ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾಣದ ಬೇರು ಕಲೆಯ ಚಿಗುರು

Last Updated 25 ಮೇ 2016, 19:32 IST
ಅಕ್ಷರ ಗಾತ್ರ

ಗದಗಿನ ಮಂಜುನಾಥ್‌ ಹೇಮಪ್ಪ ದೊಡ್ಡಣ್ಣವರ್‌ ಚಿತ್ರಕಲೆಯನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿ ರೂಪಿಸಿಕೊಳ್ಳುತ್ತಿರುವ ಯುವ ಕಲಾವಿದ. ಗದಗಿನ ವಿಜಯ ಕಲಾಮಂದಿರದಲ್ಲಿ ಚಿತ್ರಕಲೆಗೆ ಸಂಬಂಧಪಟ್ಟ ಐದು ವರ್ಷಗಳ ‘ಬ್ಯಾಚುಲರ್‌ ಆಫ್‌ ವಿಷ್ಯುಯಲ್ ಆರ್ಟ್‌’ ಕೋರ್ಸ್‌ ಪೂರ್ಣಗೊಳಿಸಿದ್ದಾರೆ. ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಅವರ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ. ಇಂದು (ಮೇ 26) ಪ್ರದರ್ಶನದ ಕೊನೆಯ ದಿನ.

‘ಚತ್ರಕಲಾ ಕೋರ್ಸ್‌ಗೆ ಸೇರಿಕೊಂಡ ಹೊಸತರಲ್ಲಿ ನನಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಆದರೆ ಕುಂಚದೊಡನೆ ಒಡನಾಡುತ್ತಾ ಆಸಕ್ತಿ ಕುದುರತೊಡಗಿ ಕಲೆಯಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ ಹುಟ್ಟಿತು. ಆ ಅಭಿಲಾಷೆಯೇ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ’ ಎಂದು ಕಲಾ ಜಗತ್ತಿಗೆ ಅಡಿಯಿಟ್ಟ ಗಳಿಗೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ.

ಮಂಜುನಾಥ್ ಅವರ ಪ್ರಕಾರ ಯಾವುದೇ ಕಲೆಯನ್ನು ಒಂದೇ ದೃಷ್ಟಿಕೋನದಿಂದ ಅಭ್ಯಸಿಸಬಾರದು.‘ಒಂದು ಸಂಗತಿಯನ್ನು ಹಲವು ಆಯಾಮಗಳಿಂದ ನೋಡುವ ಮತ್ತು ವಿಭಿನ್ನ ರೀತಿಯಲ್ಲಿ ಅಭಿವ್ಯಕ್ತಿಸುವ ಸೃಜನಶೀಲ ಕಲಿಕೆಗೆ ಕಲಾವಿದ ತೆರೆದುಕೊಳ್ಳಬೇಕು. ಆಗ ಸುಲಭವಾಗಿ ನಾವು ಅಂದುಕೊಂಡ ಹಾಗೆ ನಮ್ಮ ಚಿತ್ರಕಲೆಯನ್ನು ಪ್ರತಿಬಿಂಬಿಸಬಹುದು’ ಎನ್ನುವುದು ಅವರ ನಂಬಿಕೆ. 

ಅವರ ಕಲಾಕೃತಿಗಳು ರೂಪುಗೊಳ್ಳುವುದೂ ಇದೇ ಬಹುಮುಖಿ ದೃಷ್ಟಿಕೋನದ ಆಧಾರದ ಮೇಲೆ. ‘ಒಂದು ವಸ್ತು–ವಿಷಯವನ್ನು ಹಲವು ನೆಲೆಗಳಿಂದ ನೋಡಿ ಕಲಾಕೃತಿ ರಚನೆ ಆರಂಭಿಸುತ್ತೇನೆ. ಹಾಗಾಗಿಯೇ ಹೊಸ ದಾರಿ ಕಂಡುಕೊಳ್ಳಲು ಸಾಧ್ಯವಾಗಿದೆ’ ಎಂದು ಅವರು ಹೇಳುತ್ತಾರೆ. ಕಲಾಕೃತಿಗಳ ರಚನೆಯಲ್ಲಿ ಜನರ ಆಸಕ್ತಿಯನ್ನೂ ಪರಿಗಣನೆಗೆ ತೆಗೆದುಕೊಳ್ಳುವುದು ಮಂಜುನಾಥ ಅವರ ವೈಶಿಷ್ಟ್ಯ.

‘ಪ್ರತಿ ಪ್ರದರ್ಶನದ ನಂತರ ಜನರ ಅಭಿಪ್ರಾಯ– ವಿಮರ್ಶೆಯನ್ನು ಸಂಗ್ರಹಿಸುತ್ತೇನೆ. ಅದರ ಆಧಾರದ ಮೇಲೆ ನನ್ನನ್ನು ತಿದ್ದಿಕೊಂಡು ಮುಂದುವರಿಯುತ್ತೇನೆ. ಜನರ ಆಸಕ್ತಿಯನ್ನೂ ಸೂಕ್ಷ್ಮವಾಗಿ ಪರಿಗಣಿಸಿ ಕಲಾಕೃತಿ ರಚನೆ ಸಂದರ್ಭ ಅಳವಡಿಸಿಕೊಳ್ಳುತ್ತೇನೆ’ ಎಂದು ಮಂಜುನಾಥ್‌ ಹೇಳುತ್ತಾರೆ.

ಅವರ ಮೊದಲ ಚಿತ್ರಕಲಾ ಪ್ರದರ್ಶನ ನಡೆದದ್ದು, 67ನೇ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದಲ್ಲಿ. ‘ಅಂದು ಕಲಾಪ್ರೇಮಿಗಳಿಂದ  ಒಳ್ಳೆಯ ಅಭಿಪ್ರಾಯಗಳು ಸಂಗ್ರಹವಾದವು. ಅದರಿಂದ ನನ್ನ ಮುಂದಿನ ಚಿತ್ರಕಲೆಗೂ ಹೆಚ್ಚು ಪ್ರೋತ್ಸಾಹ ದೊರೆಯಿತು’ ಅವರು ಹರ್ಷ ವ್ಯಕ್ತಪಡಿಸುತ್ತಾರೆ.

ಗ್ರಾಮೀಣ ಬದುಕಿನ ಸೊಗಡು. ಭಾರತೀಯ ಪುರಾಣ ಪಾತ್ರಗಳ ಜೀವಂತಿಕೆ ಅವರ ಕಲಾಕೃತಿಗಳ ಮೇಲೆ ಸಾಕಷ್ಟು ಪ್ರಭಾವ ಬೀರಿರುವುದು ಪ್ರಸ್ತುತ ಪ್ರದರ್ಶನದಲ್ಲಿನ ಕಲಾಕೃತಿಗಳನ್ನು ಗಮನಿಸಿದರೂ ತಿಳಿಯುತ್ತದೆ.

‘ಹಲವು ಕಾರಣಗಳಿಂದಾಗಿ ಈಚೆಗೆ ಗ್ರಾಮೀಣ ಸೊಗಡು ಕಣ್ಮರೆಯಾಗುತ್ತಿದೆ. ಯಾಂತ್ರಿಕ ಜಗತ್ತಿಗೆ ಮಾರುಹೋಗುತ್ತಿರುವ ಕಾಲದಲ್ಲಿ ಪಾಶ್ಚಾತ್ಯ ಸಂಸ್ಕೃತಿಗಿಂತ ಸಾಂಪ್ರದಾಯಿಕ ಚಿತ್ರಕಲೆಗೆ ಹೆಚ್ಚು ಒತ್ತುಕೊಟ್ಟು ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ ಎತ್ತಿ ಹಿಡಿಯಬೇಕು’ ಎಂಬ ಕಾಳಜಿ ಅವರದು.

ಗಾಢ ಕೆಂಪು, ಕಪ್ಪು, ನೀಲಿ ಬಣ್ಣಗಳನ್ನೇ ಪ್ರಧಾನವಾಗಿರಿಸಿಕೊಂಡು ಮೈದಳೆದಿರುವ ಇವರ ಕಲಾಕೃತಿಗಳಲ್ಲಿ ಕೃಷ್ಣ–ರುಕ್ಮಿಣಿ, ಮೀರಾ, ಗಣಪತಿ ಹೀಗೆ ಅನೇಕ ಪುರಾಣ ಪಾತ್ರಗಳ ಜತೆಗೆ ಸ್ತ್ರೀ ಪುರುಷ ಸಂಬಂಧಗಳ ವಿವಿಧ ಆಯಾಮಗಳೂ ಭಿನ್ನವಾಗಿ ರೂಪುಗೊಂಡಿವೆ.

ಪುರಾಣ ಪಾತ್ರಗಳ ಮೂಲಕವೂ ಅವರು ಜನಸಾಮಾನ್ಯರ ಸಂತೋಷ, ಕೋಪ, ತಾಳ್ಮೆ ಸೇರಿದಂತೆ ದೈನಂದಿನ ಬದುಕಿನ ಆಯಾಮಗಳನ್ನು ಅಭಿವ್ಯಕ್ತಿಸಲು ಯತ್ನಿಸಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ.

ಪ್ರದರ್ಶನ ವಿವರ
ಮಂಜುನಾಥ್‌ ದೊಡ್ಡಣ್ಣವರ್‌ ಅವರ ಏಕವ್ಯಕ್ತಿ ಪ್ರದರ್ಶನ ನಗರದ ಚಿತ್ರಕಲಾ ಪರಿಷತ್‌ನಲ್ಲಿ ನಡೆಯುತ್ತಿದೆ. ಇಂದು (ಮೇ 26) ಕೊನೆಯ ದಿನ.  ಬೆಳಿಗ್ಗೆ 10ರಿಂದ ಸಂಜೆ 7 ಗಂಟೆಯ ಒಳಗೆ ಅವರ ಕಲಾಕೃತಿಗಳನ್ನು ಸಾರ್ವಜನಿಕರು ಆಸ್ವಾದಿಸಬಹುದಾಗಿದೆ. ವಿಳಾಸ: ಕರ್ನಾಟಕ ಚಿತ್ರಕಲಾ ಪರಿಷತ್ತು, ಗ್ಯಾಲರಿ ನಂ. 1, ಆರ್ಟ್ಸ್‌ ಕಾಂಪ್ಲೆಕ್ಸ್‌, ಕುಮಾರ ಕೃಪಾ ರಸ್ತೆ. ಮಾಹಿತಿಗೆ 9591 402 273

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT