ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಪರಿಷೆಗೆ ಸಂಭ್ರಮದ ಸ್ಪಂದನ

Last Updated 30 ಅಕ್ಟೋಬರ್ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: ಅಲ್ಲಿ ರವೀಂದ್ರನಾಥ ಟ್ಯಾಗೋರ್, ಮ್ಯಾಕ್ಸಿಂ ಗಾರ್ಕಿ, ಕುವೆಂಪು, ಟಿ.ಎಸ್.ಎಲಿಯಟ್ ಅವರಂತಹ ಮಹಾನ್ ಲೇಖಕರು `ಕುಳಿತಿದ್ದರು~. ನಗರದ ಜನತೆ ಅಪರೂಪದ ಲೇಖಕರನ್ನು `ಕಂಡು~ ಖುಷಿ ಪಟ್ಟರು. ನೆಚ್ಚಿನ ಪುಸ್ತಕಗಳನ್ನು ಉಚಿತವಾಗಿ ಪಡೆದು ಓದುವ ಹುರುಪು ಹೆಚ್ಚಿಸಿಕೊಂಡರು.

ಸೃಷ್ಟಿ ವೆಂಚರ್ಸ್‌ ಮತ್ತು ಅನುಭವ ಶಾಲೆ ಸಂಯುಕ್ತವಾಗಿ ನಗರದ ನೆಟ್ಟಕಲ್ಲಪ್ಪ ವೃತ್ತದ ವಾಲಿಬಾಲ್ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪುಸ್ತಕ ಪರಿಷೆ ಓದುಗರು ಹಾಗೂ ಲೇಖಕರ ನಡುವಿನ ಸೇತುವೆಯಾಯಿತು. 

 ಒಟ್ಟು ಒಂದು ಲಕ್ಷ ಪುಸ್ತಕಗಳು ಪರಿಷೆಯಲ್ಲಿ ಪ್ರದರ್ಶನ ಕಂಡವು. ಕಲೆ, ಜಾನಪದ, ನಾಟಕ, ಕಥೆ, ಕಾದಂಬರಿ, ಕವನ, ಮಕ್ಕಳ ಸಾಹಿತ್ಯ, ಅಧ್ಯಾತ್ಮ , ವಿಜ್ಞಾನ ಹಾಗೂ ಶೈಕ್ಷಣಿಕ ಪುಸ್ತಕಗಳು ಜನರ ಗಮನಸೆಳೆದವು.

ಸುಮಾರು 20ಕ್ಕೂ ಅಧಿಕ ಕೌಂಟರ್‌ಗಳಲ್ಲಿ ಪುಸ್ತಕಗಳ ಪ್ರದರ್ಶನ ಮತ್ತು ವಿತರಣೆ ನಡೆಯುತ್ತಿತ್ತು. ಪ್ರತಿ ಕೌಂಟರ್‌ನಲ್ಲಿಯೂ ಜನ ಕಿಕ್ಕಿರಿದು ಸೇರಿದ್ದರು. ಒಬ್ಬರಿಗೆ ಒಂದೇ ಪುಸ್ತಕವನ್ನು ಸಂಘಟಕರು ವಿತರಿಸುತ್ತಿದ್ದ ಹಿನ್ನೆಲೆಯಲ್ಲಿ ಉತ್ತಮ ಪುಸ್ತಕ ಆಯ್ದುಕೊಳ್ಳಲು ಪೈಪೋಟಿ ನಡೆದಿತ್ತು. ಒಟ್ಟು ಏಳು ಗಂಟೆಗಳ ಕಾಲ ನಡೆದ ಪರಿಷೆಯಲ್ಲಿ ಸುಮಾರು 20 ಸಾವಿರ ಜನ ಭಾಗವಹಿಸಿದ್ದರು.

 ಓದುಗರಿಂದ ಓದುಗರಿಗಾಗಿ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ವಿಶಿಷ್ಟ ಜ್ಞಾನ ಹಬ್ಬ ಇದು. ಸಾರ್ವಜನಿಕರು, ಗೆಳೆಯರ ಬಳಗ, ಪ್ರಕಾಶಕರು, ಸಾಹಿತಿಗಳು, ಪತ್ರಕರ್ತರು ಹೀಗೆ ವಿವಿಧ ಆಸಕ್ತರಿಂದ ಪುಸ್ತಕಗಳನ್ನು ಎರವಲು ಪಡೆಯುವ ಸೃಷ್ಟಿ ವೆಂಚರ್ಸ್‌ `ಕೆರೆಯ ನೀರನು ಕೆರೆಗೆ ಚೆಲ್ಲಿ~ ಎಂಬಂತೆ ಅವುಗಳನ್ನು ಹೊಸ ಓದುಗರಿಗೆ ತಲುಪಿಸಲೆಂದು ಪರಿಷೆ ಹಮ್ಮಿಕೊಂಡಿತ್ತು. 

ಕಾಲೇಜು ವಿದ್ಯಾರ್ಥಿ ವೆಂಕಟೇಶ್ `ಪ್ರಜಾವಾಣಿ~ ಜತೆ ಮಾತನಾಡಿ, `ಪಠ್ಯಪುಸ್ತಕಗಳನ್ನು ಓದುತ್ತಿದ್ದ ನನ್ನಂತಹವರಿಗೆ ಇಷ್ಟೊಂದು ಜ್ಞಾನ ಸಂಪತ್ತು ಇದೆ ಎಂದು ಗೊತ್ತಾದದ್ದು ಇಲ್ಲಿಗೆ ಬಂದ ಮೇಲೆಯೇ. ಇಂಟರ್‌ನೆಟ್ ಯುಗದಲ್ಲಿದ್ದರೂ ಜನರ ಪುಸ್ತಕ ಪ್ರೀತಿ ಕಡಿಮೆಯಾಗಿಲ್ಲ ಎನ್ನುವುದು ಇದರಿಂದ ತಿಳಿಯುತ್ತದೆ. ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದು ಶೈಕ್ಷಣಿಕ ಪುಸ್ತಕಗಳನ್ನು ಇರಿಸಿರುವುದು ಸಂತಸದ ವಿಚಾರ~ ಎಂದರು.

ಪರಿಷೆಯ ಜತೆಗೆ ಪಕ್ಕದ ವೇದಿಕೆಯಲ್ಲಿ ಜನರ ಚಿಂತನ ಮಂಥನಕ್ಕೆ ಕೂಡ ಅವಕಾಶ ಕಲ್ಪಿಸಲಾಗಿತ್ತು. ನನ್ನ ಮೆಚ್ಚಿನ ಪುಸ್ತಕ, ಹಾಸ್ಯ ಸಾಹಿತ್ಯ, ಮಕ್ಕಳ ವಾಕ್ಪಥ ಮುಂತಾದ ಗೋಷ್ಠಿಗಳ ಮೂಲಕ ಓದಿನ ಮಹತ್ವವನ್ನು ತಿಳಿಸಿಕೊಡಲಾಯಿತು. ಭಾವಗೀತೆಗಳು ಹಾಗೂ ಜಂಬೆ ವಾದ್ಯಗೋಷ್ಠಿ ನೆರೆದಿದ್ದವರನ್ನು ರಂಜಿಸಿದವು. 

 ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ಧಲಿಂಗಯ್ಯ ಪರಿಷೆಯನ್ನು ಉದ್ಘಾಟಿಸಿದರು. ಪಾಲಿಕೆ ಸದಸ್ಯ ಬಿ.ಎಸ್.ಸತ್ಯನಾರಾಯಣ `ಬಿಬಿಎಂಪಿ ವತಿಯಿಂದ ಪುಸ್ತಕ ಪರಿಷೆಗೆ ಅಗತ್ಯ ಧನಸಹಾಯ ಮಾಡಲಾಗುವುದು. ಮುಂದಿನ ಬಜೆಟ್‌ನಲ್ಲಿ ಇದಕ್ಕಾಗಿ ಪ್ರತ್ಯೇಕ ಹಣ ಮೀಸಲಿಡಲಾಗುವುದು~ ಎಂದರು. ವಿಮರ್ಶಕ ಡಾ.ಕೆ.ಮರುಳಸಿದ್ದಪ್ಪ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಶಾಸಕ ರವಿ ಸುಬ್ರಹ್ಮಣ್ಯ, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  

`ವಿಮೋಚನೆಯ ಸಾಧನೆ~
ಮನುಷ್ಯ ಮನುಷ್ಯನಾಗುವುದು ಪುಸ್ತಕಗಳಿಂದ. ಮಾನವನ ಮೌಢ್ಯ, ಭೀತಿ, ಅನಿಷ್ಠ ಭಾವನೆಗಳನ್ನು ತೊಡೆದು ಹಾಕುವ ವಿಮೋಚನಾ ಸಾಧನ ಪುಸ್ತಕ. ಓದುವುದು ಎಂದರೆ ಓದುಗ ಹಾಗೂ ಲೇಖಕನ ನಡುವೆ ನಡೆಯುವ ಎರಡು ಆತ್ಮಗಳ ಸಂವಾದ.

ಸರ್ವಾಧಿಕಾರಿಗಳು ಪುಸ್ತಕಗಳನ್ನು ಓದಲು ಅವಕಾಶ ನೀಡುತ್ತಿರಲಿಲ್ಲ. ಗ್ರಂಥಾಲಯಗಳನ್ನು ಸುಟ್ಟ ಉದಾಹರಣೆಗಳಿವೆ. ಎಲ್ಲರಿಗೂ ಪುಸ್ತಕ ಓದುವ ಅವಕಾಶ ಇರುವುದಿಲ್ಲ. ಇದನ್ನು ಪುಸ್ತಕ ಪರಿಷೆ ನೆರವೇರಿಸಿದೆ.
 - ಡಾ. ಸಿದ್ದಲಿಂಗಯ್ಯ,
 ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ

 ಪುಸ್ತಕ ಸಂಸ್ಕೃತಿಯ ಅರಿವಿಗಾಗಿ ಪರಿಷೆಯ ಸಡಗರ
ಪುಸ್ತಕ ಓದುವುದು ಎಂದರೆ ಒಂದು ಪ್ರವಾಸ ಕೈಗೊಂಡಂತೆ. ವ್ಯಾಸ, ವಾಲ್ಮೀಕಿ ಅವರನ್ನು ಓದುವ ಮೂಲಕ ಅಂದಿನ ಭಾರತವನ್ನು ತಿಳಿಯಬಹುದು. ಸೋಫೊಕ್ಲಿಸ್, ಯೂರಿಪಿಡಿಸ್‌ರನ್ನು ಓದುವ ಮೂಲಕ ಗ್ರೀಕ್ ಸಂಸ್ಕೃತಿಯನ್ನು ಅರಿಯಬಹುದು.

ಕಣ್ಣುಗಳು ಭೌತಿಕ ವಸ್ತುಗಳನ್ನು ಮಾತ್ರ ನೋಡುವ ಸೀಮಿತ ದೃಷ್ಟಿ ಹೊಂದಿವೆ. ಪುಸ್ತಕಗಳು ಜನರ ಒಳಗಣ್ಣನ್ನು ತೆರೆಸುತ್ತವೆ. ಪುಸ್ತಕ ಸಂಸ್ಕೃತಿಯ ಅರಿವಿಗಾಗಿ ಪರಿಷೆ ನಡೆಯುತ್ತಿದೆ. ಇದೊಂದು ಹೊಸ ಕಾಲದ ಪರಿಷೆ. 
 - ಡಾ.ಕೆ. ಮರುಳಸಿದ್ದಪ್ಪ,
 ವಿಮರ್ಶಕ

ಅನುಭವದ ಗಟ್ಟಿ ಜಗತ್ತು
ಇಂಟರ್‌ನೆಟ್, ಗಣಕ ಮುಂತಾದವು ಭ್ರಮಾತ್ಮಕ ಜಗತ್ತನ್ನು ಸೃಷ್ಟಿಸುತ್ತವೆ. ಪುಸ್ತಕಗಳು ಅನುಭವದ ಗಟ್ಟಿ ಜಗತ್ತನ್ನು ಸೃಷ್ಟಿಸುತ್ತವೆ. ಪರಿಷೆಯ ಮೂಲಕ ಜನರಿಗೆ ಒಂದೇ ಕಡೆ ಸಾವಿರಾರು ಪುಸ್ತಕಗಳನ್ನು ನೋಡುವ ಖುಷಿ ಸಿಗುತ್ತಿದೆ.
 
 - ತೇಜಸ್ವಿನಿ ಅನಂತಕುಮಾರ್,
 ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT