ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾಣ ಪಾತ್ರಗಳಿಂದ ಹಲವು ಸಂವಾದ

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇತಿಹಾಸ ಮತ್ತು ಪುರಾಣದ ಪಾತ್ರಗಳು ಇಂದಿಗೂ ಸಾಹಿತ್ಯ ಲೋಕದಲ್ಲಿ ಹಲವು ಸಂವಾದಗಳನ್ನು ಹುಟ್ಟು ಹಾಕಿವೆ. ಇವುಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ನಡೆಸಿದಾಗ ಮಾತ್ರ ಉತ್ತಮ ಸಾಹಿತ್ಯ ಕೃತಿಯನ್ನು ಸೃಜಿಸಲು ಸಾಧ್ಯವಿದೆ~ ಎಂದು ನಾಟಕಕಾರ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

ನ್ಯಾಷನಲ್ ಪದವಿ ಕಾಲೇಜು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

`ವಚನಗಳು ಮತ್ತು ಜನಪದ ಕಥೆಗಳು ಸಾಹಿತ್ಯ ರಚನೆಗೆ ಪ್ರಮುಖ ಭಂಡಾರವಾಗಿವೆ. ಇವುಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದ ಅವರು, `ಪಂಚತಂತ್ರ ಕತೆಗಳು ಒಟ್ಟು 278 ಭಾಷೆಗಳಿಗೆ ತರ್ಜುಮೆಗೊಂಡಿರುವುದು ನಿಜಕ್ಕೂ ಆಶ್ಚರ್ಯಪಡುವ ಸಂಗತಿ. ವಿಶ್ವಕ್ಕೆ ಕತೆ ಹೇಳುವ ಕಲೆಯನ್ನು ನೀಡಿದವರು ಭಾರತೀಯರು~ ಎಂದು ಹೆಮ್ಮೆಯಿಂದ ಹೇಳಿದರು.

`ಜಾತಿ ವ್ಯವಸ್ಥೆಯೆಂಬುದು ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿರುವುದು ವಿಷಾದನೀಯ. ಅನೈತಿಕತೆಯ ತಳಹದಿಯ ಮೇಲೆ ನಡೆಯುವ ಅಸ್ಪಶ್ಯತೆ ಮತ್ತು ಕಂದಾಚಾರಗಳಿಗೆ ವೈಚಾರಿಕತೆ ಸ್ಪರ್ಶ ಒದಗಿಸುವ ನಿಟ್ಟಿನಲ್ಲಿ ಸಾಹಿತಿಗಳು ಕಾರ್ಯವೈಖರಿಯನ್ನು ವಿಸ್ತರಿಸಿಕೊಳ್ಳಬೇಕಿದೆ~ ಎಂದರು.

`ಪ್ರಕೃತಿಯ ಸಮೃದ್ಧಿಗೆ ಧಕ್ಕೆ ಬಾರದಂತೆ ಸಂಪತ್ತನ್ನು ಬಳಸಿಕೊಂಡು ಮತ್ತೆ ಅದರ ವೃದ್ಧಿಗೆ ನೆರವಾಗುವಂತೆ, ಚಿಂತನೆಯ ಅಭಿವ್ಯಕ್ತಿಯ ಮೂಲಕ ಮೂಲ ಚಿಂತನೆಗೆ ಕುಂದು ಉಂಟಾಗದಂತೆ ಮರು ಚಿಂತನೆ ಕಾರ್ಯವನ್ನು ಸಾಹಿತ್ಯವು ನಡೆಸಬೇಕು~ ಎಂದು ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ, `ಕವಿತೆ, ನಾಟಕಗಳ ಮೂಲಕ ಕಂಬಾರ ವಿಶಿಷ್ಟ ಸಂವೇದನೆಯ ಹರಿಕಾರರಾಗಿ ಪರಿಚಯಗೊಂಡಿದ್ದಾರೆ. ಅವರ ಒಟ್ಟು ಕೃತಿಯಲ್ಲಿ ಊಳಿಗಮಾನ್ಯ, ಬಂಡವಾಳಶಾಹಿ ಮತ್ತು ಸಾಮಾಜಿಕ ಸಮಸ್ಯೆಗಳ ವಿವಿಧ ಆಯಾಮಗಳನ್ನು ಬಿಚ್ಚಿಟ್ಟಿದ್ದಾರೆ~ ಎಂದು ಶ್ಲಾಘಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಲೀಲಾವತಿ, ಅಧ್ಯಕ್ಷ ಡಾ.ಎ.ಎಚ್.ರಾಮರಾವ್, ವಿಮರ್ಶಕ ಪ್ರೊ.ಕೆ.ಮರುಳಸಿದ್ಧಪ್ಪ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT