ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪುರಾಣಗಳ ಪ್ರಭಾವದಿಂದ ಧರ್ಮದ ಉಳಿವು'

Last Updated 22 ಏಪ್ರಿಲ್ 2013, 9:43 IST
ಅಕ್ಷರ ಗಾತ್ರ

ಪುತ್ತೂರು: `ದೇಶದಲ್ಲಿ ಸನಾತನ ಧರ್ಮದ ಮೇಲೆ  ದಬ್ಬಾಳಿಕೆ, ಅಪಚಾರಗಳು ನಿರಂತರವಾಗಿ ನಡೆದು ಬಂದಿದೆ.  ಆದರೂ ಪುರಾಣಗಳ ಪ್ರಭಾವದಿಂದಾಗಿ ಇಂದಿಗೂ ಸನಾತನ ಧರ್ಮ ಗಟ್ಟಿಯಾಗಿ ಉಳಿದಿದೆ' ಎಂದು ಶತಾವಧಾನಿ ಡಾ.ಆರ್.ಗಣೇಶ್ ಹೇಳಿದರು.

ಪುತ್ತೂರಿನ ಜೈನ ಭವನದಲ್ಲಿ ಭಾನುವಾರ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದ ವಿಂಶೋತ್ಸವದ ಅಂಗವಾಗಿ ನಡೆದ ಪುರಾಣ ಪ್ರವಚನ ಮಾಲಿಕೆ ಕಾರ್ಯಕ್ರಮ ಉದ್ಘಾಟಿಸಿ  ಅವರು  ಮಾತನಾಡಿದರು.

ನಮ್ಮ  ಪೂರ್ವಜರ ಅನೇಕ ಸಂಗತಿಗಳ, ಆಚಾರ-ವಿಚಾರಗಳ ಒಳಗೆ ಸತ್ಯ ಅಡಗಿತ್ತು. ಅವರ ಕಾರ್ಯದಲ್ಲಿ  ಶ್ರಮ ಅಡಗಿತ್ತು. ಅದನ್ನು ಮೂಢನಂಬಿಕೆ, ಕಂದಾಚಾರ ಎನ್ನುವುದು  ಸರಿಯಲ್ಲ. ಕಂದಾಚಾರ ಇಲ್ಲದ ನಾಗರಿಕತೆ, ದೇಶ ಇಲ್ಲ' ಎಂದ ಅವರು, `ನಂಬಿಕೆಗಳ ಹಿಂದೆ ಸತ್ವ ಅಡಗಿದೆ' ಎಂದರು. ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಅಷ್ಟಾವಧಾನ: ಬಳಿಕ ಶತಾವಧಾನಿ ಡಾ.ಆರ್.ಗಣೇಶ್ ಅವರಿಂದ ಏಕಕಾಲದಲ್ಲಿ  ಬಹು ವಿಷಯಗಳ ಬಗ್ಗೆ ಗಮನಿಸಿ  ಸಾಹಿತ್ಯಪೂರ್ಣಗೊಳಿಸುವ ಕಲೆಯಾದ  ಅಷ್ಟಾವಧಾನ ಕಾರ್ಯಕ್ರಮ ನಡೆಯಿತು.

ಸಾಹಿತಿಗಳಾದ ಡಾ.ಪಾದೇಕಲ್ಲು ವಿಷ್ಣು ಭಟ್, ಅಂಬಾನತಯ ಮುದ್ರಾಡಿ, ರಾಮಚಂದ್ರ ಕೆಕ್ಕಾರು, ಡಾ.ಶಂಕರ್ ಬೆಂಗಳೂರು, ಸೋಮಶೇಖರ ಶರ್ಮ, ಚಂದ್ರಶೇಖರ ಕೆದ್ಲಾಯ, ಡಾ.ಚಂದ್ರಶೇಖರ ದಾಮ್ಲೆ ಮತ್ತು  ಕೂರ್ಗಿ ಶಂಕರನಾರಾಯಣ ಉಪಾಧ್ಯಾಯ ಭಾಗವಹಿಸಿದ್ದರು.

ಬಹುಮಾನ ವಿತರಣೆ:  ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ವತಿಯಿಂದ  ಹವ್ಯಕ ಭಾಷಾ ಸಾಹಿತ್ಯ ಅಭಿವೃದ್ಧಿಗಾಗಿ ಆಯೋಜಿಸಿದ್ದ ವಿಷು ವಿಶೇಷ ಸ್ಫರ್ಧೆಯ ಬಹುಮಾನ ವಿತರಣೆ  ಈ ಸಂದರ್ಭದಲ್ಲಿ ನಡೆಯಿತು. ನಿವೃತ್ತ ಉಪನ್ಯಾಸಕ  ಡಾ.ಹರಿನಾರಾಯಣ ಮಾಡಾವು  ವಿಜೇತರಿಗೆ ಬಹುಮಾನ ವಿತರಿಸಿದರು. ಸಾಹಿತಿ  ಪ್ರೊ. ವಿ.ಬಿ.ಅರ್ತಿಕಜೆ ಅವರ `ಸಾವಿರ ಗಾದೆಗಳು' ಪುಸ್ತಕವನ್ನು  ಬಿಡುಗಡೆಗೊಳಿಸಲಾಯಿತು.

ನಿವೃತ್ತ ಉಪನ್ಯಾಸಕ  ಪ್ರೊ.ವಿ.ಬಿ.ಅರ್ತಿಕಜೆ, ಒಪ್ಪಣ್ಣ ಪ್ರತಿಷ್ಠಾನದ ಗೌರವಾಧ್ಯಕ್ಷ ಈಶ್ವರ ಭಟ್ ಎಲ್ಯಡ್ಕ, ಪ್ರತಿಷ್ಠಾನದ ಅಧ್ಯಕ್ಷ ಶ್ರಿಕೃಷ್ಣ ಶರ್ಮ ಹಳೆಮನೆ , ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದ ಅಧ್ಯಕ್ಷ ಬರೆಪ್ಪಾಡಿ ಮಹೇಶ್ವರ ಭಟ್, ಅಷ್ಟಾವಧಾನ ಸಮಿತಿ  ಕಾರ್ಯದರ್ಶಿ ಮಹೇಶ್ ಎಲ್ಯಡ್ಕ, ಸಮಿತಿ  ಜೊತೆ ಕಾರ್ಯದರ್ಶಿ  ಶ್ರಿದೇವಿ ವಿಶ್ವನಾಥ್, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ  ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT