ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್ ಸಂಕ್ರಮಣ!

Last Updated 20 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ದು ಮತ್ತೆ ಪುನೀತ್ ಸಂಕ್ರಮಣ ಕಾಲ. ಬಹುನಿರೀಕ್ಷಿತ `ಯಾರೇ ಕೂಗಾಡಲಿ' ಚಿತ್ರ ಈ ವಾರ ತೆರೆ ಕಾಣುತ್ತಿದ್ದರೆ. ಇನ್ನೊಂದೆಡೆ ಅವರು ನಡೆಸಿಕೊಡುವ ಜನಪ್ರಿಯ ರಿಯಾಲಿಟಿ `ಕನ್ನಡದ ಕೋಟ್ಯಧಿಪತಿ'ಯ ಎರಡನೇ ಕಂತು ಪ್ರಾರಂಭವಾಗುತ್ತಿದೆ. ಎರಡರ ಬಗ್ಗೆಯೂ ಪುನೀತ್ ಅಪಾರ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಏಕೆಂದರೆ ಅವರ ಹಿಂದಿನ ಎರಡು ಚಿತ್ರಗಳಾದ `ಪರಮಾತ್ಮ' ಮತ್ತು `ಅಣ್ಣಾಬಾಂಡ್' ಅಭಿಮಾನಿಗಳ ಮನತಲುಪುವಲ್ಲಿ ಯಶಸ್ವಿಯಾಗಿರಲಿಲ್ಲ. `ಕನ್ನಡದ ಕೋಟ್ಯಧಿಪತಿ'ಯ ಮೊದಲ ಕಂತಿನಲ್ಲಿ ದೊರೆತ ಪ್ರತಿಕ್ರಿಯೆ ಅವರ ಜವಾಬ್ದಾರಿಗಳನ್ನು ಹೆಚ್ಚಿಸಿದೆ.

`ಯಾರೇ ಕೂಗಾಡಲಿ' ಜನ ನೋಡಲೇಬೇಕಾದ ವಿಶಿಷ್ಟ ಸಿನಿಮಾ ಎನ್ನುತ್ತಾರೆ ಪುನೀತ್. ಇತ್ತೀಚಿನ ಸಿನಿಮಾಗಳಲ್ಲಿ ಹೊಸ ಪ್ರಯತ್ನವಿರುವ ಚಿತ್ರವಿದು. ಉತ್ತಮ ಸಾಮಾಜಿಕ ಸಂದೇಶ ನೀಡುವ ಕಥೆ ಇದರಲ್ಲಿದೆ. ತಾಂತ್ರಿಕವಾಗಿಯೂ ಸಾಕಷ್ಟು ವಿಶೇಷತೆಗಳಿವೆ. ಮುಖ್ಯವಾಗಿ ತಾರಾಬಳಗ ಈ ಚಿತ್ರದ ಬಹುದೊಡ್ಡ ಆಸ್ತಿ ಎನ್ನುತ್ತಾರೆ ಅವರು.

ಗಿರೀಶ ಕಾರ್ನಾಡರಂಥ ಹಿರಿಯರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಅದೊಂದು ಅದ್ಭುತ ಅನುಭವ. `ಹುಡುಗರು' ಬಳಿಕ ನಾನು ಮತ್ತು ಯೋಗೀಶ್ ಸೇರಿ ನಟಿಸಿದ್ದೇವೆ. ಯೋಗಿ ನಟನೆಯನ್ನು ವರ್ಣಿಸಲು ಸಾಧ್ಯವಿಲ್ಲ. ಅದನ್ನು ತೆರೆಯ ಮೇಲೆಯೇ ಸವಿಯಬೇಕು. ನಟಿಯರಾದ ಭಾವನಾ, ಸಿಂಧೂ, ನಿವೇದಿತಾ, ಮಾಳವಿಕ, ನಟರಾದ ರವಿಶಂಕರ್, ಸಾಧುಕೋಕಿಲ ಹೀಗೆ ದೊಡ್ಡ ತಾರೆಯರ ದಂಡು ಜೊತೆಗೂಡಿದೆ. ಪ್ರತಿ ಚಿಕ್ಕ ಪಾತ್ರದಲ್ಲೂ ವೈಶಿಷ್ಟ್ಯವಿದೆ. ಆ್ಯಕ್ಷನ್, ಸೆಂಟಿಮೆಂಟ್, ಹಾಸ್ಯ ಹೀಗೆ ಎಲ್ಲವೂ ಹದವಾಗಿ ಬೆರೆತಿದೆ. ಇದು ಪ್ರೇಕ್ಷಕರಿಗೋಸ್ಕರ ಮಾಡಿರುವ ಚಿತ್ರ ಎನ್ನುವ ಪುನೀತ್, ಪ್ರತಿಯೊಬ್ಬರೂ ಚಿತ್ರ ನೋಡಲೇಬೇಕು ಎಂಬ ತಮ್ಮ ಬಯಕೆಗೆ ಕಾರಣ ಚಿತ್ರ ವೀಕ್ಷಿಸಿದ ಬಳಿಕ ಅರ್ಥವಾಗುತ್ತದೆ ಎಂಬ ಭರವಸೆ ಹೊಂದಿದ್ದಾರೆ.

ನಿರ್ದೇಶಕ ಸಮುದ್ರ ಖಣಿಯವರ ಶ್ರದ್ಧೆ ಪುನೀತ್‌ಗೆ ತುಂಬಾ ಮೆಚ್ಚುಗೆಯಾಗಿದೆ. ಅವರೊಬ್ಬ ಅದ್ಭುತ ತಂತ್ರಜ್ಞ ಎಂದು ಪ್ರಶಂಸಿಸುತ್ತಾರೆ. ಜೊತೆಯಲ್ಲಿ ಅವರಲ್ಲಿ ಮಾನವೀಯ ವ್ಯಕ್ತಿತ್ವವಿದೆ. ಸಿನಿಮಾ ಹಾಗೂ ಬದುಕು ಎರಡನ್ನೂ ಒಂದೇ ರೀತಿ ಪರಿಗಣಿಸಿದ್ದಾರೆ. ಚಿತ್ರೀಕರಣ ನಡೆಸುವಾಗ ಸಣ್ಣ ಸನ್ನಿವೇಶದಲ್ಲೂ ಚಿಕ್ಕಪುಟ್ಟ ತಪ್ಪುಗಳಿಗೆ ಅವರು ರಾಜಿಯಾಗುತ್ತಿರಲಿಲ್ಲ. ನಟನಾಗಿ ಅವರ ಬಳಿ ತುಂಬಾ ಕಲಿತಿದ್ದೇನೆ ಎಂದು ಪುನೀತ್ ಹೇಳುತ್ತಾರೆ.

ಪುನೀತ್ ಕೇವಲ ಕನ್ನಡಕ್ಕೆ ಸೀಮಿತ ನಟರಲ್ಲ. ರಾಷ್ಟ್ರಮಟ್ಟದಲ್ಲಿ ಛಾಪು ಮೂಡಿಸುವ ಪ್ರತಿಭೆ ಅವರಲ್ಲಿದೆ ಎಂಬ ನಿರ್ದೇಶಕ ಸಮುದ್ರ ಖಣಿಯವರ ಹೊಗಳಿಕೆಯನ್ನು ಪುನೀತ್ ವಿನಯದಿಂದ ಸ್ವೀಕರಿಸುತ್ತಾರೆ. ಅನೇಕ ಪ್ರತಿಭಾನ್ವಿತ ಕಲಾವಿದರೊಂದಿಗೆ ಕೆಲಸ ಮಾಡಿರುವ ಅವರು ನನಗೆ ಈ ರೀತಿ ಕಾಂಪ್ಲಿಮೆಂಟ್ ನೀಡುವುದು ಅವರಲ್ಲಿನ ದೊಡ್ಡಗುಣ ಎನ್ನುತ್ತಾರೆ. ಸಮುದ್ರ ಖಣಿ ಮತ್ತು ಪುನೀತ್ ಜೋಡಿಯ ಮತ್ತೊಂದು ಚಿತ್ರದ ಸಿದ್ಧತೆ ನಡೆದಿದೆ. ಶೀಘ್ರದಲ್ಲೇ ಅದು ಸೆಟ್ಟೇರುವ ಸಾಧ್ಯತೆಗಳಿವೆ.

`ಸಂಗೊಳ್ಳಿ ರಾಯಣ್ಣ', `ಎದೆಗಾರಿಕೆ', `ಡ್ರಾಮಾ' ಮುಂತಾದ ಇತ್ತೀಚೆಗೆ ತೆರೆಕಂಡ ಅನೇಕ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಅವರಲ್ಲಿ ಹರ್ಷ ತಂದಿದೆ. ಚಿತ್ರರಂಗ ಸ್ವಲ್ಪ ಕಾಲ ಹಿನ್ನಡೆ ಅನುಭವಿಸಿದಂತೆ ಇತ್ತು. ಈಗ ಮತ್ತೆ ಚಿಗಿತುಕೊಂಡಿದೆ. ಜನ ಹೀಗೆ ಸಿನಿಮಾಗಳನ್ನು ಸ್ವೀಕರಿಸಿದರೆ, ಚಿತ್ರೋದ್ಯಮವೂ ಬೆಳೆಯುತ್ತದೆ ಎಂಬ ಆಶಯ ಅವರದು.

ಪುನೀತ್‌ರಂಥ ನಟರು ಹೆಚ್ಚು ಸಿನಿಮಾಗಳನ್ನು ಮಾಡಿದರೆ ಚಿತ್ರೋದ್ಯಮ ಬೆಳವಣಿಗೆ ಸಾಧ್ಯ. ಆದರೆ ಅವರು ವರ್ಷಕ್ಕೆ ಒಂದು ಸಿನಿಮಾ ಮಾತ್ರ ಮಾಡುತ್ತಾರೆ ಎಂಬ ಮಾತುಗಳಿವೆ. `ವರ್ಷಕ್ಕೆ ಒಂದೆರಡು ಸಿನಿಮಾ ಎಂದು ನಿಯಮಗಳನ್ನುನಾನುಹಾಕಿಕೊಂಡಿಲ್ಲ. ನಾಲ್ಕೈದು ಸಿನಿಮಾಗಳಲ್ಲಿ ನಟಿಸಲು ನಾನು ಸಿದ್ಧ. ಆದರೆ ಉತ್ತಮ ಕಥೆಯೇ ಬರುತ್ತಿಲ್ಲ' ಎನ್ನುವುದು ಅವರ ಬೇಸರ.

`ಕನ್ನಡದ ಕೋಟ್ಯಧಿಪತಿ' ಮರಳುತ್ತಿರುವುದು ಅವರಿಗೆ ಸಂತಸ ತಂದಿದೆ. ಇಷ್ಟು ಕಾಲ ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೆ. ಈಗ ಜನರೊಂದಿಗೆ ಬೆರೆಯುವ ಅವಕಾಶ ಮತ್ತೆ ದೊರೆತಿದೆ. ಹಿಂದಿಗಿಂತಲೂ ಚೆನ್ನಾಗಿ ನಡೆಸಿಕೊಡಬೇಕು ಎಂಬ ಸವಾಲು ಮುಂದಿದೆ ಎನ್ನುತ್ತಾರೆ. ಪ್ರತಿ ಹೊಸ ಸಿನಿಮಾ ಮಾಡುವಾಗಲೂ ತಳಮಳ ಇದ್ದೇ ಇರುತ್ತದೆ. ರಿಯಾಲಿಟಿ ಷೋ ನಡೆಸಿಕೊಡುವಾಗಲೂ ಹಿಂದೆ ಇದ್ದಂತೆ ಈಗಲೂ ಸ್ವಲ್ಪ ಭಯವಿದೆ ಎನ್ನುತ್ತಾರೆ ಪುನೀತ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT