ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಪರಿಷೆಗೆ ಮುಗಿಬಿದ್ದ ಜನ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಭಾನುವಾರ ನಡೆದ ಐದನೇ ವರ್ಷದ ಪುಸ್ತಕ ಪರಿಷೆಗೆ ಭಾರಿ ಜನಸ್ಪಂದನೆ ದೊರೆಯಿತು. ಕಲೆ, ಸಾಹಿತ್ಯ, ಸಂಸ್ಕೃತಿ, ವೈಚಾರಿಕತೆ, ವಿಮರ್ಶೆ ಸೇರಿದಂತೆ ವಿವಿಧ ಬಗೆಯ ಪುಸ್ತಕಗಳನ್ನು ಉಚಿತವಾಗಿ ಪಡೆಯಲು ಸಹಸ್ರಾರು ಓದುಗರು ಮುಗಿಬಿದ್ದರು.

ಒಂಬತ್ತು ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಒಂದು ಲಕ್ಷ ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆಯ ಪುಸ್ತಕಗಳನ್ನು ಓದುಗರು ಕೊಂಡೊಯ್ದರು. 40 ಕೌಂಟರ್‌ಗಳಲ್ಲಿ ಇಟ್ಟಿದ್ದ ಪುಸ್ತಕಗಳ ನಡುವೆ ಇದ್ದ ತಮಗಿಷ್ಟವಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅಕ್ಷರ ಪ್ರಿಯರು ತಲ್ಲೆನರಾಗಿದ್ದರು. ಪುಸ್ತಕಗಳು ಪುಕ್ಕಟೆಯಾಗಿ ದೊರೆಯುತ್ತಿದ್ದರೂ ಅಭಿರುಚಿಗೆ ತಕ್ಕುದಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದದ್ದೂ ಕೂಡ ವಿಶೇಷವಾಗಿತ್ತು.

ಈ ಬಗ್ಗೆ ಮಾತನಾಡಿದ ಪರಿಷೆಯ ಆಯೋಜಕ ಸೃಷ್ಟಿ ವೆಂಚರ್ಸ್‌ ಬಳಗ ಅಧ್ಯಕ್ಷ ನಾಗರಾಜ ನಾವುಂದ, `ವರ್ಷದಿಂದ ವರ್ಷಕ್ಕೆ ಪರಿಷೆಗೆ ಭೇಟಿ ನೀಡುವವರ ಸಂಖ್ಯೆ ಜಾಸ್ತಿಯಾಗಿರುವುದೇ ನಗರದಲ್ಲಿ ಪುಸ್ತಕ ಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ ಎಂಬುದನ್ನು ಸಾಬೀತುಪಡಿಸುತ್ತಿದೆ. ಕಳೆದ ವರ್ಷ ಒಂದು ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದೆವು. ಸುಮಾರು ಮೂವತ್ತು ಸಾವಿರ ಮಂದಿ ಓದುಗರು ಭೇಟಿ ನೀಡಿದ್ದರು~ ಎಂದು ನೆನಪಿಸಿಕೊಂಡರು.

`ಒಬ್ಬ ಓದುಗ ಹಲವು ಬಗೆಯ ಪುಸ್ತಕಗಳನ್ನು ಕೊಂಡೊಯ್ಯಬಹುದಾಗಿದ್ದರಿಂದ ಆಯ್ಕೆಗೆ ಮಿತಿ ಇರುವುದಿಲ್ಲ. ಈ ಪ್ರಮಾಣದ ಪುಸ್ತಕಗಳನ್ನು ಸರ್ಕಾರೇತರ ಸಂಸ್ಥೆಗಳು, ಲೇಖಕರಿಂದ ಪಡೆಯುತ್ತೇವೆ. ಜಿಲ್ಲಾ ಮಟ್ಟದಲ್ಲಿಯೂ ಇದೇ ಬಗೆಯ ವಿದ್ಯಾರ್ಥಿ ಪುಸ್ತಕ ಪರಿಷೆಯನ್ನು ಹಮ್ಮಿಕೊಳ್ಳುವ ಯೋಜನೆಯಿದ್ದು, ಕನ್ನಡ, ಇಂಗ್ಲಿಷ್ ಭಾಷೆ ಸೇರಿದಂತೆ ಶೈಕ್ಷಣಿಕ ಪುಸ್ತಕಗಳನ್ನು ಒಳಗೊಂಡಿರುವ ಸುಮಾರು ಐವತ್ತು ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಪ್ರದರ್ಶಿಸಲಿದ್ದೇವೆ~ ಎಂದು ತಿಳಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ `ಕನ್ನಡಿಗರಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಪರಿಷೆ ಉತ್ತಮ ಪ್ರಯತ್ನವಾಗಿದೆ. ಕನ್ನಡ ಪುಸ್ತಕೋದ್ಯಮದಲ್ಲೇ ಇದೊಂದು ಚಾರಿತ್ರಿಕ ದಾಖಲೆ. ಇದಕ್ಕೆ ಪ್ರಾಧಿಕಾರವು ಸಂಪೂರ್ಣ ಬೆಂಬಲ ನೀಡಲಿದೆ~  ಉಪಮುಖ್ಯಮಂತ್ರಿ ಆರ್. ಅಶೋಕ, ನಿಘಂಟು ತಜ್ಞ ಡಾ.ಜಿ. ವೆಂಕಟಸುಬ್ಬಯ್ಯ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT