ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ ಮುಖ್ಯಾಧಿಕಾರಿ ಸೇರಿ ಮೂವರು ಲೋಕಾಯುಕ್ತ ಬಲೆಗೆ

Last Updated 17 ಡಿಸೆಂಬರ್ 2010, 12:45 IST
ಅಕ್ಷರ ಗಾತ್ರ

ಮಳವಳ್ಳಿ: ಸೇವಾ ದಾಖಲಾತಿ ಮತ್ತು ಎಲ್‌ಪಿಸಿ ಕಳುಹಿಸಿಕೊಡಲು 30 ಸಾವಿರ ಲಂಚಕ್ಕಾಗಿ  ಪೀಡಿಸುತ್ತಿದ್ದ ಪುರಸಭೆ ಮುಖ್ಯಾಧಿಕಾರಿ ಮಂಜುನಾಥಸ್ವಾಮಿ ಸೇರಿ ಮೂವರು ಸಿಬ್ಬಂದಿ ಗುರುವಾರ ಲೋಕಾಯುಕ್ತ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದಾರೆ.

ಮಳವಳ್ಳಿ ಪುರಸಭೆಯ ಕಿರಿಯ ಎಂಜಿನಿಯರ್ ಪ್ರಕಾಶ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಶಿವಲಿಂಗಯ್ಯ ಲೋಕಾಯಕ್ತರಿಗೆ ಸಿಕ್ಕಿಬಿದ್ದಿದ್ದಾರೆ.ಲೋಕಾಯುಕ್ತ ಅಧಿಕಾರಿಗಳ ಪ್ರಕಾರ, ಪುರಸಭೆಯಲ್ಲಿ ಹಿಂದೆ ಕಾರ್ಯನಿರ್ವಹಿಸಿ ಮೈಸೂರಿಗೆ ವರ್ಗಾವಣೆಗೊಂಡಿದ್ದ ಕಿರಿಯ ಎಂಜಿನಿಯರ್ ಎ.ಡಿ.ನಾಗರಾಜು ಅವರ ಸೇವಾ ದಾಖಲಾತಿ ವರ್ಗಾವಣೆಗಾಗಿ ಈ ಮೂವರು 30 ಸಾವಿರ ರೂಪಾಯಿ ಲಂಚಕ್ಕಾಗಿ ಪೀಡಿಸುತ್ತಿದ್ದರು. ಎ.ಡಿ.ನಾಗರಾಜು ಮೈಸೂರು  ಮಹಾನಗರ ಪಾಲಿಕೆಗೆ ವರ್ಗಾವಣೆಗೊಂಡಿದ್ದು, ಅಲ್ಲಿಂದ ತಿ.ನರಸಿಪುರಕ್ಕೆ ವರ್ಗವಾಗಿದ್ದರೂ ಅವರ ಸೇವಾ  ದಾಖಲಾತಿ ಪುಸ್ತಕ ಮಾತ್ರ ಇನ್ನೂ ಪುರಸಭೆಯಿಂದ ಕಳುಹಿಸಿಕೊಟ್ಟಿರಲಿಲ್ಲ.

ಇದಕ್ಕಾಗಿ ಕಳೆದ ಆರು ತಿಂಗಳಿಂದ ಕಚೇರಿಗೆ ಅಲೆದಾಡಿದ ನಾಗರಾಜು, ಬಳಿಕ ಮಂಡ್ಯ ವಿಭಾಗದ  ವ್ಯಾಪ್ತಿಯನ್ನು ಒಳಗೊಂಡಿರುವ ರಾಮನಗರ ಲೋಕಾಯುಕ್ತ ಕಚೇರಿಗೆ ದೂರು ನೀಡಿದರು. ಆನಂತರ ಗುರುವಾರ ಹಣ ನೀಡುವುದಾಗಿ ಮುಖ್ಯಾಧಿಕಾರಿ ಮತ್ತು ಇತರ ಇಬ್ಬರಿಗೆ ತಿಳಿಸಿ ಹೋಗಿದ್ದರು. ಗುರುವಾರ   ಮುಖ್ಯಾಧಿಕಾರಿ ಅವರು ದ್ವಿತೀಯ ದರ್ಜೆ ಸಹಾಯಕರ ಕೈಗೆ ಹಣ ನೀಡಲು ಸೂಚಿಸಿದ್ದಾರೆ. ಕಿರಿಯ ಎಂಜಿನಿಯರ್ ನಾಗರಾಜುನನ್ನು ದ್ವಿತೀಯ ದರ್ಜೆ ಸಹಾಯಕ ಶಿವಲಿಂಗಯ್ಯ ಪಟ್ಟಣದ ಬಸ್  ನಿಲ್ದಾಣದ ಹೋಟೆಲ್‌ಗೆ ಬರಲು ಸೂಚಿಸಿದ್ದಾರೆ. ಅಲ್ಲಿ ಹಣ ನೀಡಿದ ನಾಗರಾಜು ಎಂಜಿನಿಯರ್ ಪ್ರಕಾಶ್‌ಗೆ  5 ಸಾವಿರ, ಉಳಿದ ಹಣವನ್ನು ಮುಖ್ಯಾಧಿಕಾರಿ ಕೊಡುವಂತೆ ಸೂಚಿಸುವಾಗ ಲೋಕಾಯುಕ್ತ ಅಧಿಕಾರಿ  ದಾಳಿ ಮಾಡಿದ್ದಾರೆ.

ಮುಖ್ಯಾಧಿಕಾರಿ ಹಾಗೂ ಕಿರಿಯ ಎಂಜಿನಿಯರ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದು, ರಾಮನಗರದ  ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT