ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಜಾತ್ರೆಯಲ್ಲಿ ಕನ್ನಡ ಕಡಿಮೆ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಪುಸ್ತಕ ಖರೀದಿಸುವ ಹವ್ಯಾಸಿಗಳಿಗೆ ಸಿಹಿಸುದ್ದಿ. ಇಂಡಿಯನ್ ಎಕ್ಸ್‌ಪ್ರೆಸ್ ವೃತ್ತದಲ್ಲಿರುವ ಲೇಡಿ ಜಹಾಂಗೀರ್ ಕೊಠಾರಿ ಸ್ಮಾರಕ ಸಭಾಂಗಣದಲ್ಲಿ ಬೃಹತ್ ಪುಸ್ತಕ ಪ್ರದರ್ಶನ, ಮಾರಾಟ ಸದ್ದಿಲ್ಲದೆ ಸಾಗಿದೆ.

ಪುಟಾಣಿಗಳ ರೈಮ್ಸ, ಚಿತ್ರಕಲೆಯ ಪುಸ್ತಕದಿಂದ ಹಿಡಿದು ಶಾಲೆ, ಕಾಲೇಜು, ಉನ್ನತ ಶಿಕ್ಷಣ ಹೀಗೆ ಎಲ್ಲ ಅಕಾಡೆಮಿಕ್ ಸ್ತರದ ಪುಸ್ತಕಗಳು ಇವೆ. ಇಷ್ಟೇ ಅಲ್ಲ, ಸಾಮಾನ್ಯ ಜ್ಞಾನ, ಪ್ರಬಂಧ, ವಿವಿಧ ನಿಘಂಟುಗಳೂ ಇಲ್ಲುಂಟು. ಗೃಹಿಣಿಯರೂ ನಿರಾಶರಾಗಬೇಕಿಲ್ಲ. ಪಾಕ ವೈವಿಧ್ಯ, ಮನೆಮದ್ದು ಹೊತ್ತಗೆಗಳೂ ಇಲ್ಲಿ ಲಭ್ಯ. ಗಾರ್ಡನಿಂಗ್‌ಗೆ ಸಂಬಂಧಿಸಿದ ಹಲವು ಹೊತ್ತಗೆಗಳೂ ಇಲ್ಲಿವೆ.

ಆದರೂ ಮಕ್ಕಳ ವಿಭಾಗವೇ ಮೇಲುಗೈ ಸಾಧಿಸುತ್ತದೆ. ಮಿಕ್ಕಿ ಮೌಸ್, ರಾಜ-ರಾಣಿ ಕಥೆಗಳು, ಸಾಮಾನ್ಯ ಜ್ಞಾನ, ಆಟದ ಮೂಲಕ ಕಲಿಕೆ, ಬಣ್ಣಗಳ ಗುರುತಿಸುವಿಕೆ, ಪುಟಾಣಿಗಳಿಗೆ ಅಗತ್ಯವಿರುವ ಲೆಕ್ಕದ ಆಟ ಹೀಗೆ ಮಕ್ಕಳ ಜ್ಞಾನ ವರ್ಧನೆಗೆ ಅಗತ್ಯ ಇರುವ ವಿವಿಧ ನಮೂನೆಯ ಪುಸ್ತಕಗಳ ಭಂಡಾರವೇ ಇಲ್ಲಿವೆ. ಬೆಲೆ 20ರಿಂದ 200 ರೂಪಾಯಿಗಳವರೆಗೆ ಮಾತ್ರ.

`ದುಡಿಯುವ ಪೋಷಕರಿಗೆ ತಮ್ಮ ದೈನಂದಿನ ಕೆಲಸಗಳಿಗೇ ವೇಳೆ ಸಾಕಾಗುತ್ತಿಲ್ಲ. ಹೀಗಾಗಿ ಮಕ್ಕಳ ಕಡೆ ಹೆಚ್ಚಿಗೆ ಗಮನ ಕೊಡಲು ಆಗುವುದಿಲ್ಲ. ಹಿಂದಿನಂತೆ ಅವರನ್ನು ಹತ್ತಿರ ಕೂರಿಸಿಕೊಂಡು ಗಣಿತವಾಗಲೀ, ಚಿತ್ರ ಬಿಡಿಸುವುದಾಗಲೀ ಹೇಳಿಕೊಡುವುದು ಕಷ್ಟಸಾಧ್ಯ. ಅದಕ್ಕಾಗಿಯೇ ಪುಸ್ತಕಗಳ ಮೂಲಕ ಮಕ್ಕಳ ಬುದ್ಧಿಮತ್ತೆಯನ್ನು ಚುರುಕುಗೊಳಿಸುವ ಹಲವಾರು ಬಗೆಯ ಪುಸ್ತಕಗಳು ಇಲ್ಲಿ ಲಭ್ಯ' ಎನ್ನುತ್ತಾರೆ ಮುಂಬೈ ಮೂಲದ ಮಳಿಗೆದಾರ ಸುರೇಶ್.

`ಇಂದು ಕಲಿಕೆಗೆ ಅಗಾಧ ಅವಕಾಶ ಇದೆ. ಉನ್ನತ ಶಿಕ್ಷಣದ ಆಯ್ಕೆಯಲ್ಲಿ ಕೂಡ ಅನೇಕ ದಾರಿಗಳಿವೆ. ಅದಕ್ಕಾಗಿಯೇ ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ಕೋರ್ಸ್‌ಗಳ ಪುಸ್ತಕಗಳನ್ನು ಒಂದೇ ಕಡೆ ಒದಗಿಸುವ ಪ್ರಯತ್ನ ನಮ್ಮದು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಬೇಕಾಗುವ ಕ್ವಿಜ್ ಪುಸ್ತಕಗಳು, ಸಾಮಾನ್ಯ ಜ್ಞಾನದ ಹೊತ್ತಿಗೆಗಳೂ ಇವೆ' ಎನ್ನುತ್ತಾರೆ ಅವರು.

ದೇಶದ ಹಲವಾರು ಕಡೆಗಳಲ್ಲಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಾಡಿದ್ದರೂ ಬೆಂಗಳೂರಿನಷ್ಟು ಪುಸ್ತಕ ಪ್ರಿಯರು ಬೇರೆಡೆ ಸಿಗುವುದು ಕಡಿಮೆಯೇ ಎನ್ನುವುದು ಸುರೇಶ್ ಅವರ ಅನುಭವದ ಮಾತು. ಆದರೆ ಒಂದು ಮಾತು. ಅಡುಗೆಗೆ ಸಂಬಂಧಿಸಿದ ಕನ್ನಡ ಪುಸ್ತಕಗಳನ್ನು ಹೊರತುಪಡಿಸಿದರೆ ಇಲ್ಲಿ ಇರುವುದು ಇಂಗ್ಲಿಷ್ ಪುಸ್ತಕಗಳೇ. ಪ್ರದರ್ಶನ/ ಮಾರಾಟ ಇದೇ ಶನಿವಾರ ಕೊನೆಗೊಳ್ಳಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT