ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜಾರ ಸೇರ್ಪಡೆ; ಮತ್ತೆ ಗೊಂದಲ!

Last Updated 16 ಫೆಬ್ರುವರಿ 2011, 10:25 IST
ಅಕ್ಷರ ಗಾತ್ರ

ಬಾಗಲಕೋಟೆ: ಮಾಜಿ ಶಾಸಕ ಪಿ.ಎಚ್.ಪೂಜಾರ ಬಿಜೆಪಿ ಸೇರ್ಪಡೆಯಾಗಿರುವ ಬಗ್ಗೆ ಮತ್ತೆ ಗೊಂದಲ ಶುರುವಾಗಿದೆ!
‘ನಾನು ಬಿಜೆಪಿಯಲ್ಲಿದ್ದೇನೆ’ ಎಂದು ಕಳೆದ ಒಂದು ವರ್ಷದಿಂದ ಪೂಜಾರ ಹೇಳುತ್ತಲೇ ಇದ್ದಾರೆ; ಇನ್ನೊಂದೆಡೆ ‘ಅವರು ಪಕ್ಷದಲ್ಲಿರುವುದು ತಮಗೆ ಗೊತ್ತಿಲ್ಲ’ ಎನ್ನುತ್ತ ದಿನದೂಡುತ್ತಿದ್ದಾರೆ ಬಿಜೆಪಿ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ನಾವಲಗಿ.

ಪೂಜಾರ ಬಿಜೆಪಿ ಮುಖಂಡ ಎಂದು ಒಪ್ಪಿಕೊಂಡಿರುವ ಸಚಿವ ಮುರುಗೇಶ ನಿರಾಣಿ ಪೂಜಾರ ಅವರನ್ನು ಹುರಿದುಂಬಿಸುತ್ತಲೇ ಇದ್ದಾರೆ. ಆದರೆ ಪೂಜಾರ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠರ ವಾದವೇ ಬೇರೆಯಾಗಿದೆ.

‘ಪೂಜಾರ ಬಿಜೆಪಿ ಸೇರ್ಪಡೆಯಾಗಿಲ್ಲ; ಅವರು ಪಕ್ಷಕ್ಕೆ ಸೇರ್ಪಡೆಯಾಗುವ ಅಗತ್ಯವೂ ಇಲ್ಲ. ಅವರ ಸೇರ್ಪಡೆಗೆ ತಮ್ಮ ವಿರೋಧವಿದೆ’ ಎನ್ನುತ್ತಾರೆ ಚರಂತಿಮಠ.ಸೇರ್ಪಡೆ ಬಗ್ಗೆ ಜಿಲ್ಲೆಯ ನಾಯಕರು ವಾರಕ್ಕೊಂದು ಇಂತಹ ಗೊಂದಲಮಯ ಹೇಳಿಕೆ ನೀಡುತ್ತಿರುವುದರಿಂದ ಪಕ್ಷದ ಕಾರ್ಯಕರ್ತರು ಹಾಗೂ ಹಾಲಿ-ಮಾಜಿ ಶಾಸಕರ ಬೆಂಬಲಿಗರು ಇಕ್ಕಟ್ಟಿಗೆ ಸಿಲುಕಿದ್ದು, ಯಾರ ಜತೆಗೆ ಗುರುತಿಸಿಕೊಳ್ಳಬೇಕು; ಯಾರನ್ನು ಬೆಂಬಲಿಸಬೇಕು ಎಂದು ತಿಳಿಯದೇ ಅತಂತ್ರರಾಗಿದ್ದಾರೆ.

ಇತ್ತೀಚೆಗೆ ಜರುಗಿದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಲಾದಗಿ ಹಾಗೂ ಮುರನಾಳ ಮತಕ್ಷೇತ್ರದ ಫಲಿತಾಂಶವೇ ಇದಕ್ಕೆ ಸಾಕ್ಷಿ.ಈಶ್ವರಪ್ಪ ಸ್ಪಷ್ಟನೆ: ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ‘ಮಾಜಿ ಶಾಸಕ ಪಿ.ಎಚ್.ಪೂಜಾರ ಬಿಜೆಪಿಯಲ್ಲಿ ಇಲ್ಲ’ ಎಂದು ಹೇಳುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.ಮುಧೋಳದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ‘ಪೂಜಾರ ಸದ್ಯಕ್ಕೆ ಬಿಜೆಪಿಯಲ್ಲಿಲ್ಲ’ ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಚಿವರೊಬ್ಬರು, ಈಶ್ವರಪ್ಪ ಮುಂದೆ ಹೋಗುತ್ತಿದ್ದಂತೆ ಸುದ್ದಿಗಾರರನ್ನು ಪಕ್ಕಕ್ಕೆ ಕರೆದು ‘ಇನ್ನು ಒಂದು ವಾರದಲ್ಲಿ ಪೂಜಾರ ಸೇರ್ಪಡೆಯಾಗಿರುವ ಬಗ್ಗೆ ಇವರೇ ಹೇಳಿಕೆ ನೀಡಲಿದ್ದಾರೆ’ ಎಂದು ಹೇಳುವ ಮೂಲಕ ಗೊಂದಲ ಮುಂದುವರಿಯುವ ಮುನ್ಸೂಚನೆ ನೀಡಿದರು.

ಕಳೆದ ಒಂದು ವರ್ಷದಿಂದ ಈ ಗೊಂದಲ ಹೀಗೆ ಮುಂದುವರಿದಿದೆ. ಬಿಜೆಪಿಯ ಹಿಂದಿನ ರಾಜ್ಯಾಧ್ಯಕ್ಷ ಸದಾನಂದಗೌಡರ ಸಮ್ಮುಖದಲ್ಲಿ ಪೂಜಾರ ಬಿಜೆಪಿ ಸೇರ್ಪಡೆಗೊಂಡಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ವೀರಣ್ಣ ಚರಂತಿಮಠರು, ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ ಪತ್ರವನ್ನು ಫ್ಯಾಕ್ಸ್ ಮೂಲಕ ಕಳುಹಿಸಿಕೊಟ್ಟಿದ್ದರು.

ಆಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಪೂಜಾರ ಸೇರ್ಪಡೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಸದಾನಂದಗೌಡರ ಮೂಲಕವೇ ಹೇಳಿಕೆ ಕೊಡಿಸಿದ್ದರು.

ಇದಾದ ಬಳಿಕ ಜಿಪಂ ಚುನಾವಣಾ ಪ್ರಚಾರದಲ್ಲಿ ಸಚಿವ ನಿರಾಣಿ ಅವರೊಂದಿಗೆ ಬಹಿರಂಗವಾಗಿ ಕಾಣಿಸಿಕೊಂಡ ಪಿ.ಎಚ್.ಪೂಜಾರ, ತಾವು ಬಿಜೆಪಿಯಲ್ಲಿರುವುದಾಗಿ ಹೇಳಿಕೆ ನೀಡಿದ್ದರಲ್ಲದೇ ಪಕ್ಷದ ಹಲವಾರು ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದರು.

ಪೂಜಾರಗೆ ಹಿನ್ನಡೆ: ರಾಜ್ಯಪಾಲರ ಕ್ರಮ ಖಂಡಿಸಿ ನಗರದಲ್ಲಿ ಇತ್ತೀಚೆಗೆ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪೂಜಾರ ಭಾಗವಹಿಸಿದ್ದರು. ಪೂಜಾರ ಅವರನ್ನು ಕಂಡು ಕೆಂಡಾಮಂಡಲರಾದ ಶಾಸಕ ಚರಂತಿಮಠ, ನಡುರಸ್ತೆಯಲ್ಲಿ ಮೆರವಣಿಗೆ ತಡೆದು ಪೂಜಾರ ಅವರನ್ನು ಹೊರಕ್ಕೆ ಕಳುಹಿಸಬೇಕು ಎಂದು ಪಟ್ಟುಹಿಡಿದರು. ಅದರಲ್ಲಿ ಯಶಸ್ವಿಯೂ ಆದರು.

ಈ ಸಂದರ್ಭದಲ್ಲಿ ಶಾಸಕ ಚರಂತಿಮಠರು ‘ಪಕ್ಷ ವಿರೋಧಿಗಳಿಗೆ ಧಿಕ್ಕಾರ’ ಎಂದು ಘೋಷಣೆ ಹಾಕಿದರೆ ಮಾಜಿ ಶಾಸಕ ಪೂಜಾರ ‘ಭಾರತ ಮಾತಾ ಕೀ ಜೈ’ ಎಂದು ಘೋಷಣೆ ಕೂಗುತ್ತ ಮೆರವಣಿಗೆಯಿಂದ ಹೊರನಡೆದಾಗ ಬಿಜೆಪಿ ಭಿನ್ನಮತ ಬೀದಿಗೆ ಬಂದಿತ್ತು.ಪಂಚಾಯಿತಿ ಚುನಾವಣೆ ವೇಳೆ ಪೂಜಾರ ಬೆಂಬಲಿಗರಿಗೆ ನೀಡಲಾಗಿದ್ದ ಬಿಜೆಪಿ ‘ಬಿ’ಫಾರ್ಮ್‌ಗಳನ್ನು ಹಿಂದಕ್ಕೆ ಪಡೆಯುವುದರಲ್ಲಿಯೂ ಶಾಸಕ ಚರಂತಿಮಠರ ಮೇಲುಗೈ ಸಾಧಿಸಿದ್ದರು.

ಇದೀಗ ಪಕ್ಷದ ರಾಜ್ಯಾಧ್ಯಕ್ಷರೇ ‘ಪೂಜಾರ ಬಿಜೆಪಿಯಲ್ಲಿಲ್ಲ’ ಎಂದು ಹೇಳಿಕೆ ನೀಡಿರುವುದರಿಂದ ‘ಸೇರ್ಪಡೆ’ ಜಗಳದಲ್ಲಿ ಚರಂತಿಮಠರಿಗೆ ಮತ್ತೊಂದು ಗೆಲುವು ಲಭಿಸಿದೆ.ಅಖಂಡ ವಿಜಾಪುರದಲ್ಲಿ ಬಿಜೆಪಿ ಬೇರು ಭದ್ರಗೊಳಿಸಲು ಶ್ರಮಿಸಿದ ಮಾಜಿ ಶಾಸಕ ಪೂಜಾರ ಅವರನ್ನು ಶತಾಯಗತಾಯ ಪುನಃ ಬಿಜೆಪಿಗೆ ಕರೆತಂದು ಬಾಗಲಕೋಟೆ ಮತಕ್ಷೇತ್ರದಲ್ಲಿ ಪರ್ಯಾಯ ನಾಯಕನಾಗಿ ಬೆಳೆಸಬೇಕು ಎಂದು ತೆರೆಮರೆಯಲ್ಲಿ ಹವಣಿಸುತ್ತಿರುವ ಪ್ರಭಾವಿ ಸಚಿವರ ಮುಂದಿನ ‘ಸೇರ್ಪಡೆ ಕಾರ್ಯತಂತ್ರ’ದ ಬಗ್ಗೆ ಕುತೂಹಲ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT