ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷ ಪ್ರಾಬಲ್ಯ ಕ್ಷೇತ್ರದಲ್ಲಿ ಅಗ್ನಿ ಪುತ್ರಿ...

Last Updated 21 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಪುರುಷ ಪ್ರಾಬಲ್ಯದ ರಕ್ಷಣಾ ಹಾಗೂ ಅಭಿವೃದ್ಧಿ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ಕೆಲಸ ಮಾಡುವುದು ಸುಲಭದ ಮಾತೇನೂ ಅಲ್ಲ.

ವಿಜ್ಞಾನಕ್ಕೆ ಲಿಂಗಬೇಧವಿಲ್ಲ. ಅದು ಅಪ್ಪಟ ಜ್ಞಾನ ಆಧಾರಿತ ಕ್ಷೇತ್ರ ಎಂದು ಸಾಬೀತು ಮಾಡಿದವರು 48 ವರ್ಷದ ಟೆಸ್ಸಿ ಥಾಮಸ್. ಭಾರತೀಯ ಕ್ಷಿಪಣಿ ಯೋಜನೆಯಲ್ಲಿ ಮೊತ್ತ ಮೊದಲ ಮಹಿಳಾ ನಿರ್ದೇಶಕರೆಂಬ ಅಭಿದಾನಕ್ಕೆ ಪಾತ್ರರಾಗಿರುವ ಟೆಸ್ಸಿ, ದೂರಗಾಮಿ ಖಂಡಾಂತರ ಕ್ಷಿಪಣಿ (ಐಸಿಬಿಎಂ) ಯೋಜನೆಯಲ್ಲಿ ಅಮೆರಿಕ, ಚೀನಾ ಹಾಗೂ ರಷ್ಯದಂಥ ರಾಷ್ಟ್ರಗಳ ಸಾಲಿಗೆ ಭಾರತವನ್ನು ಸೇರಿಸಲು ಸಜ್ಜಾಗಿದ್ದಾರೆ.

2012ರ ಫೆಬ್ರುವರಿಯಲ್ಲಿ 5,000 ಕಿ.ಮೀ ದೂರದ ಪರಮಾಣು ಸಾಮರ್ಥ್ಯದ ಅಗ್ನಿ-5 ಕ್ಷಿಪಣಿ ಪರೀಕ್ಷೆ ನಡೆಯಲಿದೆ.
ಸಶಸ್ತ್ರ ಪಡೆಯಲ್ಲಿ ಯುದ್ಧದಂಥ ಸಾಹಸ ಕಾರ್ಯದಲ್ಲಿ ಮಹಿಳೆಯರು ಯಾಕೆ ಪಾಲ್ಗೊಳ್ಳಬಾರದು ಎಂಬುದು ಟೆಸ್ಸಿ ಪ್ರಶ್ನೆ. `ಯುದ್ಧದಲ್ಲಿ ಭಾಗವಹಿಸಲು ಮಹಿಳೆಯರು ಇಷ್ಟಪಟ್ಟಲ್ಲಿ ಅವರಿಗೆ ಅವಕಾಶ ಕೊಡಬೇಕು. ಕಾಲಕ್ರಮೇಣ ಇದು ಸಾಧ್ಯವಾಗುತ್ತದೆ ಎಂಬುದು ನನ್ನ ನಂಬಿಕೆ~ ಎನ್ನುತ್ತಾರೆ `ಅಗ್ನಿ ಪುತ್ರಿ~ ಟೆಸ್ಸಿ.
 
1988 ರಿಂದ ಅಗ್ನಿ ಕ್ಷಿಪಣಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಟೆಸ್ಸಿ ಅವರಿಗೆ ಈ ಹೆಸರು ಬಂದಿದೆ. ಅಲ್ಲದೆ ಕ್ಷಿಪಣಿ ತಂತ್ರಜ್ಞಾನದಲ್ಲಿ ಮಾಡಿರುವ ಅನನ್ಯ ಸಾಧನೆಯಿಂದಾಗಿ ಅವರನ್ನು ಪ್ರೀತಿಯಿಂದ `ಕ್ಷಿಪಣಿ ಮಹಿಳೆ~ ಎಂತಲೂ ಕರೆಯಲಾಗುತ್ತದೆ.

ಇದೇ ತಿಂಗಳ 15ರಂದು ಟೆಸ್ಸಿ ಹಾಗೂ ಅವರ ತಂಡ ನಡೆಸಿದ ಅಗ್ನಿ 4 ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದ್ದು, ಒಡಿಶಾ ಕರಾವಳಿಯ ಬಾಲಸೋರ್ ಪರೀಕ್ಷಾ ವ್ಯಾಪ್ತಿಯಿಂದ 3,000 ಕಿ.ಮೀ ದೂರಕ್ಕೆ ಚಿಮ್ಮುವ ಮೂಲಕ ಇದು ಭಾರತೀಯ ಕ್ಷಿಪಣಿ ಯೋಜನೆಯಲ್ಲಿ ನೂತನ ದಾಖಲೆ ಬರೆದಿದೆ.

ಎಂಜಿನಿಯರಿಂಗ್ ಪದವಿ ಬಳಿಕ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸೇರಿದ ಟೆಸ್ಸಿ ಅವರನ್ನು ಅಗ್ನಿ ಕ್ಷಿಪಣಿ ಯೋಜನೆಗೆ ನೇಮಿಸಿದ್ದು ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ.

ನಿರ್ದೇಶಿತ ಕ್ಷಿಪಣಿ ತಂತ್ರಜ್ಞಾನದಲ್ಲಿ ಪರಿಣತರಾಗಿರುವ ಟೆಸ್ಸಿ, ಕೊಯಿಕ್ಕೋಡ್‌ನ ತ್ರಿಶ್ಶೂರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಹಾಗೂ ಪುಣೆ ಮೂಲದ ಉನ್ನತ ತಂತ್ರಜ್ಞಾನ ರಕ್ಷಣಾ ಸಂಸ್ಥೆಯಲ್ಲಿ ಎಂ.ಟೆಕ್ ಮಾಡಿದ್ದಾರೆ. ಇದಾದ ಬಳಿಕ ಅವರು ಡಿಆರ್‌ಡಿಒದಲ್ಲಿ   ನಿರ್ದೇಶಿತ- ಶಸ್ತ್ರಾಸ್ತ್ರ ಕೋರ್ಸ್‌ಗೆ ಆಯ್ಕೆಯಾದರು. ನಂತರದಲ್ಲಿ ಅಗ್ನಿ ಕ್ಷಿಪಣಿ ಯಶೋಗಾಥೆ.

1988ರಿಂದಲೂ ಇವರು ಅಗ್ನಿ ಸರಣಿ ಕ್ಷಿಪಣಿ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇಷ್ಟೆಲ್ಲ ಸಾಧನೆಗಳನ್ನು ಮಾಡಿರುವ ಟೆಸ್ಸಿ, ತಮಗೆ ಅಬ್ದುಲ್ ಕಲಾಂ ಅವರೇ ಪ್ರೇರಣೆ ಎಂದು ಹೇಳಲು ಮರೆಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT