ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ: ಆಡಳಿತ ವಶೀಕರಣಕ್ಕೆ ವಾಮಾಚಾರ?

Last Updated 15 ಫೆಬ್ರುವರಿ 2012, 5:25 IST
ಅಕ್ಷರ ಗಾತ್ರ

ಹರಪನಹಳ್ಳಿ: ಸ್ಥಳೀಯ ಪುರಸಭಾ ಅಧ್ಯಕ್ಷರ ಕೊಠಡಿಯ ಹೊರಭಾಗದ ಎಡದಿಕ್ಕಿಗೆ ಹೊಂದಿಕೊಂಡಂತೆ ಕಿಡಿಗೇಡಿಗಳು ಭೂತರಾಯನ ಫೋಟೊ ಪ್ರತಿಷ್ಠಾಪಿಸಿ ಕುಂಕುಮ ಎರಚಿದ ಪ್ರಸಂಗ ಸೋಮವಾರ ಸಂಜೆ ನಡೆದಿದೆ.

ಕಿಡಿಗೇಡಿಗಳ ಉದ್ದೇಶ ಏನು? ಯಾವ ಉದ್ದೇಶ ಈಡೇರಿಕೆಗಾಗಿ ಈ ವಾಮಾಚಾರದ ಕೃತ್ಯ ನಡೆಸಿದ್ದಾರೆ? ಎನ್ನುವ ಸ್ಪಷ್ಟ ಮಾಹಿತಿಯ ಸಂದೇಶ ಇದುವರೆಗೂ ಬಹಿರಂಗ ಆಗಿಲ್ಲವಾದರೂ, ದುಷ್ಕೃತ್ಯದ ಹಿಂದೆ ಬಲವಾದ ಕಾರಣ ಇರಲೆಬೇಕೆಂಬ ಊಹಾಪೋಹದ ಮಾತುಗಳು ಅತ್ತಿಂದಿತ್ತ ಸರಿದಾಡತೊಡಗಿವೆ. ಹಾಗಂತ ಪುರಸಭೆಯ ಅಂತರಂಗದ ಪಡಸಾಲೆಯಲ್ಲಿ ಇಂತಹ ಕೃತ್ಯ ನಡೆಯುತ್ತಿರುವುದು ಇದೇ ಮೊದಲ ಸಲ ಅಲ್ಲ.
 
ಕಳೆದ ಎರಡೂವರೆ ತಿಂಗಳಿನಿಂದಲೂ ವಾಮಾಚಾರ ನಡೆಯುತ್ತಿರುವ ಘಟನೆಗಳು ಆಗಾಗ್ಗೆ ನಡೆಯುತ್ತಿವೆಯಾದರೂ, ಸಂಬಂಧಿಸಿದ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ತನಿಖೆಗೆ ಒಪ್ಪಿಸದ ಅಲಕ್ಷ್ಯತನದಿಂದಾಗಿ ಮತ್ತೆಮತ್ತೆ ಇಂತಹ ಘಟನೆಗಳು ಮರುಕಳಿಸುತ್ತಲೆ ಇವೆ.

ಕಳೆದ ಒಂದೂವರೆ ತಿಂಗಳ ಹಿಂದೆಯೂ ಪುರಸಭಾ ಅಧ್ಯಕ್ಷರ ಕೊಠಡಿಯ ಒಳಭಾಗದಲ್ಲಿ ಬೂದಿಯಲ್ಲಿ ಎರಚಲಾಗಿತ್ತು! ಜತೆಗೆ, ಅವರ ಖುರ್ಚಿಯ ಹಿಂಬದಿಯಲ್ಲಿ 150ಕ್ಕೂ ಅಧಿಕ ಮೊಳೆಗಳನ್ನು ಸುರಿಯಲಾಗಿತ್ತು!! ಬಳಿಕ ಮುಖ್ಯಾಧಿಕಾರಿ ಕೊಠಡಿಯಲ್ಲಿಯೂ ನಿಂಬೆಹಣ್ಣು ಇಡುವ ಮೂಲಕ ಭೀತಿ ಸೃಷ್ಟಿಸಲಾಯಿತು.

ಈಗ ಭೂತರಾಯನ ಫೋಟೊ ಪ್ರತಿಷ್ಠಾಪಿಸಲಾಗಿದೆ. ಜತೆಗೆ, ಕುಂಕುಮ ಎರಚಲಾಗಿದೆ. ಇದನ್ನು ಗಮನಿಸಿದ ಸಿಬ್ಬಂದಿ, ಅಧ್ಯಕ್ಷ ಬಿ. ಮಹಬೂಬ್ ಸಾಹೇಬ್ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಅಷ್ಟೇನು ತಲೆಕೆಡಿಸಿಕೊಳ್ಳದ ಅಧ್ಯಕ್ಷರು, ತೆರವುಗೊಳಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಆದರೆ, ಫೋಟೊಕ್ಕೆ ಕೈಹಾಕಿದರೆ, ಎಲ್ಲಿ ಭೂತಪ್ಪ ಮೈಮೇಲೆ ಆವರಿಸಿಕೊಳ್ಳುತ್ತಾವೆ ಎಂಬ ಭಯದಿಂದ ಸಿಬ್ಬಂದಿ ತೆರವುಗೊಳಿಸಲು ಹಿಂದೇಟು ಹಾಕಿದ್ದಾರೆ.
ಹೀಗಾಗಿ, ಭೂತರಾಯ ಇಡೀ ರಾತ್ರಿ ಪುರಸಭೆಯ ಆವರಣದಲ್ಲಿ ಕಾಲಕಳೆದಿದ್ದಾನೆ.

ಮಂಗಳವಾರ ಮುಂಜಾನೆ ಭೂತರಾಯ ಜಾಗ ಕದಲಿಸದೆ ಠಿಕಾಣಿ ಹೊಡೆದಿರುವುದನ್ನು ಗಮನಿಸಿದ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿ ಸಿಬ್ಬಂದಿಯ ಮುಖಾಂತರ ತೆರವುಗೊಳಿಸಿ ಭೂತರಾಯನನ್ನು ಸಮೀಪದ ಗೋಕರ್ಣೇಶ್ವರ ದೇವಸ್ಥಾನದ ಮುಂಭಾಗದ ಅರಳಿಕಟ್ಟೆಗೆ ಸ್ಥಳಾಂತರಿಸಿದ್ದಾರೆ.

ಪಟ್ಟಣದ ಅಭಿವೃದ್ಧಿಯ ದೃಷ್ಟಿಯಿಂದ ಆಡಳಿತಕ್ಕೆ ಸೂಕ್ತ ಸಲಹೆ, ನಿರ್ದೇಶನ ನೀಡಿದರೆ, ಅದನ್ನು ಪಾಲಿಸುವ ಮೂಲಕ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತೇವೆ. ಆದರೆ, ಇಂತಹ ಮಾಟ-ಮಂತ್ರಗಳು ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಾಣಬೇಕು. ಈ ದುಷ್ಕೃತ್ಯಗಳು ಎಸಗಿದ ಕಿಡಿಗೇಡಿಗಳಿಗೆ ತಿರುಗುಬಾಣ ಆಗಬಹುದು ಎಂದು `ಪ್ರಜಾವಾಣಿ~ಗೆ ಮಹಬೂಬ್ ಸಾಹೇಬ್ ಪ್ರತಿಕ್ರಿಯಿಸಿದರು.

27ಸದಸ್ಯ ಬಲ ಹೊಂದಿರವ ಪುರಸಭೆಯಲ್ಲಿ ಮೂರ‌್ನಾಲ್ಕು ಬಣಗಳು ಸೃಷ್ಟಿಯಾಗಿವೆ. ಅಧ್ಯಕ್ಷರು ಹಾಗೂ ಅಧಿಕಾರಿಗಳು ಪ್ರಬಲ ಬಣದ ನಿರ್ದೇಶನದಂತೆ ಅಧಿಕಾರ ಚಲಾಯಿಸುತ್ತಾರೆ. ಹೀಗಾಗಿ, ಅಧ್ಯಕ್ಷರನ್ನು `ವಶೀಕರಣ~ ಮಾಡಿಕೊಳ್ಳುವ ಸಲುವಾಗಿ ಇಂತಹ ವಾಮಾಚಾರ ನಡೆಸಿರಬಹುದು ಎಂಬ ಊಹಾಪೋಹದ ಮಾತುಗಳು ಕೇಳಿಬರುತ್ತಿವೆ.
 
ಒಟ್ಟಾರೆ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಿದಾಗ ಮಾತ್ರ ಸತ್ಯ ಹೊರಬರಲಿದೆ.  ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ, ಸದಸ್ಯರ ಅನರ್ಹತೆ, ಅಕ್ರಮ ಡೋರ್‌ನಂಬರ್, ನಿವೇಶನ ಕಬಳಿಕೆಯಂತಹ ಗುರುತರವಾದ ಆರೋಪಗಳ ಕೆಸರಿನಲ್ಲಿ ಹೊರಳಾಡುತ್ತಿರುವ ಪುರಸಭೆ, ವಾಮಾಚಾರದಂತಹ ಕೃತ್ಯಕ್ಕೂ ಒಳಗಾಗುವ ಮೂಲಕ ಪುರಸಭೆ ಜನರ ಪಾಲಿಗೆ ನಗೆಪಾಟಲಿಗೆ ಗುರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT