ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ ಸದಸ್ಯರಿಂದ ಧರಣಿ

Last Updated 22 ಸೆಪ್ಟೆಂಬರ್ 2011, 10:05 IST
ಅಕ್ಷರ ಗಾತ್ರ

ಮುಂಡರಗಿ: ಇಲ್ಲಿಯ ಪುರಸಭೆ ಮುಖ್ಯಾಧಿಕಾರಿ ಸದಾ ಗೈರು ಹಾಜರಾಗಿರುವುದರ ಜೊತೆಗೆ ಪಟ್ಟಣದಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳ ಕುರಿತು ಪುರಸಭೆಯ ಕೆಲವು ಸದಸ್ಯರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ ಪುರಸಭೆಯ ಕೆಲ ಸದಸ್ಯರು ಬುಧವಾರ ಪುರಸಭೆ ಆವರಣದಲ್ಲಿ ಧರಣಿ ನಡೆಸಿದರು.

ಪುರಸಭೆ ಮುಖ್ಯಾಧಿಕಾರಿಯು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರಕಾರದಿಂದ ಮಂಜೂರಾ ಗಿರುವ ಹಾಗೂ ಸಾರ್ವಜನಿಕರಿಂದ ಸಂಗ್ರಹವಾದ ಅಪಾರ ಪ್ರಮಾಣದ ತೆರಿಗೆ ಹಣವನ್ನು ದುರುಪ ಯೋಗ ಮಾಡಿಕೊಂಡಿದ್ದು, ಭಾರಿ ಪ್ರಮಾಣದ ಭ್ರಷ್ಟಾಚಾರ ಎಸಗಿದ್ದಾರೆ.

ಪುರಸಭೆ ಕೆಲವು ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಪಟ್ಟಣದ ಅಭಿವೃದ್ಧಿ ಕುರಿತಂತೆ ಯಾವುದೇ ಮಾಹಿತಿ ನೀಡದೆ ಸತಾಯಿಸುತ್ತಿದ್ದಾರೆ ಎಂದು ಅವರು ದೂರಿದರು.ಪುರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸಮಗ್ರ ವಿವರ ನೀಡುವಂತೆ ಜುಲೈ 21ರಂದು ಮುಖ್ಯಾಧಿಕಾರಿ ಅವರಿಗೆ ಹಲವಾರು ಸದಸ್ಯರು ಲಿಖಿತವಾಗಿ ಮನವಿ ಮಾಡಿಕೊಂಡಿದ್ದರು. ಆದರೆ, ಈ ವರೆಗೂ ಯಾವುದೇ ಸದಸ್ಯರಿಗೂ ಯಾವ ವಿವರಣೆ ಯನ್ನು ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಕಳೆದ ಒಂದು ವರ್ಷದಿಂದ ಪುರಸಭೆಯ ಸಾಮಾನ್ಯ ಸಭೆ ಕರೆಯದೆ, ಪುರಸಭೆಯ ಕೆಲ ಸದಸ್ಯರೊಡನೆ ಷಾಮೀಲಾಗಿ ಹಲವಾರು ಕಾಮಗಾರಿ ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಪುರಸಭೆಯ ಬಜಟ್ ಮಂಡಿಸದೆ ಇರುವುದರಿಂದ ಪಟ್ಟಣದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ತೀವ್ರ ಹಿನ್ನೆಡೆ ಉಂಟಾಗಿದೆ ಎಂದು ಅವರು ದೂರಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಜೆ.ಸಿ. ವಿಣೇಕರ, ಪುರಸಭೆ ಅಧ್ಯಕ್ಷೆ ರಿಹಾನಾಬೇಗಂ ಕೆಲೂರ, ಉಪಾಧ್ಯಕ್ಷ ಶಿವನಗೌಡ್ರ ಗೌಡ್ರ, ಸದಸ್ಯರಾದ ಎಂ.ಜಿ. ವಡ್ಡಟ್ಟಿ, ಆಶೋಕ ಹುಬ್ಬಳ್ಳಿ, ಮುಖಂಡರಾದ ನಬೀಸಾಬ್ ಕೆಲೂರ, ಅಂದಾನಗೌಡ ಪಾಟೀಲ ಮೊದಲಾದವರು ನಂತರ ಧರಣಿ ನಿರತರೊಡನೆ ಚರ್ಚಿಸಿ ಅವರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನಾಕಾರರು ಕೇಳಿದ್ದ ಎಲ್ಲ ಮಾಹಿತಿಯನ್ನು ಲಿಖಿತವಾಗಿ ಪೂರೈಸಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ಪುರಸಭೆ ಸದಸ್ಯರಾದ ವಿಜಯಕುಮಾರ ರಾಟಿ, ಚಂದ್ರಕಾಂತ ಚಿಕ್ಕಣ್ಣವರ, ಕಾಂತರಾಜ ಹಿರೇಮಠ, ಅನಿಲಕುಮಾರ ವಾಲಿ, ಬಸಪ್ಪ ಬನ್ನಿಕೊಪ್ಪ, ಎಸ್.ಕೆ. ಕುರಿ, ಶಿವಪುತ್ರಪ್ಪ ಚಿಕ್ಕಣ್ಣವರ, ಅನ್ನಪೂರ್ಣಾ ದೇಸಾಯಿ, ಶೇಖವ್ವ ಸಂಗಟಿ, ಪಾರವ್ವ ವಡ್ಡಟ್ಟಿ, ಕೊಟ್ರಮ್ಮ ಇಟಗಿ, ಶಿವಲೀಲಾ ಸಂದ್ಯಾಳ, ಮುಖಂಡರಾದ ಮಂಜುನಾಥ ಇಟಗಿ, ರಜನಿಕಾಂತ್ ದೇಸಾಯಿ, ಆರ್.ಎಂ. ತಪ್ಪಡಿ, ಶಿವು ನವಲಗುಂದ, ಚಿನ್ನಪ್ಪ ವಡ್ಡಟ್ಟಿ, ದೇವಪ್ಪ ಇಟಗಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹಾಜರಾತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ
ಪಟ್ಟಣದಲ್ಲಿ ಬುಧವಾರ ಶಾಲೆ ಬಿಟ್ಟ ಮಕ್ಕಳ `ವಿಶೇಷ ಹಾಜರಾತಿ ಆಂದೋಲನ~ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲ್ಲೂಕಿನಾದ್ಯಂತ ಶಾಲೆಗಳ ಶಾಲಾ ಅಭಿವೃದ್ಧಿ ಸಮಿತಿಯ (ಎಸ್‌ಡಿಎಂಸಿ) ಅಧ್ಯಕ್ಷರು, ಉಪಾ ಧ್ಯಕ್ಷರು, ಸದಸ್ಯರು, ಆಯಾ ಗ್ರಾಮಗಳ ಗ್ರಾ.ಪಂ., ತಾ.ಪಂ., ಜಿ.ಪಂ. ಸದಸ್ಯರು, ಗಣ್ಯರು, ಪ್ರಮುಖರು ಹಾಜರಾತಿ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿತ್ತು. 
 
ಗ್ರಾಮದ ಮುಖಂಡರು, ಸಿಬ್ಬಂದಿ ಬೆಳಿಗ್ಗೆ 8ರಿಂದ 9.30 ಗಂಟೆಯವರೆಗೆ ಪಟ್ಟಣದ ದುರ್ಗಾದೇವಿ ನಗರ, ಮಂಜುನಾಥ ನಗರ, ಅಂಬಾ ಭವಾನಿ ನಗರ, ಕೋಟೆ ಭಾಗಗಳಲ್ಲಿ ಶಾಲೆ ಬಿಟ್ಟ ಮಕ್ಕಳ ಮನೆಗಳಿಗೆ ತೆರಳಿ ಮಕ್ಕಳು ಹಾಗೂ ಪಾಲಕರ ಮನ ಒಲಿಸಿ ಮಕ್ಕಳನ್ನು ಪುನಃ ಶಾಲೆಗೆ ಕಳುಹಿಸಿ ಕೊಡಲು ಪಾಲಕರ ಜೊತೆ ಚರ್ಚಿಸಿದರು.

 ಪಟ್ಟಣದ ಅನ್ನದಾನೀಶ್ವರ ನಗರದಲ್ಲಿರುವ ಎಸ್.ಎಂ. ಭೂಮರಡ್ಡಿ ಸರಕಾರಿ ಪ್ರಾಥಮಿಕ ಶಾಲೆ ವತಿಯಿಂದ ಆರಂಭಿಸಿದ ಈ ಕಾರ್ಯಕ್ರಮಕ್ಕೆ ಮೊದಲ ದಿನವೇ ಯಶ ಕಂಡಿತು. ಕಳೆದ ಹಲವು ತಿಂಗಳಿಂದ ಶಾಲೆ ಬಿಟ್ಟಿದ್ದ ರತ್ನವ್ವ ಭಜಂತ್ರಿ, ಶೋಭಾ ಸವಣೂರ ಮೊದಲಾದ ಮಕ್ಕಳನ್ನು ಪುನಃ ಶಾಲೆಗೆ ಕರೆತರುವಲ್ಲಿ ಯಶಸ್ವಿಯಾದರು.

ಎಸ್‌ಡಿಎಂಸಿ ಅಧ್ಯಕ್ಷ ವೀರಣ್ಣ ಮಡಿವಾಳರ, ಸದಸ್ಯರಾದ ದುರ್ಗಪ್ಪ ರಾಮೇನಹಳ್ಳಿ, ಮಾರುತೆಪ್ಪ ಭಜಂತ್ರಿ, ಮುಖ್ಯ ಶಿಕ್ಷಕ ಎಂ.ಬಿ. ಕನ್ಯಾಳ, ಶಾಂತಾ ಹಿರೇಮಠ, ಜಿ.ಎಲ್. ಹೊಸೂರ, ವಿ.ಜಿ. ಡೊಳ್ಳಿನ, ಎಸ್.ಕೆ. ತಟ್ಟಿ, ಎಸ್.ಎಸ್. ಬೆಟಗೇರಿ, ಆರ್.ಎಸ್. ಚವಡಿ, ಎಚ್.ಲತಾ, ಕರಿಗೌಡರ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ತಾಲ್ಲೂಕಿನ ಹಿರೇವಡ್ಡಟ್ಟಿ  ಹಾಗೂ ಎಸ್‌ಡಿಎಂಸಿ ಸದಸ್ಯರು, ಗ್ರಾ.ಪಂ. ಸದಸ್ಯರು, ಗ್ರಾಮದ ಮುಖಂಡರ ಜೊತೆಗೆ ಗ್ರಾಮದಲ್ಲಿ ಸಂಚರಿಸಿ ಶಾಲೆ ಬಿಟ್ಟಿದ್ದ ಸುಮಾರು 15 ವಿದ್ಯಾರ್ಥಿಗಳನ್ನು ಶಾಲೆಗೆ ಕರೆತಂದು ಅವರಿಗೆ ಬಟ್ಟೆ, ಪುಸ್ತಕಗಳನ್ನು ನೀಡಿ, ತಪ್ಪದೆ ಶಾಲೆಗೆ ಬರುವಂತೆ ತಿಳಿಸಿದರು.

ನಂತರ `ಪ್ರಜಾವಾಣಿ~ಯೊಂದಿಗೆ ಮಾತಾಡಿದ ಅವರು, `ಈಚೆಗೆ ಜರುಗಿದ ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರ ಆದೇಶದಂತೆ ತಾಲ್ಲೂಕಿನಾದ್ಯಂತ `ವಿಶೇಷ ಹಾಜರಾತಿ ಆಂದೋಲನ~ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಿದ್ದು, ಸಾರ್ವಜನಿಕರಿಂದ ಉತ್ತಮ ಪ್ರಶಂಸೆಗೆ ಒಳಗಾಗಿದೆ. ಪ್ರತಿ ತಿಂಗಳಲ್ಲಿ ಒಂದು ದಿವಸ ಈ ಕಾರ್ಯಕ್ರಮ ಮುಂದುವರಿಯಲಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT