಗಳಿವೆ. ಉಳಿದಂತೆ 8 ಮೊಸಳೆಗಳೇ ಇಲ್ಲಿನ ಆಕರ್ಷಣೆ. ಇದಲ್ಲದೆ ಪಾರಿವಾಳಗಳು, ಬಿಳಿಯ ನವಿಲುಗಳು, ಬಾತುಕೋಳಿ, ಕೊಕ್ಕರೆಗಳನ್ನು ಕಾಣಬಹುದು.

ಮೃಗಾಲಯದಲ್ಲಿ ಯಾವ ಪ್ರಾಣಿಯನ್ನೂ ಒಂಟಿಯಾಗಿ ಇಡಬಾರದೆಂಬ ನಿಯಮ ಇದೆ. ಆದರೆ ಇಲ್ಲಿ ಚಿರತೆ, ಹಾಗೂ ತೋಳ ತಿಂಗಳುಗಳಿಂದಲೂ ಒಂಟಿಯಾಗಿದ್ದು, ಸಂಗಾತಿಯ ನಿರೀಕ್ಷೆಯಲ್ಲಿವೆ. ಸಂಗಾತಿ ಮೃತಪಟ್ಟ ಕಾರಣ ಕರಡಿಗೂ ಈಚೆಗೆ ಒಂಟಿತನ ಬಂದೊದಗಿದ್ದು, ತೀರ ಮಂಕಾಗಿದೆ ಎನ್ನುತ್ತಾರೆ ಅದನ್ನು ನೋಡಿಕೊಳ್ಳುತ್ತಿರುವ ಸಿಬ್ಬಂದಿ.

ಎರೆಹುಳು ಗೊಬ್ಬರವನ್ನು ಸಿದ್ಧಪಡಿಸುತ್ತಿದ್ದ ಮೃಗಾಲಯ ಅದನ್ನು ಸುತ್ತಲಿನ ರೈತರಿಗೆ ಮಾರುತಿತ್ತು. ಈ ವರ್ಷ ಬರ ಕಾಣಿಸಿಕೊಂಡ ಪರಿಣಾಮ ಈ ಮಾರಾಟಕ್ಕೂ ಕತ್ತರಿ ಬಿದ್ದಿದೆ. ಸಿಬ್ಬಂದಿ ಕೊರತೆ
ವಿಭಾಗೀಯ ಅರಣ್ಯಾಧಿಕಾರಿ ಎಸ್.ವಿ. ಪಾಟೀಲ ಅವರು ಮೃಗಾಲಯ ನಿರ್ವಹಣೆ ಉಸ್ತುವಾರಿ ಹೊತ್ತಿದ್ದು, ಆರ್‌ಎಫ್‌ಒ ನಿರ್ವಹಿಸುತ್ತಿದ್ದಾರೆ.
 
ಇದಲ್ಲದೆ  ಒಬ್ಬ ಫಾರೆಸ್ಟರ್, ಇಬ್ಬರು ಗಾರ್ಡ್‌ಗಳು, 6 ಮಂದಿ ಕಾವಲುಗಾರರು ಹಾಗೂ 6 ಪಿಸಿಪಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ಗುತ್ತಿಗೆ ಕಾರ್ಮಿಕರೂ ಸಹ ಇದ್ದಾರೆ. ದಿನಗೂಲಿ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎನ್ನುವ ಬೇಡಿಕೆಗಳು ಆಗಿನಿಂದಲೂ ಕೇಳಿಬರುತ್ತಿವೆ.

ಪುನಶ್ಚೇತನದ ಭರವಸೆ

`ಮೃಗಾಲಯದ ಅಭಿವೃದ್ಧಿ ಹಾಗೂ ಇಲ್ಲಿಗೆ ಇನ್ನಷ್ಟು ಪ್ರಾಣಿಗಳನ್ನು ತರುವ ಕುರಿತಂತೆ ಇಲಾಖೆ ಹಾಗೂ ಮೃಗಾಲಯ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಮೈಸೂರು ಮೊದಲಾದ ಮೃಗಾಲಯಗಳ ಜೊತೆ ಈ ಕುರಿತು ಮಾತುಕತೆ ಪ್ರಗತಿಯಲ್ಲಿದೆ~ ಎನ್ನುತ್ತಾರೆ ಡಿಎಫ್‌ಒ ಎಸ್.ವಿ. ಪಾಟೀಲ.

ಮುಂಬರುವ ಬಜೆಟ್‌ನಲ್ಲಿ ಸಹ ಈ ಮೃಗಾಲಯದ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸಲಾಗಿದೆ. 3 ಲಕ್ಷ ರೂಪಾಯಿ ವೆಚ್ಚದಲ್ಲಿ ಚಿರತೆ ವಾಸಸ್ಥಾನದ ನವೀಕರಣ, ಕಾಡುಕೋಣಗಳ ವಾಸಸ್ಥಾನದ ನಿರ್ಮಾಣ, 2 ಲಕ್ಷ ರೂಪಾಯಿ ವೆಚ್ಚದಲ್ಲಿ ಸಣ್ಣ ಪ್ರಾಣಿ ಹಾಗೂ ಪಕ್ಷಿಗಳಿಗಾಗಿ ಕಟ್ಟಡ ನಿರ್ಮಾಣ, 2 ಲಕ್ಷ ರೂ. ವೆಚ್ಚದಲ್ಲಿ ಹದ್ದಿನ ಪಂಜರ ವಿಸ್ತರಣೆ, 90 ಸಾವಿರ ರೂಪಾಯಿ ವೆಚ್ಚದಲ್ಲಿ ಮೃಗಾಲಯಕ್ಕೆ ಬರುವ ಪ್ರೇಕ್ಷಕರಿಗಾಗಿ ನೀರು ಮೊದಲಾದ ವ್ಯವಸ್ಥೆಗಳ ವಿಸ್ತರಣೆಗಳು ಈ ಪ್ರಸ್ತಾವದಲ್ಲಿ ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT