ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ರೂಪದಲ್ಲಿ ಮೈಸೂರು ಸೊಬಗು

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಮೈಸೂರಿನ ಸಾಂಸ್ಕೃತಿಕ ಚರಿತ್ರೆ, ಪ್ರಾಕೃತಿಕ ಸೊಬಗು ಹಾಗೂ ಮೈಸೂರು ಸುತ್ತಮುತ್ತ ಇರುವ ಪ್ರೇಕ್ಷಣೀಯ ಸ್ಥಳಗಳ ಕುರಿತ ಅಪರೂಪದ ಛಾಯಾಚಿತ್ರಗಳು, ಮಾಹಿತಿಯನ್ನು ಒಳಗೊಂಡ `ಮಾರ್ವೆಲ್ಸ್ ಆಫ್ ಮೈಸೂರು ಅಂಡ್ ಮೋರ್~ ಆಂಗ್ಲ ಕೃತಿಯನ್ನು ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ಶುಕ್ರವಾರ ಇಲ್ಲಿ ಬಿಡುಗಡೆ ಮಾಡಿದರು.

ಪ್ರವಾಸೋದ್ಯಮ ಇಲಾಖೆ ಹಾಗೂ ರೇನ್‌ಟ್ರೀ ಮೀಡಿಯಾದ ಸಂಯುಕ್ತ ಆಶ್ರಯದಲ್ಲಿ ಹೊರ ತಂದಿರುವ ಈ ಪುಸ್ತಕ ಪ್ರವಾಸಿ ಮಾರ್ಗದರ್ಶಿ ಅಷ್ಟೇ ಅಲ್ಲದೆ, ಚಾರಿತ್ರಿಕ ನಗರ ಹಾಗೂ ಸುತ್ತಮುತ್ತಲಿನ ಸಮಗ್ರ ಚಿತ್ರಣವನ್ನು ಒಳಗೊಂಡಿದೆ.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಆನಂದ್‌ಸಿಂಗ್, ವಿಶ್ವದಲ್ಲಿನ ಪ್ರವಾಸಿಗರಿಗೆ ನಿಖರವಾದ ಮಾಹಿತಿ ನೀಡುವ ಅತ್ಯುತ್ತಮ ಪುಸ್ತಕ. ಇದು ಅಂತರರಾಷ್ಟ್ರೀಯ ಪ್ರಕಟಣೆಯಾಗಿದ್ದು, ಎಲ್ಲರ ಪ್ರಶಂಸೆಗೆ ಪಾತ್ರವಾಗುವ ವಿಶ್ವಾಸವಿದೆ. ಇದನ್ನು ಕನ್ನಡದಲ್ಲೂ ಹೊರ ತರುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ರೇನ್‌ಟ್ರೀ ಮೀಡಿಯಾದ ಕಾರ್ಯನಿರ್ವಾಹಕ ನಿರ್ದೇಶಕಿ ಮತ್ತು ಕೃತಿಯ ಲೇಖಕಿ ಸಂಧ್ಯಾ ಮೆಂಡೊನ್ಸಾ ಮಾತನಾಡಿ, ಈ ಪುಸ್ತಕದಲ್ಲಿ ದಸರಾ ಮಹೋತ್ಸವ, ಚಿತ್ತಾಕರ್ಷಕವಾದ ಜನಪದ ನೃತ್ಯಗಳು, ಪಾರಂಪರಿಕ ಕಟ್ಟಡಗಳು, ಪ್ರವಾಸಿ ಸ್ಥಳಗಳು, ಹೋಟೆಲ್‌ಗಳ ಸಮಗ್ರ ಮಾಹಿತಿ ಇದೆ. ಬೆಂಗಳೂರಿನಿಂದ ಆರಂಭವಾಗಿ ರಾಮನಗರ, ಮೇಲುಕೋಟೆ, ರಂಗನತಿಟ್ಟು ಸೇರಿದಂತೆ ಪ್ರಮುಖ ಪ್ರವಾಸಿ ಸ್ಥಳಗಳ ಮಾಹಿತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.

 ಸಂಧ್ಯಾ ಮತ್ತು ಅನಿತಾರಾವ್ ಕಾಶಿ ಜೊತೆಯಾಗಿ ಹೊರ ತಂದಿರುವ 132 ಪುಟಗಳ ಈ ಕೃತಿಯ ಬೆಲೆ ರೂ 750. ಪ್ರಮುಖ ಪುಸ್ತಕ ಅಂಗಡಿಗಳಲ್ಲಿ ಈ ಪುಸ್ತಕ ದೊರೆಯಲಿದೆ. ಅಲ್ಲದೆ http://www.­facebook.com/raintreemedia  ನಲ್ಲೂ ಲಭ್ಯವಿದೆ.

ಹೊರ ಗುತ್ತಿಗೆಗೆ ಗೋಲ್ಡನ್ ಚಾರಿಯಟ್ !

ಪ್ರವಾಸಿಗರ ಸಂಚಾರಕ್ಕೆ ಬಳಸುವ `ಗೋಲ್ಡನ್ ಚಾರಿಯಟ್ ರೈಲು~ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವರ್ಷದಲ್ಲಿ ಆರು ತಿಂಗಳ ಮಟ್ಟಿಗೆ ಇದರ ನಿರ್ವಹಣೆಯನ್ನು ಹೊರ ಗುತ್ತಿಗೆಗೆ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದಸಿಂಗ್ ತಿಳಿಸಿದರು.

80 ಸೀಟುಗಳ ಈ ರೈಲಿಗೆ ಎರಡು ರೀತಿಯ ದರಗಳಿವೆ. ಕೇರಳ ಭಾಗದ ಪ್ರದೇಶಗಳಿಗಾದರೆ ಒಂದು ಟ್ರಿಪ್‌ಗೆ 35 ಲಕ್ಷ ರೂಪಾಯಿ ಹಾಗೂ ರಾಜ್ಯದಲ್ಲಿನ ಪ್ರವಾಸಿ ತಾಣಗಳಿಗಾದರೆ 32 ಲಕ್ಷ ರೂಪಾಯಿ ನೀಡಬೇಕಾಗುತ್ತದೆ. ನಿಗದಿತ ಹಣ ಪಾವತಿಸಿ ಯಾರು ಬೇಕಾದರೂ ಇದನ್ನು ಹೊರ ಗುತ್ತಿಗೆಗೆ ಪಡೆಯಬಹುದು ಎಂದರು.

`ಗೋಲ್ಡನ್ ಚಾರಿಯಟ್~ ರೈಲು ಪ್ರಸ್ತುತ ಅಕ್ಟೋಬರ್‌ನಿಂದ ಮಾರ್ಚ್ ಅವಧಿಯಲ್ಲಿ ನಾಲ್ಕು ಬಾರಿ ಮಾತ್ರ ಸಂಚರಿಸುತ್ತಿದೆ. ಬೇರೆ ಸಮಯದಲ್ಲಿ ಸುಮ್ಮನೇ ನಿಲ್ಲಿಸಿದ್ದರೂ ರೈಲ್ವೆ ಇಲಾಖೆಗೆ ಹಣ ಪಾವತಿಸಬೇಕು. ಆದ್ದರಿಂದ ಮಾರ್ಚ್ - ನವೆಂಬರ್ ಅವಧಿಯಲ್ಲಿ ಎರಡು ಬಾರಿ ಸಂಚಾರಕ್ಕೆ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಅವರು ಹೇಳಿದರು.

ಹಂಪಿಗೆ ಧ್ವನಿ-ಬೆಳಕು...
ಡಿಸೆಂಬರ್ ಕೊನೆಯ ವಾರದಲ್ಲಿ ಹಂಪಿ ಉತ್ಸವ ನಡೆಯಲಿದೆ. ಆ ವೇಳೆಗೆ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಗೆ ಚಾಲನೆ ನೀಡಲಾಗುವುದು ಎಂದು ಸಚಿವ ಆನಂದ್‌ಸಿಂಗ್ ಹೇಳಿದರು.ಈ ಯೋಜನೆಗೆ 11 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡಿದೆ. ಆದರೆ ತಾಂತ್ರಿಕ ಕಾರಣಗಳಿಂದಾಗಿ ಇದು ಕಾರ್ಯನಿರ್ವಹಿಸುತ್ತಿಲ್ಲ. ಇದಕ್ಕೆ ಕಾರಣ ಏನು ಎಂದು ಪರಿಶೀಲಿಸಿ ಲೋಪಗಳನ್ನು ಸರಿಪಡಿಸುವಂತೆ ಮುಖ್ಯ ಎಂಜಿನಿಯರ್‌ಗೆ ಸೂಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT