ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾಣಗಳಲ್ಲಿ ಇತಿಹಾಸದ ಕುರುಹು

Last Updated 2 ಜೂನ್ 2013, 19:36 IST
ಅಕ್ಷರ ಗಾತ್ರ

ಬೆಂಗಳೂರು:  `ಪ್ರಾಚೀನ ಇತಿಹಾಸದ ಕುರುಹುಗಳು ಪುರಾಣಗಳಲ್ಲಿ ದಾಖಲಾಗಿದ್ದು, ಅವುಗಳನ್ನು ಕೇವಲ ಕಾಲ್ಪನಿಕ ಕಥೆಗಳೆಂದು ಕಡೆಗಣಿಸಬಾರದು' ಎಂದು ಹಿರಿಯ ಪುರಾತತ್ವ ಶಾಸ್ತ್ರಜ್ಞ ಡಾ.ಅ.ಸುಂದರ ಅಭಿಪ್ರಾಯಪಟ್ಟರು.

ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿಯು ನಗರದ ಮಿಥಿಕ್ ಸೊಸೈಟಿಯಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ `ಚಿದಾನಂದ ಪ್ರಶಸ್ತಿ' ಸ್ವೀಕರಿಸಿ ಅವರು ಮಾತನಾಡಿದರು.

`ಪುರಾಣಗಳನ್ನು ಕೇವಲ ಕಟ್ಟು ಕಥೆಗಳೆಂದು ಉಪೇಕ್ಷಿಸುವುದು ಮೊದಲಿನಿಂದಲೂ ಬೆಳೆದುಬಂದಿದೆ. ಆದರೆ, ಪುರಾಣಗಳಲ್ಲಿ ಇತಿಹಾಸದ ಬಗ್ಗೆ ಅನೇಕ ಮಾಹಿತಿಗಳು ಸಿಗುತ್ತವೆ. ಹೀಗಾಗಿ ಪುರಾಣಗಳನ್ನು ಕಾಲ್ಪನಿಕ ಕಥೆಗಳೆಂದು ದೂಷಿಸುವುದು ಸರಿಯಲ್ಲ' ಎಂದು ಅವರು ಹೇಳಿದರು.

`ಸಹ್ಯಾದ್ರಿಯ ಸಾಲಿನಲ್ಲಿ ಪರಶುರಾಮನ ನೆಲೆಯ ಬಗ್ಗೆ ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿದೆ. ಪರಶುರಾಮ ಎಂಬ ವ್ಯಕ್ತಿ ಮತ್ತು ಅವನ ಅನುಯಾಯಿಗಳು ಆ ಭಾಗದಲ್ಲಿ ಜೀವಿಸಿದ್ದರು ಎಂಬುದು ಸಂಶೋಧನೆಗಳಿಂದ ಗೊತ್ತಾಗಿದೆ. ಪುರಾಣಗಳಲ್ಲಿ ಇಂತಹ ಅಂಶಗಳನ್ನು ಹುಡುಕುವ ಹಾಗೂ ಆ ಬಗ್ಗೆ ಸಂಶೋಧನೆ ನಡೆಸುವ ಕಾರ್ಯ ಹೆಚ್ಚಾಗಬೇಕು' ಎಂದು ಅವರು ಆಶಿಸಿದರು.

`ಪುರಾತತ್ವ ಸಂಶೋಧನಾ ಕ್ಷೇತ್ರದಲ್ಲಿ ನಾನು ಮಾಡಿರುವ ಕಾರ್ಯಕ್ಕೆ ಅನೇಕರು ಪ್ರೇರಕರಾಗಿದ್ದಾರೆ. ಗುರುಗಳಾದ ನೀಲಕಂಠ ಶಾಸ್ತ್ರಿ, ಎಂ.ಶೇಷಾದ್ರಿ ಮತ್ತಿತರರು ನನಗೆ ಉತ್ಖನನ ಹಾಗೂ ಸಂಶೋಧನೆಯ ಆರಂಭಿಕ ಪಾಠಗಳನ್ನು ಕಲಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಉತ್ಖನನ ನಡೆಸಲು ಅನೇಕ ಗ್ರಾಮಸ್ಥರು ನನಗೆ ನೆರವಾಗಿದ್ದಾರೆ' ಎಂದು ಅವರು ಹೇಳಿದರು.

ಭಾರತೀಯ ಇತಿಹಾಸ ಅನುಸಂಧಾನ ಪರಿಷತ್‌ನ ದಕ್ಷಿಣ ಪ್ರಾದೇಶಿಕ ಕೇಂದ್ರದ ಉಪ ನಿರ್ದೇಶಕ ಡಾ.ಎಸ್.ಕೆ.ಅರುಣಿ ಮಾತನಾಡಿ, `ಉತ್ಖನನ ಹಾಗೂ ಪುರಾತತ್ವ ಸಂಶೋಧನೆಯ ಕ್ಷೇತ್ರದಲ್ಲಿ ಸುಂದರ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ. ರೈಸ್, ಫ್ಲೀಟ್, ಆರ್.ನರಸಿಂಹಾಚಾರ್ಯರ ಮುಂದುವರಿಕೆಯಂತೆ ಅವರು ಕೆಲಸ ಮಾಡಿದ್ದಾರೆ. ಶಿವಮೊಗ್ಗ, ಕಿತ್ತೂರು ಹಾಗೂ ಮೈಸೂರಿನ ಅರಮನೆಗಳು ಮತ್ತು ಹಂಪಿಯ ಸ್ಮಾರಕಗಳ ಪುನರುಜ್ಜೀವನ ಕಾರ್ಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ' ಎಂದರು.

`ಹಂಪಿ, ಸನ್ನತಿ, ಪಟ್ಟದಕಲ್ಲು ಮುಂತಾದ ಕಡೆಗಳಲ್ಲಿ ನಡೆಸಿದ ಉತ್ಖನನಗಳು, ಕೃಷ್ಣಾ, ಭೀಮಾ ನದಿ ಬಯಲಿನ ಬೂದಿದಿಬ್ಬಗಳ ಸಂಶೋಧನೆ ಹಾಗೂ ಪ್ರಾಚೀನ ಶಿಲ್ಪ ಮತ್ತು ಚಿತ್ರಗಳ ಶೋಧದಲ್ಲಿ ಸುಂದರ ಅವರು ಇತರರಿಗೆ ಮಾದರಿಯಾಗಿದ್ದಾರೆ. ನನ್ನಂಥ ಅನೇಕ ಸಂಶೋಧಕರಿಗೆ ಅವರು ಮಾರ್ಗದರ್ಶಕರಾಗಿ ಮೌಲ್ಯಯುತ ಕೆಲಸ ಮಾಡಿದ್ದಾರೆ' ಎಂದು ಹೇಳಿದರು.
ಪ್ರಶಸ್ತಿಯು 10 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT