ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷರ ಪಾರುಪತ್ಯ: ಸ್ತ್ರೀಯರಿಗೆ ಅಪಥ್ಯ

ಚಾಮರಾಜನಗರ : 13 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದು ಮೂವರೇ ಮಹಿಳೆಯರು!
Last Updated 22 ಮಾರ್ಚ್ 2014, 9:13 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದು ಐದು ದಶಕ ಉರುಳಿವೆ. ಕ್ಷೇತ್ರದ ಮತದಾರರು 13 ಚುನಾವಣೆ ಎದುರಿಸಿದ್ದಾರೆ. ಈ ಚುನಾವಣೆಗಳಲ್ಲಿ ವಿವಿಧ ರಾಜಕೀಯ ಪಕ್ಷದ ಅಭ್ಯರ್ಥಿಗಳು ಸೇರಿದಂತೆ ಒಟ್ಟು 120 ಮಂದಿ ಸ್ಪರ್ಧಿಸಿದ್ದಾರೆ. ಇವರಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಕೇವಲ ಮೂರು!

ಸಂಚಿ ಹೊನ್ನಮ್ಮನಂತಹ ಧೀಮಂತ ಮಹಿಳೆಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಹಿರಿಮೆ ಗಡಿ ಜಿಲ್ಲೆಗೆ ಇದೆ. ಗುಂಡ್ಲುಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್‌ ಎಂಬ ಕೀರ್ತಿಗೆ ಪಾತ್ರರಾದ ನಾಗರತ್ನಮ್ಮ ಕೂಡ ಜಿಲ್ಲೆಯವರೇ ಎಂಬುದು ಹೆಮ್ಮೆಯ ಸಂಗತಿ. ಜಿಲ್ಲೆಯ ಹಲವು ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಆದರೆ, ಲೋಕಸಭಾ ಚುನಾವಣೆ ಮಟ್ಟಿಗೆ ಪುರುಷರು ಪಾರುಪತ್ಯ ಮೆರೆಯುತ್ತಿದ್ದಾರೆ. ಇಲ್ಲಿಯವರೆಗೆ ಸ್ಪರ್ಧಿಸಿರುವ ಸಂಖ್ಯೆ ಗಮನಿಸಿದರೆ ಮಹಿಳಾ ಅಭ್ಯರ್ಥಿಗಳಿಗೆ ಕ್ಷೇತ್ರದಲ್ಲಿ ಸೂಕ್ತ ನೆಲೆ ಇಲ್ಲದಂತಾಗಿದೆ. ಲೋಕಸಭಾ ಕ್ಷೇತ್ರದ ಮಟ್ಟಿಗೆ ಮಹಿಳೆಯರು ಸಂಪೂರ್ಣ ನಿರ್ಲಕ್ಷ್ಯ ಒಳಗಾಗಿದ್ದಾರೆ.

ಇಂದಿಗೂ ಪ್ರಮುಖ ರಾಜಕೀಯ ಪಕ್ಷಗಳು ಮಹಿಳಾ ಮಣಿಗಳಿಗೆ ಟಿಕೆಟ್‌ ನೀಡುವ ಗೋಜಿಗೆ ಹೋಗಿಲ್ಲ. ಮಹಿಳೆಯರನ್ನು ಕಣಕ್ಕೆ ಇಳಿಸಿ ಅವರನ್ನು ಗೆಲ್ಲಿಸುವ ಸಾಹಸಕ್ಕೆ ಪಕ್ಷಗಳ ರಾಜ್ಯ ವರಿಷ್ಠರು ಕೂಡ ಮನಸ್ಸು ಮಾಡುತ್ತಿಲ್ಲ. ಅಂತಹ ಪ್ರಯೋಗವೇ ಕ್ಷೇತ್ರದಲ್ಲಿ ನಡೆದಿಲ್ಲ.
1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಶೀಲಾ ಎಂಬುವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಕಣದಲ್ಲಿದ್ದ 15 ಅಭ್ಯರ್ಥಿಗಳಲ್ಲಿ ಇವರೊಬ್ಬರೇ ಮಹಿಳೆ ಎಂಬುದು ವಿಶೇಷ. ಅವರಿಗೆ 2,318 ಮತ ಲಭಿಸಿದ್ದವು. ಸಹಜವಾಗಿ ಜಯ ದಕ್ಕಲಿಲ್ಲ.

ನಂತರ, 1991ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪಿ. ಮಹದೇವಮ್ಮ ಸ್ಪರ್ಧಿಸಿದ್ದರು. ಅವರು 4,540 ಮತ ಪಡೆಯುವಲ್ಲಿ ಸಫಲರಾದರು. ಸಹಜವಾಗಿಯೇ ಅವರು ಕೂಡ ಸೋಲಿನ ರುಚಿ ಕಂಡರು.

1998ರ ಚುನಾವಣೆಯಲ್ಲಿ ಲೋಕಶಕ್ತಿ ಪಕ್ಷದಿಂದ ಸುಶೀಲಾ ಕೇಶವಮೂರ್ತಿ ಸ್ಪರ್ಧಿಸಿದ್ದರು. ಚಲಾವಣೆಗೊಂಡಿದ್ದ ಮತಗಳಲ್ಲಿ 75,165(ಶೇ 10.26) ಮತ ಪಡೆಯುವ ಮೂಲಕ ಗಮನ ಸೆಳೆದಿದ್ದರು. ಸೋಲು ಅನುಭವಿಸಿದರೂ ಮಹಿಳಾ ಅಭ್ಯರ್ಥಿಯೊಬ್ಬರು ಇಷ್ಟು ಮತ ಪಡೆದಿದ್ದು, ಇಂದಿಗೂ ಕ್ಷೇತ್ರದಮಟ್ಟಿಗೆ ದಾಖಲೆಯಾಗಿಯೇ ಉಳಿದಿದೆ. ಲೋಕಸಭಾ ಕ್ಷೇತ್ರದಲ್ಲಿ 15,28,611 ಮತದಾರರು ಇದ್ದಾರೆ. ಇವರಲ್ಲಿ ಮಹಿಳಾ ಮತದಾರರ ಸಂಖ್ಯೆ 7,52,707.

ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರ– 96,267, ನಂಜನಗೂಡು– 92,400, ವರುಣ– 95,916, ತಿ. ನರಸೀಪುರ– 88,787, ಹನೂರು– 91,288, ಕೊಳ್ಳೇಗಾಲ– 97,136, ಚಾಮರಾಜನಗರ– 94,323 ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ 96,590 ಮಹಿಳಾ ಮತದಾರರು ಇದ್ದಾರೆ.

ಮತ್ತೆ ಮೂಲೆಗುಂಪು: 16ನೇ ಲೋಕಸಭಾ ಚುನಾವಣೆಯಲ್ಲೂ ಮಹಿಳೆಯರನ್ನು ಮೂಲೆಗುಂಪು ಮಾಡುವ ಯತ್ನ ನಡೆದಿದೆ. ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನಿಂದ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿಲ್ಲ. ಹಳೆಯ ಮುಖಗಳಿಗೆ ಟಿಕೆಟ್‌ ನೀಡಲಾಗಿದೆ.

1998ರ ಚುನಾವಣೆ ನಂತರ ನಡೆದ 1999, 2004 ಹಾಗೂ 2009ರ ಲೋಕಸಭಾ ಚುನಾವಣೆಯಲ್ಲಿ ಒಬ್ಬ ಮಹಿಳಾ ಅಭ್ಯರ್ಥಿ ಕೂಡ ನಾಮಪತ್ರ ಸಲ್ಲಿಸಿಲ್ಲ. ಪ್ರಸ್ತುತ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರೆ ಮಾತ್ರವೇ ಮಹಿಳಾ ಅಭ್ಯರ್ಥಿಗಳು ಕಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲವಾದರೆ ಹಳೆಯ ಮುಖಗಳ ಜುಗಲ್‌ಬಂದಿಯೇ ನಡೆಯಲಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT