ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿವಾದ: ಶೋಯಬ್ ಅಖ್ತರ್ ಮೇಲೆ ಅಕ್ರಮ್ ಟೀಕಾ ಪ್ರಹಾರ

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಶೋಯಬ್ ಅಖ್ತರ್ ಎಂದರೆನೇ ಹೀಗೆ. ಅಂದು ತಂಡದ ಹಿತಕ್ಕೆ ತೊಡಕು; ಇಂದು ಕ್ರಿಕೆಟ್ ಆಟದ ಹಿತಕ್ಕೆ ಕೆಡಕು. ಬದಲಾಗುವುದಿಲ್ಲ ಇವನು...

-ಹೀಗೆಂದು ಕಟು ಮಾತುಗಳ ಪ್ರಹಾರ ನಡೆಸಿದ್ದು ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸೀಮ್ ಅಕ್ರಮ್. `ಕೆಡಕುಗಳ ಕಾರಣಕರ್ತ~ ಎಂದೇ ವಿವಾದಾತ್ಮಕ ವೇಗಿಯನ್ನು ಅವರು ಕರೆದಿದ್ದಾರೆ.

ಶೋಯಬ್ ತಮ್ಮ ಆತ್ಮಚರಿತ್ರೆಯಾದ `ಕಾಂಟ್ರೊವರ್ಸಿಯಲಿ ಯುವರ್ಸ್~ ಪುಸ್ತಕದಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ಕೂಡ ಅಕ್ರಮ್ ಟೀಕಿಸಿದ್ದಾರೆ. `ತಂಡದಲ್ಲಿ ಪ್ರಮುಖ ಆಟಗಾರನಾಗಿದ್ದಾಗ ಮಾತ್ರವಲ್ಲ ಈಗಲೂ ಅವನು ಸಮಸ್ಯೆಗಳನ್ನು ಸೃಷ್ಟಿಸುವವನೇ ಆಗಿದ್ದಾನೆ~ ಎಂದು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

2006ರಲ್ಲಿ ಫೈಸಲಾಬಾದ್‌ನ ಇಕ್ಬಾಲ್ ಕ್ರೀಡಾಂಗಣದಲ್ಲಿ ತಮ್ಮ ಬೌಲಿಂಗ್ ಎದುರಿಸಲು ಭಾರತದ ಸಚಿನ್ ತೆಂಡೂಲ್ಕರ್ ಕಷ್ಟಪಟ್ಟಿದ್ದರೆಂದು ತನ್ನ ಬೆನ್ನು ತಾನೇ ತಟ್ಟಿಕೊಂಡಿರುವ ಅಖ್ತರ್ ಮಾತನ್ನು ವಾಸೀಮ್ `ತಪ್ಪು ಅಭಿಪ್ರಾಯ~ ಎಂದು ತಳ್ಳಿಹಾಕಿದರು. ವೇಗಕ್ಕೆ ಅಂಜದ ಬ್ಯಾಟ್ಸ್‌ಮನ್ ಸಚಿನ್ ಎನ್ನುವುದನ್ನು ಸಾಕ್ಷ್ಯ ಸಹಿತವಾಗಿ ವಿವರಿಸುವ ಮೂಲಕ ಶೋಯಬ್ ವಾದವು ಬೆಲೆಯೇ ಇಲ್ಲದ್ದು ಎಂದು ಸ್ಪಷ್ಟಪಡಿಸಿದರು ಅಕ್ರಮ್.

`1989ರಲ್ಲಿ ಸಿಯಾಲ್ ಕೋಟ್‌ನಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್‌ನಲ್ಲಿನ ಸಚಿನ್ ಇನಿಂಗ್ಸ್ ನನಗಿನ್ನೂ ನೆನಪಿದೆ. ನನಗೆ ಆಗ 22 ವರ್ಷ, ವಕಾರ್ ಬಹುಶಃ 19 ವರ್ಷದವರಾಗಿದ್ದರು. ಉತ್ತಮ ವೇಗದಿಂದ ಬೌಲಿಂಗ್ ಮಾಡಬಲ್ಲವರೂ ಆಗಿದ್ದೆವು. ಪಿಚ್‌ನಲ್ಲಿ ಸಾಕಷ್ಟು ಹಸಿರಿದ್ದರಿಂದ ಇನ್ನಷ್ಟು ವೇಗ ಸಾಧ್ಯವಾಗಿತ್ತು.

ಆ ಪಂದ್ಯದಲ್ಲಿ ವಕಾರ್ ಎಸೆತದಲ್ಲಿ ತೆಂಡುಲ್ಕರ್ ಗದ್ದಕ್ಕೆ ಚೆಂಡು ಅಪ್ಪಳಿಸಿತ್ತು. ವಿಶೇಷವೆಂದರೆ ಚಿಕಿತ್ಸೆ ಪಡೆದು ಕ್ರೀಸ್‌ಗೆ ಹಿಂದಿರುಗಿ 57 ರನ್ ಗಳಿಸಿದ ನಂತರ ಔಟಾಗಿದ್ದರು. 16 ವಯಸ್ಸಿನಲ್ಲಿ ಅಂಜದೆಯೇ ವೇಗದ ದಾಳಿಯನ್ನು ಎದುರಿಸಿದ್ದ ಬ್ಯಾಟ್ಸ್‌ಮನ್ ಆನಂತರ ಶೋಯಬ್‌ಗೆ ಅಂಜಿದ್ದ ಎಂದು ಹೇಳುವುದೇ ಹಾಸ್ಯಾಸ್ಪದ ಎನಿಸುತ್ತದೆ~ ಎಂದು ನುಡಿದರು.

`ಕ್ರಿಕೆಟ್ ಜೀವನದುದ್ದಕ್ಕೂ ಒಂದಿಲ್ಲೊಂದು ವಿವಾದದ ಸುಳಿಯಲ್ಲಿ ಸಿಲುಕಿನ ಅಖ್ತರ್ ತನ್ನ ಆತ್ಮಚರಿತ್ರೆಯ ಪುಸ್ತಕ ಭಾರಿ ಸಂಖ್ಯೆಯಲ್ಲಿ ಮಾರಾಟವಾಗಬೇಕು ಎನ್ನುವ ಉದ್ದೇಶದಿಂದ ಬೇರೆಯವರ ಮೇಲೆ ಕೆಸರು ಎರಚುವ ಕೆಲಸ ಮಾಡಿದ್ದಾರೆ~ ಎಂದ ಅವರು `ನಾನು ಈ ಬೌಲರ್ ಭವಿಷ್ಯವನ್ನು ಹಾಳುಮಾಡಲು ಕುತಂತ್ರ ಮಾಡಿದೆ ಎನ್ನುವ ಆರೋಪದಲ್ಲಿ ಹುರುಳಿಲ್ಲ~ ಎಂದು ಸ್ಪಷ್ಟಪಡಿಸಿದರು.

`ಪಾಕಿಸ್ತಾನ ಕ್ರಿಕೆಟ್ ಮಂಡಳಿ ಏನೇ ಹೇಳುತ್ತಿದ್ದರೂ ನಾನೆಂದು ತಂಡದ ಆಟಗಾರರ ಪರವಾಗಿ ನಿಂತಿದ್ದೆ. ಆದರೆ ತಂಡದೊಳಗಿದ್ದ ಈ ಬೌಲರ್ ಮಾತ್ರ ಸದಾ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದ್ದ~ ಎಂದು ಕೋಪದ ಕೆಂಡಕಾರಿದ ಅಕ್ರಮ್ `ಅವನ ಭವಿಷ್ಯ ಹಾಳಾಗಿದ್ದಕ್ಕೆ ಸ್ವಯಂಕೃತಾಪರಾಧ ಕಾರಣ ಎನ್ನುವುದು ಅವನಿಗೆ ಗೊತ್ತು, ನನಗೆ ಗೊತ್ತು ಹಾಗೂ ಜಗತ್ತಿಗೂ ಸ್ಪಷ್ಟವಾಗಿ ತಿಳಿದಿದೆ~ ಎಂದರು.

`ಅಖ್ತರ್ ಬಗ್ಗೆ ಅನೇಕ ವಿಷಯ ಬಹಿರಂಗಪಡಿಸಿ ಅವನಿಗೆ ಅವಮಾನ ಮಾಡಬಹುದು. ಆದರೆ ಹಾಗೆ ಮಾಡುವುದಿಲ್ಲ~ ಎಂದ ಅವರು `ಒಂದಂತೂ ಸತ್ಯ ನೀವು ಮಾಧ್ಯಮದವರು ಅವನ ವಿವಾದಾತ್ಮಕ ಪುಸ್ತಕವು ಭಾರಿ ಸಂಖ್ಯೆಯಲ್ಲಿ ಮಾರಾಟವಾಗಲು ಖಂಡಿತ ನೆರವಾಗುತ್ತಿದ್ದೀರಾ~ ಎಂದು ನಕ್ಕು ತಮ್ಮ ಮಾತು ಮುಗಿಸಿದರು.

ಕೀಳುಮಟ್ಟದ ಪ್ರಚಾರ (ಕೋಲ್ಕತ್ತ ವರದಿ): `ಬೇರೆ ಆಟಗಾರರನ್ನು ಟೀಕೆ ಮಾಡುವ ಮೂಲಕ ಅಖ್ತರ್ ತಮ್ಮ ಪುಸ್ತಕದ ಮಾರಾಟ ಹೆಚ್ಚಿಸಿಕೊಳ್ಳಲು ಕೀಳು ಮಟ್ಟದ ಪ್ರಚಾರ ನಡೆಸಿದ್ದಾರೆ~ ಎಂದು ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್ ನವಜೋತ್ ಸಿಂಗ್ ಸಿದ್ದು ಟೀಕಿಸಿದ್ದಾರೆ.

ಶೋಯಬ್ ಕ್ಷಮೆಯಾಚಿಸಲಿ
ನವದೆಹಲಿ (ಪಿಟಿಐ):
ಶೋಯಬ್ ಅಖ್ತರ್ ಅವರು ಆತ್ಮಚರಿತ್ರೆಯಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಬಗ್ಗೆ ಮಾಡಿರುವ ಟೀಕೆಗಳಿಗಾಗಿ ಕ್ಷಮೆ ಕೋರಬೇಕೆಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಗ್ರಹಿಸಿದೆ.

`ವಿವಾದಾತ್ಮಕ ಪುಸ್ತಕದಲ್ಲಿ ಭಾರತದ ಆಟಗಾರರ ಬಗ್ಗೆ ಬರೆದಿರುವ ಅಂಶಗಳಿಗಾಗಿ ಕ್ಷಮೆ ಕೇಳಲೇಬೇಕು~ ಎಂದು ಬಿಸಿಸಿಐ ಆಡಳಿತ ಮಂಡಳಿ ಸದಸ್ಯರೂ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಖ್ಯಸ್ಥರಾಗಿರುವ ರಾಜೀವ್ ಶುಕ್ಲಾ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT