ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾಣ ಕತೆಗಳಿಗೆ ಕುಂಚ ಸ್ಪರ್ಶ

ಕಲಾಪ
Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಆಂಧ್ರಪದೇಶದ ಬೊಲ್ಗಂ ನಾಗೇಶ್ ಗೌಡ್ ಅವರು ದಕ್ಷಿಣ ಭಾರತದ ಹಿರಿಯ ಚಿತ್ರಕಲಾವಿದರಲ್ಲೊಬ್ಬರು. ಅಷ್ಟೇ ಅಲ್ಲ, ಸೃಜನಶೀಲತೆ ಮತ್ತು ಪ್ರತಿಭೆಯ ಕಾರಣಕ್ಕೆ ಮೇರುಸ್ಥಾನದಲ್ಲಿ ನಿಲ್ಲುವ  ಕಲಾವಿದರ ಸಾಲಿನವರು. 1965ರಲ್ಲಿ ಹುಟ್ಟಿದ ನಾಗೇಶ್, ಆಂಧ್ರಪ್ರದೇಶದ ಗೊಂಬೆಗಳು ಮತ್ತು ಪಾರಂಪರಿಕ ಉಡುಪು, ಆಭರಣ, ಅಲಂಕಾರವನ್ನು ತಮ್ಮ ಕಲಾಕೃತಿಗಳಲ್ಲಿ ಪಡಿಮೂಡಿಸುವ ಮೂಲಕ ತಮ್ಮ ನೆಲದ ಸೊಗಡನ್ನು ಪಸರಿಸುವ ಮಾದರಿ ಕೆಲಸವನ್ನೂ ಮಾಡಿದ್ದಾರೆ.

ನಾಗೇಶ್ ಅವರ ಕಲಾಕೃತಿಗಳ ಅಪರೂಪದ ಪ್ರದರ್ಶನ ನಗರದಲ್ಲಿ ನಡೆದಿದ್ದು, ಹೋಟೆಲ್ ಐಟಿಸಿ ವಿಂಡ್ಸರ್ ಮ್ಯಾನರ್‌ನಲ್ಲಿ ಸೆ.5ರವರೆಗೂ ವೀಕ್ಷಣೆಗೆ ಲಭ್ಯ. ಆಸಕ್ತರು ಖರೀದಿಸಲೂ ಅವಕಾಶವಿದೆ. ಪ್ರದರ್ಶನದ ಸಭಾಂಗಣದ ಒಳಹೊಕ್ಕರೆ ಕಲಾಲೋಕವೊಂದು ತೆರೆದುಕೊಳ್ಳುತ್ತದೆ. ಮಾತು ಮರೆತು ಒಂದೊಂದು ಕಲಾಕೃತಿಯನ್ನೂ ಮನನ ಮಾಡಿಕೊಳ್ಳಲು ಮನಸ್ಸು ಹಾತೊರೆಯುತ್ತದೆ.

ಪುರಾಣ ಕತೆಗಳ ಹೊಸ ನೋಟ
ಹೆಜ್ಜೆ ಮುಂದೊತ್ತದಂತೆ ನಾಗೇಶ್ ಅವರ ಕಲಾಕೃತಿಗಳು ಹಿಡಿದಿಡುವುದು ತಮ್ಮ ಪ್ರಸ್ತುತಿಯಲ್ಲಿನ ವೈವಿಧ್ಯದಿಂದ. ಪುರಾಣವನ್ನು ಕುಂಚದಲ್ಲಿ ಕಟ್ಟಿಕೊಡುವುದು ಹೊಸದೇನಲ್ಲ. ಅಧ್ಯಾತ್ಮ, ಪುರಾಣ, ಇತಿಹಾಸ ಇವೆಲ್ಲವೂ ಕಲಾವಿದರ ಪಾಲಿಗೆ ಪೊಗದಸ್ತಾದ ವಸ್ತುಗಳನ್ನು ಮೊಗೆದುಕೊಡುವ ವಿಷಯಗಳಾದ್ದರಿಂದ ಒಬ್ಬ ಕೃಷ್ಣ, ಒಬ್ಬ ವಿಷ್ಣು, ಗಣೇಶ, ಆಂಜನೇಯ ಹೀಗೆ ಮೆಚ್ಚಿನ ದೇವರುಗಳನ್ನು ಚಿತ್ರಿಸುವುದು ಸಾಮಾನ್ಯ. ಆದರೆ ನಾಗೇಶ್  ಆರಿಸಿಕೊಂಡಿರುವುದು ಅಪರೂಪದ ಪ್ರಸಂಗಗಳನ್ನು.

ಶಿವಪುರಾಣ, ಗಣೇಶ ಪುರಾಣ,
ವಿಷ್ಣುಕತೆಗಳು ಚಿತ್ರಕಲೆಯ ಮೂಲಕ ಮರುಜೀವ ಪಡೆದಿರುವುದು ಅಪರೂಪ. ಹಿನ್ನೆಲೆಯಲ್ಲಿ ಆನೆಮೊಗದ ಗಣೇಶ, ಮುಂಭಾಗದಲ್ಲಿ ಚರ್ಚೆಗೆ ಮುಖಾಮುಖಿಯಾಗಿರುವ ಶಿವ-–ಪಾರ್ವತಿಯರ ಕಲಾಕೃತಿ ಶಿವಪುರಾಣವನ್ನೂ, ಗಣೇಶನ ಕತೆಯನ್ನೂ ಒಟ್ಟೊಟ್ಟಿಗೆ ನೆನಪಿಸುತ್ತದೆ. ಮತ್ತೊಂದೆಡೆ ಸಿದ್ಧಿ-–ಬುದ್ಧಿ ಮಧ್ಯೆ ಲೋಕಚಿಂತಕನಾಗಿ ಕಂಡುಬರುವ ಗಣೇಶನೂ ಕತೆಯಾಗಿ ಕಾಡುತ್ತಾನೆ.
ರಾಮಾಯಣದ ಕೆಲವು ಸನ್ನಿವೇಶಗಳು ಮನೋಜ್ಞವಾಗಿ ಮೂಡಿಬಂದಿವೆ. ಅರಣ್ಯದ ಚಿತ್ರಣ ಅಥವಾ ವಿವರಣೆಗಳಿಲ್ಲದೆ ಬರಿಯ ನಾಲ್ಕು ಪಾತ್ರಗಳ ಮೂಲಕ ಇಡೀ ಸೀತಾಪಹರಣದ ತಲ್ಲಣಗಳನ್ನು ಕಟ್ಟಿಕೊಟ್ಟಿರುವ ರೀತಿ ಹುಬ್ಬೇರಿಸುವಂತೆ ಮಾಡುತ್ತದೆ.

ಅಶೋಕವನದಲ್ಲಿ ರಾಮಧ್ಯಾನದಲ್ಲಿ ಕುಳಿತ ಸೀತೆಯ ಚಿಂತಾಕ್ರಾಂತ ಮುಖ ಇಡೀ ಕಲಾಕೃತಿಗೆ ಮುಖ್ಯ ಭೂಮಿಕೆಯಾಗಿದೆ. ತನ್ನತ್ತ ನೆಟ್ಟಿರುವ ಅವಳ ನೋಟವನ್ನೇ ಬೆಂಬತ್ತಿ ಹೊರಟಿರುವ ಲಕ್ಷ್ಮಣ ಮತ್ತು ಆಂಜನೇಯ, ಅವರಿಗಿಂತ ಎತ್ತರದಲ್ಲಿ ಕಾಣುವ ರಾಮ... ಕೃಷ್ಣಾವತಾವರವನ್ನೂ ಇದೇ ಮಾದರಿಯಲ್ಲಿ ಚಿತ್ರಿಸಿದ್ದಾರೆ ಕಲಾವಿದ. ಕೃಷ್ಣನಿಗೆ ಅಭಿಮುಖವಾಗಿ ನಿಂತ ಅರ್ಜುನ ಗೀತೋಪದೇಶಕ್ಕೆ ಕಿವಿಯಾಗಿರುವ ಸನ್ನಿವೇಶ ಕೃಷ್ಣನದೇ ಮುಖದ ಹಿನ್ನೆಲೆಯಲ್ಲಿ ಚಿತ್ರಿತವಾಗಿದೆ.

ಬೊಲ್ಗಂ ನಾಗೇಶ್ ಅವರು ಪೌರಾಣಿಕ ಕತೆ, ಪ್ರಸಂಗಗಳನ್ನು ಚಿತ್ರಿಸುವಾಗ ಒಂದು ಶಿಸ್ತಿಗೆ ತಮ್ಮನ್ನು ಒಳಪಡಿಸಿಕೊಂಡಿರುವುದು ಎಲ್ಲಾ ಚಿತ್ರಗಳಲ್ಲೂ ಕಾಣುತ್ತದೆ. ಅದೆಂದರೆ, ಮುಖ್ಯಪಾತ್ರವನ್ನು ಕ್ಯಾನ್ವಾಸ್‌ನಂತೆ ಅಥವಾ ಪ್ರಧಾನ ಭೂಮಿಕೆಯಂತೆ ಮುಖದ ರೂಪದಲ್ಲಿ ಚಿತ್ರಿಸಿ ಆ ಮುಖದೊಳಗೆ ಉಪಕತೆಗಳನ್ನು ಬಿಡಿಸಿರುವುದು!

ಕಲಾವಿದರು ಕಲ್ಪನೆ ಮತ್ತು ಕೌಶಲವನ್ನು ದುಡಿಸಿಕೊಳ್ಳಬೇಕಾದ ರೀತಿಗೆ ನಾಗೇಶ್ ಅವರ ಒಂದೊಂದು ಕಲಾಕೃತಿಯೂ ಪಠ್ಯದಂತಿದೆ. ಹೆಚ್ಚಿನವುಗಳಲ್ಲಿ ಗಮನ ಸೆಳೆಯುವ ಬಾದಾಮಿ ಆಕಾರದ ವಿಶಾಲ ಕಣ್ಣುಗಳು ಕಲಾಕೃತಿಗಳಲ್ಲಿ ನಾಗೇಶ್ ಒಳನೋಟ ಹೇಗಿದೆ ಎಂಬುದಕ್ಕೆ ಸಾಕ್ಷಿಗಳು. ಎಲ್ಲಕ್ಕಿಂತ ಮುಖ್ಯವಾಗಿ ಅತಿಸೂಕ್ಷ್ಮ ಚಿತ್ತಾರಗಳಲ್ಲೂ ತೋರಿರುವ ಕಸುಬುದಾರಿಕೆ, ಪೌರಾಣಿಕ  ಪಾತ್ರಗಳಲ್ಲಿನ ಸಾಮಾನ್ಯ ನೋಟಕ್ಕೆ ಚ್ಯುತಿ ಬಾರದಂತೆ ವಹಿಸಿದ ಎಚ್ಚರಿಕೆ ನಾಗೇಶ್ ಅವರ ಸಂಯಮಕ್ಕೆ ಕನ್ನಡಿ ಹಿಡಿಯುತ್ತವೆ.

ಮತ್ತೊಂದು ಮುಖ್ಯ ಸಂಗತಿಯೆಂದರೆ, ನಾಗೇಶ್ ಆಯ್ದುಕೊಂಡ ಸೀಮಿತ ಬಣ್ಣಗಳು. ಗಾಢವಾದ ನೀಲಿ, ಪ್ರಖರ ಕಿತ್ತಳೆ ಮತ್ತು ಹಳದಿ, ಕಂದು, ಕಪ್ಪು ಹಾಗೂ ಹಸಿರು ಬಣ್ಣಗಳನ್ನಷ್ಟೇ ಬಹುತೇಕ ಕಲಾಕೃತಿಗಳಲ್ಲಿ ಬಳಸಲಾಗಿದೆ. ಆದರೆ ಇವಿಷ್ಟೇ ಬಣ್ಣಗಳಲ್ಲಿ ಅವರು ತೋರಿರುವ ಕೈಚಳಕ ಅಮೋಘ.

‘ಅಧ್ಯಯನ ಮಾಡಿ ಬರೆದ ಚಿತ್ರಗಳು’
ಮಾಸ್ಟರ್‌ಪೀಸ್ ಅನ್ನುವಂತಹ ಇಷ್ಟೊಂದು ಚಿತ್ರಗಳನ್ನು ಬರೆದುದಾದರೂ ಹೇಗೆ? ಎಂದು ಕೇಳಿದರೆ ನಾಗೇಶ್ ಹೇಳುತ್ತಾರೆ-:
‘ಇವು ಯಾವುದೇ ಒಂದು ಸಂದರ್ಭಕ್ಕಾಗಿ ಬರೆದ ಚಿತ್ರಗಳಲ್ಲ. ಪ್ರತಿಯೊಂದು ಪೌರಾಣಿಕ ಸನ್ನಿವೇಶವನ್ನೂ, ಸಂದರ್ಭವನ್ನೂ ಅಧ್ಯಯನ ಮಾಡಿ, ಪಾತ್ರದ ಪ್ರತಿ ವಿವರಗಳನ್ನು ಅವುಗಳ ಮಹತ್ವಕ್ಕೆ ಅನುಗುಣವಾಗಿ ಮನನ ಮಾಡಿಕೊಂಡು ಬಿಡಿಸಿದ ಚಿತ್ರಗಳು. ನನ್ನ ಕಲ್ಪನೆ ಮತ್ತು ಸೃಜಶೀಲತೆಯ ಮಿಶ್ರಣವನ್ನು ಇಲ್ಲಿ ಕಾಣಬಹುದು. ಆಕ್ರಿಲಿಕ್, ಜಲವರ್ಣ, ತೈಲವರ್ಣದ ಕಡ್ಡಿ, ಮೆಟ್ಯಾಲಿಕ್ ಇಂಕ್, ಪೆನ್ಸಿಲ್, ಪೇಪರ್ ಕೊಲಾಜ್, ಇಂಕ್, ಪೆನ್ ಬಳಸಿದ್ದೇನೆ’.

ಪ್ರದರ್ಶನವನ್ನು ಏರ್ಪಡಿಸಿರುವ ಕ್ರಿಸಲಾ ಆರ್ಟ್ಸ್, ಕಲಾರಾಧಕರಾದ ಮೀನಾ ದಧಾ ಮತ್ತು ಶಿಲ್ಪಾ ದುಗಾರ್ ಎಂಬ ತಾಯಿ–ಮಗಳ ಕನಸಿನ ಕೂಸು. ಪ್ರದರ್ಶನ, ಸೆ. 5ರವರೆಗೆ ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ವೀಕ್ಷಣೆ ಹಾಗೂ ಖರೀದಿಗೆ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT