ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ: ಅವ್ಯವಹಾರ ತನಿಖೆಗೆ ಸಮಿತಿ ರಚನೆ

Last Updated 16 ಅಕ್ಟೋಬರ್ 2011, 9:05 IST
ಅಕ್ಷರ ಗಾತ್ರ

ಅರಸೀಕೆರೆ: ಎಸ್‌ಎಫ್‌ಸಿ ಮುಕ್ತನಿಧಿ ಅನುದಾನ ಶೇ 7.25ರಡಿ ಬಡವರಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡುವ ಯೋಜನೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸದೇ ಸಂಪನ್ಮೂಲ ಸಂಯೋಜನಾಧಿಕಾರಿ ಪರಮೇಶ್ವರಪ್ಪ ಹಣ ದುರ್ಬಳಕೆ ಮಾಡಿಕೊಂಡಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಸಮಿತಿ ರಚಿಸಲು ಶುಕ್ರವಾರ ನಡೆದ ಪುರಸಭೆ ವಿಶೇಷ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

ಪುರಸಭಾ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷ ಎಂ. ಶಮೀವುಲ್ಲಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಪಿ. ದೇವಕುಮಾರ್ ಮಾತನಾಡಿ, ಚುನಾಯಿತ ಜನಪ್ರತಿನಿಧಿಗಳಿಗೆ ಬೆಲೆ ಇಲ್ಲದಂತಾಗಿದೆ.

ಬಡವರಿಗೆ ಅನುಕೂಲವಾಗಲಿ ಎಂದು ಸರ್ಕಾರ ಎಸ್‌ಎಫ್‌ಸಿ ಮುಕ್ತನಿಧಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಸಮರ್ಪಕವಾಗಿಲ್ಲ, ಅಲ್ಲದೆ ಫಲಾನುಭವಿಗಳನ್ನು ಗುರುತಿಸುವಾಗ ಸದಸ್ಯರನ್ನು ಗಣನೆಗೆ ತೆಗೆದುಕೊಂಡಿಲ್ಲ. ಏಕಪಕ್ಷೀಯ ನಿರ್ಣಯ ಕೈಗೊಂಡು ಜನಪ್ರತಿನಿಧಿಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಜೆಡಿಎಸ್ ಸದಸ್ಯ ಲೋಕೇಶ್ ದನಿಗೂಡಿಸಿದರು.

ಶಾಸಕ ಕೆ.ಎಂ. ಶಿವಲಿಂಗೇಗೌಡ ಪ್ರತಿಕ್ರಿಯೆ ನೀಡಿ, ಚುನಾಯಿತ ಪ್ರತಿನಿಧಿಗಳ ಕಡೆಗಣನೆ ಸಲ್ಲದು. ಫಲಾನುಭವಿಗಳ ಆಯ್ಕೆ ವೇಳೆ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳಬೇಕು. ಸದಸ್ಯರ ಹಕ್ಕು ಮೊಟುಕುಗೊಳಿಸಿರುವ ಈ ವಿಷಯ ಗಂಭೀರವಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಬೇಕು ಎಂಬ ಸದಸ್ಯರು ಸಲಹೆಗೆ ಒಪ್ಪಿಗೆ ನೀಡಿದರು.

ಉದ್ಯಾನವನ ನಿರ್ಮಾಣ: ಹಳೆ ಪುರಸಭೆ ಬದಿ ಡಾ. ಅಂಬೇಡ್ಕರ್ ವೃತ್ತದಲ್ಲಿ ಇರುವ ಖಾಲಿ ಜಾಗದಲ್ಲಿ ಉದ್ಯಾನವನ ನಿರ್ಮಿಸಬೇಕು ಎಂಬ ವಿಷಯ ಸಭೆಯಲ್ಲಿ ಚರ್ಚೆಗೆ ಬಂದಿತು. ಇದಕ್ಕೆ ಮೊದಲು ಬಿಜೆಪಿ ಸದಸ್ಯರು ವಿರೋಧಿಸಿದರೂ ಕೊನೆಯಲ್ಲಿ ಶಾಸಕರ ಸಲಹೆಗೆ ಎಲ್ಲ ಸದಸ್ಯರು ಧ್ವನಿ ಮತದಿಂದ ಒಪ್ಪಿಗೆ ನೀಡಿದರು.

ಈ ವೃತ್ತದಲ್ಲಿ ದಲಿತ ಒಕ್ಕೂಟ ಮತ್ತು ಕೆಲವು ಪ್ರಗತಿಪರ ಸಂಘಟನೆಗಳು ಉದ್ಯಾನವನ ನಿರ್ಮಿಸಬೇಕು ಎಂದು ಒತ್ತಾಯಿಸುತ್ತಿವೆ. ಆದರೂ ಯಾರದೋ ಒತ್ತಡಕ್ಕೆ ಪುರಸಭಾ ಆಡಳಿತ ಮಾತ್ರ ಮೌನದಿಂದಿದೆ ಎಂದು ದೇವಕುಮಾರ್, ಲೋಕೇಶ್ ಆರೋಪಿಸಿದರು. ಸದಸ್ಯರ ಮಾತಿಗೆ ಪ್ರತಿಕ್ರಿಯಿಸಿದ ಶಿವಲಿಂಗೇಗೌಡ ಪಟ್ಟಣದಲ್ಲಿ ಉದ್ಯಾನವನದ ಕೊರತೆಯಿದೆ.
 
ಉದ್ಯಾನವನ ನಿರ್ವಹಣೆಯನ್ನು ಯಾವುದೇ ಸಂಘ-ಸಂಸ್ಥೆಗಳಿಗೆ ನೀಡದೇ ಪುರಸಭಾ ಆಡಳಿತವೇ ನಿರ್ವಹಿಸಿದರೆ ಇನ್ನು ಉತ್ತಮವಾಗಿತ್ತದೆ ಎಂದು ಹೇಳಿದಾಗ ಎಲ್ಲರೂ ಒಪ್ಪಿಗೆ ನೀಡಿದರು. ಬಿಜೆಪಿ ನಾಮ ನಿರ್ದೇಶಿತ ಸದಸ್ಯರಾದ ಎ.ಎಲ್. ನಾರಾಯಣ, ಶಂಕರಯ್ಯ, ಆಡಳಿತ ಪಕ್ಷದ ಆನಂದ್‌ಪೈ,ಗಣೇಶ್, ಕಂಠಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT